ಕರ್ನಾಟಕ

ಹೀಗೆ ಮಾಡಿದರೆ ಇಲಿಗಿಲ್ಲಿ ಇಲ್ಲ ಜಾಗ

Pinterest LinkedIn Tumblr

-ಪ್ರತೀಕಾ ಪಿ.

kdec25 pratik2_0

ಇಲಿ, ಹೆಗ್ಗಣ ಕಾಟದಿಂದ ತೊಂದರೆ ಅನುಭವಿಸದ ರೈತರು ಇಲ್ಲವೇ ಇಲ್ಲ ಅನ್ನಬಹುದೇನೋ. ಇಲಿಗಾಗಿ ಬೋನಿಟ್ಟರೂ ಎಷ್ಟೋ ಬಾರಿ ಪ್ರಯೋಜನ ಆಗುತ್ತಿಲ್ಲ. ವಿಷ ಬೆರೆಸಿಟ್ಟ ಆಹಾರವಿಟ್ಟರೂ ಇಲಿ, ಹೆಗ್ಗಣ ಜಾಣತನದಿಂದ ತಪ್ಪಿಸಿಕೊಳ್ಳುವುದೂ ಉಂಟು. ಬೋನು ಹೇಗೆ ಇಡಬೇಕು, ವಿಷ ಬೆರೆಸಿದ ಆಹಾರ ಇಡುವ ಮೊದಲು ಏನೆಲ್ಲಾ ಮಾಡಬೇಕು ಎಂಬುವುದೂ ಸೇರಿದಂತೆ ಇಲಿ ಸಮಸ್ಯೆಯಿಂದ ಪಾರಾಗಲು ವಿವಿಧ ರೈತರು ಕಂಡುಕೊಂಡಿರುವ ಪರಿಹಾರ ಹೀಗಿದೆ.

ವಿಷ ಉಣಿಸುವ ಮೊದಲು
ಎಷ್ಟೋ ಬಾರಿ ಇಲಿ, ಹೆಗ್ಗಣಗಳು ಸಾಯಲು ವಿಷಯುಕ್ತ ಆಹಾರ ಇಟ್ಟರೆ ಅದನ್ನು ಅವು ಮುಟ್ಟುವುದೇ ಇಲ್ಲ ಎಂಬುದು ನಿಮ್ಮ ಗಮನಕ್ಕೂ ಬಂದಿರುತ್ತದೆ. ಇದು ಯಾಕೆ ಗೊತ್ತಾ? ಇವು ಸಂಶಯ ಪ್ರಾಣಿ. ಆದ್ದರಿಂದ ಏಕಾಏಕಿ ಯಾವುದೇ ಆಹಾರಗಳಿಗೆ ಬಾಯಿ ಹಾಕುವುದಿಲ್ಲ. ಹೊಸ ಆಹಾರ ಪದಾರ್ಥವನ್ನು ಅವು ಒಮ್ಮಿಂದೊಮ್ಮೆ ತಕ್ಷಣವೇ ತಿನ್ನುವುದಿಲ್ಲ. ಇದೇ ಕಾರಣಕ್ಕೆ ವಿಷಯುಕ್ತ ಆಹಾರವನ್ನು ಅವು ಮುಟ್ಟದೇ ಇರಬಹುದು.

ಆದ್ದರಿಂದ ಅದಕ್ಕೆ ಪರಿಚಯ ಇರುವ ಆಹಾರವನ್ನು ಮೊದಲು ಇಟ್ಟು ಅದನ್ನು ತಿನ್ನಲು ರೂಢಿಸಿಕೊಂಡ ನಂತರ 2-3 ದಿನ ಬಿಟ್ಟು ಅದೇ ಜಾಗದಲ್ಲಿ ವಿಷಯುಕ್ತ ಆಹಾರ ಇಟ್ಟರೆ ಒಳಿತು.
* ಅಕ್ಕಿಹಿಟ್ಟು ಮತ್ತು ರಾಗಿಹಿಟ್ಟನ್ನು ಸಮಪ್ರಮಾಣದಲ್ಲಿ ತೆಗೆದುಕೊಳ್ಳಿ. ಇದರ ಕಾಲು ಭಾಗದಷ್ಟು ಹುರಿದು ಕುಟ್ಟಿದ ಕಡಲೆ ಬೀಜ ಸೇರಿಸಿ. ಅಷ್ಟೇ ಪ್ರಮಾಣದ (ಕಾಲು ಭಾಗ) ಕಡಲೆಕಾಯಿ ಎಣ್ಣೆ ಹಾಕಿ ಅದನ್ನು ಚೆನ್ನಾಗಿ ಮಿಶ್ರಣ ಮಾಡಿ. ಸ್ವಲ್ಪ ಮಿಶ್ರಣವನ್ನು ಪ್ಲಾಸ್ಟಿಕ್ ಕವರಿನಲ್ಲಿ ಹಾಕಿ ಗಂಟು ಕಟ್ಟಿ. ಇದನ್ನು ಇಲಿಗಳು ಇರುವ ಬಿಲದ ಬಳಿ ಎರಡು ದಿನ ಇಡಿ. ಮೂರನೇ ದಿನ ಅದರಲ್ಲಿ ವಿಷವಿಟ್ಟರೆ ಇಲಿ, ಹೆಗ್ಗಣ ಪ್ರಾಣ ಬಿಡುತ್ತವೆ.

* ಬಜ್ಜಿ, ಪಕೋಡ, ವಡೆಗಳನ್ನು ಮೊದಲು ತಿನ್ನಿಸಿ ರೂಢಿ ಮಾಡಿ, ಅದರಲ್ಲಿ ನಂತರ ವಿಷ ಬೆರೆಸಿಟ್ಟು ಇಲಿಗಳನ್ನು ಕೊಲ್ಲಬಹುದು.
* 400 ಗ್ರಾಂ ಹುರಿಗಡಲೆ ಹಿಟ್ಟು, 200 ಗ್ರಾಂ ಸಕ್ಕರೆ,
400 ಗ್ರಾಂ ಕಟ್ಟಡಕ್ಕೆ ಬಳಸುವ ಸಿಮೆಂಟ್‌ ಬೆರೆಸಿ ಇಲಿ ಬರುವ ಜಾಗದಲ್ಲಿ ಇಡಬೇಕು. ಸಿಮೆಂಟ್‌ ಇಲಿಗಳ ಹೊಟ್ಟೆಯಲ್ಲಿ ತೊಡಕು ಮಾಡಿ ಸಾಯುತ್ತವೆ. ಇದನ್ನು ಇಲಿ ತಿನ್ನುವವರೆಗೂ ಒದ್ದೆಯಾಗದಂತೆ ಎಚ್ಚರವಹಿಸಿ.

* ಸಕ್ಕರೆ ಪುಡಿಯನ್ನು ಗೋಣಿ ಚೀಲದಲ್ಲಿ ಹಾಕಿ ಅದನ್ನು ಇಲಿಯ ಬಿಲದ ಬಳಿ ಇಡಿ. 2- 3 ದಿನ ಸಕ್ಕರೆ ತಿಂದ ಮೇಲೆ ನಾಲ್ಕನೇ ದಿನ ಅದೇ ಜಾಗದಲ್ಲಿ, ಗೋಣಿಯೊಳಕ್ಕೆ ಪುಡಿ ಮಾಡಿದ ಗಾಜಿನ ಪುಡಿ ಇಡಿ. ಸಕ್ಕರೆ ತಿಂದು ಬಾಯಿ ಚಪ್ಪರಿಸಿಕೊಂಡ ಇಲಿ, ನಾಲ್ಕನೇ ದಿನವೂ ಸಕ್ಕರೆ ಇದೆ ಎಂದು ತಿಳಿದು ಬಾಯಿ ಹಾಕುತ್ತದೆ. ಗಾಜು ಹೊಟ್ಟೆಯೊಳಕ್ಕೆ ಸೇರಿ ಅಲ್ಲಿಯೇ ಸಾಯುತ್ತವೆ.
* ಬೆಳೆಗಳು ತೆನೆ ಕಚ್ಚುವ ಸಮಯದಲ್ಲಿ ಇಲಿ, ಹೆಗ್ಗಣಗಳ ಹಾವಳಿಯನ್ನು ಶಿರಸಿ, ಸಾಗರದ ಕಡೆಯ ಕೆಲವು ರೈತರು ಹೀಗೆ ನಿಯಂತ್ರಿಸುತ್ತಿದ್ದಾರೆ. ನೆಲದಡಿಯಲ್ಲಿ ಇರುವ ಮಣ್ಣನ್ನು ಕೆರೆದು ಮೇಲಕ್ಕೆ ತರುವುದು ಇರುವೆಗಳ ಕೆಲಸ. ಇವು ಹೀಗೆ ತರುವ ಮಣ್ಣು ತೇವ ಇರುವಾಗಲೇ (ಅಂದರೆ ಬೆಳ್ಳಂಬೆಳಿಗ್ಗೆ ಇಬ್ಬನಿ ಬಿದ್ದ ತಕ್ಷಣ ಅದು ಆರುವ ಮುಂಚೆ) ಬೆಳೆಗಳ ಮೇಲೆ ಚೆಲ್ಲಿ ಬರಬೇಕು. ಈ ಮಣ್ಣು ಇಲಿಗಳ ಚರ್ಮಕ್ಕೆ ತಾಗಿದರೆ ಅದು ಚುಚ್ಚಂತಾಗಿ ಓಡಿ ಹೋಗುತ್ತವೆ. ಅಂದ ಹಾಗೆ, ಒಂದು ಎಕರೆಗೆ 12 ರಿಂದ 15 ಕೆ.ಜಿ. ಮಣ್ಣು ಬೇಕು.

* ನಸುಗುನ್ನಿ ಗಿಡಗಳ ಬಳಿ ಹೋದಾಗ ಅದರ ಕಾಯಿ ಮೈಗೆ ತಗುಲಿದರೆ ಸಾಕು, ಮೈಯೆಲ್ಲ ತುರಿಕೆ ಉಂಟಾಗುವ ಅನುಭವ ಆಗುತ್ತದೆ ಯಲ್ಲವೇ? ಇದರ ಮೇಲೆ ಬೆಳೆದಿರುವ ಮೃದುವಾಗಿರುವಂಥ ಕೂದಲಿಂದಲೇ ಹೀಗೆ ಆಗುವುದು. ಇದೇ ಕೂದಲನ್ನು ಇಲಿಗಳ ಮೇಲೂ ಹಲವು ರೈತರು ಪ್ರಯೋಗಿಸಿದ್ದಾರೆ. ಇದರ ಕಾಯಿ ಕಿತ್ತು ಇಲಿಗಳ ಬಿಲದ ದ್ವಾರದಲ್ಲಿ ಹಾಕಿಟ್ಟುನೋಡಿ.
* ಮರದ ಪೊಟರೆಯಲ್ಲಿ ಇಲಿ ಗೂಡು ಕಟ್ಟಿದ್ದರೆ ಮೊದಲು ಅದನ್ನು ನಾಶಪಡಿಸಿ. ನಂತರ ಕಾಂಡ ಮತ್ತು ಗೊನೆ ಅಥವಾ ಕಾಂಡ-ರೆಂಬೆ ಸೇರುವ ಕಡೆ ಒಂದು ರೋಬಾನ್ ಬಿಲ್ಲೆಯನ್ನು ಬೀಳದಂತೆ ಗಟ್ಟಿಯಾಗಿ ಅದುಮಿಡಿ.
ರೋಬಾನ್ ಬಿಲ್ಲೆ ಮೂಲಕ ಒಂದು ತೆಳುವಾದ ಬಿಸಿ ಕಬ್ಬಿಣದ ತಂತಿಯನ್ನು ತೂರಿಸಿ ಮರದ ಎತ್ತರ ನೋಡಿ ಆಯಕಟ್ಟಿನ ಜಾಗದಲ್ಲಿ ಕಾಂಡದ ಸುತ್ತಲೂ ಬಿಗಿಯಾಗಿ ಕಟ್ಟಿ. ಇದರಿಂದ ಇಲಿಗಳ ಕಾಟದಿಂದ ಮುಕ್ತಿ ಹೊಂದಬಹುದು. ತಿನ್ನದೇ ಉಳಿದಿರುವ ರೋಬಾನ್ ಬಿಲ್ಲೆಯನ್ನು ಮನುಷ್ಯರಿಗೆ, ಸಾಕುಪ್ರಾಣಿಗಳಿಗೆ ಸಿಗದಂತೆ ನೋಡಿಕೊಳ್ಳಿ.

* ಕೆಲವು ರೈತರು ಬೆಲ್ಲ ಕರಗಿಸಿ ಅದರಲ್ಲಿ ಕೂದಲು ಬೆರೆಸಿ ಚಿಕ್ಕ ಉಂಡೆ ಮಾಡಿಕೊಳ್ಳುತ್ತಾರೆ. ಅದನ್ನು ಹೊಲದಲ್ಲಿ ಅಲ್ಲಲ್ಲಿ ಹಾಕುತ್ತಾರೆ. ಇದನ್ನು ಇಲಿಗಳು ತಿಂದರೆ ಕೂದಲು ಹೊಟ್ಟೆಯೊಳಕ್ಕೆ ಹೋಗಿ ಅವು ಸಾಯುತ್ತವೆ.
* ಇಲಿಯಿಂದ ತಾತ್ಕಾಲಿಕ ಮುಕ್ತಿ ಬೇಕೆಂದರೆ ಮಲೆನಾಡಿನ ಕೆಲವು ರೈತರ ಈ ಉಪಾಯ ಉಪಯೋಗಕ್ಕೆ ಬರುತ್ತದೆ. ಇಲಿಗೆ ಹಾವು, ಗಿಡುಗ ಶತ್ರು. ಇದರಿಂದ ಹಾವಿನ ಆಕೃತಿ ಹೋಲುವ ಬಳ್ಳಿಯನ್ನು ಬಿಲದ ಸಮೀಪ ಇಡುತ್ತಾರೆ. ಹುಲ್ಲಿನಿಂದ ಗಿಡುಗನ ಆಕೃತಿ ಮಾಡಿ ಅದನ್ನು ಕೋಲಿಗೆ ಕಟ್ಟಿ ನಿಲ್ಲಿಸುತ್ತಾರೆ.

* ಹಳೆಯ ಟಯರ್‌ ಸಿಕ್ಕರೆ ಅದರ ತುದಿಗೆ ಬೆಂಕಿ ಹೊತ್ತಿಸಿ ಅದನ್ನು ಬಿಲದ ದ್ವಾರದ ಒಳಗೆ ತುರುಕಿದರೆ ಬಿಲದ ಒಳಗಡೆ ಇರುವ ಇಲಿ, ಹೆಗ್ಗಣಗಳು ಸಾಯುತ್ತವೆ.
* ಹೊಲದಲ್ಲಿ ಗೂಬೆ ನೆಲೆಸುವಂತೆ ಮಾಡುವ ಮೂಲಕವೂ ಇಲಿಗಳ ಕಾಟದಿಂದ ಮುಕ್ತಿ ಹೊಂದಬಹುದು.

ಕೆಲವು ಸಲಹೆ
* ಇಲಿ ಬೋನುಗಳ ಬಳಕೆ ಮಾಡುವವರು ಪ್ರತೀ ಬಾರಿ ಇಲಿ ಸಿಕ್ಕಿ ಬಿದ್ದಾಗಲೂ ಬಿಸಿ ನೀರಿನಲ್ಲಿ ಅದ್ದಿ ಸ್ವಚ್ಛಗೊಳಿಸಿ ಮತ್ತೆ ಬೋನನ್ನು ಬಳಸಬೇಕು.

* ವಿಷವನ್ನು ಪ್ಲಾಸ್ಟಿಕ್ ಬೇಸಿನ್ ಮತ್ತು ಸೌಟುಗಳ ಬಳಕೆಯಿಂದ ಮಿಶ್ರಣ ಮಾಡಿ. ಬರಿ ಕೈ ಅಥವಾ ಲೋಹದ ಪಾತ್ರೆ ಬಳಸುವುದು ಸರಿಯಲ್ಲ.

* ವಿಷ ತಿಂದು ಸತ್ತ ಇಲಿ, ಹೆಗ್ಗಣಗಳನ್ನು ನಾಯಿ ಬೆಕ್ಕುಗಳಿಗೆ ಸಿಗದಂತೆ ಆಳವಾಗಿ ಗುಂಡಿ ಮಾಡಿ ಹೂಳಿ.

* ಮನೆಯಲ್ಲಿ ಕೇವಲ ರೋಬಾನ್ ಬಿಲ್ಲೆ ಬಳಸಿ, ಇಲಿಗಳನ್ನು ನಿಯಂತ್ರಿಸಿ.

* ವಿಷ ಇಟ್ಟ ನಂತರ ಕೈ, ಕಾಲು, ಮುಖವನ್ನು ಸಾಬೂನಿನಿಂದ ಚೆನ್ನಾಗಿ ತೊಳೆದುಕೊಳ್ಳಬೇಕು.

* ಆಕಸ್ಮಿಕವಾಗಿ ಜಿಂಕ್ ಪಾಸ್ಫೇಟನ್ನು ಯಾರಾದರೂ ತಿಂದರೆ ತಕ್ಷಣವೇ ಉಪ್ಪು ನೀರು ಅಥವಾ ಮೊಟ್ಟೆಯ ಬಿಳಿ ಭಾಗ ನುಂಗಿಸಿ ವಾಂತಿ ಮಾಡಿಸಿ ಹಾಗೂ ತಡಮಾಡದೇ ವೈದ್ಯರಲ್ಲಿ ಕರೆದೊಯ್ಯಿರಿ.

Write A Comment