ಬೆಂಗಳೂರು, ನ. 30: ಸಶಸ್ತ್ರ ನಕ್ಸಲ್ ಚಳವಳಿ ತ್ಯಜಿಸಿ ಪ್ರಜಾತಾಂತ್ರಿಕ ಮಾರ್ಗದಲ್ಲಿ ಹೋರಾಟ ನಡೆಸಬೇಕೆಂಬ ಉದ್ದೇಶ ಹೊಂದಿರುವ ಮಾಜಿ ನಕ್ಸಲ್ ಮುಖಂಡರಾದ ಚಿತ್ರದುರ್ಗ ಮೂಲದ ನೂರ್ ಜುಲ್ಫೀಕರ್ ಹಾಗೂ ಚಿಕ್ಕಮಗಳೂರು ಜಿಲ್ಲೆ ಶೃಂಗೇರಿಯ ಸಿರಿಮನೆ ನಾಗರಾಜ್ ಡಿ. 2ರಂದು ಸಮಾಜದ ಮುಖ್ಯ ವಾಹಿನಿಗೆ ಬರಲಿದ್ದಾರೆ.
ಉಭಯ ನಾಯಕರು ಡಿ.2ರ ಬೆಳಗ್ಗೆ 10 ಗಂಟೆಯ ಸುಮಾರಿಗೆ ‘ಶಾಂತಿಗಾಗಿ ನಾಗರಿಕರ ವೇದಿಕೆ’ ಸದಸ್ಯರನ್ನು ಭೇಟಿ ಮಾಡಲಿದ್ದಾರೆ. ನಂತರ ಹಿರಿಯ ಸ್ವಾತಂತ್ರ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ, ಪತ್ರಕರ್ತೆ ಗೌರಿ ಲಂಕೇಶ್ ಅವರ ಉಪಸ್ಥಿತಿ ಯಲ್ಲಿ ಬೆಂಗಳೂರಿನ ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಠಿ ನಡೆಸಲಿದ್ದಾರೆಂದು ವೇದಿಕೆ ತಿಳಿಸಿದೆ.
ಆ ಬಳಿಕ ನೂರ್ ಜುಲ್ಫೀಕರ್ ಮತ್ತು ಸಿರಿಮನೆ ನಾಗರಾಜ್ ಅವರನ್ನು ಕಾನೂನು ಪ್ರಕ್ರಿಯೆಗೆ ಒಳಪಡಿಸುವ ದೃಷ್ಟಿಯಿಂದ ಎಚ್.ಎಸ್.ದೊರೆಸ್ವಾಮಿ, ಗೌರಿ ಲಂಕೇಶ್ ಹಾಗೂ ಶಾಂತಿಗಾಗಿ ನಾಗರಿಕರ ವೇದಿಕೆ ಸದಸ್ಯರು ಚಿಕ್ಕಮಗಳೂರಿಗೆ ಕರೆದೊಯ್ದು ಅಲ್ಲಿನ ಪೊಲೀಸರಿಗೆ ಒಪ್ಪಿಸುತ್ತೇವೆಂದು ವೇದಿಕೆ ಹೇಳಿದೆ.
ನೂರ್ ಜುಲ್ಫೀಕರ್ ವಿರುದ್ಧ ಉಡುಪಿ-ಚಿಕ್ಕಮಗಳೂರಿನ ವಿವಿಧ ಪೊಲೀಸ್ ಠಾಣೆಗಳಲ್ಲಿ ನಾಲ್ಕು ಪ್ರಕರಣಗಳು ದಾಖಲಾಗಿವೆ. ಸಿರಿಮನೆ ವಿರುದ್ಧವೂ ಉಡುಪಿಯ ಅಜೆಕಾರು ಮತ್ತು ಹೆಬ್ರಿ ಠಾಣೆಗಳಲ್ಲಿ ತಲಾ ಒಂದೊಂದು ಪ್ರಕರಣ ದಾಖಲಾಗಿದೆ. ಹೀಗಾಗಿ ವಶಕ್ಕೆ ಪಡೆದ ಪೊಲೀಸರು, ನ್ಯಾಯಾಧೀಶರ ಮುಂದೆ ಹಾಜರು ಮಾಡಲಿದ್ದಾರೆ.
ರಾಜ್ಯ ಸರಕಾರದ ಭರವಸೆ ಹಾಗೂ ಕಾನೂನಿನನ್ವಯ ಮುಖಂಡರಿಬ್ಬರು ಕಾನೂನು ಪ್ರಕ್ರಿಯೆ ಮೂಲಕ ಜಾಮೀನು ಪಡೆದು ಸಮಾಜದ ಮುಖ್ಯವಾಹಿನಿಗೆ ಬರಲಿದ್ದಾರೆ. ಸಿರಿಮನೆ ಮೇಲಿನ ಎರಡು ಪ್ರಕರಣಗಳನ್ನು ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಹಿಂಪಡೆಯಲಿದ್ದು, ಜುಲ್ಫೀಕರ್ ಮೇಲಿನ ‘ಸಶಸ್ತ್ರ ಕಾಯ್ದೆ’ಗೆ ಸಂಬಂಧ ಪಟ್ಟಂತೆ ಕೇಂದ್ರಕ್ಕೆ ಪತ್ರ ಬರೆಯಲಾಗುವುದೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವೇದಿಕೆಗೆ ತಿಳಿಸಿದ್ದಾರೆ.
ಈ ಮಧ್ಯೆ ಇಬ್ಬರು ಮುಖಂಡರು ರಾಜ್ಯ ಸರಕಾರ ನೀಡುವ ನೆರವನ್ನು ಪಡೆಯದೆ ಸ್ವಂತ ದುಡಿಮೆ ಮೇಲೆ ಬದುಕುತ್ತೇವೆಂದು ಹೇಳಿದ್ದಾರೆ. ರಾಜ್ಯ ಸರಕಾರದ ಸಕಾರಾತ್ಮಕ ಸ್ಪಂದನೆಯ ಹಿನ್ನೆಲೆಯಲ್ಲಿ ಸಶಸ್ತ್ರ ತ್ಯಜಿಸಿದ ಮಾಜಿ ನಕ್ಸಲೀಯ ಮುಖಂಡರಿಬ್ಬರು ಸದ್ಯಕ್ಕೆ ಸಮಾಜದ ಮುಖ್ಯವಾಹಿನಿಗೆ ಬರುವ ಹಾದಿ ಸುಗಮವಾದಂತಾಗಿದೆ.
ಯಾರಿವರು: ಚಿತ್ರದುರ್ಗ ಮೂಲದ ನೂರ್ ಜುಲ್ಫೀಕರ್ ಹೋರಾಟಗಾರರಿಗೆ ಶ್ರೀಧರ್ ಎಂದೇ ಪರಿಚಿತರು. ಸೂಫಿ ಹಿನ್ನೆಲೆಯ ರಾಬಿಯಾ ಬೇಗಂ ಹಾಗೂ ಅಬ್ದುಲ್ ಮುನಾಫ್ ಸಾಬ್ ಪುತ್ರರಾದ ನೂರ್, ಚಿತ್ರದುರ್ಗದ ಜೆಎಂಎಂಐಟಿ ಕಾಲೇಜಿನಲ್ಲಿ ಎಂಜಿನಿಯರಿಂಗ್ 5ನೆ ಸೆಮಿಸ್ಟರ್ ಅಭ್ಯಾಸ ಮಾಡುತ್ತಿದ್ದರು.
ಈ ವೇಳೆ ಆಂಧ್ರದಿಂದ ಬಿಇ ಕಲಿಯಲು ಬಂದಿದ್ದ ವಿದ್ಯಾರ್ಥಿಗಳಿಂದ ಕ್ರಾಂತಿಕಾರಿ ಚಳವಳಿಗೆ ಪ್ರಭಾವಿತರಾಗಿ 1986ರಲ್ಲಿ ಪ್ರಗತಿಪರ ವಿದ್ಯಾರ್ಥಿ ಕೇಂದ್ರ(ಪಿವಿಕೆ) ಹೆಸರಿನಲ್ಲಿ ಚಳವಳಿ ಆರಂಭಿಸಿ ವಿವಿಧ ಹೋರಾಟಗಳನ್ನು ನಡೆಸಿದರು. ಈ ಮಧ್ಯೆ ಪಿವಿಕೆಯಿಂದ ಪ್ರಕಟವಾಗುತ್ತಿದ್ದ ‘ವಿಮುಕ್ತಿ’ ಪತ್ರಿಕೆ ಸಂಪಾದಕರಾಗಿಯೂ ನೂರ್ ಕಾರ್ಯ ನಿರ್ವಹಿಸಿದ್ದರು.
1996ರಲ್ಲಿ ಸಿಪಿಐ(ಎಂ.ಎಲ್-ಪೀಪಲ್ಸ್‌ವಾರ್) ಪಕ್ಷದ ರಾಜ್ಯ ಸಮಿತಿ ಸದಸ್ಯರಾಗಿ ಆಯ್ಕೆಯಾಗಿದ್ದ ಅವರು 2006ರ ವರೆಗೆ 10 ವರ್ಷಗಳ ಕಾಲ ಸಶಸ್ತ್ರ ನಕ್ಸಲ್ ಚಳವಳಿಯಲ್ಲಿ ಸಕ್ರಿಯರಾಗಿದ್ದರು. ಈ ನಡುವೆ ಸಶಸ್ತ್ರ ಚಳವಳಿ ಬಗ್ಗೆ ಭಿನ್ನಾಭಿಪ್ರಾಯ ಬಂದ ಹಿನ್ನೆಲೆಯಲ್ಲಿ ಹೊರಬಂದ ಜುಲ್ಫೀಕರ್, ತಾವೇ ಕಟ್ಟಿದ ಕ್ರಾಂತಿಕಾರಿ ಕಮ್ಯೂನಿಸ್ಟ್ ಪಕ್ಷದ (ಆರ್‌ಸಿಪಿ) ಕಾರ್ಯದರ್ಶಿಯಾಗಿದ್ದಾರೆ.
ಸಿರಿಮನೆ: ಶೃಂಗೇರಿ ಸಮೀಪದ ಸಿರಿಮನೆಯ ಲಕ್ಷ್ಮಮ್ಮ ಹಾಗೂ ರಾಮಯ್ಯ ದಂಪತಿಯ ಪುತ್ರ ನಾಗರಾಜ್ ಮೈಸೂರಿನಲ್ಲಿ ಬಿಎಸ್‌ಸಿ ಅಭ್ಯಾಸ ಮಾಡಿದ್ದಾರೆ. ಆರಂಭದಲ್ಲಿ ಆರೆಸ್ಸೆಸ್ ಕಾರ್ಯಕರ್ತರಾಗಿದ್ದ ಸಿರಿಮನೆ, 1973ರಲ್ಲಿ ಅಂಚೆ ಇಲಾಖೆಯ ಉದ್ಯೋಗಿ. ಬಳಿಕ ಟೆಲಿಫೋನ್ ಇಲಾಖೆಗೆ ಸೇರಿದರು. 1979ರ ವರೆಗೆ ಉದ್ಯೋಗ ದಲ್ಲಿದ್ದ ಇವರು ಮೈಸೂರಿನಲ್ಲೆ ಮಾರ್ಕ್ಸ್‌ವಾದಿ ವಿಚಾರಧಾರೆಗೆ ಆಕರ್ಷಿತರಾಗಿದ್ದರು.
ಆ ಬಳಿಕ ಉದ್ಯೋಗಕ್ಕೆ ಗುಡ್‌ಬೈ ಹೇಳಿ 1980ರ ಸುಮಾರಿಗೆ ಮಾರ್ಕ್ಸ್‌ವಾದಿ ಚಳವಳಿಯಲ್ಲಿ ಪೂರ್ಣ ಪ್ರಮಾಣದಲ್ಲಿ ತೊಡಗಿಕೊಂಡರು. ಅನಂತರ ಚಳವಳಿಯನ್ನು ತೊರೆದು ಕೆಲಕಾಲ ಕೊಪ್ಪದಲ್ಲಿ ‘ಮುಂಜಾವು’ ಎಂಬ ವಾರಪತ್ರಿಕೆ ಆರಂಭಿಸಿದರು. ಈ ಮಧ್ಯೆಯೇ ದಲಿತ, ರೈತ ಸೇರಿದಂತೆ ಜನಪರ ಚಳವಳಿಗಳಲ್ಲಿ ಸಕ್ರಿಯರಾಗಿದ್ದರು.
ಬದಲಾದ ಕಾಲಘಟ್ಟದಲ್ಲಿ ಮಾವೋವಾದಿ ಚಳವಳಿಯೊಂದಿಗೆ ಗುರುತಿಸಿಕೊಂಡ ಸಿರಿಮನೆ ನಾಗರಾಜ್, ತುಂಗಾಮೂಲ ಉಳಿಸಿ, ಬೀದರ್ ವಿಷಾನಿಲ ಕಾರ್ಖಾನೆ, ಜಪಾನ್ ಕೈಗಾರಿಕಾ ನಗರ ವಿರೋಧಿ ಹೋರಾಟ ಗಳಲ್ಲಿ ಮುಂಚೂಣಿಯಲ್ಲಿದ್ದರು. ಕರ್ನಾಟಕ ವಿಮೋಚನಾ ರಂಗ(ಕವಿರಂ) ಅಧ್ಯಕ್ಷರಾಗಿ, ಸಾಮ್ರಾಜ್ಯಶಾಹಿ ವಿರೋಧಿ ಹಾಗೂ ನೈಸ್ ವಿರೋಧಿ ಹೋರಾಟದಲ್ಲಿಯೂ ಸಕ್ರಿಯರಾಗಿದ್ದನ್ನು ಸ್ಮರಿಸಬಹುದು.
2006ರಲ್ಲಿ ಸಶಸ್ತ್ರ ನಕ್ಸಲ್ ಚಳವಳಿಯ ಬಗ್ಗೆ ಸೈದ್ದಾಂತಿಕ ಭಿನ್ನಾಭಿಪ್ರಾಯಗಳ ಹಿನ್ನೆಲೆಯಲ್ಲಿ ನೂರ್ ಜುಲ್ಫೀಕರ್ ಜೊತೆ ಹೊರಬಂದ ಸಿರಿಮನೆ ನಾಗರಾಜ್ ಪ್ರಸ್ತುತ ಕ್ರಾಂತಿಕಾರಿ ಕಮ್ಯೂನಿಸ್ಟ್ ಪಕ್ಷದ ಸಂಸ್ಥಾಪಕರಲ್ಲಿ ಒಬ್ಬರಾಗಿದ್ದಾರೆ.