ಕರ್ನಾಟಕ

ದೇವಾಲಯದ ಆವರಣದಲ್ಲೆಲ್ಲಾ ರಕ್ತ; ಕೋಮುಗಲಭೆಯ ಆತಂಕ: ನಾಯಿಯ ರಕ್ತಮೂತ್ರ ಎಂದು ಬಹಿರಂಗಗೊಂಡ ಬಳಿಕ ನಿಟ್ಟುಸಿರು ಬಿಟ್ಟ ಗ್ರಾಮಸ್ಥರು

Pinterest LinkedIn Tumblr

Dog-blood

ಕೊಳ್ಳೇಗಾಲ, ನ.22: ಕಳೆದ ನಾಲ್ಕೈದು ದಿನಗಳಿಂದ ಗ್ರಾಮದ ದೇವಾಲಯದ ಆವರಣದಲ್ಲೆಲ್ಲಾ ಹಸಿ-ಬಿಸಿ ರಕ್ತದ ಕಲೆಗಳು ಬಿದ್ದು, ಗ್ರಾಮಸ್ಥರಲ್ಲಿ ಆತಂಕದ ವಾತಾವರಣ ಸೃಷ್ಟಿಸಿ ಬಾನಾಮತಿಯ ಕಾಟವೆಂದು ಭಾವಿಸಿ ಕೋಮುಗಲಭೆಯ ವಾತಾವರಣ ಉಂಟಾಗಿ ಗ್ರಾಮಸ್ಥರ ಮತ್ತು ಪೊಲೀಸರ ನಿದ್ದೆಗೆಡಿಸಿದ ಪ್ರಸಂಗ ಕೊಳ್ಳೇಗಾಲದ ಹರಳೆ ಗ್ರಾಮದಲ್ಲಿ ನಡೆದಿತ್ತು.

ಕಳೆದ ನಾಲ್ಕೈದು ದಿನಗಳಿಂದ ಗ್ರಾಮದ ದೇವಾಲಯದ ಆವರಣದಲ್ಲೆಲ್ಲಾ ಹಸಿ-ಬಿಸಿ ರಕ್ತದ ಕಲೆಗಳು, ಪ್ರಾರಂಭದಲ್ಲಿ ಗ್ರಾಮಸ್ಥರು ಇದನ್ನು ಬಾನಾಮತಿಯ ಕಾಟ ಎಂದುಕೊಂಡು ಪತ್ತೆಗೆ ಮುಂದಾದರು. ಆದರೂ ಆ ಅಗುಂತಕ ಹತ್ತಾರು ಕಣ್ಣುಗಳ ಕಣ್ಗಾವಲಿನಲ್ಲೂ ರಕ್ತವನ್ನು ಚಲ್ಲಿ ಹೋಗುತ್ತಿದ್ದ. ಇದನ್ನು ನಂಬದ ಗ್ರಾಮದ ಯುವಕರು ಇದು ಅನ್ಯ ಕೋಮಿನವರ ಕೃತ್ಯ ಎಂದು ಭಾವಿಸಿ ಆ ಕೋಮಿನ ವಿರುದ್ಧ ಅಸಮಾಧಾನಗೊಂಡು ಪೋಲಿಸರಿಗೆ ದೂರು ಕೂಡ ನೀಡಿದ್ದರು.

ಸ್ಥಳಕ್ಕಾಗಮಿಸಿದ ಪೋಲಿಸರೆದುರು ಆ ಕೋಮಿನ ವ್ಯಕ್ತಿಯೊಬ್ಬನನ್ನು ಬಂಧಿಸಿ ಎಂದು ಗಲಾಟೆ ನಡೆಸಿದ್ದರು. ಇದರಿಂದ ಇನ್ನೇನು ಎರಡು ಕೋಮುಗಳ ಸಂಘರ್ಷಕ್ಕೆ ನಾಂದಿಯಾಗುತ್ತದೆ ಎಂಬ ಪರಿಸ್ಥಿತಿ ನಿರ್ಮಾಣವಾಗಿ ಗ್ರಾಮದಲ್ಲಿ ಪ್ರಕ್ಷುಬ್ಧ ವಾತಾವರಣ ಉಂಟಾಗಿತ್ತು.

ಈ ವೇಳೆಗಾಗಲೆ ದೇವಾಲಯದ ಆವರಣದಲ್ಲೆಲ್ಲಾ ರಕ್ತದ ಕಲೆ ಮಾಡಿ ಈ ಎಲ್ಲಾ ಅವಾಂತರಕ್ಕೆ ಕಾರಣನಾದವನನ್ನು ಪೋಲಿಸರು ಗ್ರಾಮಸ್ಥರ ನೆರವಿನೊಡನೆ ಪತ್ತೆ ಹಚ್ಚಿ ತಂದು ಠಾಣೆಗೆ ತಂದಿದ್ದು ಇದರಿಂದ ಗ್ರಾಮಸ್ಥರು ಹಾಗೂ ಪೋಲಿಸರು ನಿಟ್ಟುಸಿರು ಬಿಟ್ಟಿದ್ದಾರೆ.

ಹೌದು, ಇಂತಹದೊಂದು ಸೂಕ್ಷ್ಮ ಪರಿಸ್ಥಿತಿ ನಿರ್ಮಾಣವಾಗಿದ್ದು ತಾಲೂಕಿನ ಹರಳೆ ಗ್ರಾಮದಲ್ಲಿ. ಈ ನಡುವೆ ರಕ್ತದ ಮಾದರಿಗಳನ್ನು ಸಂಗ್ರಹಿಸಿದ ಪೊಲೀಸರು ರಾಸಾಯನಿಕ (ಎಫ್.ಎಸ್.ಐ.ಎಲ್) ವಿಶ್ಲೇಷಣ ತಜ್ಞರ ವರದಿಗಾಗಿ ಕಳುಹಿಸಿ ಕೊಟ್ಟಿದ್ದರು. ಆದರೆ ಈ ಎಲ್ಲಾ ಅವಾಂತರಕ್ಕೆ ಕಾರಣವಾಗಿದ್ದು ಒಂದು ಸಾಧಾರಣ ನಾಯಿ ಎಂಬುದು ನಿನ್ನೆ ಪತ್ತೆಯಾಗಿದೆ.

ಹೌದು, ಗ್ರಾಮದ ಮಾಜಿ ಗ್ರಾ.ಪಂ.ಅಧ್ಯಕ್ಷ ರೇವಣ್ಣ ಎಂಬುವವರಿಗೆ ಸೇರಿದ ಸಾಮಾನ್ಯ ಜಾತಿಯ ನಾಯಿಯ ಮೂತ್ರದಲ್ಲಿ ರಕ್ತಸ್ರಾವವಾಗುತ್ತಿರುವುದನ್ನು ಗ್ರಾಮಸ್ಥರ ನೆರವಿನೊಡನೆ ಪೊಲೀಸರು ಪತ್ತೆ ಹಚ್ಚಿದ್ದಾರೆ. ಇದರಿಂದ ಕಳೆದ ಒಂದು ವಾರದಿಂದ ಗ್ರಾಮದಲ್ಲಿ ನಿರ್ಮಾಣವಾಗಿದ್ದ ಭಯದ ವಾತಾವರಣಕ್ಕೆ ತೆರೆಬಿದ್ದಿದ್ದು ಗ್ರಾಮಸ್ಥರು ಹಾಗೂ ಪೊಲೀಸರು ನಿಟ್ಟುಸಿರು ಬಿಡುವಂತಾಗಿದೆ.

Write A Comment