ಕರ್ನಾಟಕ

ಹಣಕ್ಕಾಗಿ ಸರಗಳ್ಳನಾದ ನಟ

Pinterest LinkedIn Tumblr

pvec30nbr14mys60

ಮೈಸೂರು: ಸಿನಿಮಾ ರಂಗ ಪ್ರವೇಶಿಸಲು ಹಣ ಗಳಿಸಬೇಕು ಎಂಬ ಹಪಹಪಿಕೆ ಉದಯೋನ್ಮುಖ ನಟನ ಭವಿಷ್ಯವನ್ನು ಹೊಸಕಿ ಹಾಕಿದೆ. ಒಂದೂವರೆ ವರ್ಷದ ಹಿಂದೆ ನಡೆಸಿದ ಸರಗಳ್ಳತನ ಪ್ರಕರಣದಲ್ಲಿ ‘ಡ್ರೆಸ್‌ಕೋಡ್’ ಚಿತ್ರದ ನಾಯಕ ನಟ ಪೃಥ್ವಿ, ಕೊನೆಗೂ ಪೊಲೀಸರಿಗೆ ಸೆರೆಸಿಕ್ಕಿದ್ದು, ಒಂದೊಂದೇ ಪ್ರಕರಣ ಬೆಳಕಿಗೆ ಬರುತ್ತಿವೆ.

ಚಿತ್ರದ ನಾಯಕನಾಗುವುದಕ್ಕೂ ಮುನ್ನ ಸರಗಳವು ತಂಡದ ನೇತೃತ್ವ ವಹಿಸಿದ ವಿಷಯವನ್ನು ಪೃಥ್ವಿ ಪೊಲೀಸರ ಎದುರು ಒಪ್ಪಿಕೊಂಡಿದ್ದಾನೆ. ಈ ತಂಡದ ಇತರ ನಾಲ್ವರಿಗೆ ಪೊಲೀಸರು ಶೋಧಕಾರ್ಯ ಮುಂದುವರಿಸಿದ್ದಾರೆ. ಮಂಡ್ಯ ಮತ್ತು ಮೈಸೂರು ಜಿಲ್ಲೆಯಲ್ಲಿ ನಡೆಸಿದ ಮೂರು ಕಳವು ಪ್ರಕರಣಗಳು ಪತ್ತೆಯಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ಹಣದ ಅಗತ್ಯವಿದ್ದಾಗ ಐವರು ಯುವಕರು ಪರ ಊರಿಗೆ ತೆರಳಿ ಈ ಕೃತ್ಯ ಎಸಗುತ್ತಿದ್ದರು. ಮಂಡ್ಯ ನಗರ ವ್ಯಾಪ್ತಿಯಲ್ಲಿ ನಡೆದ ಎರಡು ಸರಗಳವು ಹಾಗೂ ಕೆ.ಆರ್‌. ನಗರದ ಠಾಣೆಯ ವ್ಯಾಪ್ತಿಯಲ್ಲಿ ನಡೆದ ಒಂದು ಪ್ರಕರಣದಲ್ಲಿ ಈತ ಪೊಲೀಸರಿಗೆ ಬೇಕಾಗಿದ್ದ. ಮೈಸೂರು ತಾಲ್ಲೂಕಿನ ಡಿ. ಸಾಲುಂಡಿ ಬಳಿಯ ಮೈಸೂರು–ಎಚ್‌.ಡಿ. ಕೋಟೆ ರಸ್ತೆಯಲ್ಲಿ ಗುರುವಾರ ರಾತ್ರಿ ಅನುಮಾನಾ­ಸ್ಪದವಾಗಿ ನಿಂತಿದ್ದ ಪೃಥ್ವಿಯನ್ನು ವಿಚಾರಣೆಗೆ ಒಳಪಡಿಸಿ­ದಾಗ ಸರಗಳವು ಪ್ರಕರಣ ಬೆಳಕಿಗೆ ಬಂದಿದೆ.

ಬಂಧಿತನಿಂದ ₨ 1.5 ಲಕ್ಷ ಮೌಲ್ಯದ 62 ಗ್ರಾಂ ಚಿನ್ನಾಭರಣ­ವನ್ನು ವಶಪಡಿಸಿಕೊಳ್ಳಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸ­ಲಾಗಿದೆ. ಈ ಸಂಬಂಧ ಜಯಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪೃಥ್ವಿಯನ್ನು ಅಕ್ರಮ ಬಂಧನದಲ್ಲಿಟ್ಟಿದ್ದಾರೆ ಎಂದು ಆರೋಪಿಸಿ ಈತನ ತಾಯಿ ವಾಣಿಶ್ರೀ ಮೈಮೇಲೆ ಪೆಟ್ರೋಲ್‌ ಸುರಿದುಕೊಂಡು ಜಿಲ್ಲಾಧಿಕಾರಿ ಕಚೇರಿ ಬಳಿ ಶುಕ್ರವಾರ ಆತ್ಮಹತ್ಯೆಗೆ ಯತ್ನಿಸಿದ್ದರು. ಬಳಿಕ ವಾಣಿಶ್ರೀ­ಯನ್ನು ವಶಕ್ಕೆ ಪಡೆದ ಪೊಲೀಸರು ಅವರ ವಿರುದ್ಧ ಆತ್ಮಹತ್ಯೆ ಯತ್ನ ಪ್ರಕರಣ ದಾಖಲಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

Write A Comment