ಕಾರವಾರ: ‘ಕೈಗಾ ಅಣು ವಿದ್ಯುತ್ ಕೇಂದ್ರದ 5 ಮತ್ತು 6ನೇ ಘಟಕದ ನಿರ್ಮಾಣ ಕಾರ್ಯ 2016ರ ಡಿಸೆಂಬರ್ನಲ್ಲಿ ಆರಂಭವಾಗಲಿದೆ’ ಎಂದು ಕೇಂದ್ರದ ನಿರ್ದೇಶಕ ಎಚ್.ಎನ್. ಭಟ್ ಹೇಳಿದರು.
‘700 ಮೆಗಾವಾಟ್ ವಿದ್ಯುತ್ ಸಾಮರ್ಥ್ಯದ ಎರಡು ಘಟಕಗಳು ನಿರ್ಮಾಣವಾಗಲಿದ್ದು, ಒಟ್ಟಾರೆ 1,400 ಮೆಗಾವಾಟ್ಗಳಷ್ಟು ವಿದ್ಯುತ್ ಉತ್ಪಾದಿಸಲಾಗುವುದು’ ಎಂದು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಅವರು ತಿಳಿಸಿದರು.
‘ಘಟಕಗಳ ನಿರ್ಮಾಣಕ್ಕೆ ಕೇಂದ್ರ ಸಚಿವ ಸಂಪುಟದ ಅನುಮತಿ ಸಿಕ್ಕಿದ್ದು, ಕೇಂದ್ರದ ಪರಿಸರ ಸಚಿವಾಲಯದ ಒಪ್ಪಿಗೆ ಪಡೆಯಲು ಭಾರತೀಯ ಅಣು ವಿದ್ಯುತ್ ನಿಗಮ ಅರ್ಜಿ ಸಲ್ಲಿಸಿದೆ.
ಹೊಸ ಘಟಕಗಳಿಂದ ಉತ್ಪಾದನೆಯಾಗುವ ಒಟ್ಟಾರೆ ವಿದ್ಯುತ್ ಪೈಕಿ ಶೇ 50ರಷ್ಟನ್ನು ಕರ್ನಾಟಕಕ್ಕೆ ನೀಡಲಾಗುವುದು’ ಎಂದರು.
‘ಕೈಗಾ ಸ್ಥಾವರದಲ್ಲಿ ಸದ್ಯ 220 ಮೆಗಾವಾಟ್ ವಿದ್ಯುತ್ ಉತ್ಪಾದನಾ ಸಾಮರ್ಥ್ಯದ ನಾಲ್ಕು ವಿದ್ಯುತ್ ಘಟಕಗಳು ಕಾರ್ಯ ನಿರ್ವಹಿಸುತ್ತಿವೆ. ಈ ಘಟಕಗಳಿಂದ ಉತ್ಪಾದನೆಯಾಗುತ್ತಿರುವ ವಿದ್ಯುತ್ ಪೈಕಿ ಶೇ 28ರಷ್ಟನ್ನು ಮಾತ್ರ ಕರ್ನಾಟಕಕ್ಕೆ ನೀಡಲಾಗುತ್ತಿದೆ. ಉಳಿದಂತೆ ಗೋವಾ, ಆಂಧ್ರಪ್ರದೇಶ, ಕೇರಳ, ತಮಿಳುನಾಡು, ಮಹಾರಾಷ್ಟ್ರಗಳಿಗೆ ಸರಬರಾಜು ಮಾಡಲಾಗುತ್ತಿದೆ’ ಎಂದರು.
‘ವಿದ್ಯುತ್ ಸರಬರಾಜಿಗೆ ಪ್ರಸ್ತುತ ಇರುವ ವಿದ್ಯುಚ್ಛಕ್ತಿ ಮಾರ್ಗ ಸಾಕೇ ಹೊಸ ಗ್ರಿಡ್ಗಳ ಅವಶ್ಯಕತೆ ಇದೆಯೇ ಎಂಬುದರ ಬಗ್ಗೆ ಅಧ್ಯಯನ ಮಾಡಲಾಗುತ್ತಿದೆ. ಹೊಸ ಘಟಕಗಳ ನಿರ್ಮಾಣಕ್ಕೆ ಅಗತ್ಯ ಜಾಗವಿರುವುದರಿಂದ ಹೊಸದಾಗಿ ಭೂಸ್ವಾಧೀನ ಬೇಕಿಲ್ಲ. ನಿರ್ಮಾಣಕ್ಕೆ ಬೇಕಾದ ಅಗತ್ಯ ಸಿದ್ಧತೆಗಳನ್ನು ಶೀಘ್ರದಲ್ಲಿಯೇ ಆರಂಭಿಸಲಾಗುವುದು’ ಎಂದು ಭಟ್ ವಿವರಿಸಿದರು.
