ಕರ್ನಾಟಕ

ಚಿತ್ರಕಲಾ ಶಿಲ್ಪಿ ಶಿವಪ್ರಸಾದ್‌ಗೆ ಹಾಲಭಾವಿ ಪ್ರಶಸ್ತಿ ಪ್ರದಾನ

Pinterest LinkedIn Tumblr

pvec30nbr14dwd2ep

ಧಾರವಾಡ: ಚಿತ್ರಕಲಾ ಶಿಲ್ಪಿ ಡಿ.ವಿ.ಹಾಲಭಾವಿ ರಾಷ್ಟ್ರೀಯ ಸ್ಮಾರಕ ಟ್ರಸ್ಟ್‌ ವತಿಯಿಂದ ಜೀವಮಾನ ಸಾಧನೆಗಾಗಿ ನೀಡುವ ಕಲಾ ತಪಸ್ವಿ ರಾಷ್ಟ್ರೀಯ ಪ್ರಶಸ್ತಿಯನ್ನು ಹಿರಿಯ ಕಲಾವಿದ ಕೆ.ಟಿ.ಶಿವಪ್ರಸಾದ್ ಅವರಿಗೆ ಹಾಗೂ ಕುಂಚ ಕಲಾಶ್ರೀ ಪ್ರಶಸ್ತಿಯನ್ನು ಚಿ.ಸು.ಕೃಷ್ಣ ಸೆಟ್ಟಿ ಅವರಿಗೆ ಪ್ರದಾನ ಮಾಡಲಾಯಿತು.

ನಗರದ ಸೃಜನಾ ರಂಗ ಮಂದಿರದಲ್ಲಿ ಶನಿವಾರ ಪ್ರಶಸ್ತಿ ಪ್ರದಾನ ಸಮಾರಂಭ ಆಯೋಜಿಸಲಾಗಿತ್ತು. ಇವರೊಂದಿಗೆ ಯುವ ಕುಂಚ ಕಲಾಶ್ರೀ ಪ್ರಶಸ್ತಿಯನ್ನು ಒಡಿಶಾದ ಮಾನಶ ರಂಜನ್‌ ಜೇನಾ ಹಾಗೂ ಚೆನ್ನೈನ ಇಳಯರಾಜ ಅವರಿಗೆ ನೀಡಿ ಗೌರವಿಸಲಾಯಿತು. ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತರಿಗೆ ₨ 1 ಲಕ್ಷ, ಕುಂಚ ಕಲಾಶ್ರೀ ಪ್ರಶಸ್ತಿ ₨ 50 ಸಾವಿರ ಹಾಗೂ ಯುವ ಪ್ರಶಸ್ತಿ ಪಡೆದ ಕಲಾವಿದರಿಗೆ ತಲಾ ₨ 25 ಸಾವಿರ ನಗದು ಹಾಗೂ ಫಲಕವನ್ನು ನೀಡಿ ಗೌರವಿಸಲಾಯಿತು.

ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಶಿವಪ್ರಸಾದ್‌, ತಮ್ಮ ಕಲಾ ಜೀವನದ ಪೋಷಕರಾದ ಘಾಣೇಕರ್‌ ಹಾಗೂ ನಂತರದಲ್ಲಿ ಪ್ರಭಾವ ಬೀರಿದ ಪ್ರೊ.ನಂಜುಂಡಸ್ವಾಮಿ, ಪೂರ್ಣಚಂದ್ರ ತೇಜಸ್ವಿ ಅವರನ್ನು ನೆನೆದರು. ‘ತೇಜಸ್ವಿ ಅವರಿಂದಾಗಿ ಛಾಯಾಗ್ರಹಣ, ವಾಸ್ತು­ಶಿಲ್ಪದ ಜತೆಗೆ ಆಧ್ಯಾತ್ಮದ ಪುಸ್ತಕ­ಗಳನ್ನು ಓದುವ ಹವ್ಯಾಸವನ್ನು ಬೆಳೆಸಿಕೊಂಡೆ. ಅವುಗಳು ನನ್ನ ಕಲಾ ಬದುಕಿಗೆ ಪ್ರೇರಣೆ ನೀಡಿವೆ. ಕುವೆಂಪು ಅವರ ಸ್ಮಾರಕವನ್ನು ನಿರ್ಮಿಸಿದ್ದರೂ ನನಗೆ ವೈಯಕ್ತಿಕವಾಗಿ ಇಷ್ಟವಾಗಿದ್ದು ತೇಜಸ್ವಿ ಅವರ ಸ್ಮಾರಕ’ ಎಂದು ಹೇಳಿದರು.

ಚಿ.ಸು.ಕೃಷ್ಣ ಸೆಟ್ಟಿ ಮಾತನಾಡಿ, ‘ಇಂದಿನ ದಿನಮಾನದಲ್ಲಿ ಕಲಾವಿದರು ಬಾಹ್ಯ ಪ್ರಪಂಚದ ಬೇಡಿಕೆ ಹಾಗೂ ದನಿಯನ್ನು ಕೇಳಿಸಿಕೊಂಡು ಕಲಾಕೃತಿ ರಚನೆಯಲ್ಲಿ ತೊಡಗಿದ್ದಾರೆ. ಆದರೆ ಅಂತರಂಗದ ದನಿಯನ್ನು ಕೇಳಿದ್ದೇ ಆದಲ್ಲಿ ನಮ್ಮ ಕಲಾಕೃತಿಗಳೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರುತಿಸುವಂತಾಗುವುದರಲ್ಲಿ ಎರಡು ಮಾತಿಲ್ಲ. ಆದರೆ ನಮ್ಮ ಬೇರುಗಳನ್ನು ಹುಡುಕುವ ಮೂಲಕ ನಮ್ಮ ಸಂಸ್ಕೃತಿಯ ಮೂಲವನ್ನು ಪತ್ತೆಹಚ್ಚುವ ಅಗತ್ಯವಿದೆ ಎಂದು ಹೇಳಿದರು.

‘ಇಂಥದ್ದೊಂದು ಟ್ರಸ್ಟ್‌ ನೀಡುವ ಗೌರವದ ಮುಂದೆ ಸರ್ಕಾರವೇ ನೀಡುವ ಲಲಿತಕಲಾ ಅಕಾಡೆಮಿ ಪ್ರಶಸ್ತಿಯ ಮೊತ್ತ ತೀರಾ ಕಡಿಮೆ ಇರುವುದು ವಿಪರ್ಯಾಸ. ಇದು ಕಲಾವಿದರ ಆತ್ಮಗೌರವಕ್ಕೆ ಅವಮಾನ ಮಾಡಿದಂತೆ. ಜತೆಗೆ ಈ ಸಮಾರಂಭಕ್ಕೆ ಬರಬೇಕಾದ ರಾಜಕಾರಣಿಗಳು ಗೈರು ಆಗಿರುವುದನ್ನು ಕಂಡಾಗ ಕಲೆಯ ಕುರಿತಾಗಿ ಅವರಿಗಿರುವ ನಿರ್ಲಕ್ಷ್ಯತನವನ್ನು ತೋರಿಸುತ್ತದೆ’ ಎಂದು ಬೇಸರ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಪಿ.ರಾಜೇಂದ್ರ ಚೋಳನ್‌, ಶಾಸಕ ಅರವಿಂದ ಬೆಲ್ಲದ, ಟ್ರಸ್ಟ್‌ನ ಅಧ್ಯಕ್ಷ ಚಂದ್ರಕಾಂತ ಬೆಲ್ಲದ, ಎಂ.ಆರ್‌.ಬಾಳೀ­ಕಾಯಿ, ಸುರೇಶ ಹಾಲಭಾವಿ, ಪಾರ್ವತಿ ಹಾಲಭಾವಿ, ಪಾರ್ಕೇರಾ ಮತ್ತಿತರರು ಉಪಸ್ಥಿತರಿದ್ದರು.

Write A Comment