ಕರ್ನಾಟಕ

‘ಸುಪ್ರೀಂ ಕೋರ್ಟ್‌’ ಪರಿಶೀಲನೆಯಲ್ಲಿ ರೆಡ್ಡಿ ಜಾಮೀನು

Pinterest LinkedIn Tumblr

pvec28-janardhan-reddy

ನವದೆಹಲಿ: ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಜೈಲು ಸೇರಿರುವ ಮಾಜಿ ಸಚಿವ ಹಾಗೂ ಗಣಿ ಉದ್ಯಮಿ ಗಾಲಿ ಜನಾರ್ದನ ರೆಡ್ಡಿ ಅವರಿಗೆ ಷರತ್ತು ಬದ್ಧ ಜಾಮೀನು ನೀಡುವಂತೆ ಕೋರಿ ಸಲ್ಲಿಸಲಾಗಿದ್ದ ಮನವಿಯನ್ನು ಪರಿಶೀಲಿಸುವುದಾಗಿ ಸುಪ್ರೀಂ­ಕೋರ್ಟ್‌ ಶುಕ್ರವಾರ ಹೇಳಿದೆ.

ಯಾವ ಷರತ್ತು ಮತ್ತು ಆಧಾರದ ಮೇಲೆ ಆರೋಪಿಗೆ ಜಾಮೀನು ನೀಡ­ಬಹುದು ಎಂಬುವು­ದನ್ನು ಡಿಸೆಂಬರ್‌ 15ರ ಒಳಗಾಗಿ ತನಗೆ ತಿಳಿಸುವಂತೆ ಸುಪ್ರೀಂಕೋರ್ಟ್‌, ಸಿಬಿಐ ಪರ ವಕೀಲ ಮಣಿಂದರ್‌ ಸಿಂಗ್‌ ಅವರಿಗೆ ಸೂಚಿಸಿದೆ.

ಜನಾರ್ದನ ರೆಡ್ಡಿ ಅವರನ್ನು ಬಿಡುಗಡೆ ಮಾಡು­ವಂತೆ ಹಿರಿಯ ವಕೀಲ ದುಷ್ಯಂತ್‌ ದವೆ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎಚ್‌.ಎಲ್‌ ದತ್ತು ನೇತೃತ್ವದ ಮೂವರು ನ್ಯಾಯಮೂರ್ತಿಗಳ ಪೀಠ, ‘ಜಾಮೀನು ಷರತ್ತುಗಳ ಬಗ್ಗೆ ಸಿಬಿಐ ಮೊದಲು ನ್ಯಾಯಾಲಯಕ್ಕೆ ವಿವರಣೆ ಸಲ್ಲಿಸಲಿ. ನಂತರ ಅದನ್ನು ಪರಿಶೀಲಿಸೋಣ’ ಎಂದು ಹೇಳಿದೆ.ನ್ಯಾಯಮೂರ್ತಿಗಳಾದ ಎನ್‌.ವಿ. ರಮಣ  ಮತ್ತು ಎ.ಕೆ. ಸಿಕ್ರಿ ಈ ಪೀಠದಲ್ಲಿದ್ದರು.

ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ರೆಡ್ಡಿ ಜೈಲು ಸೇರಿ ಇಂದಿಗೆ 39 ತಿಂಗಳು 23 ದಿನಗಳಾದವು. ಪ್ರಕರಣಕ್ಕೆ ಸಂಬಂಧಿಸಿ­ದಂತೆ ಸಿಬಿಐ ಮೂರನೇ ಆರೋಪ­ಪಟ್ಟಿಯನ್ನೂ ಸಲ್ಲಿಸಿಯಾಗಿದೆ. ತಮ್ಮ ಕಕ್ಷಿದಾರರಾದ ಜನಾರ್ದನ ರೆಡ್ಡಿ ಅವರ ಕ್ಷೀಣಿಸುತ್ತಿ­ರುವ ಆರೋಗ್ಯವನ್ನು ಗಮನದಲ್ಲಿರಿಸಿಕೊಂಡು ಜಾಮೀನು ಅರ್ಜಿಯನ್ನು ಪರಿಗಣಿಸಬೇಕು ಎಂದು ವಕೀಲ ದವೆ ಮನವಿ ಮಾಡಿದರು.

ಆರು ತಿಂಗಳ ಒಳಗಾಗಿ ರೆಡ್ಡಿ ವಿರುದ್ಧದ ವಿಚಾರಣೆ ಪೂರ್ಣಗೊಳ್ಳದಿದ್ದಲ್ಲಿ ಜಾಮಿನು ಅರ್ಜಿಯನ್ನು ಪರಿಗಣಿಸುವುದಾಗಿ ನ್ಯಾಯಾಲಯ ಇದೇ ಜುಲೈನಲ್ಲಿ ಹೇಳಿತ್ತು. ತಾವು ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ತಿರಸ್ಕರಿಸಿದ್ದ ಹೈಕೋರ್ಟ್‌ ಆದೇಶವನ್ನು ಪ್ರಶ್ನಿಸಿ ರೆಡ್ಡಿ 2013ರಲ್ಲಿ ಸುಪ್ರೀಂಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು.

ಜನಾರ್ದನ ರೆಡ್ಡಿ ಹಾಗೂ ಅವರ ಭಾವಮೈದ ಹಾಗೂ ಒಬಳಾಪುರಂ ಗಣಿ ಕಂಪೆನಿ ವ್ಯವಸ್ಥಾಪಕ ನಿರ್ದೇಶಕ ಬಿ.ವಿ ಶ್ರೀನಿವಾಸ ಅವರನ್ನು ಸಿಬಿಐ ಅಧಿಕಾರಿಗಳು ಸೆಪ್ಟೆಂಬರ್‌ 5, 2011ರಲ್ಲಿ ಬಳ್ಳಾರಿಯ ನಿವಾಸದಲ್ಲಿ ಬಂಧಿಸಿ ಹೈದರಾಬಾದ್‌ಗೆ ಕರೆದೊಯ್ದಿದ್ದರು.

Write A Comment