ಕರ್ನಾಟಕ

ಕಿಸ್‌ ಆಫ್‌ ಲವ್‌: ‘ಏನಾಗುತ್ತೆ ಕಾದು ನೋಡಿ’: ಪೊಲೀಸ್‌–ಸಂಘಟಕರ ನಡುವೆ ಸಂಘರ್ಷ

Pinterest LinkedIn Tumblr

kiss

ಬೆಂಗಳೂರು: ವಿವಾದಕ್ಕೆ ಕಾರಣವಾಗಿರುವ ಬೆಂಗಳೂರು ಆವೃತ್ತಿಯ ‘ಕಿಸ್‌ ಆಫ್‌ ಲವ್‌’ ಆಂದೋಲನ ವಿಷಯಕ್ಕೆ ಸಂಬಂಧಿಸಿದಂತೆ ಸಂಘಟಕರು, ನಗರ ಪೊಲೀಸರೊಂದಿಗೆ ಸಂಘರ್ಷಕ್ಕೆ ಇಳಿದಂತಿದೆ.

ಕಿಸ್‌ ಆಫ್‌ ಲವ್‌ಗೆ ಅನುಮತಿ ನೀಡದ ಪೊಲೀಸರ ಕ್ರಮದ ಹೊರತಾಗಿ ಯೂ, ಆಂದೋಲನ ಮುಂದುವರಿಸುವುದಾಗಿ ಆಯೋಜಕರು ಪಟ್ಟು ಹಿಡಿದಿದ್ದಾರೆ.

‘ಮೊದಲಿನ ಸ್ವರೂಪ ಬದಲಾಯಿಸಿ ಯಾರಿಗೂ ತೊಂದರೆ­ಯಾಗದ ರೀತಿ ಭಾನುವಾರ ಸಂಜೆ ಪುರಭವನ ಎದುರು ‘ಕಿಸ್‌ ಆಫ್‌ ಲವ್‌’ ಆಚರಿಸುವ ಬಗ್ಗೆ ಯೋಜನೆ ರೂಪಿಸುತ್ತಿದ್ದೇವೆ. ಕೇವಲ 10 ಮಂದಿ ಪಾಲ್ಗೊಳ್ಳುತ್ತೇವೆ. ಅದಕ್ಕೂ ಪೊಲೀಸರು ಅವಕಾಶ ನಿರಾಕರಿಸಿದರೆ ಪ್ರತಿಭಟನೆ ನಡೆಸುತ್ತೇವೆ’ ಎಂದು ಸಂಘಟನೆಯ ಸದಸ್ಯರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ff

‘ಪೊಲೀಸರ ಆದೇಶದ ಪ್ರತಿ ನಮಗೆ ಲಭಿಸಿದೆ. ಅಷ್ಟಕ್ಕೆ ನಮ್ಮ ತೀರ್ಮಾನ ಬದಲಾಗಿದೆ ಎಂದುಕೊಂಡರೆ ತಪ್ಪು. ಶನಿವಾರ (ನ.29) ಸಂಜೆ ಸಂಘಟನೆಯ ಸದಸ್ಯರೆಲ್ಲಾ ಸಭೆ ಸೇರಿ ಒಳ್ಳೆಯ ಸುದ್ದಿಯನ್ನೇ ನೀಡುತ್ತೇವೆ. ಸದ್ಯದ ಮಟ್ಟಿಗೆ  ಹಿಂದಿನ ತೀರ್ಮಾನಕ್ಕೆ ಬದ್ಧವಾಗಿದ್ದೇವೆ’ ಎಂದರು.

ಆಯೋಜನೆಗೆ ಬದ್ಧ: ‘ನಾವು ಈ ಆಂದೋಲನ ರೂಪಿಸಿರುವುದು ನೈತಿಕ ಪೊಲೀಸ್‌ಗಿರಿಯ ವಿರುದ್ಧ ಒಗ್ಗಟ್ಟು ಪ್ರದರ್ಶಿಸಲು ಅಷ್ಟೆ. ಸಾರ್ವಜನಿಕವಾಗಿ ಮುತ್ತು ನೀಡಲು ಅವಕಾಶ ನೀಡಿ ಎಂದು ಅಲ್ಲ. ಈ ಬಾರಿ ಸಾಧ್ಯವಾ­ಗದಿದ್ದರೆ ಮುಂದೊಂದು ದಿನ ಆಂದೋಲನ ಆಯೋಜಿಸಲು ಬದ್ಧರಾಗಿದ್ದೇವೆ’ ಎಂದು ‘ಕಿಸ್‌ ಆಫ್‌ ಲವ್‌ ಕೊಚ್ಚಿ’ ಸಂಘಟನೆಯ ರೂವಾರಿ ಫಾರ್ಮಿಸ್‌ ಹಾಶಿಮ್‌  ತಿಳಿಸಿದರು.
ಪುಟ್ಟಣ್ಣ ಚೆಟ್ಟಿ ಕುಟುಂಬ ವಿರೋಧ

ಪುರಭವನದ ಮುಂದೆ ಚುಂಬನ ಮೇಳ ನಡೆಸಲು ಪುಟ್ಟಣ್ಣ ಚೆಟ್ಟಿ ಕುಟುಂಬದವರು ವಿರೋಧ ವ್ಯಕ್ತಪಡಿಸಿದ್ದಾರೆ. ಇಂಥ ಅಸಭ್ಯ ಕಾರ್ಯಕ್ರಮಗಳಿಗೆ ಅನುಮತಿ ಕೊಟ್ಟರೆ, ಪುಟ್ಟಣ್ಣ ಚೆಟ್ಟಿ ಅವರ ಗೌರವಕ್ಕೆ ಧಕ್ಕೆ ಬರಲಿದೆ. ಹೀಗಾಗಿ ಯಾವುದೇ ಕಾರಣಕ್ಕೂ ಆಂದೋಲನ ನಡೆಯಬಾರದು ಎಂದು ಅವರು ಪೊಲೀಸರನ್ನು ವಿನಂತಿಸಿದ್ದಾರೆ.

ವೈಯಕ್ತಿಕ ಹೊಣೆಗೆ ಒಪ್ಪದ ಆಯೋಜಕರು
ನೈತಿಕ ಪೊಲೀಸ್‌ಗಿರಿಯನ್ನು ವಿರೋಧಿಸಿ ಪ್ರತಿಭಟನೆ ನಡೆಸಲು ನಾ ಮುಂದು, ತಾ ಮುಂದು ಎನ್ನು­ತ್ತಿರುವ ‘ಕಿಸ್‌ ಆಫ್‌ ಲವ್‌’ ಆಯೋಜಕರು, ಪ್ರತಿಭಟನೆಯ ವೈಯಕ್ತಿಕ ಹೊಣೆ ಹೊರಲು ಮುಂದೆ ಬರುತ್ತಿಲ್ಲ.

ಇದು ಕೆಲ ದಿನಗಳಿಂದ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿರುವ ‘ಕಿಸ್‌ ಆಫ್ ಲವ್’ (ಚುಂಬನ ಮೇಳ) ಆಂದೋಲನದ ನೈಜ ಪರಿಸ್ಥಿತಿ.

ಚುಂಬನ ಮೇಳಕ್ಕೆ ಅನುಮತಿ ನಿರಾಕರಿಸಿರುವ ನಗರ ಪೊಲೀಸ್ ಕಮಿಷನರ್‌ ಎಂ.ಎನ್‌.ರೆಡ್ಡಿ, ‘ನೈತಿಕ ಪೊಲೀಸ್‌ಗಿರಿಯನ್ನು ವಿರೋಧಿಸಿ ಕಾನೂನು ಚೌಕಟ್ಟಿನೊಳಗೆ ಪ್ರತಿಭಟನೆ ಮಾಡಬಹುದು. ಆದರೆ, ಸಾರ್ವಜನಿಕ ಸ್ಥಳದಲ್ಲಿ ಚುಂಬಿಸುವುದು, ಅಶ್ಲೀಲವಾಗಿ ವರ್ತಿಸುವುದಕ್ಕೆ ಅವಕಾಶ ನೀಡುವುದಿಲ್ಲ’ ಎಂದು ಸ್ಪಷ್ಟಪಡಿಸಿದ್ದರು. ಹೀಗಾಗಿ ಆಯೋಜಕರು ಶಾಂತಿಯುತ ಪ್ರತಿಭಟನೆ ನಡೆಸುವ ನಿರ್ಧಾರಕ್ಕೆ ಬಂದಿದ್ದರು.

ಪ್ರತಿಭಟನೆ ನಡೆಸಲು ಅನುಮತಿ ಕೋರಿ  ‘ಕಿಸ್‌ ಆಫ್‌ ಲವ್‌’ ಸದಸ್ಯರು ಹೆಚ್ಚುವರಿ ಪೊಲೀಸ್ ಆಯುಕ್ತ ಅಲೋಕ್‌ಕುಮಾರ್ ಅವರಿಗೆ ಮನವಿ ಪತ್ರ ಸಲ್ಲಿಸಿದ್ದಾರೆ. ಅದನ್ನು ಪರಿಶೀಲಿಸಿದ ಅಲೋಕ್‌ಕುಮಾರ್, ‘ಪ್ರತಿಭಟನೆಯ ಹೊಣೆ ಹೊರುವುದಾಗಿ ಆಯೋಜಕರ ಪರವಾಗಿ ಒಬ್ಬರು ಸಹಿ ಮಾಡಬೇಕು’ ಎಂದಿದ್ದಾರೆ. ಆದರೆ, ವೈಯಕ್ತಿಕವಾಗಿ ಸಹಿ ಮಾಡಲು ಒಪ್ಪದ ಸದಸ್ಯರು, ತಮ್ಮದು ಸಾಮೂಹಿಕ ನಾಯಕತ್ವ ಎಂದು ಉತ್ತರಿಸಿದ್ದಾರೆ. ಆಗ ಅಲೋಕ್‌ ಕುಮಾರ್, ‘ವೈಯಕ್ತಿಕವಾಗಿ ಜವಾಬ್ದಾರಿ ಹೊರಲು ಒಪ್ಪದಿದ್ದರೆ ಪ್ರತಿಭಟನೆಗೆ ಅವಕಾಶ ನೀಡುವುದಿಲ್ಲ’ ಎಂದು ಹೇಳಿ ಕಳುಹಿಸಿದ್ದಾರೆ.

Write A Comment