ಕರ್ನಾಟಕ

‘ಜಾ ಟ್ರಾಪ್‌’ಗೆ ಸಿಲುಕಿದ ಚಿರತೆ ರಕ್ಷಣೆ

Pinterest LinkedIn Tumblr

pvec01dec14rjhun-1_0

ಹುಣಸೂರು: ತಾಲ್ಲೂಕಿನ ಬಿಳಿಕೆರೆ ಅರಬ್ಬಿತಿಟ್ಟಿನ ವನ್ಯಧಾಮದಿಂದ ಆಹಾರ ಅರಸಿ­ಕೊಂಡು ಬಂದ ಮೂರು ವರ್ಷದ ಚಿರತೆ­ಯೊಂದು ಹಗರನಹಳ್ಳಿಯ ತೋಟ­ವೊಂದರಲ್ಲಿ ‘ಜಾ ಟ್ರಾಪ್‌’ಗೆ ಸಿಲುಕಿ ಗಾಯ­ಗೊಂಡ ಘಟನೆ ಭಾನುವಾರ ಪತ್ತೆಯಾಗಿದೆ.

ಬಿಳಿಕೆರೆ ಹೋಬಳಿಯ ಹಗರನ­ಹಳ್ಳಿಯ ಜಯ­ರಾಮೇಗೌಡ ಎಂಬುವರ ಜಮೀನಿನಲ್ಲಿ ಅಳವಡಿಸಿದ್ದ ‘ಜಾ ಟ್ರಾಪ್‌’ಗೆ ಚಿರತೆಯ ಕಾಲು ಶನಿವಾರ ರಾತ್ರಿಯೇ ಸಿಲುಕಿದ ಶಂಕೆ ಇದೆ. ಚಿರತೆಯನ್ನು ಅರಣ್ಯ ಇಲಾಖೆ ಡಿಸಿಎಫ್ ಬಾಲಕೃಷ್ಣ ಅವರ ನೇತೃತ್ವದಲ್ಲಿ ರಕ್ಷಿಸಿ, ಹುಣಸೂರಿನ ಕಲಬೆಟ್ಟ ಬಳಿ ಚಿಕಿತ್ಸೆ ನೀಡಿದ ನಂತರ ಭಾನುವಾರ ಮಧ್ಯಾಹ್ನ ನಾಗರಹೊಳೆ ರಾಷ್ಟ್ರೀಯ ಉದ್ಯಾನ ವ್ಯಾಪ್ತಿಯ ಕಲ್ಲಹಳ್ಳ ಅರಣ್ಯಕ್ಕೆ ಬಿಡಲಾಗಿದೆ.

ಬೇಟೆಗೆ ಬಳಸುವ ಜಾ ಟ್ರಾಪ್‌ ಶಂಕೆ: ಭಾನುವಾರ ಪತ್ತೆಯಾಗಿರುವ ‘ಜಾ ಟ್ರಾಪ್’ ಅನ್ನು ಸಾಮಾನ್ಯ­ವಾಗಿ ಉತ್ತರ ಭಾರತದಲ್ಲಿ ಕಾಡುಮೃಗಗಳನ್ನು ಬೇಟೆ­ಯಾಡಲು ಬಳಸಲಾಗುತ್ತದೆ. ಬಹಳಷ್ಟು ಪ್ರಕರಣಗಳಲ್ಲಿ ಚಿರತೆ, ಹುಲಿಗಳನ್ನು ಬೇಟೆಯಾಡಲು ಈ ‘ಜಾ ಟ್ರಾಪ್‌’ ಅನ್ನು ಬಳಸಿದ ಉದಾಹರಣೆಗಳಿವೆ.

ಅದೇ ಮಾದರಿಯನ್ನು ಅನುಸರಿಸಿ ಕಾಡು ಪ್ರಾಣಿ­ಗಳನ್ನು ಬೇಟೆಯಾಡಲು ಸಂಚು ರೂಪಿಸಿರುವ ದೊಡ್ಡ ತಂಡ ಇಲ್ಲಿ ಬಂದಿರಬಹುದು ಎಂಬ ಅನುಮಾನ­ವನ್ನು ಅರಣ್ಯ ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ. 2002ರಲ್ಲಿ ಇದೇ ಮಾದರಿಯ ಜಾಟ್ರಾಪ್‌ಗೆ ಬಳ್ಳೆ ವಲಯದ ಮಾಸ್ತಿ­ಗುಡಿ ಬಳಿ ಹುಲಿಯೊಂದು ಸಿಲುಕಿತ್ತು. ಆ ಬೆನ್ನಲ್ಲೇ ಮಧ್ಯಪ್ರದೇಶದ 100ಕ್ಕೂ ಹೆಚ್ಚು ಮಂದಿಯನ್ನು ನಾಗರಹೊಳೆ ರಾಷ್ಟ್ರೀಯ ಉದ್ಯಾನದ ಹನಗೋಡು ಬಳಿ ‘ಜಾ ಟ್ರಾಪ್’ ಸಮೇತ ಬಂಧಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

ಈ ಸಂಬಂಧ ಪ್ರತಿಕ್ರಿಯೆ ನೀಡಿದ ಡಿಸಿಎಫ್ ಬಾಲಕೃಷ್ಣ, ‘ಚಿರತೆಗೆ ಚಿಕಿತ್ಸೆ ಕೊಡಿಸಿ ಕಾಡಿಗೆ ಬಿಡಲಾಗಿದೆ. ತನಿಖೆ ನಡೆಸಿ ಸಂಬಂಧಿಸಿದ ಜಮೀನು ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳ­ಲಾಗುತ್ತದೆ. ಯಾರಾದರೂ ಶಂಕಿತ ಬೇಟೆಗಾರರು ಕಂಡುಬಂದರೆ ಬಂಧಿಸಲಾ­ಗುತ್ತದೆ’ ಎಂದು ತಿಳಿಸಿದರು. ಕಾರ್ಯಾಚರಣೆಯಲ್ಲಿ ಎಸಿಎಫ್ ಪ್ರಸನ್ನ­ಕುಮಾರ್, ಆರ್ಎಫ್ಒಗಳಾದ ಮಹದೇವಯ್ಯ, ನಂಜುಂಡಯ್ಯ ಸೇರಿ 15ಕ್ಕೂ ಹೆಚ್ಚು ಅರಣ್ಯ ಇಲಾಖೆ ಸಿಬ್ಬಂದಿ ಭಾಗವಹಿಸಿದ್ದರು

Write A Comment