ಕರ್ನಾಟಕ

ಇಂಧನ ಇಲಾಖೆಯಲ್ಲಿ ಭಾರೀ ಅವ್ಯವಹಾರ; ದಾಖಲೆಗಳನ್ನು ಮುಚ್ಚಿ ಹಾಕುವ ಯತ್ನ: ಎಚ್‌ಡಿಕೆ ಗುಡುಗು

Pinterest LinkedIn Tumblr

Photo Caption

ಮೈಸೂರು, ನ.20: ಇಂಧನ ಇಲಾಖೆಯಲ್ಲಿ ಭಾರೀ ಅವ್ಯವಹಾರ ನಡೆದಿದೆ. ಹಗರಣಗಳ ಬಗ್ಗೆ ದಾಖಲಾತಿಗಳನ್ನು ನಾನು ಬಿಡುಗಡೆ ಮಾಡಿದರೆ ಇಬ್ಬರು ಸಚಿವರು ಅಧಿಕಾರ ಕಳೆದುಕೊಳ್ಳಲಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಗುಡುಗಿದರು.

ಕಾರ್ಯಕ್ರಮವೊಂದರ ನಿಮಿತ್ತ ಮೈಸೂರಿಗೆ ತೆರಳಿದ್ದ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿದ ಸುದ್ದಿಗಾರರೊಂದಿಗೆ ಅವರು ಮಾತನಾಡುತ್ತಾ,ಇಂಧನ ಇಲಾಖೆಯಲ್ಲಿ ೬೦ಕೋಟಿ ರೂ.ಗಳ ಹಗರಣವಾಗಿದೆ. ಈ ಬಗ್ಗೆ ತನಿಖೆಗೆ ಸದನ ಸಮಿತಿ ರಚಿಸಿದ್ದರೂ ಸಮಿತಿ ಅಧ್ಯಕ್ಷರು ಇಂಧನ ಸಚಿವರೇ ಆಗಿದ್ದಾರೆ. ಹೀಗಿದ್ದಾಗ ಸತ್ಯ ಹೊರಬರಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.

ಇಂಧನ ಇಲಾಖೆಯಲ್ಲಿ ಕಳೆದ ಐದು ವರ್ಷದಲ್ಲಿನ ಹಗರಣ ಸದನ ಸಮಿತಿ ಮುಂದೆ ತಂದರೆ ಕಳೆದ ೫ ವರ್ಷದಲ್ಲಿ ನಡೆದಿರುವಂತಹ ಹಗರಣ ಬಯಲಿಗೆ ಬರುತ್ತದೆ. ಕಾಂಗ್ರೆಸ್ ಹಾಗೂ ಬಿಜೆಪಿ ಈ ಹಗರಣದಲ್ಲಿ ಶಾಮೀಲಾಗಿರುವುದರಿಂದಲೇ ದಾಖಲೆಗಳನ್ನು ಮುಚ್ಚಿ ಹಾಕುವ ಯತ್ನ ನಡೆಯುತ್ತಿದೆ. ಒಂದು ವೇಳೆ ದಾಖಲಾತಿಗಳನ್ನು ಹೊರಗೆ ತಂದರೆ ಕೇಂದ್ರದಲ್ಲಿನ ಬಿಜೆಪಿ ಸರ್ಕಾರ ಇಂಧನ ಸಚಿವರ ಅಕ್ರಮ ಚಟುವಟಿಕೆಗಳ ಬಗ್ಗೆ ತನಿಖೆಗೆ ಸಿಬಿಐಗೆ ವಹಿಸುವ ಹೆದರಿಕೆ ಹಿನ್ನೆಲೆಯಲ್ಲಿ ದಾಖಲಾತಿ ಹೊರಗೆ ತರುತ್ತಿಲ್ಲ ಎಂದು ಆರೋಪಿಸಿದರು.

ಇದೇ 25ರಂದು ಸದನಸಮಿತಿ ಸಭೆ ನಡೆಯಲಿದ್ದು, ಅಂದು ದಾಖಲಾತಿಗಳನ್ನು ಸಮಿತಿ ಮುಂದೆ ಇಡದಿದ್ದರೆ ಮುಂದಿನ ರೂಪುರೇಷೆ ಬಗ್ಗೆ ನಿರ್ಧಾರ ಮಾಡುವುದಾಗಿ ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಚಿವರ ಮೇಲೆ ಹಿಡಿತವಿಲ್ಲ ಎಂದು ಎಚ್‌ಡಿಕೆ ವ್ಯಂಗ್ಯವಾಡಿದರು. ರಾಜ್ಯ ಸರ್ಕಾರದಲ್ಲಿರುವ ಕಳಂಕಿತ ಸಚಿವರ ವಿರುದ್ಧ ದಾಖಲಾತಿಗಳನ್ನು ನಾನು ಬಿಡುಗಡೆ ಮಾಡಿದರೆ ಆ ಸಚಿವರ ಕುಲ-ಬಾಂಧವರು ನನ್ನ ಹಾಗೂ ನನ್ನ ಪಕ್ಷದ ವಿರುದ್ಧ ತಿರುಗಿ ಬೀಳುತ್ತಾರೆ. ಈ ಹಿನ್ನೆಲೆಯಲ್ಲಿ ದಾಖಲಾತಿಗಳನ್ನು ಬಿಡುಗಡೆ ಮಾಡುತ್ತಿಲ್ಲ ಎಂದರು.

ಮೈಸೂರು ಜಿಲ್ಲೆಯಲ್ಲಿ ನಡೆದಿರುವ ಅವ್ಯವಹಾರಗಳ ಬಗ್ಗೆ ದಾಖಲಾತಿ ಬಿಡುಗಡೆ ಮಾಡಿದರೆ ಇಬ್ಬರು ಸಚಿವರ ತಲೆದಂಡವಾಗುವುದು ಖಚಿತ. ಆದರೆ ಅವರ ಕಡೆಯವರು ನನ್ನ ಮೇಲೆ ತಿರುಗಿಬೀಳುತ್ತಾರೆ ಎಂದರು.

ಈಗಿನ ಸರ್ಕಾರದಿಂದ ರಾಜ್ಯದ ಜನತೆ ಪ್ರಾಮಾಣಿಕತೆ ನಿರೀಕ್ಷಿಸುವಂತಿಲ್ಲ. ಇದಕ್ಕೆ ಇತ್ತೀಚೆಗೆ ಮೈಸೂರಿನಲ್ಲಿ ನಡೆದ ಎಟಿಐನಲ್ಲಿನ ಅಧಿಕಾರಿ ಮೇಲೆ ನಡೆದ ಹಲ್ಲೆಯೇ ಸಾಕ್ಷಿ. ಮುಖ್ಯಮಂತ್ರಿ ತವರು ಜಿಲ್ಲೆಯಲ್ಲೇ ಇಂತಹ ಘಟನೆ ನಡೆದರೂ ಅವರು ಗಂಭೀರವಾಗಿ ಪರಿಗಣಿಸಿಲ್ಲ ಎಂದು ದೂರಿದರು. ಕೋಲಾರ ಜಿಲ್ಲಾಧಿಕಾರಿ ರವಿ ಅವರನ್ನು ರಾತ್ರೋರಾತ್ರಿ ಎತ್ತಂಗಡಿ ಮಾಡಲಾಗಿದೆ. ಇವರ ಸರ್ಕಾರದಲ್ಲಿ ಪ್ರಾಮಾಣಿಕ ಅಧಿಕಾರಿಗಳಿಗೆ ರಕ್ಷಣೆ ಇಲ್ಲ ವೆಂಬುದು ಗೊತ್ತಾಗುತ್ತಿದೆ ಎಂದರು.

ಮೈಸೂರಿನ ಸರ್ಕಾರಿ ಅತಿಥಿ ಗೃಹದಲ್ಲಿ ಮಂಡ್ಯ ಸಂಸದ ಸಿ.ಎಸ್.ಪುಟ್ಟರಾಜು ಅವರು ಕಚೇರಿ ಉದ್ಘಾಟಿಸಿದ ಕುಮಾರಸ್ವಾಮಿ ಅವರು, ಕೆ.ಆರ್.ನಗರ ತಾಲೂಕಿನ ಸುತ್ತಮುತ್ತಲ ಜನರ ಸಮಸ್ಯೆ ಆಲಿಸಲು ಹಾಗೂ ಪರಿಹಾರಕ್ಕಾಗಿ ಈ ಕಚೇರಿ ತೆರೆಯಲಾಗಿದೆ ಎಂದರು. ಈ ಸಂದರ್ಭದಲ್ಲಿ ಸಂಸದ ಸಿ.ಎಸ್.ಪುಟ್ಟರಾಜು, ಶಾಸಕ ಸಾ.ರಾ.ಮಹೇಶ್, ಪರಿಷತ್ ಸದಸ್ಯ ಸಂದೇಶ್ ನಾಗರಾಜ್, ಮುಖಂಡರಾದ ಶ್ರೀಕಂಠಯ್ಯ, ಮರಿತಿಬ್ಬೇಗೌಡ, ಮೇಯರ್ ಲಿಂಗಪ್ಪ ಮತ್ತಿತರರಿದ್ದರು.

Write A Comment