ಕರ್ನಾಟಕ

ನಿದ್ರಾ ಮಂಪರಿನಿಂದಾಗಿ ನಿಯಂತ್ರಣ ತಪ್ಪಿ ಮರಕ್ಕೆ ಅಪ್ಪಳಿಸಿದ ಖಾಸಗಿ ಬಸ್ : ಒಂದೇ ಕುಟುಂಬದ ನಾಲ್ವರ ಸಾವು

Pinterest LinkedIn Tumblr

accident1

ತರೀಕೆರೆ, ನ.25: ಖಾಸಗಿ ಬಸ್ಸೊಂದು ಮರಕ್ಕೆ ಅಪ್ಪಳಿಸಿದ ಪರಿಣಾಮ ಒಂದೇ ಕುಟುಂಬದ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ತರೀಕೆರೆ ಪಟ್ಟಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಮೃತರನ್ನು ಸೊರಬದ ಲಕ್ಷ್ಮಮ್ಮ (60), ದೀಪ್ತಿ (25), ವಿಷ್ಣು ಹಾಗೂ ವಿಶ್ವನಾಥ್ ಎಂದು ಗುರುತಿಸಲಾಗಿದೆ. ಲಕ್ಷ್ಮಮ್ಮ, ದೀಪ್ತಿ, ವಿಷ್ಣು ಸಂಬಂಧದಲ್ಲಿ ತಾಯಿ, ಮಗಳು, ಮೊಮ್ಮಗನಾಗಿದ್ದು, ವಿಶ್ವನಾಥ್ ಸಂಬಂಧಿಕರೆಂದು ಹೇಳಲಾಗಿದೆ.

ಬೆಂಗಳೂರಿನಿಂದ ರಾತ್ರಿ ಗಜಾನನ ಎಂಬ ಖಾಸಗಿ ಬಸ್ ಸಾಗರಕ್ಕೆ ಹೊರಟಿದೆ. ಬಸ್‌ನಲ್ಲಿ 21 ಮಂದಿ ಪ್ರಯಾಣಿಕರಿದ್ದರು ಎನ್ನಲಾಗಿದೆ. ಈ ಬಸ್ ಮುಂಜಾನೆ 4ರ ಸಮಯದಲ್ಲಿ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ಕಟ್ಟೆಹೊಳೆ ಗ್ರಾಮದ ಬಳಿ ಬರುತ್ತಿದ್ದಾಗ ಚಾಲಕನ ನಿದ್ರಾ ಮಂಪರಿನಿಂದಾಗಿ ನಿಯಂತ್ರಣ ತಪ್ಪಿದ ಬಸ್ ಮರಕ್ಕೆ ಅಪ್ಪಳಿಸಿದೆ.

ಬಸ್ ಅಪ್ಪಳಿಸಿದ ರಭಸಕ್ಕೆ ಮರ ನೆಲಕ್ಕುರುಳಿದ್ದು, ಬಸ್ ಎರಡು ಹೋಳಾಗಿ ನಜ್ಜುಗುಜ್ಜಾಗಿ ಮುಂಭಾಗದ ಸೀಟಿನಲ್ಲಿ ನಿದ್ರೆಗೆ ಜಾರಿದ್ದ ತಾಯಿ ಲಕ್ಷ್ಮಮ್ಮ, ಮಗಳು ದೀಪ್ತಿ, ಮೊಮ್ಮಗ ವಿಷ್ಣು ಹಾಗೂ ಇವರ ಸಂಬಂಧಿಯೇ ಆದ ವಿಶ್ವನಾಥ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಈ ಘಟನೆಯಿಂದಾಗಿ ಬಸ್‌ನಲ್ಲಿದ್ದ 14 ಮಂದಿ ಗಾಯಗೊಂಡಿದ್ದು, ಇವರ ಪೈಕಿ 6 ಮಂದಿ ಸ್ಥಿತಿ ಗಂಭೀರವಾಗಿದೆ ಎಂದು ಹೇಳಲಾಗಿದ್ದು, ಗಾಯಾಳುಗಳನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತದಿಂದಾಗಿ ರಾಷ್ಟ್ರೀಯ ಹೆದ್ದಾರಿ-206ರಲ್ಲಿ ಕೆಲಕಾಲ ಸಂಚಾರದಲ್ಲಿ ಅಡಚಣೆ ಉಂಟಾಗಿತ್ತು. ಸುದ್ದಿ ತಿಳಿದ ತರೀಕೆರೆ ಠಾಣೆ ಇನ್ಸ್‌ಪೆಕ್ಟರ್ ದೇವರಾಜ್ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ದೌಡಾಯಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಮೃತರ ಶವಗಳನ್ನು ತರೀಕೆರೆಯ ಸರ್ಕಾರಿ ಆಸ್ಪತ್ರೆಗಳಲ್ಲಿ ಮರಣೋತ್ತರ ಪರೀಕ್ಷೆಗೆ ಒಳಪಡಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Write A Comment