ಕರ್ನಾಟಕ

ನಿಗಮ ಮಂಡಳಿಯಲ್ಲಿ ಅವಕಾಶ ವಂಚಿತ ಕಾಂಗ್ರೆಸ್ ಹಿರಿಯ ನಾಯಕ ಪುತ್ರನೊಂದಿಗೆ ಆತ್ಮಹತ್ಯೆಗೆ ಯತ್ನ

Pinterest LinkedIn Tumblr

Sucide

ಮೈಸೂರು, ನ.22: ನಿಗಮ-ಮಂಡಳಿಯಲ್ಲಿ ಅವಕಾಶ ಸಿಗದೆ ಇದ್ದಿದ್ದರಿಂದ ಮನನೊಂದ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಬೆಂಬಲಿಗ ಹಾಗೂ ಕಾಂಗ್ರೆಸ್‌ನ ಹಿರಿಯ ನಾಯಕರೊಬ್ಬರು ತಮ್ಮ ಪುತ್ರನೊಂದಿಗೆ ಆತ್ಮಹತ್ಯೆ ಯತ್ನ ಮಾಡಿರುವ ಘಟನೆ ನಡೆದಿದೆ.

ಮೈಸೂರಿನ ಇಟ್ಟಿಗೆಗೂಡು ಪ್ರದೇಶದ ನಿವಾಸಿ ಪ್ರಭಾಕರ್ (68) ಮತ್ತು ಅವರ ಪುತ್ರ ಪ್ರತಾಪ್ (35) ನಿದ್ದೆಮಾತ್ರೆ ಸೇವಿಸಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದಾರೆ. ಇಬ್ಬರ ಸ್ಥಿತಿ ಗಂಭೀರವಾಗಿದ್ದು, ಕೆಆರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಪ್ರಭಾಕರ್ ಅವರು ಸುಮಾರು 40 ವರ್ಷಗಳಿಂದ ಕಾಂಗ್ರೆಸ್‌ನಲ್ಲಿ ಸಕ್ರಿಯ ಕಾರ್ಯಕರ್ತರಾಗಿ ದುಡಿಯುತ್ತಿದ್ದರು. ಈ ಹಿಂದೆ ಹಿರಿಯ ಶಾಸಕ ತನ್ವೀರ್ ಸೇಠ್ ಅವರ ಪಾಳಯದಲ್ಲಿ ಗುರುತಿಸಿಕೊಂಡಿದ್ದ ಪ್ರಭಾಕರ್ ಇತ್ತೀಚೆಗೆ ಸಿದ್ದರಾಮಯ್ಯನವರ ಜತೆ ಪದೇ ಪದೇ ಕಾಣಿಸಿಕೊಳ್ಳುತ್ತಿದ್ದರು.

ನಜರಾಬಾದ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿಯೂ ಕೆಲಸ ಮಾಡಿದ್ದರು. ಹೀಗಾಗಿ ತಮಗೆ ಅಥವಾ ತಮ್ಮ ಪುತ್ರನಿಗೆ ನಿಗಮ-ಮಂಡಳಿಯಲ್ಲಿ ಅವಕಾಶ ಸಿಕ್ಕೇ ಸಿಗಲಿದೆ ಎಂಬ ನಿರೀಕ್ಷೆ ಹೊಂದಿದ್ದರು. ನಿನ್ನೆ ನವದೆಹಲಿಯಲ್ಲಿ ಪಟ್ಟಿ ಅಂಗೀಕಾರಗೊಂಡ ನಂತರ ಹಲವು ನಾಯಕರನ್ನು ಸಂಪರ್ಕಿಸಿ ತಮ್ಮ ಹೆಸರಿದೆಯೇ ಎಂದು ತಿಳಿದುಕೊಳ್ಳುವ ಪ್ರಯತ್ನ ನಡೆಸಿದ್ದಾರೆ. ಇಲ್ಲ ಎಂಬುದು ಖಚಿತವಾಗುತ್ತಿದ್ದಂತೆ ತೀವ್ರ ಮನನೊಂದ ಅವರು ರಾತ್ರಿ ಊಟ ಮಾಡಿದ ನಂತರ ಪುತ್ರ ಪ್ರತಾಪ್ ಜತೆ ನಿದ್ದೆ ಮಾತ್ರೆ ಸೇವಿಸಿದ್ದಾರೆ. ಬೆಳಿಗ್ಗೆ ಎಷ್ಟು ಹೊತ್ತಾದರೂ ತಂದೆ-ಮಗ ಎದ್ದೇಳದೆ ಇರುವುದನ್ನು ಗಮನಿಸಿದ ಮನೆಯವರು ಕೊಠಡಿಯೊಳಗೆ ಹೋದಾಗ ಅಸ್ವಸ್ಥರಾಗಿರುವುದು ಪತ್ತೆಯಾಗಿದೆ. ತಕ್ಷಣವೇ ಕೆಆರ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಕೊಡಿಸಲಾಗುತ್ತಿದೆ. ಇಬ್ಬರೂ ಪ್ರಜ್ಞೆ ತಪ್ಪಿದ್ದು, ಚಿಂತಾಜನಕ ಸ್ಥಿತಿಯಲ್ಲಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ನಜರಾಬಾದ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Write A Comment