ಕರ್ನಾಟಕ

ಅತ್ಯಾಚಾರ ಪ್ರಕರಣ: ರಾಘವೇಶ್ವರ ಸ್ವಾಮೀಜಿಗೆ ನಿರೀಕ್ಷಣಾ ಜಾಮೀನು

Pinterest LinkedIn Tumblr

raghave

ಬೆಂಗಳೂರು, ಅ.13: ಅತ್ಯಾಚಾರ ಆರೋಪದಲ್ಲಿ ಬಂಧನದ ಭೀತಿಯಲ್ಲಿದ್ದು, ಈಗಾಗಲೇ ಒಂದು ನಿರೀಕ್ಷಣಾ ಜಾಮೀನು ಪಡೆದುಕೊಂಡಿದ್ದ ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಶ್ರೀಗಳು ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಲ್ಲಿ ಮತ್ತೊಂದು ನಿರೀಕ್ಷಣಾ ಜಾಮೀನು ಪಡೆದುಕೊಂಡಿದ್ದಾರೆ.

ಅತ್ಯಾಚಾರಕ್ಕೊಳಗಾಗಿದ್ದ ಪ್ರೇಮಲತಾ ಶಾಸ್ತ್ರಿಯವರ ಪತಿಯ ಸಹೋದರ ಶ್ಯಾಂಪ್ರಸಾದ್ ಶಾಸ್ತ್ರಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಪ್ರಕರಣದಲ್ಲಿ ಶ್ರೀ ಗಳೊಂದಿಗೆ ಇತರೆ 11 ಜನರ ವಿರುದ್ಧ ಪುತ್ತೂರಿನ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖಾಧಿಕಾರಿಗಳಿಗೆ ಶ್ಯಾಂಪ್ರಸಾದ್ ಶಾಸ್ತ್ರಿಗಳ ಆತ್ಮಹತ್ಯೆಗೂ ಮುನ್ನ ರಾಘವೇಶ್ವರ ಭಾರತೀ ಶ್ರೀಗಳಿಂದ ಪೋನ್ ಕರೆ ಬಂದಿದ್ದಾಗಿ ತನಿಖಾಧಿಕಾರಿ ಗಳಿಗೆ ಮಾಹಿತಿ ಸಿಕ್ಕಿತ್ತು. ಅಲ್ಲದೆ, ಅನಾಮಿಕರೊಬ್ಬರು ಕರೆ ಮಾಡಿ ಶ್ರೀಗಳ ವಿರುದ್ಧ ನೀವು ಮಾಡಿರುವ ಆರೋಪದ ಹಿನ್ನೆಲೆಯಲ್ಲಿ ನಿಮ್ಮ ಮನೆಯ ಮುಂದೆ ಪ್ರತಿಭಟನೆ ನಡೆಸುವುದಾಗಿ ಬೆದರಿಕೆ ಹಾಕಿದ್ದರು. ಇದರಿಂದ ಮನನೊಂದಿದ್ದ ಶ್ಯಾಂಪ್ರಸಾದ್ ಶಾಸ್ತ್ರಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಅತ್ಯಾಚಾರ ಹಾಗೂ ಬೆದರಿಕೆ ಕರೆ ಮಾಡಿದ್ದ ಆರೋಪವನ್ನು ಸರಕಾರ ಸಿಐಡಿ ತನಿಖೆಗೆ ವಹಿಸಿತ್ತು. ಈ ಸಂಬಂಧ ಬಂಧನದ ಭೀತಿಯಲ್ಲಿದ್ದ ಶ್ರೀಗಳು ನಗರದ ಸಿವಿಲ್ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು, ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಧೀಶ ಜಿ.ಬಿ.ಮುದಿಗೌಡರ್ ಅವರು 20 ದಿನಗಳ ಕಾಲ ಷರತ್ತುಬದ್ಧ ಮಧ್ಯಾಂತರ ಜಾಮೀನು ನೀಡಿ ಆದೇಶಿಸಿದ್ದಾರೆ.

ನ್ಯಾಯಾಲಯದ ಆದೇಶ ಉಲ್ಲಂಘಿಸಿದ ಶ್ರೀಗಳು: ತನ್ನ ವಿರುದ್ಧ ಅತ್ಯಾಚಾರ ಆರೋಪದಲ್ಲಿ ದಾಖಲಾಗಿರುವ ಪ್ರಕರಣವನ್ನು ರದ್ದುಗೊಳಿಸುವಂತೆ ರಾಘವೇಶ್ವರ ಶ್ರೀಗಳು ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿತ್ತು. ಅಲ್ಲದೆ, ಪ್ರಕರಣ ಸಂಬಂಧ ಬಂಧಿಸುವುದು, ಬಿಡುವುದು ತನಿಖಾಧಿಕಾರಿಗಳ ವಿವೇಚನೆಗೆ ಬಿಟ್ಟದ್ದು ಎಂದು ನ್ಯಾಯಪೀಠ ತನ್ನ ಆದೇಶದಲ್ಲಿ ಹೇಳಲಾಗಿತ್ತು.

ಹೈಕೋರ್ಟ್ ಆದೇಶದಿಂದಾಗಿ ಬಂಧನದ ಭೀತಿಯಲ್ಲಿದ್ದ ಶ್ರೀಗಳಿಗೆ ನಗರದ 36ನೆ ಸಿವಿಲ್ ಸೆಷನ್ಸ್ ನ್ಯಾಯಾಲಯ ನಿರೀಕ್ಷಣಾ ಜಾಮೀನು ಮಂಜೂರು ಮಾಡಿತ್ತು. ಅಲ್ಲದೆ, ಶ್ರೀಗಳು ವಿಚಾರಣೆಗಾಗಿ ತನಿಖಾಧಿಕಾರಿಗಳ ಮುಂದೆ ಖುದ್ದು ಹಾಜರಿಯಾಗಬೇಕು ಎಂದು ಆದೇಶಿಸಿತ್ತು. ಆದರೆ, ಶ್ರೀಗಳು ವಿಚಾರಣೆಗೆ ಹಾಜರಾಗದೆ ನ್ಯಾಯಾಲಯದ ಆದೇಶವನ್ನು ಉಲ್ಲಂಘಿಸಿದಂತಾಗಿದೆ.

ನೋಟಿಸ್ ಜಾರಿ: ಅತ್ಯಾಚಾರ ಆರೋಪ ಎದುರಿಸು ತ್ತಿರುವ ರಾಮಚಂದ್ರಾಪುರ ಮಠದ ರಾಘವೇಶ್ವರ ಶ್ರೀಗಳಿಗೆ ವಿಚಾರಣೆಗೆ ಖುದ್ದು ಹಾಜರಾಗುವಂತೆ ಸೂಚಿಸಿ ಸಿಐಡಿ ಪೊಲೀಸರು ರವಿವಾರ ನೋಟಿಸ್ ಜಾರಿ ಮಾಡಿ 24 ಗಂಟೆಯೊಳಗೆ ವಿಚಾರಣೆಗೆ ಆಗಮಿಸಬೇಕೆಂದು ಸೂಚನೆ ನೀಡಿದ್ದರು.

‘ಅತ್ಯಾಚಾರ ಆರೋಪದಲ್ಲಿ ತನಿಖೆಗೆ ಹಾಜರಿಯಾಗ ಬೇಕಾಗಿದ್ದ ರಾಘವೇಶ್ವರ ಭಾರತಿ ಶ್ರೀಗಳಿಗೆ ಎರಡು ದಿನಗಳ ಕಾಲ ವಿಚಾರಣೆಗೆ ಖುದ್ದು ಹಾಜರಿಯಾಗುವುದಕ್ಕೆ ವಿನಾಯಿತಿ ನೀಡುವಂತೆ ಶ್ರೀಗಳ ಪರ ನ್ಯಾಯವಾದಿ ಮೋಹನ್ ಹೆಗ್ಡೆ ಮನವಿ ಮಾಡಿದ್ದಾರೆ’

Write A Comment