ಕರ್ನಾಟಕ

ಅಂತಿಂಥ ಗೌಡರಲ್ಲ ಇವ್ರು!: 15ನೇ ವಯಸ್ಸಿನಲ್ಲೇ ಲಾಯರ್‌ಗೆ ಕಪಾಳಮೋಕ್ಷ

Pinterest LinkedIn Tumblr

deve3

ಹಾಸನ: ದೇವೇಗೌಡರ ನಗು ಅಪರೂಪ. ಆದ್ರೆ ಸಿಟ್ಟಿದೆಯಲ್ಲ ಅದು ಇವತ್ತಿನದ್ದಲ್ಲ, ಬಾಲ್ಯದಿಂದಲೂ ಇದ್ದದ್ದೇ.

ಅಂದಿನ ಸಿಟ್ಟು, ಸೆಡವುಗಳೆಲ್ಲಾ ಹೇಗಿದ್ದವು ಎಂಬುದನ್ನು ಒಟ್ಟು ಮಾಡಿ ಹೇಳಿದ್ದು ಮಾತ್ರ ಈಗ. ಇಲ್ಲಿನ ಸಹಕಾರ ಸಪ್ತಾಹ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಗೌಡರು, ಬಳಿಕ ಲೋಕಾಭಿರಾಮವಾಗಿ ಬಾಲ್ಯದ ಪೌರುಷಗಳನ್ನು ನೆನಪಿಸಿಕೊಂಡರು.

15ನೇ ವಯಸ್ಸಿನಲ್ಲೇ ಲಾಯರ್‌ಗೆ ಕಪಾಳಮೋಕ್ಷ, 17ರಲ್ಲಿ ಸಹಪಾಠಿಗೆ ಹಾಕಿಸ್ಟಿಕ್ ಏಟು ಕೊಟ್ಟಿದ್ದ ಗೌಡರು, ಅದನ್ನು ಹೇಳಿಕೊಂಡದ್ದು ಹೀಗೆ.

ಲಾಯರ್ ಏಟು

ಸ್ವಾತಂತ್ರ್ಯಾ ನಂತರ ನಮ್ಮ ಮೈಸೂರು ಮಹಾರಾಜರು ತಮ್ಮ ಸಂಸ್ಥಾನವನ್ನು ಪ್ರಜಾಪ್ರಭುತ್ವ ಸರ್ಕಾರಕ್ಕೆ ಬಿಟ್ಟು ಕೊಡಲು ತಮಾಮ್ ಒಪ್ಪುತ್ತಿರಲಿಲ್ಲ. ಆಗ ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಬಾಯಿ ಪಟೇಲ್, ಅರ್ಕಾಟ್ ರಾಮಸ್ವಾಮಿ ಮತ್ತಿತರರು ಮೈಸೂರು ಚಲೋ ಚಳವಳಿ ಘೋಷಣೆ ಮಾಡಿದ್ದರು. ಅದರ ಪ್ರಯುಕ್ತ ಹೊಳೆನರಸಿಪುರ ಕೋರ್ಟ್ ಮುಂದೆ ಪಿಕೆಟಿಂಗ್ ನಡೆಸಿ, ವಕೀಲರು ನ್ಯಾಯಲಯಕ್ಕೆ ಹೋಗದಂತೆ ನಾನು ನನ್ನ ಕೆಲ ಸ್ನೇಹಿತರು ಹೋಗಿ ಪ್ರತಿಭಟನೆ ನಡೆಸುತ್ತಿದ್ದೇವು. ಆಗ ಸೈಕಲ್ ಮೇಲೆ ವಕೀಲ ರಾಮಸ್ವಾಮಿ ಅಯ್ಯಂಗಾರ್ ಎಂಬುವರು ಬಂದರು. ನಾನು ಗೌರವಯುತವಾಗಿ, ಸ್ವಾಮಿ ಪಟೇಲರು ನೀಡಿದ ಕರೆ ಮೇರೆಗೆ ಪಿಕೆಟಿಂಗ್ ನಡೆಸುತ್ತಿದ್ದೇವೆ. ದಯವಿಟ್ಟು ನ್ಯಾಯಾಲಯಕ್ಕೆ ಹೋಗಬೇಡಿ ಪರಿಪರಿಯಾಗಿ ಬೇಡಿಕೊಂಡೇ ತಡೆದೆ.

ಆಗ ಲಾಯರ್ ಸಾಹೇಬರಿಗೆ ಎಲ್ಲಿತ್ತೋ ಕೋಪ ಕಣ್ರೀ… ನನ್ನ ಕಪಾಳಕ್ಕೆ ಹೊಡದೇ ಬಿಡೋದಾ? ನನಗೂ ಸಿಟ್ಟು ಬಂದತು. ನಾನು ಅವರ ಕಪಾಳಕ್ಕೆ ಹೊಡೆದು ಬಿಟ್ಟೆ. ನಂತರ ಭಯ ಸ್ಟಾಟ್ ಆಗೋಯ್ತು… ಪೊಲೀಸರು ಬಂದಿದ್ದೇ ನನ್ನ ಕೈಗಳಿಗೆ ಕೋಳ ತೊಡಿಸಿ ಹಾಸನ ಮುನಿಸಿಫ್ ನ್ಯಾಯಾಲಯದ ಜಡ್ಜ್ ಮುಂದೆ ನಿಲ್ಲಿಸಿದರು. ನಾನಾಗ ಹೈಸ್ಕೂಲ್ ವಿದ್ಯಾರ್ಥಿ. 15 ವರ್ಷ ವಯಸ್ಸು.

ಜಡ್ಜ್ ಮಲ್ಲಿಕಾರ್ಜುನಯ್ಯನವರು, ಚಡ್ಡಿ ಧರಿಸಿದ್ದ ನನ್ನನ್ನು ನೋಡಿ…. ಚೋಟುದ್ದ ಇದ್ದೀಯಾ. ಈಗಲೇ ಪುಡಾರಿಗಿ ಮಾಡ್ತಿಯಾ ಎಂದು ಗದರಿದರು. ಆಗ ಓಹೋ… ನನಗೆ ಜೈಲೇ ಗ್ಯಾರಂಟಿ ಎಂದು ಭಯ, ಆತಂಕ ಉಂಟಾಯಿತು. ಕೆಲ ಕ್ಷಣಗಳಲ್ಲಿ ಜಡ್ಜ್ ಪೊಲೀಸರನ್ನು ಕರೆದು, ಈ ಹುಡುಗನನ್ನು ಎಲ್ಲಿ ಅರೆಸ್ಟ್ ಮಾಡಿದ್ದಿಯೋ ಅಲ್ಲಿಗೆ ಕರೆದುಕೊಂಡು ಹೋಗಿ ಬಿಟ್ಟು ಬರಬೇಕು. ಆ ಬಗ್ಗೆ ರಿಪೋರ್ಟ್ ಕೊಡಬೇಕು ಎಂದು ತಾಕೀತು ಮಾಡಿ ಕಳುಹಿಸಿಕೊಟ್ಟರು.

ಹಾಕಿ ಬ್ಯಾಟ್, ಸಹಪಾಠಿಗೆ ಏಟು

ನಾನು ಎಸ್‌ಎಸ್‌ಎಲ್‌ಸಿ ಮುಗಿಸಿಕೊಂಡು ಹಾಸನದ ಪಾಲಿಟೆಕ್ನಿಕ್ ಎಂಜಿನಿಯರಿಂಗ್ ಕಾಲೇಜಿಗೆ ಸೇರಿದೆ. ನನಗೆ ಹಾಕಿ ಇಷ್ಟ. ಪ್ರತಿದಿನ ಸಂಜೆ ಆಡುತ್ತಿದ್ದೆ. ಆಗ ನನ್ನ ಹಿರಿಯ ಸಹಪಾಠಿಯಾಗಿದ್ದ ಉನ್ನತಾಧಿಕಾರಿಯೊಬ್ಬರ ಮಗ ನೀಲಕಂಠರಾವ್ ಶ್ರೀಮಂತ ಮನೆತನಕ್ಕೆ ಸೇರಿದವರು. ಆಗಲೇ ವಿದೇಶಿ ಬೈಕ್‌ನಲ್ಲಿ ಬರುತ್ತಿದ್ದ. ಎರಡು ವರ್ಷ ಕಾಲೇಜು ಯುನಿಯನ್ ಅಧ್ಯಕ್ಷನೂ ಆಗಿದ್ದ.

ಒಂದು ದಿನ ಸಂಜೆ ಆಟವಾಡುತ್ತಿದ್ದ ವೇಳೆ, ಮುಂದಿನ ಯುನಿಯನ್ ಅಧ್ಯಕ್ಷರು ಯಾರು ಎಂದು ಕೆಲಸ ಸ್ನೇಹಿತರು ಕೇಳಿದರು. ಆಗ ನಾನಲ್ಲದೇ ಯಾರು ಆಗುತ್ತಾರೆ ಎಂದೆ. ಹೀಗೆ ಹೇಳಿದ್ದರಿಂದ ಹಾಲಿ ಅಧ್ಯಕ್ಷ ನೀಲಕಂಠರಾವ್ ಮತ್ತಿತರ ಸ್ನೇಹಿತರ ಜೊತೆ ಜಗಳವಾಯಿತು. ಆಗ ಹಾಕಿ ಸ್ಟಿಕ್‌ನಿಂದ ನೀಲಕಂಠರಾವ್ ಕಾಲಿಗೆ ಮುರಿದು ಹೋಗುವಂತೆ ಹೊಡೆದುಬಿಟ್ಟೆ.

ಹೇಳಿ ಕೇಳಿ… ಮೊದಲೇ ಶ್ರೀಮಂತ ಮತ್ತು ಉನ್ನತಾಧಿಕಾರಿ ಮಗ. ಪೊಲೀಸರಿಗೆ ದೂರು ನೀಡಲು ಬೈಕ್‌ನಲ್ಲಿ ಹೋದ. ನಾನು ಎದ್ದನೋ, ಬಿದ್ದನೋ ಎಂದು ಅಲ್ಲೇ ಇದ್ದ ಜಟಕಾ ಸಾಬರಿಗೆ ಕೈಕಾಲು ಹಿಡಿದು, ಕಾಂಗ್ರೆಸ್‌ನಿಂದ ವಿಧಾನ ಪರಿಷತ್ ಸದಸ್ಯರಾಗಿದ್ದ ವಿ.ಧರ್ಮಪ್ಪ ಮನೆಗೆ ಕೆಲ ಸ್ನೇಹಿತರನ್ನು ಕರೆದುಕೊಂಡು ಹೋದರು. ಧರ್ಮಪ್ಪವರು, ಹೊಡೆಯೋದು ಬಡಿಯೋದು ಸರಿಯಲ್ಲ ಎಂದು ಬುದ್ಧಿವಾದ ಹೇಳಿ, ಪೊಲೀಸರಿಂದ ನನ್ನನ್ನು ರಕ್ಷಿಸಿದರು.

ನಂತರ ಕಾಲೇಜು ಅಧ್ಯಕ್ಷನಾದೆ. ಹೀಗೆ ರಾಜಕೀಯ ಪ್ರವೇಶ ಮಾಡಿ, ಇಲ್ಲಿಗೆ ಬಂದು ನಿಂತಿದ್ದೇನೆ. ಕೋಪ ಒಳ್ಳೆಯದಲ್ಲ ಎಂದು ಗೊತ್ತಿದ್ದರೂ ಅನ್ಯಾಯ ಸಹಿಸಲಿಕ್ಕೆ ಆಗುವ ಸಹಿಷ್ಣುತೆ ನನ್ನಲ್ಲಿ ಇಲ್ಲ. ಹಾಗೇ ಸಂಘರ್ಷ ಮಾಡಿದ್ದೇನೆ. ಇದೇ ನನ್ನ ಹೋರಾಟದ ಗುಟ್ಟು ಎಂದು ದೇವೇಗೌಡರು ತಾವು ರಾಜಕೀಯ ಪ್ರವೇಶ ಪಡೆದ ಬಗೆಯನ್ನು ವಿವರಿಸಿದರು. ಇವೆಲ್ಲವನ್ನೂ ಶಾಸಕ ಸಿ.ಎನ್.ಬಾಲಕೃಷ್ಣ, ವಿಧಾನ ಪರಿಷತ್ ಸದಸ್ಯ ಪಟೇಲ್ ಶಿವರಾಂ ಮತ್ತಿತರು ತದೇಕಚಿತ್ತರಾಗಿ ಕೇಳಿದರು.

– ದಯಾಶಂಕರ ಮೈಲಿ

Write A Comment