ಬೆಂಗಳೂರು: ಮದುವೆ ಸಮಾರಂಭದಲ್ಲಿ ಭಾಗವಹಿಸುವುದಕ್ಕಾಗಿ ಬಿಜೆಪಿ ಹಿರಿಯ ನಾಯಕ ಎಲ್.ಕೆ. ಅಡ್ವಾಣಿ ಭಾನುವಾರ ಬೆಂಗಳೂರಿಗೆ ಭೇಟಿ ನೀಡಿದರು.
ಬಿಜೆಪಿ ಯುವ ಘಟಕದ ರಾಷ್ಟ್ರೀಯ ಉಪಾಧ್ಯಕ್ಷ, ಮಾಜಿ ಪ್ರಧಾನಿ ಮೊರಾರ್ಜಿ ದೇಸಾಯಿ ಅವರ ಮರಿ ಮೊಮ್ಮಗ ಮಧುಕೇಶ್ವರ್ ದೇಸಾಯಿ ಅವರ ವಿವಾಹ ಸಮಾರಂಭದಲ್ಲಿ ಭಾಗಿಯಾದ ಅಡ್ವಾಣಿ ಅವರು ನಂತರ ದೆಹಲಿಗೆ ಹಿಂದಿರುಗಿದರು.
ಕುಮಾರಕೃಪಾ ಅತಿಥಿ ಗೃಹದಲ್ಲಿ ತಂಗಿದ್ದ ಅಡ್ವಾಣಿ ಅವರು ರಾಜಕೀಯ ವಿಷಯಗಳ ಕುರಿತಾಗಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದರು. ಆದರೆ, ಬೆಂಗಳೂರಿನ ಜೊತೆಗಿನ ತಮ್ಮ ಒಡನಾಟವನ್ನು ಸ್ಮರಿಸಿಕೊಂಡರು. ‘ಇದು ಖಾಸಗಿ ಭೇಟಿ. ನನ್ನ ಮತ್ತು ಬೆಂಗಳೂರಿನ ಒಡನಾಟ ತುರ್ತು ಪರಿಸ್ಥಿತಿಯ ದಿನಗಳಿಂದಲೂ ಇದೆ. ಆ ಸಂದರ್ಭದಲ್ಲಿ ನಾನು ಸೆಂಟ್ರಲ್ ಜೈಲಿನಲ್ಲಿ ಬಂದಿಯಾಗಿದ್ದೆ’ ಎಂದರು.
ಕೇಂದ್ರ ರಸಗೊಬ್ಬರ ಸಚಿವ ಅನಂತಕುಮಾರ್ ಅವರು ಭಾನುವಾರ ಅಡ್ವಾಣಿ ಅವರನ್ನು ಬರಮಾಡಿಕೊಂಡರು. ಬಿಜೆಪಿ ಮುಖಂಡರಾದ ರಾಮಚಂದ್ರ ಗೌಡ, ವಿ.ಸೋಮಣ್ಣ, ಗೋವಿಂದ ಕಾರಜೋಳ, ವಿಮಲಾಗೌಡ ಸೇರಿ ಬಿಜೆಪಿಯ ಹಲವು ಮುಖಂಡರು ಹಿರಿಯ ನಾಯಕನನ್ನು ಭೇಟಿ ಮಾಡಿದರು.