ಮನೋರಂಜನೆ

ಬೇಯದ ಕಾಳು ಮತ್ತು ಕೆಂಪೇಗೌಡ ಮಹಾತ್ಮೆ!: ಅಂಬರೀಶ

Pinterest LinkedIn Tumblr

– ಆನಂದತೀರ್ಥ ಪ್ಯಾಟಿ

ನಿರ್ಮಾಪಕ, ನಿರ್ದೇಶಕ: ಕೆ. ಮಹೇಶ ಸುಖಧರೆ
ತಾರಾಗಣ: ಅಂಬರೀಷ್, ದರ್ಶನ್, ರಚಿತಾ ರಾಮ್, ಪ್ರಿಯಾಮಣಿ, ಶರತ್ ಲೋಹಿತಾಶ್ವ, ಬುಲೆಟ್ ಪ್ರಕಾಶ್, ಸಾಧುಕೋಕಿಲ, ರವಿ
ಕಾಳೆ, ಇತರರು

ambi

ಹಳ್ಳಿಯಲ್ಲಿ ಹಸು ಸಾಕಿಕೊಂಡು ನೆಮ್ಮದಿ ಜೀವನ ನಡೆಸುತ್ತಿದ್ದ ಅಂಬರೀಶ, ಎಂಥವರ ಕಷ್ಟಕ್ಕೂ ಸ್ಪಂದಿ­ಸುವ ಮೃದು ಹೃದಯದವನು. ಉದ್ಯಮದ ಹೆಸರಿ­ನಲ್ಲಿ ಜಮೀನು ಸ್ವಾಧೀನಕ್ಕೆ ಯತ್ನಿಸುವ ಊರಿನ ದೇಸಾಯಿಯನ್ನು ಎದುರು ಹಾಕಿಕೊಂಡು, ಬೆಂಗ­ಳೂರು ಮಹಾನಗರಕ್ಕೆ ಬರುತ್ತಾನೆ.

ಇಲ್ಲಿನ ಪರಿಸ್ಥಿತಿ ಅಲ್ಲಿಗಿಂತ ಅಧ್ವಾನ! ಕೆಂಪೇಗೌಡ ಕಟ್ಟಿದ ಮಹಾನಗರ ಈಗ ಭೂಗಳ್ಳರ ಸ್ವರ್ಗ. ಪರಿಸ್ಥಿತಿ ಅರಿತು ಅಕ್ರಮ ಭೂ ಒತ್ತುವರಿ ತೆರವಿಗೆ ಮುಂದಾಗುತ್ತಾನೆ. ಇಂಥ ಉದಾತ್ತ ಕೆಲಸಕ್ಕೆ ಹೊರಡುವ ಅಂಬರೀಶನಿಗೆ ಕೆಂಪೇ­ಗೌಡರ ವಿಗ್ರಹದ ಖಡ್ಗ ಸಿಕ್ಕಿಬಿಡುತ್ತದೆ. ಅಲ್ಲಿಂದ ಅಂಬರೀಶನ ಆರ್ಭಟ ಶುರು.

ಅಕ್ರಮ ಭೂ ಒತ್ತುವರಿ ಕಥಾವಸ್ತುವನ್ನು ಆಯ್ದು­ಕೊಂಡು, ದರ್ಶನ್ ಅಭಿಮಾನಿಗಳಿಗೆ ಅಬ್ಬರದ ಹಬ್ಬ­ದೂಟ ಬಡಿಸಿದ್ದಾರೆ ನಿರ್ದೇಶಕ ಕೆ. ಮಹೇಶ ಸುಖ­ಧರೆ. ಭೂಗಳ್ಳತನವನ್ನು ಅಸಹಾ­ಯ­ಕತೆಯಿಂದ ನೋಡು­ತ್ತಿರುವವರಿಗೂ ಇದೊಂದು ಮನೋ­ರಂಜನೆಯ ಪ್ಯಾಕೇಜ್‌.
ರಾಮಸ್ವಾಮಿ… ಅಲ್ಲಲ್ಲ, ಶಾಮಸ್ವಾಮಿ ಕೊಟ್ಟ ವರ­ದಿ­ಯಲ್ಲಿ ಭೂ ಒತ್ತುವರಿ ಕುರಿತ ಮಾಹಿತಿ ಸಾಕ­ಷ್ಟಿದೆ.

ಆದರೆ ಖುದ್ದಾಗಿ ಮಂತ್ರಿಗಳೇ ಇದರಲ್ಲಿ ಶಾಮೀಲಾದ ಮೇಲೆ ಕಾನೂನಿಗೆಲ್ಲಿದೆ ಜಾಗ? ಕೂಲಿ ಕೆಲಸಕ್ಕೆಂದು ಹಳ್ಳಿಗರ ಜತೆ ಬೆಂಗಳೂರಿಗೆ ಬಂದ ಅಂಬರೀಶನಿಗೆ, ನಿರ್ಮಾಣ ಕಂಪೆ­ನಿಯ ಮಾಲೀಕ ಕೆಲಸ ಕೊಡು­ತ್ತಾನೆ. ಆದರೆ ಆತನ ಮಗಳನ್ನೇ ಅಕ್ರಮ ಜಾಲಕ್ಕೆ ದೂಡುವ ಭೂಗಳ್ಳರು, ಅಂಬ­ರೀಶನಿಗೆ ಸವಾಲು ಹಾಕುತ್ತಾರೆ. ಅದನ್ನು ಸ್ವೀಕರಿಸುವ ಅಂಬರೀಶ, ಕೆಂಪೇಗೌಡರ ಖಡ್ಗ ಹಿಡಿದು ‘ಅಕ್ರಮ’ಗಳ ವಿರುದ್ಧ ಸಮರ ಸಾರುತ್ತಾನೆ. ‘ಸಂಭವಾಮಿ ಯುಗೇ ಯುಗೇ’ ಎಂಬ ಮಾತಿ­ನಂತೆ, ದುಷ್ಟರ ಸಂಹಾರಕ್ಕಾಗಿ ಭಗವಂತ ಅವತರಿಸುತ್ತಾನೆ ಎಂಬುದು ಅಂಬರೀಶನ ಮೂಲಕ ಸಾಬೀತಾಗುತ್ತದೆ.

ಭೂಮಾಫಿಯಾವನ್ನು ಸಿನಿಮಾಕ್ಕೆ ಅಳವಡಿಸಲು ಮುಂದಾದ ಸುಖಧರೆ ಪ್ರಯತ್ನ ‘ಸೈ’; ಆದರೆ ತಳಪಾಯ ಗಟ್ಟಿ ಇಲ್ಲದೇ ಶಿಥಿಲ ಕಟ್ಟಡದಂತೆ ಚಿತ್ರ ಭಾಸವಾಗುತ್ತದೆ. ಇತಿಹಾಸ­ದಲ್ಲಿರುವ ಕೆಂಪೇ­ಗೌಡರನ್ನೂ ವರ್ತಮಾನದಲ್ಲಿನ ಅಂಬರೀಶ­ನನ್ನೂ ಬೆರೆಸಿ, ಸಮಕಾಲೀನ ಸಮಸ್ಯೆಗೆ ಸಿನಿಮೀಯ ಪರಿಹಾರ ಕೊಟ್ಟಿದ್ದಾರೆ. ಅಂಬರೀಶ ನಡೆಸುವ ಹೋರಾಟ ಕಾಯ್ದೆ– ಕಾನೂನಿನ ಆಚೆ ಇರಬಹುದು; ಆದರೆ ಅದು ಜನರಿಗೆ ಒಳಿತು ಮಾಡುತ್ತದೆ ಎಂಬುದನ್ನು ಸಿನಿಮಾ ಸಮರ್ಥಿಸುವಂತಿದೆ.

ನಾಡಪ್ರಭು ಕೆಂಪೇಗೌಡನಾಗಿ ನಟ ಅಂಬರೀಷ್ ಒಂದು ಹಾಡು ಹಾಗೂ ಕೆಲ ದೃಶ್ಯಗಳಲ್ಲಿ ಬಂದು ಹೋಗುತ್ತಾರೆ. ಬೆಂಗಳೂರು ಕಟ್ಟಿದ ಚಿತ್ರಣವನ್ನು ಗ್ರಾಫಿಕ್‌ನಿಂದ ಅಂದವಾಗಿ ತೋರಿಸಲಾಗಿದೆ. ಹಳ್ಳಿ ಹುಡುಗ, ಕೂಲಿಕಾರ, ಕೆಂಪೇಗೌಡ ಹೀಗೆ ಬಗೆಬಗೆಯ ಪಾತ್ರಗಳಿಂದ ದರ್ಶನ್ ಮನಗೆಲ್ಲುವಲ್ಲಿ ಸಫಲರಾಗು­ತ್ತಾರೆ.

ವಿ. ಹರಿಕೃಷ್ಣ ಸಂಗೀತದ ಪೈಕಿ ಎರಡು ಹಾಡುಗಳು ನೆನಪಿನಲ್ಲಿ ಉಳಿಯುತ್ತವೆ. ದರ್ಶನ್ ಕೈಯಲ್ಲಿ ರಬ್ಬರ್‌ ಗೊಂಬೆಯಂತಾಗುವ ರಚಿತಾ ರಾಮ್‌, ಅಭಿನಯ­ದಲ್ಲಿ ಪರವಾಗಿಲ್ಲ. ಪ್ರಿಯಾಮಣಿ ಅಭಿನಯಕ್ಕಿಂತ ಮಾದಕತೆಗೇ ಒತ್ತು ಕೊಟ್ಟಿದ್ದಾರೆ. ತನ್ನ ಜನರ ಜೀವ ಉಳಿಸಲು ಜೀವಂತ ಸಮಾಧಿ­ಯಾದರೂ, ನೆಲ ಸೀಳಿ ಮೇಲೆದ್ದು ಬರುವ ಅಂಬರೀಶ ಭೂಗಳ್ಳರನ್ನು ಸಂಹ­ರಿ­­ಸುತ್ತಾನೆ.

ಎಲ್ಲ ಸರಿ ಮಾಡಿ ಹಳ್ಳಿಗೆ ಮರ­ಳುವ ಹೊತ್ತಿನಲ್ಲಿ ಅಲ್ಲಿದ್ದವ­ನೊಬ್ಬ ‘ಮತ್ತೆ ಭೂಗಳ್ಳತನ ಶುರು­ವಾ­ದರೆ..’ ಎಂದು ಪ್ರಶ್ನಿಸುತ್ತಾನೆ. ಆಗ ಅಂಬರೀಶ ‘ಮತ್ತೆ ಕೆಂಪೇ­ಗೌಡ ಜನಿಸು­ತ್ತಾನೆ’ ಎನ್ನುತ್ತ ಬಸ್‌ ಹತ್ತುತ್ತಾನೆ. ಅಂದರೆ, ಕಾನೂನಿನಿಂದ ಸಮಸ್ಯೆಗೆ ಪರಿಹಾರ ಅಸಾಧ್ಯ ಎಂದರ್ಥವೇ?

Write A Comment