ಕರ್ನಾಟಕ

ಸಂಚಲನ ಮೂಡಿಸಿದ್ದ ‘ಕಿಸ್ ಆಫ್ ಲವ್’ ಆಚರಣೆಗೆ ಬ್ರೇಕ್ ಹಾಕಿದ ಪೊಲೀಸರು

Pinterest LinkedIn Tumblr

kiss_of

ಬೆಂಗಳೂರು, ನ.25: ಪರ-ವಿರೋಧ ವ್ಯಕ್ತವಾಗಿ ನಗರದಲ್ಲಿ ಸಂಚಲನ ಮೂಡಿಸಿದ್ದ ಕಿಸ್ ಆಫ್ ಲವ್ ಆಚರಣೆಗೆ ಪೊಲೀಸರು ಬ್ರೇಕ್ ಹಾಕಿದ್ದಾರೆ. ನೈತಿಕ ಪೊಲೀಸ್ ಗಿರಿ ಖಂಡಿಸಿ ಇದೇ ತಿಂಗಳ 30ರಂದು ಟೌನ್‌ಹಾಲ್ ಎದುರು ನಡೆಸಲು ಉದ್ದೇಶಿಸಿದ್ದ ಕಿಸ್ ಆಫ್ ಲವ್‌ಗೆ ಅನುಮತಿ ಇಲ್ಲ ಎಂದು ನಗರ ಪೊಲೀಸ್ ಆಯುಕ್ತ ಎಂ.ಎನ್.ರೆಡ್ಡಿ ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿಂದು ಮಾತನಾಡಿದ ಅವರು, ರಚಿತಾ ತನೇಜಾ ಎಂಬುವರು ಕಿಸ್ ಆಫ್ ಲವ್‌ಗೆ ಅನುಮತಿ ಕೋರಿ ಕೇಂದ್ರ ವಿಭಾಗದ ಡಿಸಿಪಿ ಸಂದೀಪ್ ಪಾಟೀಲ್ ಅವರಿಗೆ ಅರ್ಜಿ ನೀಡಿದ್ದು, ಅದನ್ನು ತಿರಸ್ಕರಿಸಲಾಗಿದೆ ಎಂದು ಹೇಳಿದರು.

ಅರ್ಜಿಯಲ್ಲಿ ಸರಿಯಾದ ಮಾಹಿತಿ ಇರಲಿಲ್ಲ. ಕೆಲವು ಸ್ಪಷ್ಟೀಕರಣಗಳನ್ನು ಕೇಳಿದ್ದೆವು. ಅದಕ್ಕೂ ಸಹ ಸರಿಯಾದ ಮಾಹಿತಿಯನ್ನು ಆಯೋಜಕರು ನೀಡಿರಲಿಲ್ಲ ಎಂದು ಹೇಳಿದರು. ಕಾರ್ಯಕ್ರಮಕ್ಕೆ ಎಷ್ಟು ಜನ ಬರುತ್ತಾರೆ, ಎಲ್ಲೆಲ್ಲಿಂದ ಬರುತ್ತಾರೆ, ಕಾರ್ಯಕ್ರಮದ ಮುಂದಾಳತ್ವವನ್ನು ಯಾರು ವಹಿಸುತ್ತಾರೆ ಎಂಬ ಬಗ್ಗೆಯೂ ಸ್ಪಷ್ಟ ಮಾಹಿತಿ ನೀಡಿರಲಿಲ್ಲ ಎಂದು ಆಯುಕ್ತರು ತಿಳಿಸಿದರು.

ಕಾರ್ಯಕ್ರಮದ ವೇಳೆ ಅಹಿತಕರ ಘಟನೆ ನಡೆದರೆ ಅದಕ್ಕೆ ತಾವು ಜವಾಬ್ದಾರರಲ್ಲ ಎಂದು ಆಯೋಜಕರು ಹೇಳಿದ್ದರು. ಆನ್‌ಲೈನ್‌ನಲ್ಲಿ ಆಹ್ವಾನ ನೀಡಿರುವ ಕಾರಣ ನಿಖರವಾಗಿ ಇಷ್ಟು ಸಂಖ್ಯೆಯಲ್ಲಿ ಜನ ಸೇರುತ್ತಾರೆ ಎಂದು ಹೇಳಲು ಆಗುವುದಿಲ್ಲ ಎಂದು ತಿಳಿಸಿದ್ದರು.

ಹೀಗಾಗಿ ಮುಂಜಾಗ್ರತಾ ಕ್ರಮವಾಗಿ ಕಾರ್ಯಕ್ರಮಕ್ಕೆ ಅನುಮತಿ ನಿರಾಕರಿಸಲಾಗಿದೆ ಎಂದು ವಿವರಿಸಿದರು. ಕರ್ನಾಟಕ ಪೊಲೀಸ್ ಕಾಯ್ದೆ-೬೫ಡಿ ಕಲಂ ಪ್ರಕಾರ ಹಾಗೂ ಐಪಿಸಿ ಸೆಕ್ಷನ್-294/ಎ ಅನ್ವಯ ಕಿಸ್ ಆಫ್ ಲವ್ ಆಯೋಜಕರು ಅನುಮತಿ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಲಾಗಿದೆ ಎಂದು ಹೇಳಿದರು.

ಈಗಾಗಲೇ ದೇಶದ ಮೂರು ಪ್ರಮುಖ ನಗರಗಳಲ್ಲಿ ಈ ಕಾರ್ಯಕ್ರಮ ನಡೆದಿದ್ದು, ಕೆಲವು ಅಹಿತಕರ ಘಟನೆಗಳು ನಡೆದಿವೆ. ಅಲ್ಲದೆ ಸಾರ್ವಜನಿಕವಾಗಿ ಅಶ್ಲೀಲತೆ ಕಂಡುಬಂದಿದ್ದು, ತೀವ್ರ ವಿರೋಧವೂ ವ್ಯಕ್ತವಾಗಿ ಹೊಟೇಲ್‌ಗಳ ಮೇಲೆ ವಿದ್ವಂಸಕ ಕೃತ್ಯಗಳು ನಡೆದಿವೆ. ನಗರದಲ್ಲೂ ಕೆಲವು ಸಂಘಟನೆಗಳು ಈ ಕಾರ್ಯಕ್ರಮಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದವು. ಈ ಹಿನ್ನೆಲೆಯಲ್ಲಿ ಅನುಮತಿ ನಿರಾಕರಿಸಲಾಗಿದೆ ಎಂದು ತಿಳಿಸಿದರು. ನಗರದಲ್ಲೂ ಶಾಂತಿಗೆ ಭಂಗ ಬರುವ ಸಾಧ್ಯತೆಯಿದ್ದು, ಕಾರ್ಯಕ್ರಮ ನಡೆದರೆ ಅಂದು ಪ್ರತಿಭಟನೆ ನಡೆಸುವುದಾಗಿ ಕೆಲವು ಸಂಘಗಳು ಹೇಳಿವೆ ಎಂದು ತಿಳಿಸಿದರು.

Write A Comment