ಕರ್ನಾಟಕ

ಬೆಂಗಳೂರು; ಬಟ್ಟೆ ಕದ್ದದ್ದ ಬಿಬಿಎಂಪಿ ಕಾರ್ಪೊರೇಟರ್ ಲಲಿತಾ ಆತ್ಮಹತ್ಯೆ ಯತ್ನ

Pinterest LinkedIn Tumblr

laltha-BBMP

ಬೆಂಗಳೂರು, ನ.18: ಮಾಲ್‍ನಲ್ಲಿ ಬಟ್ಟೆ ಕದ್ದ ಆರೋಪದ ಮೇಲೆ ಜೈಲು ಸೇರಿ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ ಬಿಬಿಎಂಪಿ ಬಿಜೆಪಿ ಪೊರೇಟರ್ ಹೆಚ್.ಎಸ್.ಲಲಿತಾ ಅವರು ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿ ನಗರದ ಖಾಸಗಿ ಆಸ್ಪತ್ರೆಯಲ್ಲಿ ಜೀವನ್ಮರಣದ ನಡುವೆ ಹೋರಾಟ ನಡೆಸುತ್ತಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

ಬಸವನಗುಡಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗಿರಿನಗರ ವಾರ್ಡ್‍ನ ಬಿಜೆಪಿ ಸದಸ್ಯೆಯಾಗಿರುವ ಲಲಿತಾ ಅವರು ಕೆಲವು ದಿನಗಳ ಹಿಂದೆ ವಿಷ ಸೇವಿಸಿ ತಮ್ಮ ಮನೆ ಸಮೀಪದ ರಸ್ತೆಯಲ್ಲಿ ಬಿದ್ದಿದ್ದರು. ಕೂಡಲೇ ಸ್ಥಳೀಯರು ಅವರನ್ನು ಜಯನಗರದಲ್ಲಿರುವ ಸಾಗರ್ ಅಪೋಲೋ ಆಸ್ಪತ್ರೆಗೆ ದಾಖಲು ಮಾಡಿದ್ದರು. ಸೂಕ್ತ ಚಿಕಿತ್ಸೆಯ ನಂತರ ಲಲಿತಾ ಅಪಾಯದಿಂದ ಪಾರಾಗಿದ್ದರೂ ಕೋಮಾ ಸ್ಥಿತಿಗೆ ತಲುಪಿರುವುದರಿಂದ ವೈದ್ಯರು ಇನ್ನೂ ಚಿಕಿತ್ಸೆ ಮುಂದುವರೆದಿದ್ದಾರೆ.

ಆತ್ಮಹತ್ಯೆಗೆ ಯತ್ನಿಸಿರುವ ಪೊರೇಟರ್ ಕ್ಲಿಪೋಮೇನಿಯಾ ಎಂಬ ಮಾನಸಿಕ ಖಾಯಿಲೆಯಿಂದ ನರಳುತ್ತಿದ್ದರು ಎನ್ನಲಾಗಿದೆ. ಮೊದಲ ಬಾರಿಗೆ ಗಿರಿನಗರ ವಾರ್ಡ್‍ನ ಬಿಬಿಎಂಪಿ ಸದಸ್ಯೆಯಾಗಿ ಆಯ್ಕೆಯಾಗಿದ್ದ ಲಲಿತಾ ಕಳೆದ ಏಪ್ರಿಲ್ ತಿಂಗಳಿನಲ್ಲಿ ಗಾಂಧಿನಗರದಲ್ಲಿರುವ ಸುಖಸಾಗರ್ ಮಾಲ್‍ನ ನೆಲ ಮಹಡಿಯಲ್ಲಿರುವ ಅಶೋಕ ಅಪೇರಲ್ಸ್ ಮಳಿಗೆಯಲ್ಲಿ ಬಟ್ಟೆ ಕದ್ದು ರೆಡ್‍ಹ್ಯಾಂಡಾಗಿ ಸಿಕ್ಕಿ ಬಿದ್ದಿದ್ದರು.

ಮಳಿಗೆಯ ಕೆಲಸಗಾರನಿಂದ ಐದು ಟಾಪ್ ಪಡೆದು ಟ್ರಯಲ್ ರೂಮಿಗೆ ತೆರಳಿದ ಲಲಿತಾ ವಾಪಾಸ್ ಬಂದು ಕೇವಲ ಎರಡು ಟಾಪ್ ಮಾತ್ರ ಹಿಂತಿರುಗಿಸಿದ್ದರು. ಇದರಿಂದ ಅನುಮಾನಗೊಂಡ ಕೆಲಸಗಾರ ಮಾಲೀಕರಿಗೆ ದೂರು ನೀಡಿದ್ದ. ತಕ್ಷಣ ಸ್ಥಳಕ್ಕೆ ಬಂದ ಮಾಲೀಕ ಆಕೆಯನ್ನು ತಪಾಸಣೆ ನಡೆಸಿದಾಗ ಕದ್ದ ಟಾಪ್‍ಗಳನ್ನು ಧರಿಸಿ ಅದರ ಮೇಲೆ ತಮ್ಮ ಮಾಮೂಲಿ ಉಡುಪು ಧರಿಸಿರುವುದು ಪತ್ತೆಯಾಗಿತ್ತು. ಇದಕ್ಕೂ ಕೆಲವು ದಿನಗಳ ಹಿಂದೆ ಲಲಿತಾ ಇದೇ ಮಳಿಗೆಯಿಂದ ಬಟ್ಟೆ ಕದ್ದಿರುವುದು ತಿಳಿದುಬಂದಿತ್ತು.

ತಕ್ಷಣ ಉಪ್ಪಾರಪೇಟೆ ಪೊಲೀಸರು ಲಲಿತಾ ಅವರನ್ನು ಬಂಧಿಸಿ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದರು. ನ್ಯಾಯಾಧೀಶರು ಆಕೆಯನ್ನು ಪರಪ್ಪನ ಅಗ್ರಹಾರಕ್ಕೆ ಕಳುಹಿಸಿದ್ದರು. ನಂತರ ಜಾಮೀನಿನ ಮೇಲೆ ಬಿಡುಗಡೆಯಾದ ಲಲಿತಾ ಮಾನಸಿಕ ಕ್ಷೋಭೆಗೆ ಒಳಗಾಗಿದ್ದರು ಎನ್ನಲಾಗಿದೆ.

ಮೇಯರ್ ಭೇಟಿ: ಶಾಸಕ ರವಿಸುಬ್ರಮಣ್ಯ, ಮೇಯರ್ ಶಾಂತಕುಮಾರಿ, ಆಡಳಿತ ಪಕ್ಷದ ನಾಯಕ ಎನ್.ಆರ್.ರಮೇಶ್ ಮತ್ತಿತರರು ಇಂದು ಆಸ್ಪತ್ರೆಗೆ ತೆರಳಿ ಲಲಿತಾ ಅವರ ಆರೋಗ್ಯ ವಿಚಾರಿಸಿದರು.

Write A Comment