ಮಂಗಳೂರು / ಸುರತ್ಕಲ್ : ಹಳೆಬಂದರು ಬಳಿಯ ಕಸ್ಬಾ ಬೆಂಗ್ರೆಯಲ್ಲಿ ಸೋಮವಾರ ರಾತ್ರಿ ನಡೆದ ಗುಂಪು ಗಲಭೆಯಲ್ಲಿ ಮನೆಯೊಂದಕ್ಕೆ ಹಾನಿಯಾಗಿ ಸುಮಾರು 60ಸಾವಿರ ನಷ್ಟ ಸಂಭವಿಸಿದೆ. ಪ್ರಕರಣದಲ್ಲಿ ಓರ್ವ ವ್ಯಕ್ತಿ ಗಾಯಗೊಂಡಿದ್ದು, 6ಮಂದಿಯನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಆರೋಪಿಗಳಾದ ಜುಬೈರ್ ಯಾನೆ ಜುಬ್ಬು, ಫಾರೂಕ್, ಅಕ್ರಮ್, ರೈಮು ಯಾನೆ ನೈಮು, ಹ್ಯಾರೀಸ್ ಮತ್ತು ಕಬೀರ್ ಎಂಬವರು ಪೊಲೀಸ್ ವಶದಲ್ಲಿರುವವರು.
ಬೆಂಗ್ರೆಯ ಮಹಿಳೆಯೊಬ್ಬರ ಮನೆಗೆ ಸೋಮವಾರ ರಾತ್ರಿ ನುಗ್ಗಿದ್ದ ಆರೋಪಿಗಳು ಆಕೆಯ ಮನೆಯಲ್ಲಿದ್ದ ಟಿವಿ, ಗಡಿಯಾರ, ಕಬ್ಬಿಣದ ಮೂರು ಕಪಾಟು, ಫ್ರಿಜ್ ಪುಡಿಮಾಡಿದ್ದಾರೆ. ಆರೋಪಿಗಳು ಮನೆಯ ಕಪಾಟಿನಲ್ಲಿದ್ದ ಹಣ ಹಾಗೂ ಬಂಗಾರದ ಉಂಗುರವನ್ನು ದೋಚಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಇದಲ್ಲದೆ ಮನೆಯ ಮಾಡು ಇತ್ಯಾದಿಗೆ ಹಾನಿ ಉಂಟು ಮಾಡಿ ಮಹಿಳೆ ಮತ್ತು ಮಕ್ಕಳಿಗೆ ತಲವಾರು ತೋರಿಸಿ ಕೊಲೆ ಬೆದರಿಕೆ ಹಾಕಿ, ಗ್ಯಾಸ್ ಸಿಲಿಂಡರ್‌ಗೆ ಬೆಂಕಿ ಹಚ್ಚುವ ಪ್ರಯತ್ನ ಮಾಡಿದ್ದರು.
ಆರೋಪಿಗಳು ಮನೆಗೆ ಬಂದ ಸಂದರ್ಭ ಮನೆಯಲ್ಲಿ ಪಕ್ಕದ ಮದುವೆ ಮನೆಗೆ ಹೋಗಿದ್ದರು. ಈ ಮಹಿಳೆಯ ಪತಿ ಕುದ್ರೋಳಿಯಲ್ಲಿ ಗುಜಿರಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದು ಅವರಿಗೆ ವಿಷಯ ತಿಳಿದು ಅವರು ಇಲ್ಲಿಗೆ ಕೆಲವರನ್ನು ಕರೆದುಕೊಂಡು ಬಂದಿದ್ದರು. ಈ ಸಂದರ್ಭ ನಡೆದ ಗುಂಪು ಗಲಭೆಯಲ್ಲಿ ಓರ್ವ ವ್ಯಕ್ತಿ ಗಾಯಗೊಂಡಿದ್ದು, ಈ ಕುರಿತು ಬಂದರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹೆಚ್ಚಿನ ವಿಚಾರಣೆಗಾಗಿ ಪ್ರಕರಣವನ್ನು ಪಣಂಬೂರು ಠಾಣೆಗೆ ವರ್ಗಾಯಿಸಲಾಗಿದೆ.
ಈ ಪ್ರದೇಶದಲ್ಲಿ ನಡೆಯುತ್ತಿದೆ ಎನ್ನಲಾದ ಗಾಂಜಾ, ಅಮಲಿನ ಮಾತ್ರೆ ದಂಧೆ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿರುವ ಶಂಕೆಯಿಂದ ಈ ಘಟನೆ ನಡೆದಿದೆ ಎನ್ನಲಾಗಿದೆ. ಪಣಂಬೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ಪೊಲೀಸ್ ಆಯುಕ್ತ ಆರ್. ಹಿತೇಂದ್ರ ಭೇಟಿ ನೀಡಿ ತನಿಖೆಗೆ ಮಾರ್ಗದರ್ಶನ ನೀಡಿದ್ದಾರೆ.