ಕರ್ನಾಟಕ

ಕಾಂಗ್ರೆಸನ್ನು ಪೇಚೆಗೆ ಸಿಲುಕಿಸಿರುವ ನಿಗಮ-ಮಂಡಳಿ ನೇಮಕಾತಿ: ಸಿದ್ದರಾಮಯ್ಯರಿಗೆ ತಲೆನೋವು

Pinterest LinkedIn Tumblr

Siddaramayya-Tention

ಬೆಂಗಳೂರು, ನ.22: ರಾಜ್ಯದ 95 ನಿಗಮ-ಮಂಡಳಿ ನೇಮಕಾತಿಗೆ ಹೈಕಮಾಂಡ್‌ನಿಂದ ಒಪ್ಪಿಗೆ ಪಡೆದ ನಂತರ ನಿಗಮ-ಮಂಡಳಿಗಳ ಹಂಚಿಕೆ ರಾಜ್ಯ ನಾಯಕರಿಗೆ ತಲೆನೋವಾಗಿ ಪರಿಣಮಿಸಿದೆ. ಈ ನಡುವೆ ಅವಕಾಶ ಸಿಗದೆ ಇದ್ದವರು ರಾಜ್ಯ ಕಾಂಗ್ರೆಸ್ ನಾಯಕರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅವಕಾಶ ತಪ್ಪಿರುವ ಶಾಸಕರು ಮತ್ತು ಹಿರಿಯ ಮುಖಂಡರು ತೀವ್ರ ಸಿಟ್ಟಿಗೆದ್ದಿದ್ದು, ರಾಜಕೀಯ ವಲಯದಲ್ಲಿ ಕುತೂಹಲ ಕೆರಳಿಸಿದೆ.

ನಿಗಮ-ಮಂಡಳಿಗಳಿಗೆ ಜಿಲ್ಲಾಧ್ಯಕ್ಷರು, ಕೆಪಿಸಿಸಿ ಪದಾಧಿಕಾರಿಗಳು ಹಾಗೂ ಹಿರಿಯ ಮುಖಂಡರಿಗೆ ಅವಕಾಶ ಕಲ್ಪಿಸಲಾಗಿದೆ. ಈಗ ನಿಗಮ-ಮಂಡಳಿಗಳ ಹಂಚಿಕೆಯಲ್ಲಿ ಮತ್ತೆ ಸಮಸ್ಯೆ ಎದುರಾಗಿದೆ. ಪ್ರಭಾವಿ ಮತ್ತು ಆರ್ಥಿಕವಾಗಿ ಸದೃಢವಾಗಿರುವ ಮಂಡಳಿಗಳನ್ನು ನೀಡುವಂತೆ ನೇಮಕಾತಿಯಾದವರು ಪಟ್ಟು ಹಿಡಿದಿರುವುದರಿಂದ ಮತ್ತೊಂದು ಕಸರತ್ತು ನಡೆಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಕೆಲಸ ಮಾಡಲು ಅವಕಾಶ ಇರುವ ಮತ್ತು ಆರ್ಥಿಕವಾಗಿ ಸದೃಢವಾಗಿರುವ ನಿಗಮ-ಮಂಡಳಿಗಳಿಗೆ ಹೆಚ್ಚಿನ ಬೇಡಿಕೆಯಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯನವರ ಆಪ್ತರಾಗಿರುವ ರಾಮಚಂದ್ರಪ್ಪ ಅವರಿಗೆ ಕೊಳಚೆ ನಿರ್ಮೂಲನಾ ಮಂಡಳಿ, ಮಾಜಿ ಶಾಸಕಿ ಮಲ್ಲಾಜಮ್ಮ ಅವರಿಗೆ ಅಂಬೇಡ್ಕರ್ ಅಭಿವೃದ್ಧಿ ನಿಗಮ, ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಚಾಂದ್‌ಪಾಷ ಅವರಿಗೆ ಅಲ್ಪಸಂಖ್ಯಾತರ ಅಭಿವೃದ್ಧಿ, ಕಿಸಾನ್ ಘಟಕದ ಉಪಾಧ್ಯಕ್ಷ ಆನಂದ್‌ಕುಮಾರ್ ಅವರಿಗೆ ಇಪ್ಕೊ, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಅವರ ರಾಜಕೀಯ ಕಾರ್ಯದರ್ಶಿ ಜೆ.ಸಿ.ಚಂದ್ರಶೇಖರ್‌ಗೆ ಗೃಹಮಂಡಳಿ, ಟಿಕೆಟ್ ವಂಚಿತ ಯು.ಬಿ.ವೆಂಕಟೇಶ್‌ಗೆ ಎಂಎಸ್‌ಐಎಲ್ ಸೇರಿದಂತೆ ಮತ್ತಿತರ ನಿಗಮ-ಮಂಡಳಿಗಳ ಹಂಚಿಕೆ ನಡೆದಿದೆ.

ಒಟ್ಟು 95 ನಿಗಮ-ಮಂಡಳಿಗಳಿಗೆ ನೇಮಕಾತಿ ಪಟ್ಟಿ ಸಿದ್ಧಗೊಂಡಿದ್ದು, ಕಿಯಾನಿಕ್ಸ್ , ಕರ್ನಾಟಕ ರಾಜ್ಯ ಕೃಷಿ ಉತ್ಪನ್ನ ಮಾರಾಟ ಮಂಡಳಿ, ಕೆಐಎಡಿಬಿ, ಕರ್ನಾಟಕ ಭೂ ಸೇನಾ ನಿಗಮ, ಕರ್ನಾಟಕ ನವೀಕೃತ ಇಂಧನ ಅಭಿವೃದ್ಧಿ ನಿಗಮ, ಕರ್ನಾಟಕ ಸಣ್ಣಕೈಗಾರಿಕಾ ಅಭಿವೃದ್ಧಿ ನಿಗಮ, ಕರ್ನಾಟಕ ಪ್ರವಾಸೋದ್ಯಮ ನಿಗಮ, ಕೆಪಿಟಿಸಿಎಲ್, ಎಂಎಸ್‌ಐಎಲ್, ಕರ್ನಾಟಕ ಕರಕುಶಲ ಅಭಿವೃದ್ಧಿ ನಿಗಮ, ಕೆಎಸ್‌ಆರ್‌ಟಿಸಿ ಉಪಾಧ್ಯಕ್ಷ ಸ್ಥಾನ, ಕರ್ನಾಟಕ ತೆಂಗು-ನಾರು ಅಭಿವೃದ್ಧಿ ಮಂಡಳಿ, ಹಟ್ಟಿ ಚಿನ್ನದ ಗಣಿ ನಿಗಮ, ಕಿಯಾನಿಕ್ಸ್ ಸೇರಿದಂತೆ ಪ್ರಮುಖ ನಿಗಮ-ಮಂಡಳಿಗಳ ನೇಮಕಾತಿಗೆ ಹೆಚ್ಚು ಒತ್ತಡ ಹೇರಲಾಗುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಈಗಾಗಲೇ ಔಪಚಾರಿಕವಾಗಿ ನಿಗಮ-ಮಂಡಳಿ ಹಂಚಿಕೆಯನ್ನು ಪೂರ್ಣಗೊಳಿಸಿದ್ದು, ಆದೇಶ ಹೊರಡಿಸುವುದು ಮಾತ್ರ ಬಾಕಿಯಿದೆ. ಆದರೆ, ಪ್ರಭಾವಿಯಲ್ಲದ ಸ್ಥಾನಕ್ಕಿಂತ ಕೆಲಸ ಮಾಡಲು ಅವಕಾಶವಿರುವ ನಿಗಮ-ಮಂಡಳಿಗಳನ್ನು ನೀಡಿ ಎಂದು ಮುಖಂಡರು ದುಂಬಾಲು ಬಿದ್ದಿದ್ದಾರೆ.

ಇತ್ತ ಅವಕಾಶ ಸಿಗದೆ ಇದ್ದವರು, ಹಿರಿಯ ನಾಯಕರು, ಮಧ್ಯವರ್ತಿಗಳಂತೆ ವರ್ತಿಸಿ ನಿಗಮ-ಮಂಡಳಿಗಳ ಸ್ಥಾನಗಳನ್ನು ಮಾರಾಟ ಮಾಡಿಕೊಂಡಿದ್ದಾರೆ ಎಂದು ಆರೋಪಿಸುತ್ತಿದ್ದರೆ, ಇತ್ತ ಇನ್ನೂ ಕೆಲವು ನಾಯಕರು ರಾಜ್ಯ ನಾಯಕರ ವಿರುದ್ಧ ಬಂಡೇಳುವ ಸಿದ್ಧತೆ ನಡೆಸಿದ್ದಾರೆ.

ಇದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳದ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಹೈಕಮಾಂಡ್‌ಗೆ ಪಟ್ಟಿ ಸಲ್ಲಿಸಿದ್ದೇವೆ. ಮೇಲಿನ ಆದೇಶದಂತೆ ನೇಮಕಾತಿ ನಡೆಯಲಿದೆ. ಇದರಲ್ಲಿ ನಮ್ಮ ಯಾವುದೇ ಹೊಣೆಗಾರಿಕೆ ಇಲ್ಲ ಎಂದು ಜಾರಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ.

ನಿಗಮ-ಮಂಡಳಿ ನೇಮಕಾತಿ ಕಾಂಗ್ರೆಸ್ ಪಕ್ಷದ ಬಲವರ್ಧನೆಗೆ ಪೂರಕವಾಗಲಿದೆಯೇ ಅಥವಾ ಸರ್ಕಾರದ ಅಸ್ತಿತ್ವಕ್ಕೆ ಧಕ್ಕೆಯಾಗಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ. ತಲಾ ೧೮ ತಿಂಗಳಿಗೆ ಅಧಿಕಾರ ಹಂಚಿಕೆಯಾಗುವುದರಿಂದ ಮುಂದಿನ ಅವಧಿಯಲ್ಲಿ ಅವಕಾಶ ನೀಡುವ ಆಶ್ವಾಸನೆಯೊಂದಿಗೆ ಬಂಡಾಯಗಾರರ ಮೂಗಿಗೆ ತುಪ್ಪ ಸವರುವ ಪ್ರಯತ್ನವನ್ನು ಸಿದ್ದರಾಮಯ್ಯ ಮಾಡುತ್ತಿದ್ದಾರೆ.

Write A Comment