ಕರ್ನಾಟಕ

ಡಿ.9ರಿಂದ ವಿಧಾನಸಭೆ ಅಧಿವೇಶನ : ಶಾಸಕರಿಗೆ ಸಾರಿಗೆ ವ್ಯವಸ್ಥೆ ಬದಲಾಗಿ ನಿತ್ಯ 2500ರೂ. ಸಾರಿಗೆ ಭತ್ಯೆ

Pinterest LinkedIn Tumblr

SUVARNA_SO

ಬೆಂಗಳೂರು, ನ.30: ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಡಿ.9ರಿಂದ ನಡೆಯಲಿರುವ ವಿಧಾನಸಭೆ ಅಧಿವೇಶನದ ಸಂದರ್ಭದಲ್ಲಿ ಶಾಸಕರಿಗೆ ಸಾರಿಗೆ ವ್ಯವಸ್ಥೆ ಬದಲಾಗಿ ನಿತ್ಯ 2500ರೂ. ಸಾರಿಗೆ ಭತ್ಯೆ ಒದಗಿಸಲಾಗುತ್ತದೆ. ಈ ಸಂಬಂಧ ಅಧಿಕೃತ ಪ್ರಕಟಣೆ ಹೊರಡಿಸಿರುವ ವಿಧಾನಸಭೆ ಸಚಿವಾಲಯವು ಅಧಿವೇಶನ ಸಂದರ್ಭದಲ್ಲಿ ಶಾಸಕರೇ ಸಾರಿಗೆ ವ್ಯವಸ್ಥೆಯನ್ನು ಮಾಡಿಕೊಳ್ಳಬೇಕೆಂದು ತಿಳಿಸಿದೆ.

ಬೆಳಗಾವಿ, ಹುಬ್ಬಳ್ಳಿ, ಧಾರವಾಡದಲ್ಲಿ ವಾಸ್ತವ್ಯಕ್ಕೆ ಹೋಟೆಲ್‌ಗಳಲ್ಲಿ ವ್ಯವಸ್ಥೆ ಮಾಡಲಾಗಿದ್ದು, ಹೋಟೆಲ್‌ಗಳಿಂದ ಸುವರ್ಣ ವಿಧಾನಸೌಧಕ್ಕೆ ಆಗಮಿಸುವ ಶಾಸಕರು ತಾವೇ ಸಾರಿಗೆ ವ್ಯವಸ್ಥೆ ಮಾಡಿಕೊಂಡು ಬರಬೇಕಾಗಿದೆ. ವಾಸ್ತವ್ಯವಿರುವ ಹೋಟೆಲ್‌ಗಳಲ್ಲೇ ಬೆಳಗಿನ ಉಪಹಾರಕ್ಕೆ ವ್ಯವಸ್ಥೆ ಮಾಡಲಾಗಿದೆ. ಮಧ್ಯಾಹ್ನ ಸುವರ್ಣ ವಿಧಾನಸೌಧದಲ್ಲಿ ಶಾಸಕರೂ ಸೇರಿದಂತೆ 3 ಸಾವಿರ ಮಂದಿಗೆ ಊಟದ ವ್ಯವಸ್ಥೆಯನ್ನು ಮಾಡಲಾಗುತ್ತದೆ.

ಆದರೆ, ರಾತ್ರಿ ಊಟದ ವ್ಯವಸ್ಥೆಯನ್ನು ಆಯಾ ಶಾಸಕರೇ ಮಾಡಿಕೊಳ್ಳಬೇಕು. ವಿಧಾನಸಭೆ ಸಚಿವಾಲಯದಿಂದ ರಾತ್ರಿ ಊಟದ ವ್ಯವಸ್ಥೆ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ. ಶಾಸಕರ ಆಪ್ತಸಹಾಯಕರು ಮತ್ತು ಭದ್ರತಾ ಸಿಬ್ಬಂದಿಗೆ ವಸತಿ ಮತ್ತು ಸಾರಿಗೆ ಸೌಕರ್ಯವನ್ನು ಪ್ರತ್ಯೇಕವಾಗಿ ಒದಗಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿರುವ ಸಚಿವಾಲಯವು ಆಯಾ ಶಾಸಕರೇ ತಮ್ಮ ಸಿಬ್ಬಂದಿಗೆ ಸೌಲಭ್ಯ ಒದಗಿಸಿಕೊಳ್ಳಬೇಕೆಂದು ತಿಳಿಸಿದೆ. ಬೆಳಗಾವಿಯಲ್ಲಿ ಆಪ್ತ ಸಹಾಯಕರು ಮತ್ತು ಭದ್ರತಾ ಸಿಬ್ಬಂದಿಗೆ ವಸತಿ ಮತ್ತು ಸಾರಿಗೆ ಸೌಕರ್ಯ ಒದಗಿಸಲಾಗುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ. ಡಿ.6ರಿಂದ ಸುವರ್ಣ ವಿಧಾನಸೌಧದಲ್ಲಿ ವಿಧಾನಸಭೆ ಸಚಿವಾಲಯದ ಸಿಬ್ಬಂದಿ ಕಾರ್ಯನಿರ್ವಹಿಸಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಅಲ್ಲದೆ, ಶಾಸಕರಿಗೆ ನೀಡಲಾಗುವ ಭತ್ಯೆ, ಸೌಲಭ್ಯಗಳ ಕುರಿತಂತೆ ವರದಿ ನೀಡಲು ವಿಧಾನಸಭೆಯ ಉಪ ಸಭಾಧ್ಯಕ್ಷ ಎನ್.ಎಚ್.ಶಿವಶಂಕರರೆಡ್ಡಿ ಅವರ ನೇತೃತ್ವದಲ್ಲಿ ಮೂರು ಸದಸ್ಯರನ್ನೊಳಗೊಂಡ ಸಮಿತಿ ರಚಿಸಲಾಗಿದೆ. ವಿಧಾನಸಭೆಯಲ್ಲಿ ಸರ್ಕಾರದ ಮುಖ್ಯ ಸಚೇತಕ ಅಶೋಕ್ ಮಹದೇವಪಟ್ಟಣ, ವಿಧಾನಸಭೆಯ ವಿರೋಧ ಪಕ್ಷದ ಮುಖ್ಯ ಸಚೇತಕ ವಿ.ಸುನಿಲ್‌ಕುಮಾರ್ ಸದಸ್ಯರಾಗಿ ಕಾರ್ಯನಿರ್ವಹಿಸಲಿದ್ದು, ವಿಧಾನಸಭಾಧ್ಯಕ್ಷರಿಗೆ ಮಾಡಬೇಕಾದ ಬದಲಾವಣೆ, ಮಾರ್ಪಾಡು ಕುರಿತಂತೆ ಶಿಫಾರಸ್ಸಿನ ವರದಿಯನ್ನು ಸಲ್ಲಿಸಲಿದ್ದಾರೆ.

Write A Comment