ಕರ್ನಾಟಕ

ಏರ್‌ ಕಮಾಡರ್ ಪರ್ವೇಜ್ ಕೊಲೆ ಪ್ರಕರಣ: ಪರಿಚಿತರು, ಕುಟುಂಬ ಸದಸ್ಯರ ವಿಚಾರಣೆ

Pinterest LinkedIn Tumblr

a

ಬೆಂಗಳೂರು:  ‘ನಿವೃತ್ತ ಏರ್‌ ಕಮಾಡರ್ ಪರ್ವೇಜ್ ಕೊಕರ್ (70) ಕೊಲೆ ಪ್ರಕರಣ ಸಂಬಂಧ ಮೃತರ ಪತ್ನಿ ಪ್ರಮೀಳಾ, ಕುಟುಂಬ ಸದಸ್ಯರು, ಮನೆಗೆಲಸದಾತ ಹಾಗೂ ಭದ್ರತಾ ಸಿಬ್ಬಂದಿಯನ್ನು  ತೀವ್ರ  ವಿಚಾರಣೆಗೆ ಒಳಪಡಿಸಿ ಮಾಹಿತಿ ಪಡೆಯಲಾಗುತ್ತಿದೆ’ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ರಮೇಶ್‌ ಬಾನೋತ್‌ ತಿಳಿಸಿದರು.

‘ಪರ್ವೇಜ್ ಅವರನ್ನು ಕೊಲೆ ಮಾಡಿದ ದುಷ್ಕ ರ್ಮಿಗಳು, ಯಾವುದೇ ಬೆಲೆಬಾಳುವ ವಸ್ತುಗಳನ್ನು ದೋಚಿಲ್ಲ. ಈ ಅಂಶವನ್ನು ಗಮನಿಸಿದರೆ ವೃತ್ತಿಪರ ಹಂತಕರು ಈ ಕೃತ್ಯ ಎಸಗಿರುವ ಸಾಧ್ಯತೆ ತೀರಾ ಕಡಿಮೆ. ಹೀಗಾಗಿ ಕುಟುಂಬ ಸದಸ್ಯರು ಹಾಗೂ ಪರಿಚಿತರ ವಿಚಾರಣೆ ನಡೆಸಲಾಗುತ್ತಿದೆ’ ಎಂದು ಬಾನೋತ್ ಹೇಳಿದರು.

‘ದುಷ್ಕರ್ಮಿಗಳು ಬಂಗಲೆಯ ಮುಖ್ಯ ಪ್ರವೇಶ ದ್ವಾರದಿಂದ ಒಳಗೆ ಬಂದಿಲ್ಲ ಎಂಬುದು ಪ್ರಾಥಮಿಕ ತನಿಖೆ­ಯಿಂದ ಗೊತ್ತಾಗಿದೆ. ತಡೆ­ಗೋಡೆ ಜಿಗಿದು ಆವರಣ ಪ್ರವೇಶಿಸಿದ್ದ ಅವರು, ನಂತರ ಹಿಂಬಾಗಿಲು ಮುರಿದು ಬಂಗಲೆಗೆ ನುಗ್ಗಿದ್ದಾರೆ. ಪರ್ವೇಜ್ ಹಾಗೂ ಅವರ ಪತ್ನಿ ಪ್ರಮೀಳಾ ಅವರ ಮೊಬೈಲ್‌ಗೆ ಬಂದು ಹೋಗಿ­ರುವ ಕರೆಗಳ ವಿವರವನ್ನು ಪರಿಶೀಲಿಸ­ಲಾಗುತ್ತಿದೆ. ಆದರೆ, ಯಾವುದೇ ಸುಳಿವು ಸಿಕ್ಕಿಲ್ಲ. ಈವರೆಗೂ ಯಾರನ್ನೂ ಬಂಧಿಸಿಲ್ಲ’ ಎಂದು ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದರು.

‘ಬಂಗಲೆಯ ಮಹಡಿಯಲ್ಲಿ ಪ್ರಮೀಳಾ ಅವರ ವ್ಯಾನಿಟಿ ಬ್ಯಾಗ್‌ ಹಾಗೂ ಖಾಲಿ ಬಿಯರ್ ಬಾಟಲಿ ಪತ್ತೆಯಾಗಿದೆ. ಆದರೆ, ಬ್ಯಾಗ್‌ನಲ್ಲಿದ್ದ ₨ 3 ಸಾವಿರ ಹಣ ಹಾಗೂ ಮೊಬೈಲ್ ಅದರಲ್ಲೇ ಇದೆ. ತನಿಖೆಯ ದಿಕ್ಕು ತಪ್ಪಿಸುವ ಉದ್ದೇಶದಿಂದ ದುಷ್ಕರ್ಮಿಗಳು ಈ ರೀತಿ ಮಾಡಿರಬಹುದು’ ಎಂದು ತನಿಖಾಧಿಕಾರಿಗಳು ಶಂಕಿಸಿದ್ದಾರೆ.

ಪರ್ವೇಜ್ ಅವರು ನಗರದ ಹೊರ ವಲಯದ ಹುಸ್ಕೂರುಗೇಟ್‌ನಲ್ಲಿ ಪತ್ನಿ ಜತೆ ನೆಲೆಸಿದ್ದರು. ಭಾನು­ವಾರ ರಾತ್ರಿ ಬಂಗಲೆಗೆ ನುಗ್ಗಿದ್ದ ದುಷ್ಕರ್ಮಿ­ಗಳು, ಉಸಿರುಗಟ್ಟಿಸಿ ಅವರನ್ನು ಕೊಂದಿದ್ದರು.

ಪರ್ವೇಜ್ ಕೊಕರ್ ಬಗ್ಗೆ:  ವಾಯುಪಡೆಯ ‘ಎ’ ದರ್ಜೆಯ ಹಾರಾಟ ತರಬೇತುದಾರರಾಗಿದ್ದ ಪರ್ವೇಜ್, ಪಾಕಿಸ್ತಾನದ ಇಸ್ಲಾಮಾಬಾದ್‌ ನಲ್ಲಿರುವ ಭಾರತೀಯ ರಾಯಭಾರ ಕಚೇರಿಯಲ್ಲಿ ಸೇವೆ ಸಲ್ಲಿಸಿದ್ದರು. 60ಕ್ಕೂ ಹೆಚ್ಚು ವಿಮಾನಗಳನ್ನು ಸುರಕ್ಷಿತವಾಗಿ ಹಾರಿಸಿದ ಅನುಭವ ಹೊಂದಿದ್ದ ಅವರು, ಇರಾಕ್‌ ಸಮರದಲ್ಲೂ ಭಾಗಿಯಾಗಿದ್ದರು. ರಾಷ್ಟ್ರಪತಿಗಳಿಂದ ಸೇವಾ ಪದಕ ಕೂಡ ಅವರಿಗೆ ಲಭಿಸಿತ್ತು.

3ನೇ ಪರೀಕ್ಷಾರ್ಥ ಪೈಲಟ್‌ ಸಾವು

‘ಎಚ್‌ಎಎಲ್‌ನ ಯೋಜನಾ ವಿಭಾಗದ ನಿರ್ದೇಶಕ ಹಾಗೂ ಪರೀಕ್ಷಾರ್ಥ ಪೈಲಟ್ ಬಲದೇವ್ ಸಿಂಗ್ ಅವರು 2011ರ ಅ.11ರಂದು ನಂದಿಬೆಟ್ಟದಲ್ಲಿ ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು.  ಅದೇ ವರ್ಷದ ಮಾರ್ಚ್‌ ತಿಂಗಳಲ್ಲಿ ಮತ್ತೊಬ್ಬ ಪರೀಕ್ಷಾರ್ಥ ಪೈಲಟ್ ಮೋತಿಲಾಲ್ ನೆಲುರಿ ಅವರು ಸದಾನಂದನಗರದಲ್ಲಿರುವ ತಮ್ಮ ಅಪಾರ್ಟ್‌ಮೆಂಟ್‌ನಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟಿದ್ದರು. ಇದೀಗ ದೇಶಿ ನಿರ್ಮಿತ ‘ತೇಜಸ್‌’ ಹಗುರ ಯುದ್ಧ ವಿಮಾನದ ಪರೀಕ್ಷಾರ್ಥ ಪೈಲಟ್ ಪರ್ವೇಜ್ ಅವರ ಕೊಲೆಯಾಗಿದೆ. ಇಂಥ ಘಟನೆಗಳು ಮರುಕಳಿಸುತ್ತಿರುವುದು ವಾಯಪಡೆ ಅಧಿಕಾರಿಗಳ ಆತಂಕವನ್ನು ಹೆಚ್ಚಿಸಿದೆ’ ಎಂದು ನಿವೃತ್ತ ಏರ್‌ ಮಾರ್ಷಲ್ ಬಿ.ಕೆ.ಪಾಂಡೆ ತಿಳಿಸಿದರು.

Write A Comment