ರಾಷ್ಟ್ರೀಯ

ದೇಶದ ಜನತೆಗೊಂದು ಸಿಹಿ ಸುದ್ದಿ ! ಪೊಲೀಸರಿಗೆ ದೂರು ನೀಡಲು ಬರುತ್ತಿವೆ ಎಟಿಎಂ ಮಾದರಿಯ ಯಂತ್ರಗಳು : ಪ್ರಧಾನಿ ಮೋದಿ ಪರಿಕಲ್ಪನೆ

Pinterest LinkedIn Tumblr

Complaint-box

ನವದೆಹಲಿ, ನ.30: ದೇಶದ ಜನತೆಗೊಂದು ಸಿಹಿ ಸುದ್ದಿ. ಇನ್ನು ನಾಗರಿಕರು ದೂರು ನೀಡಲು ಪೊಲೀಸ್ ಠಾಣೆಗೆ ಅಲೆಯಬೇಕಿಲ್ಲ. ಪೊಲೀಸರು ದೂರು ಸ್ವೀಕರಿಸದೆ ಸತಾಯಿಸುವಂತಿಲ್ಲ. ಒಮ್ಮೆ ದೂರು ದಾಖಲಿಸಿದರಾಯಿತು ಅದಕ್ಕೆ ಪೊಲೀಸರೇ ಹೊಣೆ. ಇದೇನಿದು ಅಂತೀರಾ….?

ಈ ಎಲ್ಲಾ ಗೊಂದಲಗಳನ್ನು ನಿವಾರಿಸಿ ನಾಗರಿಕರಿಗೆ ಸೂಕ್ತ ರಕ್ಷಣೆ, ಭದ್ರತೆ ನೀಡುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರಮೋದಿ ಅವರು ಪೊಲೀಸರಿಗೆ ದೂರು ನೀಡಲು ಎಟಿಎಂ ಮಾದರಿ ಯಂತ್ರಗಳನ್ನು ಅಳವಡಿಸುವ ವಿನೂತನ ಯೋಜನೆಯೊಂದನ್ನು ರೂಪಿಸಿದ್ದಾರೆ. ಅಸ್ಸೊಂನ ರಾಜಧಾನಿ ಗುವಾಹಟಿಯಲ್ಲಿ ನಡೆಯುತ್ತಿರುವ ಭದ್ರತೆ ಕುರಿತಾದ ಎಲ್ಲಾ ರಾಜ್ಯಗಳ ಡಿಜಿಪಿಗಳು ಮತ್ತಿತರ ಹಿರಿಯ ಅಧಿಕಾರಿಗಳ ಸಭೆಯಲ್ಲಿ ಇಂದು ತಮ್ಮ ಈ ಕನಸಿನ ಯೋಜನೆಯನ್ನು ಪ್ರಸ್ತಾಪಿಸಿದ್ದಾರೆ. ಗುವಾಹಟಿಯಲ್ಲಿ ನಿನ್ನೆ ಆರಂಭವಾದ ಡಿಜಿಪಿಗಳು, ಗುಪ್ತಚರ ಇಲಾಖೆ ಅಧಿಕಾರಿಗಳು, ಸಿಬಿಐ ಅಧಿಕಾರಿಗಳ ಮುಂದುವರಿದ ಸಭೆಯಲ್ಲಿಂದು ಮಾತನಾಡಿದ ಪ್ರಧಾನಿ ಮೋದಿ, ದೇಶದ ಪ್ರತಿಯೊಬ್ಬ ನಾಗರಿಕನಿಗೂ ಸೂಕ್ತ ಭದ್ರತೆ, ರಕ್ಷಣೆ ಒದಗಿಸುವುದು ಆದ್ಯ ಕರ್ತವ್ಯ ಮತ್ತು ಬದ್ಧತೆ ಆಗಬೇಕು ಎಂದು ಹೇಳಿದರು.

ತಮ್ಮ ಸಂಕಷ್ಟ ಸಮಯದಲ್ಲಿ ನಾಗರಿಕರು ಪೊಲೀಸ್ ಠಾಣೆ ಹುಡುಕಿಕೊಂಡು ಹೋಗುವುದು, ಪೊಲೀಸರು ಅವರನ್ನು ಸತಾಯಿಸುವುದು ತಪ್ಪಬೇಕು. ಅದಕ್ಕಾಗಿ ಎಟಿಎಂ ಮಾದರಿ ಯಂತ್ರಗಳ ಸ್ಥಾಪನೆ ಮಾಡುವುದು ನನ್ನ ಗುರಿಯಾಗಿದೆ. ಎಲ್ಲಾ ಸಾರ್ವಜನಿಕ ವಲಯಗಳಲ್ಲಿಯೂ ಈ ಯಂತ್ರ ಸ್ಥಾಪಿಸಬೇಕು. ಅಲ್ಲಿಗೆ ಬಂದು ತಮ್ಮ ದೂರು ಸಲ್ಲಿಸಲು ಅವಕಾಶವಿರಬೇಕು.

ದೂರು ಠಾಣೆಯ ಅಧಿಕಾರಿಗಳು ಗಮನಿಸಿ ದೂರಿನ ಗಂಭೀರತೆ, ಪ್ರಾಮುಖ್ಯತೆಯನ್ನು ನಿರ್ಧರಿಸಿ ಶೀಘ್ರ ಕ್ರಮ ಕೈಗೊಳ್ಳುವಂತಾಗಬೇಕು ಎಂದು ಪ್ರಧಾನಿ ಮೋದಿ ತಮ್ಮ ಕನಸಿನ ಪರಿಕಲ್ಪನೆಯನ್ನು ಪೊಲೀಸ್ ಅಧಿಕಾರಿಗಳ ಎದುರು ತೆರೆದಿಟ್ಟರು. ಒಂದು ಕಾಗದದ ಮೇಲೆ ದೂರು ಬರೆದು ಈ ಯಂತ್ರಕ್ಕೆ ಹಾಕಿದರೆ ಜನರಿಗೆ ರಕ್ಷಣೆ ದೊರೆಯಬೇಕು. ಈ ಯಂತ್ರವನ್ನು ಐಸಿಎಲ್‌ಐಸಿಕೆ ಎಂದು ಕರೆಯಲಾಗುತ್ತದೆ. ಇದರಿಂದ ದುರ್ಬಲ ವರ್ಗದವರಿಗೆ ಶಕ್ತಿ ತುಂಬಿದಂತಾಗುತ್ತದೆ ಎಂದರು.

63 ಸಾವಿರ ಪೊಲೀಸರ ಬಲಿದಾನ:
ದೇಶದ ರಕ್ಷಣೆಯಲ್ಲಿ ಪೊಲೀಸರು ಹಾಗೂ ಗುಪ್ತಚರ ಇಲಾಖೆ ಅಧಿಕಾರಿಗಳ ಪಾತ್ರ ಮಹತ್ವದ್ದು. ಇದುವರೆಗೆ ನಾಗರಿಕರ ರಕ್ಷಣೆಯಲ್ಲಿ 63 ಸಾವಿರ ಪೊಲೀಸರು ಹುತಾತ್ಮರಾಗಿದ್ದಾರೆ. ಅದನ್ನು ನಾವು ಸದಾ ಸ್ಮರಿಸಬೇಕು. ಇಂದಿನ ಯುವಜನತೆಗೆ ತ್ಯಾಗ-ಬಲಿದಾನಗಳ ಬಗ್ಗೆ ಮನದಟ್ಟು ಮಾಡಿಕೊಡಬೇಕು ಎಂದು ಮೋದಿ ಹೇಳಿದರು. ಪೊಲೀಸ್ ಇಲಾಖೆ ಹಾಗೂ ಗುಪ್ತಚರ ಇಲಾಖೆ ಸಕ್ರಿಯವಾಗಿ ಸಶಕ್ತವಾಗಿದ್ದರೆ ಶಸ್ತ್ರಾಸ್ತ್ರಗಳ ಬಳಕೆಯ ಅಗತ್ಯವೇ ಇರುವುದಿಲ್ಲ ಎಂದು ಹೇಳಿದ ಅವರು, ಸರಿಯಾದ ಶಸ್ತ್ರಾಸ್ತ್ರಾಗಳು ಸರಿಯಾದವರ ಕೈಯ್ಯಲ್ಲಿರಬೇಕು ಎಂದರು.

ಇಂತಹ ಸಮಾವೇಶಗಳಿಂದ ಪೊಲೀಸರಿಗೆ ಇನ್ನೂ ಹೆಚ್ಚಿನ ಸ್ಫೂರ್ತಿ ದೊರೆಯುತ್ತದೆ. ದೇಶಕ್ಕಾಗಿ ದುಡಿದು ಬಲಿದಾನ ಮಾಡಿದ ಪೊಲೀಸರ ತ್ಯಾಗದ ಬಗ್ಗೆ, ಹೊಸದಾಗಿ ಇಲಾಖೆಗೆ ಸೇರ್ಪೆಡೆಯಾಗುವ ಯುವ ಜನತೆಗೆ ಹೇಳಬೇಕು ಎಂದು ಅವರು ನುಡಿದರು. ಕಳೆದ ಜನವರಿಯಲ್ಲೇ ಒಡಿಸ್ಸಾದ ಭುವನೇಶ್ವರದಲ್ಲಿ ಈ ಎಟಿಎಂ ಯೋಜನೆಗೆ ಚಾಲನೆ ನೀಡಲಾಗಿದ್ದು, ಅದು ಯಶಸ್ವಿಯಾಗಿದೆ. ಆದರೆ, ಈ ಯೋಜನೆ ಸದ್ಯ ದೌರ್ಜನ್ಯಕ್ಕೊಳಗಾದ ಮಹಿಳೆಯರಿಗಷ್ಟೇ ಸೀಮಿತವಾಗಿದ್ದು, ಇನ್ನು ಮುಂದೆ ಎಲ್ಲರಿಗೂ ಈ ಅನುಕೂಲ ಕಲ್ಪಿಸಲಾಗುವುದು ಎಂದು ಗುಪ್ತಚರ ಇಲಾಖೆ ನಿರ್ದೇಶಕ ಆಸಿಫ್ ಇಬ್ರಾಹಿಂ ತಿಳಿಸಿದ್ದಾರೆ.

Write A Comment