ಕರ್ನಾಟಕ

ಶೌಚಾಲಯ ನಿರ್ಮಾಣ: ರಾಜ್ಯ ಮಟ್ಟದಲ್ಲಿ ಮಂಡ್ಯ ಪ್ರಥಮ; ಗುರಿ ತಲುಪಿದ ಮೊದಲ ಜಿಲ್ಲೆ

Pinterest LinkedIn Tumblr

pvec011214mnd1

ಮಂಡ್ಯ: ನಿರ್ಮಲ ಭಾರತ ಅಭಿಯಾನದ ಅಡಿ ಶೌಚಾಲಯ ನಿರ್ಮಾಣಕ್ಕೆ ರಾಜ್ಯ ಸರ್ಕಾರ ನೀಡಿದ್ದ ಗುರಿ ಪೂರ್ಣಗೊಳಿಸಿದ ಮೊದಲ ಜಿಲ್ಲೆ ಎಂಬ ಕೀರ್ತಿ ಮಂಡ್ಯ ಜಿಲ್ಲೆಗೆ ದೊರೆತಿದೆ. ಜತೆಗೆ, ಶೌಚಾಲಯ ನಿರ್ಮಾಣದಲ್ಲಿ ಮೊದಲ ಸ್ಥಾನದಲ್ಲಿದೆ.

ಜಿಲ್ಲೆಗೆ ಪ್ರಸಕ್ತ ಸಾಲಿನಲ್ಲಿ 31, 425 ಶೌಚಾ­ಲಯ ನಿರ್ಮಾಣದ ಗುರಿ ನೀಡ­ಲಾಗಿತ್ತು, ಅಕ್ಟೋಬರ್ ಅಂತ್ಯಕ್ಕೆ ಗುರಿ ಮುಟ್ಟಲಾಗಿದೆ. ಈಗ 34,932 ಶೌಚಾ­ಲಯ ನಿರ್ಮಾಣ ಪೂರ್ಣಗೊಳಿಸ­ಲಾಗಿದ್ದು, 40 ಸಾವಿರ ಶೌಚಾಲಯಗಳ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಲಾಗಿದೆ.

2013–14ನೇ ಸಾಲಿನಲ್ಲಿ 25 ಸಾವಿರ ಗುರಿ ನಿಗದಿ ಪಡಿಸಲಾಗಿತ್ತು. 17,033 (ಶೇ 68) ಶೌಚಾಲಯ ನಿರ್ಮಾಣ ಮಾಡಲಾಗಿತ್ತು. ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವ­ಹಣಾಧಿಕಾರಿಯಾಗಿ ಬಂದ ರೋಹಿಣಿ ಸಿಂಧೂರಿ ಅವರು ಶೌಚಾಲಯ ನಿರ್ಮಾಣಕ್ಕೆ ಮೊದಲ ಆದ್ಯತೆ ನೀಡಿದರು.

ಒಂದು ಲಕ್ಷ ಶೌಚಾಲಯ ನಿರ್ಮಾಣ ಗುರಿ ಇಟ್ಟುಕೊಂಡು ಮುನ್ನಡೆದಿದ್ದಾರೆ.
ಶೌಚಾಲಯ ನಿರ್ಮಾಣಕ್ಕೆ ಆಂದೋ­ಲ­ನವನ್ನೇ ಕೈಗೆತ್ತಿಕೊಂಡರು. ಮೊದಲು ಬೇಸ್‌ಲೈನ್‌ ಸಮೀಕ್ಷೆ ಯಲ್ಲಿನ ತಪ್ಪು­ಗಳನ್ನು ಸರಿಪಡಿಸಿ ಕೊಳ್ಳಲಾಯಿತು. ಸರ್ವೆ ಪ್ರಕಾರ ಜಿಲ್ಲೆಯ ಗ್ರಾಮಾಂತರ ಪ್ರದೇಶದಲ್ಲಿ 3,74,445 ಕುಟುಂಬ­ಗಳಿವೆ.

ಯಶಸ್ಸಿನ ಗುಟ್ಟು: ಜಿಲ್ಲೆಯಲ್ಲಿ ತೀರಾ ಹಿಂದುಳಿದಿದ್ದ ಶೌಚಾಲಯ ನಿರ್ಮಾಣ­ದಲ್ಲಿ ಪ್ರಗತಿ ಸಾಧಿಸುವುದು ಸುಲಭದ ಮಾತಾಗಿರಲಿಲ್ಲ. ಗ್ರಾಮ ಪಂಚಾಯಿತಿ ಮಟ್ಟದಿಂದ ವಿವಿಧ ಹಂತಗಳಲ್ಲಿ ಆಂದೋಲನದ ಮೂಲಕ ಜಾಗೃತಿ ಮಾಡಲಾಯಿತು.

ಜಿಲ್ಲೆಯಲ್ಲಿ ವಿವಿಧ ಕಾಮಗಾರಿಗಳ ವೀಕ್ಷಣೆಗೆ ತೆರಳುತ್ತಿದ್ದ ಸಿಇಒ ರೋಹಿಣಿ ಸಿಂಧೂರಿ ಅವರು, ಅಲ್ಲಿರುವ ಸರ್ಕಾರಿ ಶಾಲೆ, ವಸತಿನಿಲಯಗಳಿಗೆ ಭೇಟಿ ನೀಡಿ ಮಕ್ಕಳಿಗೆ ಮನೆಗೊಂದು ಶೌಚಾಲಯ ನಿರ್ಮಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.

ಶೌಚಾಲಯ ರಹಿತ ಮಕ್ಕಳ ಮನೆ­ಗಳನ್ನು ದತ್ತು ತೆಗೆದುಕೊಂಡು ಶೌಚಾಲಯ ನಿರ್ಮಾಣಕ್ಕೆ ಪ್ರೇರೇಪಿ­ಸುವ ಹೊಣೆಯನ್ನು ಶಿಕ್ಷಕರಿಗೆ ನೀಡಲಾಗಿತ್ತು. ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರನ್ನೂ ಜಾಗೃತಿ ಮೂಡಿಸುವ ಕಾರ್ಯದಲ್ಲಿ ತೊಡಗಿಸಿ­ಕೊಂಡಿದ್ದಾರೆ.

ಮೊದಲು ಶೌಚಾಲಯ ಹೊಂದಿ­ಲ್ಲದ ಜನಪ್ರತಿನಿಧಿಗಳಿಗೆ ಶೌಚಾಲಯ ನಿರ್ಮಿಸಿಕೊಳ್ಳಲು ಸೂಚಿಸಿ, ನಿರ್ಮಿಸಿ­ಕೊಳ್ಳುವಂತೆ ನೋಡಿಕೊಳ್ಳ­ಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಅಂಬರೀಷ್‌ ಅವರಿಂದ ಧ್ವನಿ ಮುದ್ರಿತ ಸಂದೇಶವನ್ನು ಮೊಬೈಲ್‌ ಮೂಲಕ ಜನರಿಗೆ ತಲುಪಿಸುವ ಕೆಲಸ ಮಾಡಲಾಯಿತು.

‘ಪ್ರತಿ ಗ್ರಾಮದಲ್ಲಿಯೂ ಆಟೊಗಳ ಮೂಲಕ ಪ್ರಚಾರ ಮಾಡಲಾಯಿತು. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಶೌಚಾ ಲಯ ನಿರ್ಮಾ­ಣಕ್ಕೆ ಸಂಬಂಧಿಸಿದ ಬೀದಿ ನಾಟಕಗಳನ್ನು ಜಿಲ್ಲೆಯಲ್ಲಿ ಪ್ರದರ್ಶಿಸಲಾಯಿತು’ ಎನ್ನುತ್ತಾರೆ ರೋಹಿಣಿ ಸಿಂಧೂರಿ.

‘ಒಂದೆಡೆ ಜಾಗೃತಿ ಹಾಗೂ ಪ್ರಚಾರದ ಕಾರ್ಯ ಕೈಗೊಂಡರೆ, ಇನ್ನೊಂದೆಡೆ ವಾರಕ್ಕೊಮ್ಮೆ ಕಾರ್ಯ­ನಿರ್ವಾಹಕ ಹಾಗೂ ಸಮನ್ವಯ ಅಧಿಕಾರಿಗಳ ಸಭೆ, ಹದಿನೈದು ದಿನಗಳಿಗೊಮ್ಮೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳೊಂದಿಗೆ ವಿಡಿಯೊ ಸಂವಾದ ನಡೆಸಿದೆ.

ಈ ಎಲ್ಲ ಕ್ರಮಗಳ ಫಲಿ­ತಾಂಶದಿಂದಲೇ ಶೌಚಾಲಯ ನಿರ್ಮಾಣದಲ್ಲಿ ಮಂಡ್ಯ ಜಿಲ್ಲೆ ಪ್ರಥಮ ಸ್ಥಾನಕ್ಕೆ ಏರಿದೆ’ ಎನ್ನುವುದು ಅವರ ಮಾತು.

‘ರಾಜ್ಯ ಸರ್ಕಾರವು 31 ಸಾವಿರ ಶೌಚಾಲಯಗಳ ಗುರಿ ನೀಡಿತ್ತು. ಆದರೆ, ನಾವು ಜಿಲ್ಲೆಯಲ್ಲಿ ಒಂದು ಲಕ್ಷ ಶೌಚಾಲಯ ನಿರ್ಮಿಸುವ ಗುರಿ ಇಟ್ಟುಕೊಂಡಿದ್ದೇವೆ. ಇದಕ್ಕೆ ಎಲ್ಲರೂ ಸಹಕಾರ ನೀಡುತ್ತಿದ್ದಾರೆ.

ಶೌಚಾಲಯ ಇಲ್ಲದ್ದರಿಂದ ಮಹಿಳೆಯರಿಗೆ ತೊಂದರೆ­ಯಾಗುತ್ತಿತ್ತು. ಅದನ್ನು ತಪ್ಪಿಸಲು ಮುಂದಾಗಿದ್ದೇವೆ. ಜತೆಗೆ, ಆರೋಗ್ಯ ರಕ್ಷಣೆಯೂ ಇದರಲ್ಲಿ ಅಡಗಿದೆ ಎನ್ನುತ್ತಾರೆ ಅವರು.

ಯಾವುದೇ ಸಮಾರಂಭಕ್ಕೆ ಹೋಗಲಿ, ಯಾವುದೇ ಸಭೆಗೆ ಹೋಗಲಿ, ರೋಹಿಣಿ ಸಿಂಧೂರಿ ಅವರು ಭಾಷಣದಲ್ಲಿ ‘ಶೌಚಾಲಯ ನಿರ್ಮಿಸಿ­ಕೊಳ್ಳಿ’ ಎಂಬುದನ್ನು ತಪ್ಪದೇ ಹೇಳು­ತ್ತಾರೆ.

ಅದಕ್ಕೆ ಜನರೂ ಕಿವಿಗೊಟ್ಟಿದ್ದಾರೆ. ಆದ್ದರಿಂದಲೇ ರಾಜ್ಯಕ್ಕೆ ಮೊದಲ ಸ್ಥಾನ ಪಡೆದುಕೊಂಡಿದೆ.

Write A Comment