ಕರ್ನಾಟಕ

ಎಂ.ಜಿ ರಸ್ತೆಯಲ್ಲಿ ಯುವತಿಯರಿಗೆ ಕೀಟಲೆ: ಪುಂಡರ ಬಂಧನ

Pinterest LinkedIn Tumblr

pvec26PCO-01

ಬೆಂಗಳೂರು: ನಗರದ ಎಂ.ಜಿ.ರಸ್ತೆಯ ‘ಲೇಕ್‌ ವ್ಯೂ’ ಐಸ್‌ಕ್ರೀಂ ಮಳಿಗೆಯ ಬಳಿ ಯುವತಿಯರನ್ನು ಚುಡಾಯಿಸಿ ಪುಂಡಾಟ ನಡೆಸಿದ್ದ ಆರೋಪಿಗಳನ್ನು ಕಬ್ಬನ್‌ಪಾರ್ಕ್‌ ಪೊಲೀಸರು ಬಂಧಿಸಿದ್ದಾರೆ.

ವೈಟ್‌ಫೀಲ್ಡ್‌ನ ನಾಗೇಶ್‌, ದೇವರಾಜ್‌, ಆರ್‌.ಟಿ.ನಗರದ ಹರೀಶ್‌, ತಮಿಳುನಾಡು ಮೂಲದ ಕಿರಣ್‌, ಸತೀಶ್‌ ಮತ್ತು ಸುಬ್ರಮಣಿ ಬಂಧಿತರು.

‘ನ.22ರಂದು ನಡೆದಿದ್ದ ಈ ಘಟನೆಯು ಮಹಿಳೆಯರಲ್ಲಿ ಆತಂಕ ಹೆಚ್ಚಿಸಿತ್ತು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಸಿಬ್ಬಂದಿ, ಘಟನೆ ನಡೆದ 48 ತಾಸಿನೊಳಗೆ ಆರೋಪಿಗಳನ್ನು ಪತ್ತೆ ಮಾಡಿದ್ದಾರೆ’ ಎಂದು ನಗರ ಪೊಲೀಸ್‌ ಕಮಿಷನರ್‌ ಎಂ.ಎನ್‌.ರೆಡ್ಡಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಆರೋಪಿಗಳೆಲ್ಲಾ ಸ್ನೇಹಿತರು. ಅವರ ವಿರುದ್ಧ ಈ ಹಿಂದೆ ಯಾವುದಾದರೂ ಅಪರಾಧ ಪ್ರಕರಣಗಳು ದಾಖಲಾಗಿವೆಯೇ ಎಂಬ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ. ಈ ಘಟನೆಯಿಂದ ಮಹಿಳೆಯರು ಆತಂಕಪಡಬೇಕಿಲ್ಲ. ಮಹಿಳೆಯರ ಸುರಕ್ಷತೆ ಬಗ್ಗೆ ಹೆಚ್ಚಿನ ಕಾಳಜಿ ವಹಿಸುತ್ತೇವೆ ಎಂದು ಹೇಳಿದರು.

ತಪ್ಪೊಪ್ಪಿಗೆ: ‘ಯುವತಿಯರು ಕುಳಿತಿದ್ದ ಕಾರನ್ನು ಸುತ್ತುವರಿದು, ವಾಹನದ ಬಾಗಿಲು ತೆರೆಯುವಂತೆ ಬೆದರಿಸಿದೆವು. ಆಗ ಅವರು ವಾಹನದ ಒಳಗಿನಿಂದ ಬಾಗಿಲ ಬೀಗ ಹಾಕಿಕೊಂಡರು ಎಂದು ಆರೋಪಿಗಳು ತಪ್ಪೊಪ್ಪಿಗೆ ಹೇಳಿಕೆ ಕೊಟ್ಟಿದ್ದಾರೆ. ಬಂಧಿತರ ವಿರುದ್ಧ ಕೊಲೆ ಬೆದರಿಕೆ ಮತ್ತು ಮಹಿಳೆಯ ಗೌರವಕ್ಕೆ ಧಕ್ಕೆ ತಂದ ಆರೋಪದ ಮೇಲೆ ಪ್ರಕರಣ ದಾಖಲಿಸಲಾಗಿದೆ’ ಎಂದು ರೆಡ್ಡಿ ಮಾಹಿತಿ ನೀಡಿದರು.

ನಾಗೇಶ್‌, ಖಾಸಗಿ ಕಂಪೆನಿಯಲ್ಲಿ ಮಾರಾಟ ಪ್ರತಿನಿಧಿಯಾಗಿದ್ದ. ಹರೀಶ್‌ ಮತ್ತು ಸತೀಶ್‌ ಚಾಲಕರಾಗಿದ್ದರು. ದೇವರಾಜ್‌ ಕೂಲಿ ಕೆಲಸ ಮಾಡುತ್ತಿದ್ದ. ಕಿರಣ್‌ ಹೊಸೂರಿನಲ್ಲಿ ಬಿ.ಎ ಓದುತ್ತಿದ್ದ ಹಾಗೂ ಸುಬ್ರಮಣಿ ದಿನಸಿ ಅಂಗಡಿ ಇಟ್ಟುಕೊಂಡಿದ್ದ.

ಸುಳಿವು ಸಿಕ್ಕಿದ್ದು ಹೇಗೆ: ಘಟನಾ ದಿನ ರಾತ್ರಿ 11.50ರ ಸುಮಾರಿಗೆ ಕಾರಿನಲ್ಲಿ ಎಂ.ಜಿ.ರಸ್ತೆಗೆ ಬಂದಿದ್ದ ಆರೋಪಿಗಳು ಲೇಕ್‌ ವ್ಯೂ ಮಳಿಗೆ ಬಳಿ ವಾಹನ ನಿಲ್ಲಿಸಿದ್ದರು. ಅದೇ ವೇಳೆಗೆ ಕಾರಿನಲ್ಲಿ ಮಳಿಗೆ ಬಳಿ ಬಂದ ಐದು ಯುವತಿಯರು, ಸಮೀಪದ ಜೊಯಾಲುಕಾಸ್‌ ಮಳಿಗೆ ಎದುರು ವಾಹನ ನಿಲ್ಲಿಸಿದ್ದರು. ನಂತರ ಯುವತಿಯರ ಕಾರು ಚಾಲಕ ಐಸ್‌ಕ್ರೀಂ ತರಲು ಲೇಕ್‌ ವ್ಯೂ ಮಳಿಗೆಗೆ ಹೋಗಿದ್ದಾಗ ಆರೋಪಿಗಳು ಈ ದುಷ್ಕೃತ್ಯ ಎಸಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಗಳ ಕಾರಿನ ದೃಶ್ಯ ಜೊಯಾಲುಕಾಸ್‌ ಹಾಗೂ ಲೇಕ್‌ ವ್ಯೂ ಮಳಿಗೆಯ ಮುಂದಿನ ಸಿ.ಸಿ ಕ್ಯಾಮೆರಾಗಳಲ್ಲಿ ಸೆರೆಯಾಗಿತ್ತು. ಅಲ್ಲದೇ, ಘಟನೆ ವೇಳೆ ಯುವತಿಯರು ಮೊಬೈಲ್‌ನಿಂದ ಆರೋಪಿಗಳ ಛಾಯಾಚಿತ್ರ ತೆಗೆದಿದ್ದರು.

ಆ ಛಾಯಾಚಿತ್ರಗಳು, ಆರೋಪಿಗಳ ಕಾರಿನ ನೋಂದಣಿ ಸಂಖ್ಯೆ, ಕಾವೇರಿ ಎಂಪೋರಿಯಂ ಜಂಕ್ಷನ್‌ನಿಂದ ಅನಿಲ್‌ ಕುಂಬ್ಳೆ ವೃತ್ತದವರೆಗಿನ ವಿವಿಧ ಮಳಿಗೆಗಳ ಮುಂದೆ ಅಳವಡಿಸಿರುವ ಸಿ.ಸಿ ಕ್ಯಾಮೆರಾಗಳಲ್ಲಿ ದಾಖಲಾಗಿದ್ದ ದೃಶ್ಯಾವಳಿ, ಘಟನಾ ಸಮಯದ ಆಸುಪಾಸಿನಲ್ಲಿ ಎಂ.ಜಿ.ರಸ್ತೆ ಸುತ್ತಮುತ್ತಲಿನ ಮೊಬೈಲ್‌ ಗೋಪುರಗಳ (ಟವರ್‌) ಮೂಲಕ ಹೊರ ಹೋಗಿದ್ದ ಹಾಗೂ ಒಳ ಬಂದಿದ್ದ ಸುಮಾರು 200 ಕರೆಗಳ ಮಾಹಿತಿ ಆಧರಿಸಿ ಪ್ರಕರಣ ಭೇದಿಸಲಾಯಿತು ಎಂದು ಅಧಿಕಾರಿಗಳು ಹೇಳಿದ್ದಾರೆ.

Write A Comment