ವಿಶಾಖಪಟ್ಟಣ/ಭುವನೇಶ್ವರ, ಅ.13: ‘ಹುದ್‌ಹುದ್’ ಚಂಡಮಾರುತದ ಪ್ರಕೋಪಕ್ಕೆ ಒಳಗಾಗಿರುವ ಆಂಧ್ರಪ್ರದೇಶ ಮತ್ತು ಒಡಿಶಾ ರಾಜ್ಯಗಳಲ್ಲಿ ವ್ಯಾಪಕ ಪ್ರಮಾಣದಲ್ಲಿ ಹಾನಿಯಾಗಿದೆ.
ಈ ಎರಡೂ ರಾಜ್ಯಗಳ ಒಂದು ಡಜನ್‌ಗೂ ಹೆಚ್ಚು ಜಿಲ್ಲೆಗಳಲ್ಲಿ ಸಾವಿರಾರು ಜನರು ಮನೆಮಠ ಕಳೆದುಕೊಂಡಿದ್ದಾರೆ. ರಸ್ತೆ, ವಿದ್ಯುತ್, ದೂರಸಂಪರ್ಕ ಸೇರಿದಂತೆ ಮೂಲಸೌಕರ್ಯ ವ್ಯವಸ್ಥೆಗಳು ತೀರಾ ಹದಗೆಟ್ಟಿವೆ. ಚಂಡಮಾರುತವು ಅಂತಿಮವಾಗಿ ಅಪ್ಪಳಿಸಿದ ಆಂಧ್ರಪ್ರದೇಶ ಕರಾವಳಿ ತೀರದ ವಿಶಾಖಪಟ್ಟಣ ಜಿಲ್ಲೆಯು ಯುದ್ಧಗ್ರಸ್ತ ಪ್ರದೇಶದಂತೆ ಕಂಡು ಬರುತ್ತಿದೆ.
ಎರಡೂ ರಾಜ್ಯಗಳಲ್ಲಿ ಚಂಡಮಾರುತದಿಂದ ಈವರೆಗೆ ಒಟ್ಟು ಇಪ್ಪತ್ತೊಂದು ಜನರು ಪ್ರಾಣ ಕಳೆದುಕೊಂಡಿದ್ದಾರೆ. ಚಂಡಮಾರುತ ಪೀಡಿತ ಶ್ರೀಕಾಕುಲಂ, ವಿಶಾಖಪಟ್ಟಣ ಮತ್ತು ವಿಜಯನಗರಂ ಜಿಲ್ಲೆಗಳಲ್ಲಿ ಮಗುವೊಂದು ಸೇರಿದಂತೆ ಆರು ಜನರು ಮೃತರಾಗಿದ್ದಾರೆ ಎಂದು ಆಂಧ್ರ ಪ್ರದೇಶದ ನೈಸರ್ಗಿಕ ವಿಕೋಪ ನಿರ್ವಹಣಾ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ. ರಾಜ್ಯದಲ್ಲಿ ಲಕ್ಷಾಂತರ ಜನರು ತಾತ್ಕಾಲಿಕ ಶಿಬಿರಗಳಲ್ಲಿ ವಾಸಿಸುತ್ತಿದ್ದಾರೆ.ಎರಡೂ ರಾಜ್ಯಗಳಲ್ಲಿ ಅಂದಾಜು 50 ಸಾವಿರ ಮನೆಗಳು ಹಾನಿಗೀಡಾಗಿವೆ. ರಸ್ತೆ, ವಿದ್ಯುತ್, ದೂರಸಂಪರ್ಕ ಜಾಲಗಳು ಅಸ್ತವ್ಯಸ್ತಗೊಂಡಿವೆ.
ಆಂಧ್ರಪ್ರದೇಶದಲ್ಲಿ ವಿಶಾಖಪಟ್ಟಣವಲ್ಲದೆ, ಶ್ರೀಕಾಕುಲಂ, ವಿಜಯನಗರಂ ಮತ್ತು ಪೂರ್ವ ಗೋದಾವರಿ ಜಿಲ್ಲೆಗಳಲ್ಲಿ ವ್ಯಾಪಕ ಪ್ರಮಾಣದಲ್ಲಿ ಹಾನಿಯುಂಟಾಗಿದೆ. ಒಡಿಶಾದ ಗಜಪತಿ, ಕೋರಾಪುಟ್, ಮಲ್ಕಾನ್‌ಗಿರಿ ಜಿಲ್ಲೆಗಳಲ್ಲೂ ವ್ಯಾಪಕ ಹಾನಿಯಾಗಿವೆ. ಇಂದು ಪ್ರಧಾನಿ ಭೇಟಿ ಎರಡೂ ರಾಜ್ಯಗಳಲ್ಲಿನ ಪರಿಸ್ಥಿತಿಗಳ ಮೇಲೆ ಕೇಂದ್ರ ಸರಕಾರ ನಿಗಾ ಇರಿಸಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ವಿಶಾಖಪಟ್ಟಣಕ್ಕೆ ಭೇಟಿ ನೀಡುವ ಕಾರ್ಯಕ್ರಮವಿದೆ. ಚಂಡಮಾರುತದ ಹಿನ್ನೆಲೆ ಯಲ್ಲಿ ವ್ಯಾಪಕ ಮಳೆ ಬೀಳುತ್ತಿರುವ ಬಿಹಾರ, ಜಾರ್ಖಂಡ್, ಪಶ್ಚಿಮ ಬಂಗಾಳ, ಉತ್ತರಪ್ರದೇಶ, ಮಧ್ಯಪ್ರದೇಶ ಮತ್ತು ಛತ್ತೀಸ್‌ಗಡ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆಗೆ ಗೃಹ ಸಚಿವ ರಾಜ್‌ನಾಥ್ ಸಿಂಗ್ ದೂರವಾಣಿಯಲ್ಲಿ ಮಾತನಾಡಿದರು. ಚಂಡಮಾರುತದ ಪರಿಣಾಮವಾಗಿ ಜಾರ್ಖಂಡ್‌ನಲ್ಲಿ 300ಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿದೆ ಎಂದು ವರದಿಯಾಗಿದೆ. ಆಂಧ್ರಪ್ರದೇಶದ ನಾಲ್ಕು ಉತ್ತರ ಕರಾವಳಿ ಜಿಲ್ಲೆಗಳು ಮತ್ತು ಒಡಿಶಾದ ಹಲವು ಪ್ರದೇಶಗಳಲ್ಲಿ ಮುಂದಿನ 24 ಗಂಟೆಗಳ ತನಕ ಭಾರೀ ಮಳೆ ಬೀಳಲಿದೆ ಎಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ.
ಚಂಡಮಾರುತ ಅಪ್ಪಳಿಸಿದ ವಿಶಾಖಪಟ್ಟಣ ಜಿಲ್ಲೆಯಲ್ಲಿ ಈಗ ಎಲ್ಲೆಡೆ ಮರಗಳು ಉರುಳಿ ಬಿದ್ದಿವೆ. ದೂರಸಂಪರ್ಕ ಟವರ್‌ಗಳು, ವಿದ್ಯುತ್ ಟ್ರಾನ್ಸ್‌ಫಾರ್ಮರ್‌ಗಳು, ಜಾಹೀರಾತು ಫಲಕಗಳು ಎಲ್ಲೆಂದರಲ್ಲಿ ರಸ್ತೆಗಳಲ್ಲಿ ಬಿದ್ದಿವೆ. ಇದರಿಂದ ವಾಹನಗಳು ಮತ್ತು ಜನರ ಓಡಾಟಕ್ಕೆ ತೀವ್ರ ತೊಂದರೆಯಾಗಿದೆ.
ವಿಶಾಖಪಟ್ಟಣ ವಿಮಾನನಿಲ್ದಾಣದಲ್ಲಿ ತೀವ್ರ ಬಿರುಗಾಳಿ ಹೊಡೆತಕ್ಕೆ ಸಿಲುಕಿರುವ ಕಟ್ಟಡವೊಂದರ ಮೇಲ್ಚಾವಣಿ ಹಾರಿ ಹೋಗಿದೆ. ಶನಿವಾರ ರಾತ್ರಿಯಿಂದೀಚೆಗೆ ನಗರದಲ್ಲಿ ವಿದ್ಯುತ್ ಮತ್ತು ದೂರಸಂಪರ್ಕ ಸೌಲಭ್ಯಗಳು ಕಡಿದು ಹೋಗಿವೆ. ಹಲವು ಪ್ರದೇಶಗಳಲ್ಲಿ ಜನರು ರೇಡಿಯೊ ಮೂಲಕ ಚಂಡಮಾರುತಕ್ಕೆ ಸಂಬಂಧಿಸಿದ ಮಾಹಿತಿಗಳನ್ನು ಪಡೆದುಕೊಳ್ಳಬೇಕಾಯಿತು.
ಶನಿವಾರ ರಾತ್ರಿಯಿಂದೀಚೆಗೆ ಮನೆಯೊಳಗೆ ಉಳಿದುಕೊಂಡಿದ್ದ ಜನರು ಸೋಮವಾರ ಮಳೆಯ ಪ್ರಮಾಣ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಹೊರಬಂದರು. ‘ನಗರದಲ್ಲಿ ವಿದ್ಯುತ್, ನೀರು ಇಲ್ಲವೇ ಆಹಾರ ಲಭಿಸುತ್ತಿಲ್ಲ. ಪೆಟ್ರೋಲ್ ಕೂಡ ಇಲ್ಲ. ರಸ್ತೆಗಳಲ್ಲಿ ಓಡಾಡುವಂತಿಲ್ಲ. ಇಲ್ಲಿ ಒಂದು ದಿನ ಕೂಡ ಬದುಕುವುದು ಸಾಧ್ಯವಿಲ್ಲ’ ಎಂದು ನಗರದ ನಿವಾಸಿಯೊಬ್ಬರು ಹೇಳಿದ್ದಾರೆ.
ನಗರದಲ್ಲಿ ತರಕಾರಿ, ಹಣ್ಣುಗಳು ಮತ್ತು ಇತರ ಆಹಾರ ವಸ್ತುಗಳ ಪೂರೈಕೆಯಲ್ಲಿ ಕೊರತೆ ಉಂಟಾಗಿದೆ ಎಂದು ಅಲ್ಲಿನ ನಿವಾಸಿಗಳು ದೂರಿದ್ದಾರೆ.
ಪರಿಹಾರ ಕಾರ್ಯಾಚರಣೆ: ಈ ಮಧ್ಯೆ ರಸ್ತೆಗಳಲ್ಲಿ ಬಿದ್ದಿರುವ ಮರಗಳು, ವಿದ್ಯುತ್ ಕಂಬಗಳು ಮತ್ತು ಇತರ ವಸ್ತುಗಳನ್ನು ತೆರವುಗೊಳಿಸುವ ಕಾರ್ಯಾ ಚರಣೆಗಳು ಭರದಿಂದ ಸಾಗಿದೆ. ಕಾರ್ಮಿಕರ ನೆರವಿನಿಂದ ಸ್ಥಳೀಯ ಸಂಸ್ಥೆಗಳ ಸಿಬ್ಬಂದಿ ಮತ್ತು ಅಧಿಕಾರಿಗಳು ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ.
ಪರಿಹಾರ ಕಾರ್ಯಾಚರಣೆಗಳ ಮೇಲೆ ನಿಗಾ ಇರಿಸುವ ಉದ್ದೇಶದಿಂದ ಮುಖ್ಯಮಂತ್ರಿ ಎನ್.ಚಂದ್ರಬಾಬು ನಾಯ್ಡು ಅವರು ರವಿವಾರ ವಿಶಾಖಪಟ್ಟಣದಲ್ಲಿ ಮೊಕ್ಕಾಂ ಹೂಡಿದ್ದರು. ರಸ್ತೆ, ವಿದ್ಯುತ್, ದೂರವಾಣಿ ಸಂಪರ್ಕಗಳನ್ನು ಕಡಿದುಕೊಂಡಿರುವ ಗ್ರಾಮಗಳು ಮತ್ತು ನಗರಗಳಿಗೆ ಈ ಸೌಲಭ್ಯಗಳನ್ನು ಆದಷ್ಟು ಬೇಗ ಒದಗಿಸುವುದು ಸರಕಾರದ ಮೊದಲ ಆದ್ಯತೆಯಾಗಿದೆ ಎಂದು ಅವರು ಸೋಮವಾರ ರಾಜಮಹೇಂದ್ರಿಯಲ್ಲಿ ವರದಿಗಾರರೊಂದಿಗೆ ಮಾತನಾಡುತ್ತ ತಿಳಿಸಿದರು.
ಚಂಡಮಾರುತ ಪೀಡಿತ ಪ್ರದೇಶಗಳಲ್ಲಿ ನಾಯ್ಡು ಅವರು ಸೋಮವಾರ ವೈಮಾನಿಕ ಸಮೀಕ್ಷೆ ನಡೆಸಿದರು. ಜೊತೆಗೆ ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಗಳ ಮೇಲ್ವಿಚಾರಣೆಗಾಗಿ ಮೂವರು ಹಿರಿಯ ಐಪಿಎಸ್ ಅಧಿಕಾರಿಗಳನ್ನು ಅವರು ನಿಯೋಜಿಸಿದ್ದಾರೆ. ಉಪಮುಖ್ಯಮಂತ್ರಿ ಎನ್.ಚಿನ್ನರಾಜಪ್ಪ, ಹಣಕಾಸು ಸಚಿವ ವೈ.ರಾಮಕೃಷ್ಣುಡು ಮತ್ತು ಇತರ ಸಚಿವರು ಮುಖ್ಯಮಂತ್ರಿ ಜೊತೆಗೆ ಇದ್ದರು.
ವಿಶಾಖಪಟ್ಟಣ ನಗರದಲ್ಲಿ ತ್ವರಿತ ಪರಿಹಾರ ಕಾರ್ಯಾಚರಣೆಗಳನ್ನು ಕೈಗೊಳ್ಳಲು ತಮ್ಮ ಸಂಪುಟ ಸಹೋದ್ಯೋಗಿಗಳು ಮತ್ತು ಹಿರಿಯ ಅಧಿಕಾರಿಗಳನ್ನು ಮುಖ್ಯಮಂತ್ರಿಗಳು ನಿಯೋಜಿಸಿದ್ದಾರೆ. ವಿಶಾಖಪುಟ್ಟಣದ ನೌಕಾನೆಲೆಯಲ್ಲಿರುವ ಯುದ್ಧನೌಕೆಗಳು, ಅಣ್ವಸ್ತ್ರ ಜಲಾಂತರ್ಗಾಮಿಗಳು ಸುರಕ್ಷಿತವಾಗಿವೆ. ವಿಶಾಲಪಟ್ಟಣ ವಿಮಾನ ನಿಲ್ದಾಣವು ಮುಂದಿನ ಕೆಲವು ದಿನಗಳ ಕಾಲ ಕಾರ್ಯಾಚರಣೆ ನಡೆಸುವುದಿಲ್ಲ ಎಂದು ತಿಳಿಸಲಾಗಿದೆ.