ಕರ್ನಾಟಕ

ಜಗಳವಾಡಿ ಬಾವಿಗೆ ಹಾರಿದ ಪತ್ನಿಯನ್ನು ರಕ್ಷಿಸಲು ಹೋದ ಪತಿರಾಯ: ಇಬ್ಬರೂ ಸಾವು

Pinterest LinkedIn Tumblr

well

ತುಮಕೂರು, ನ.15:ಕ್ಷುಲ್ಲಕ ವಿಚಾರಕ್ಕೆ ದಂಪತಿ ಜಗಳ ಮಾಡಿಕೊಂಡು ಬಾವಿಗೆ ಬಿದ್ದು ಸಾವನ್ನಪ್ಪಿದರೆ, ಏನೂ ಅರಿಯದ ಕಂದಮ್ಮಗಳಿಬ್ಬರು ಅನಾಥರಾದ ಹೃದಯವಿದ್ರಾವಕ ಘಟನೆ ತಿಪಟೂರು ತಾಲೂಕಿನಲ್ಲಿ ನಡೆದಿದೆ.

ತಿಪಟೂರು ತಾಲೂಕು, ಕಸಬಾ ಹೋಬಳಿ ಬಂಡೆಗೇಟ್ ಗ್ರಾಮದ ವೆಂಕಟೇಶ್ (30), ಸುಮಲತ (22) ಬಾವಿಗೆ ಬಿದ್ದು ಸಾವನ್ನಪ್ಪಿರುವ ದಂಪತಿ. ಇವರ ಮಕ್ಕಳಾದ ಶಶಿಕಲಾ (4), ಒಂದೂವರೆ ವರ್ಷದ ಮಗ ರಿಷಿ ಹೆತ್ತವರನ್ನು ಕಳೆದುಕೊಂಡು ಅನಾಥರಾಗಿದ್ದಾರೆ. ಕಳೆದ ಆರು ವರ್ಷಗಳ ಹಿಂದೆ ಪರಸ್ಪರ ಪ್ರೀತಿಸಿ ಮದುವೆಯಾಗಿದ್ದ ದಂಪತಿ ಕೂಲಿ ಕೆಲಸ ಮಾಡುತ್ತಾ ಜೀವನ ಸಾಗಿಸುತ್ತಿದ್ದರು. ಇತ್ತೀಚಿನ ಮೂರು ವರ್ಷಗಳಿಂದ ವೆಂಕಟೇಶ್ ಕುಡಿದು ಬಂದು ಪತ್ನಿಯೊಂದಿಗೆ ಜಗಳ ಮಾಡುತ್ತಿದ್ದ ಎನ್ನಲಾಗಿದೆ.

ಈ ಸಂಬಂಧ ಇಬ್ಬರ ಕುಟುಂಬದ ಹಿರಿಯರು ಹಲವು ಬಾರಿ ರಾಜೀ ಪಂಚಾಯ್ತಿ ನಡೆಸಿದ್ದರು. ಆದರೂ ಪ್ರಯೋಜನವಾಗಿರಲಿಲ್ಲ. ಇತ್ತೀಚಿನ ದಿನಗಳಲ್ಲಿ ದಂಪತಿ ನಡುವಿನ ಜಗಳ ಅತಿಯಾಗಿತ್ತು ಎಂದು ಹೇಳಲಾಗುತ್ತಿದೆ.

ನಿನ್ನೆ ಸಂಜೆಯೂ ಕುಡಿದು ಮನೆಗೆ ಬಂದ ವೆಂಕಟೇಶ್ ಕ್ಷುಲ್ಲಕ ವಿಚಾರಕ್ಕೆ ಪತ್ನಿಯೊಂದಿಗೆ ಜಗಳ ಮಾಡಿದ್ದಾನೆ. ಇದರಿಂದ ಬೇಸತ್ತ ಸುಮಲತ ಊರ ಹೊರಗಿನ ಬಾವಿ ಬಳಿಗೆ ಬಂದಿದ್ದು, ಪತಿಯೂ ಹಿಂಬಾಲಿಸಿ ಬಂದಿದ್ದಾನೆ. ಇದನ್ನು ಕಂಡು ಸುಮಲತ ಬಾವಿಗೆ ಹಾರಿದ್ದಾಳೆ. ಪತ್ನಿಯನ್ನು ರಕ್ಷಿಸಲು ಮುಂದಾದ ವೆಂಕಟೇಶ್ ಆಕೆ ಸೀರೆಯನ್ನು ಹಿಡಿದಿದ್ದು, ಆಯತಪ್ಪಿ ಆತನೂ ಬಾವಿಗೆ ಬಿದ್ದಿದ್ದು ದಂಪತಿ ಸಾವನ್ನಪ್ಪಿದ್ದಾರೆ. ಇತ್ತ ಅಪ್ಪ-ಅಮ್ಮ ಮನೆಗೆ ಬರದಿದ್ದರಿಂದ ಮಕ್ಕಳಿಬ್ಬರು ಅಳಲು ಆರಂಭಿಸಿದ್ದಾರೆ. ಇದನ್ನು ಗಮನಿಸಿದ ಅಕ್ಕಪಕ್ಕದ ಮನೆಯವರು ರಾತ್ರಿಯೆಲ್ಲಾ ದಂಪತಿಗಾಗಿ ಹುಡುಕಾಡಿದ್ದಾರೆ. ಇಂದು ಬೆಳಗ್ಗೆ ಮತ್ತೆ ಹುಡುಕಾಟ ಶುರುವಾಗಿದ್ದು, ವ್ಯಕ್ತಿಯೊಬ್ಬರು ನಿನ್ನೆ ಸಂಜೆ ಊರ ಹೊರಗಿನ ಬಾವಿ ಬಳಿ ಇಬ್ಬರು ಜಗಳವಾಡುತ್ತಿದ್ದನ್ನು ಕಂಡಿದ್ದಾಗಿ ಗ್ರಾಮಸ್ಥರಿಗೆ ತಿಳಿಸಿದ್ದಾರೆ. ಈ ಸುಳಿವಿನ ಮೇರೆಗೆ ಗ್ರಾಮದವರು ಬಾವಿ ಬಳಿಗೆ ಹೋಗಿ ನೋಡಿದಾಗ ದಂಪತಿ ಶವ ಕಂಡಿದೆ.

ಕೂಡಲೇ ತಿಪಟೂರು ಗ್ರಾಮಾಂತರ ಠಾಣೆಗೆ ವಿಷಯ ಮುಟ್ಟಿಸಿದ್ದು, ಸಿಪಿಐ ಬಾಲಚಂದ್ರ, ಎಸ್‍ಐ ಅಶೋಕ್‍ಕುಮಾರ್ ಮತ್ತು ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದು ಅಗ್ನಿ ಶಾಮಕ ಸಿಬ್ಬಂದಿಯನ್ನು ಕರೆಸಿ ಶವಗಳನ್ನು ಹೊರಕ್ಕೆ ತೆಗೆಸಿದ್ದಾರೆ. ಘಟನೆ ಸಂಬಂಧ ತಿಪಟೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಾವಿಗೆ ಬಿದ್ದು ಮೃತಪಟ್ಟ ದಂಪತಿಯ ಶವ ಪಡೆಯಲು ವೆಂಕಟೇಶ್ ಪೆÇೀಷಕರಾಗಲಿ, ಸುಮಲತ ಅವರ ಪೆÇೀಷಕರಾಗಲಿ ಯಾರೂ ಮುಂದೆ ಬರುತ್ತಿಲ್ಲ. ಅಲ್ಲದೆ ತಂದೆ-ತಾಯಿ ಕಳೆದುಕೊಂಡ ಮಕ್ಕಳನ್ನೂ ಸಹ ತಮಗೆ ಬೇಡವೆಂದು ನಿರಾಕರಿಸುತ್ತಿದ್ದಾರೆ. ಮಕ್ಕಳನ್ನು ತಮ್ಮ ಸುಪರ್ಧಿಗೆ ಪಡೆಯುವುದಕ್ಕೆ ಮೃತರ ಪೆÇೀಷಕರ ಮನವೊಲಿಸಲು ಸಿಪಿಐ ಬಾಲಚಂದ್ರ ಅವರು ನಿರಂತರ ಯತ್ನ ನಡೆಸುತ್ತಿದ್ದಾರೆ. ಒಂದು ವೇಳೆ ಕುಟುಂಬದವರು ಮಕ್ಕಳನ್ನು ಪಡೆದುಕೊಳ್ಳದಿದ್ದರೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಕಲ್ಯಾಣ ಇಲಾಖೆ ವಶಕ್ಕೆ ನೀಡಲಾಗುವುದು. ಆನಂತರ ಇಲಾಖೆಯ ಹಿರಿಯ ಅಧಿಕಾರಿಗಳು ಮುಂದಿನ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ತಮ್ಮನ್ನು ಸಂಪರ್ಕಿಸಿದ ಸುದ್ದಿಗಾರರಿಗೆ ಸಿಪಿಐ ಬಾಲಚಂದ್ರ ತಿಳಿಸಿದ್ದಾರೆ.

Write A Comment