ರಾಷ್ಟ್ರೀಯ

ಸ್ವಯಂಘೋಷಿತ ದೇವಮಾನವ ರಾಮ್‌ಪಾಲ್‌ಗೆ ಜಾಮೀನು ರದ್ದು: ಜೈಲುವಾಸ

Pinterest LinkedIn Tumblr

baba-rampal

ಚಂಡೀಘಡ, ನ.20: ಕಳೆದ ರಾತ್ರಿ ಪೊಲೀಸರಿಂದ ಬಂಧನಕ್ಕೆ ಒಳಪಟ್ಟಿದ್ದ ಸ್ವಯಂಘೋಷಿತ ದೇವಮಾನವ ರಾಮ್‌ಪಾಲ್‌ಗೆ 2006ರ ಕೊಲೆ ಪ್ರಕರಣದಲ್ಲಿ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಜಾಮೀನು ರದ್ದುಪಡಿಸಿದೆ. ಇದರಿಂದ ದೇವಮಾನವ ಇನ್ನಷ್ಟು ಕಾನೂನಿನ ಸಂಕಷ್ಟಕ್ಕೆ ಸಿಲುಕಿದ್ದು, ಜೈಲುವಾಸ ಅನುಭವಿಸುವುದು ಅನಿವಾರ್ಯವಾಗಿದೆ.

ಇಂದು ಬೆಳಿಗ್ಗೆ ಪೊಲೀಸರು ರಾಮ್‌ಪಾಲ್‌ನನ್ನು ಭಾರೀ ಬಿಗಿಭದ್ರತೆ ನಡುವೆ ನ್ಯಾಯಾಧೀಶರ ನಿವಾಸಕ್ಕೆ ಹಾಜರುಪಡಿಸಿದರು. ಅವರ ಪರ ವಕೀಲರು 2006ರ ಕೊಲೆ ಪ್ರಕರಣದಲ್ಲಿ ಜಾಮೀನು ನೀಡಬೇಕೆಂದು ಮನವಿ ಮಾಡಿದರು. ಆದರೆ, ನ್ಯಾಯಾಧೀಶರು ಜಾಮೀನು ನೀಡಲು ನಿರಾಕರಿಸಿದರು. ಇದರ ಜತೆಗೆ ಪೊಲೀಸರು ಈತನ ವಿರುದ್ಧ ಇನ್ನೂ ಹಲವಾರು ಹೊಸ ಮೊಕದ್ದಮೆಗಳನ್ನು ದಾಖಲಿಸಿಕೊಂಡಿದ್ದಾರೆ. ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ರಾಮ್‌ಪಾಲ್ ವಿರುದ್ಧ ಜಾಮೀನು ರಹಿತ ಬಂಧನದ ವಾರೆಂಟ್ ಹೊರಡಿಸಿದೆ. ಇದಕ್ಕೂ ಮುನ್ನ ಪೊಲೀಸರು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದರು.

ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದ್ದು, ಯಾವುದೇ ರೀತಿಯ ಆತಂಕ ಪಡುವ ಅಗತ್ಯವಿಲ್ಲ ಎಂದು ವೈದ್ಯರು ಮನವರಿಕೆ ಮಾಡಿಕೊಟ್ಟರು. ಇಂದು ಮಧ್ಯಾಹ್ನ ನ್ಯಾಯಾಲಯಕ್ಕೆ ಪೊಲೀಸರು ಹಾಜರುಪಡಿಸಲಿದ್ದು, ನ್ಯಾಯಾಂಗ ವಶಕ್ಕೋ ಇಲ್ಲವೆ ಪೊಲೀಸರ ವಶಕ್ಕೋ ಎಂಬುದು ತೀರ್ಮಾನವಾಗಲಿದೆ. ೨೦೦೬ರ ಕೊಲೆ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿದ್ದ ರಾಮ್‌ಪಾಲ್‌ನನ್ನು ಶುಕ್ರವಾರದೊಳಗೆ ನ್ಯಾಯಾಲಯಕ್ಕೆ ಹಾಜರುಪಡಿಸಬೇಕೆಂದು ನ್ಯಾಯಾಧೀಶರು ಆದೇಶ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಕಳೆದ ಎರಡು ದಿನಗಳಿಂದ ಅರೆಸೇನಾಪಡೆ ಮತ್ತು ಪೊಲೀಸರು ಆಶ್ರಮಕ್ಕೆ ಒಳನುಗ್ಗಲು ಭಾರೀ ಹರಸಾಹಸ ನಡೆಸಿದರು. ರಾಮ್‌ಪಾಲ್ ಬೆಂಬಲಿಗರು ಇದಕ್ಕೆ ಅಡ್ಡಿಪಡಿಸಿದ್ದರು.

ಈ ವೇಳೆ ಮಾರಾಮಾರಿ ನಡೆದು ಆರು ಮಂದಿ ಸಾವನ್ನಪ್ಪಿದ್ದರು. ಕೊನೆಗೆ ಅರೆಸೇನಾ ಪಡೆ ಆಶ್ರಮದೊಳಗೆ ನುಗ್ಗಿ ಬೆಂಬಲಿಗರನ್ನು ತೆರವುಗೊಳಿಸಿದ ನಂತರ ನಿನ್ನೆ ರಾತ್ರಿ ದೇವಮಾನವನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದರು.

Write A Comment