ಕರ್ನಾಟಕ

ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ: ಸಿಎಂ

Pinterest LinkedIn Tumblr

CM_______________

ಸುಪ್ರೀಂ ಕೋರ್ಟ್‌ಗೆ ಮರು ಪರಿಶೀಲನಾ ಅರ್ಜಿ

ನವೆಂಬರ್ 1ರಂದು ‘ಬೆಳಗಾವಿ’ ಮರು ನಾಮಕರಣ

ಎಂಇಎಸ್ ನಿಷೇಧ ಪರಿಶೀಲನೆ

ಕನ್ನಡಪರ ಸಂಘಟನೆಗಳ ಮೊಕದ್ದಮೆ ಹಿಂಪಡೆಯಲು ಚಿಂತನೆ

ಬೆಂಗಳೂರು, ಅ. 10: ಕನ್ನಡ ಭಾಷೆ, ಗಡಿ, ನೆಲ, ಜಲ ಸಂರಕ್ಷಣೆಗೆ ರಾಜ್ಯ ಸರಕಾರ ಬದ್ಧ. ನಾಡಿಗೆ ಸೇರಬೇಕಾದ ಒಂದಿಂಚು ಭೂಮಿ, ಒಂದು ಹನಿ ನೀರನ್ನು ನೆರೆ ರಾಜ್ಯಗಳಿಗೆ ಬಿಡುವ ಪ್ರಶ್ನೆಯೇ ಇಲ್ಲ. ಕರ್ನಾಟಕದ ಕಾವಲುಗಾರನ ರೀತಿಯಲ್ಲಿ ರಾಜ್ಯ ಸರಕಾರ ಕಾರ್ಯ ನಿರ್ವಹಿಸಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆಭಯ ನೀಡಿದ್ದಾರೆ.

ಶುಕ್ರವಾರ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಗಡಿ ಸಮಸ್ಯೆಯ ಸಂಬಂಧ ಕನ್ನಡ ಪರ ಹೋರಾಟಗಾರರು, ಸಾಹಿತಿಗಳು, ಕಾನೂನು ತಜ್ಞರು ಹಾಗೂ ಗಡಿ ಭಾಗದ ಸಚಿವರು, ಶಾಸಕರು, ಜನಪ್ರತಿನಿಧಿಗಳೊಂದಿಗೆ ಸುದೀರ್ಘ ಸಭೆಯ ಬಳಿಕ ಅವರು ಮಾತನಾಡುತ್ತಿದ್ದರು.

ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ. ಗಡಿ ವಿವಾದ ಸಂಬಂಧ ಮಹಾಜನ್ ವರದಿ ಜಾರಿಯಾಗಬೇಕೆಂದು ಒತ್ತಾಯಿಸಿದ ಸಿದ್ದರಾಮಯ್ಯ, ಸುಪ್ರೀಂ ಕೋರ್ಟ್‌ಗೆ ಪುನರ್ ಪರಿಶೀಲನೆ ಅರ್ಜಿ ಸಲ್ಲಿಸಲು ಸಭೆಯಲ್ಲಿ ಸರ್ವಾನುಮತದ ತೀರ್ಮಾನ ಕೈಗೊಳ್ಳಲಾಗಿದೆ ಎಂದು ವಿವರಿಸಿದರು.

‘ಬೆಳಗಾಂ’ನ್ನು ನವೆಂಬರ್ 1ರ ಕನ್ನಡ ರಾಜ್ಯೋತ್ಸವದಂದು ‘ಬೆಳಗಾವಿ’ಯೆಂದು ಮರು ನಾಮಕರಣ ಮಾಡಲಾಗುವುದು. ವಿಧಾನಮಂಡಲ ಅಧಿವೇಶನದ ವೇಳೆ ಗಡಿ ವಿವಾದ ಸಂಬಂಧ ಸಭೆಯೊಂದನ್ನು ಬೆಳಗಾವಿಯಲ್ಲೇ ನಡೆಸಲಾಗುವುದೆಂದು ಸಿದ್ದರಾಮಯ್ಯ ತಿಳಿಸಿದರು.

ಬೆಳಗಾವಿ ಭಾಗದಲ್ಲಿನ ಕನ್ನಡಿಗರು ಮತ್ತು ಕನ್ನಡ ಹೋರಾಟಗಾರರಲ್ಲಿನ ‘ಅನಾಥ’ ಮನೋಭಾವ ಸಲ್ಲ. ಅವರೊಂದಿಗೆ ಸರಕಾರ ಎಂದೆಂದಿಗೂ ಇದೆಯೆಂದು ಆಭಯ ನೀಡಿದ ಸಿದ್ದರಾಮಯ್ಯ, ಗಡಿ ವಿಷಯ ಸಂಬಂಧ ಕನ್ನಡ ಪರ ಹೋರಾಟಗಾರರ ಮೇಲಿನ ಮೊಕದ್ದಮೆಗಳನ್ನು ಹಿಂಪಡೆಯಲು ಪರಿಶೀಲಿಸಿ ತೀರ್ಮಾನಿಸಲಾಗುವುದು ಎಂದು ಹೇಳಿದರು.

ಬೆಳಗಾವಿ ಸೇರಿ ಗಡಿಭಾಗದಲ್ಲಿ ಶಾಂತಿ ಕದಡಲು ಯತ್ನಿಸುತ್ತಿರುವ ಮಹಾರಾಷ್ಟ್ರ ಏಕೀಕರಣ ಸಮಿತಿ(ಎಂಇಎಸ್)ಯನ್ನು ನಿಷೇಧಿಸುವ ಸಂಬಂಧ ಕಾನೂನು ಚೌಕಟ್ಟಿನಲ್ಲಿ ಪರಿಶೀಲನೆ ನಡೆಸಲಾಗುವುದು ಎಂದ ಸಿದ್ದರಾಮಯ್ಯ, ಗಡಿ ಪ್ರದೇಶದಲ್ಲಿನ ಜನರ ಅಭಿವೃದ್ಧಿಗೆ ಸರಕಾರ ಅಗತ್ಯ ಕ್ರಮ ಕೈಗೊಳ್ಳಲಿದೆ ಎಂದು ಭರವಸೆ ನೀಡಿದರು.

ಸಂಸತ್‌ಗೆ ಮಾತ್ರ ಅಧಿಕಾರ: ರಾಜ್ಯದ ಗಡಿ ಪ್ರದೇಶದಲ್ಲಿನ 814 ಗ್ರಾಮಗಳು ಮಹಾರಾಷ್ಟ್ರಕ್ಕೆ ಸೇರಿಸಬೇಕೆಂದು ಕೋರಿ ಸುಪ್ರೀಂ ಕೋರ್ಟ್‌ನಲ್ಲಿ ‘ಮಹಾ’ ಸರಕಾರ 2004ರ ಕೇಂದ್ರ ಸರಕಾರ ಹಾಗೂ ರಾಜ್ಯ ಸರಕಾರವನ್ನು ಪ್ರತಿವಾದಿಯನ್ನಾಗಿ ಮಾಡಿ ದಾವೆ ಹೂಡಿತ್ತು.

ಈ ದಾವೆಯನ್ನು ವಿರೋಧಿಸಿ ಕರ್ನಾಟಕ ಸರಕಾರ ಸುಪ್ರೀಂ ಕೋರ್ಟ್‌ಗೆ ಲಿಖಿತ ಹೇಳಿಕೆ ಸಲ್ಲಿಸಿದ್ದು, ಈಗಾಗಲೇ ಭಾಷಾವಾರು ಆಧಾರದ ಮೇಲೆ ರಾಜ್ಯಗಳ ವಿಂಗಡಣೆ ವೇಳೆ ಕರ್ನಾಟಕಕ್ಕೆ ಸೇರಿದ್ದಾಗಿದೆ. ಮಹಾಜನ್ ಆಯೋಗದ ವರದಿ ಅಂತಿಮ. ಹೀಗಾಗಿ ರಾಜ್ಯದಲ್ಲಿನ ಗಡಿ ಗ್ರಾಮಗಳನ್ನು ಮಹಾರಾಷ್ಟ್ರಕ್ಕೆ ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲವೆಂದು ಸ್ಪಷ್ಟಪಡಿಸಲಾಗಿದೆ.

ಸಂವಿಧಾನದ 3ನೆ ಅನುಚ್ಛೇದದ ಮೇರೆಗೆ ರಾಜ್ಯದ ಗಡಿ ಸಮಸ್ಯೆಗಳ ಸಂಬಂಧ ಸಂಸತ್‌ಗೆ ಮಾತ್ರ ಅಧಿಕಾರವಿದ್ದು, ಮಹಾ ಸರಕಾರ ಸಲ್ಲಿಸಿರುವ ದಾವೆ ಊರ್ಜಿತವಲ್ಲ. ಹೀಗಾಗಿ ದಾವೆ ವಜಾಗೊಳಿಸಲು ಕೋರಲಾಗಿದೆ. 2012ರ ಡಿ.13ಕ್ಕೆ ಕೋರ್ಟ್ ದಾವೆ ಇತ್ಯರ್ಥಕ್ಕೆ 4 ಪ್ರಾಥಮಿಕ ಹಾಗೂ 21 ಮುಖ್ಯ ವಿವಾದಾಂಶಗಳನ್ನು ರೂಪಿಸಲಾಗಿರುತ್ತದೆ.

ಈ ಮಧ್ಯೆ ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಜತ್ತಾ ತಾಲೂಕಿನಲ್ಲಿ ಕನ್ನಡಿಗರು ವಾಸಿಸುವ 44 ಗ್ರಾಮಗಳಲ್ಲಿ ಮರಾಠಿ ಶಾಲೆಗಳನ್ನು ಆರಂಭಿಸಲು ‘ಮಹಾ’ ಸರಕಾರ ಮುಂದಾಗಿತ್ತು. ಆ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಮಧ್ಯಾಂತರ ಅರ್ಜಿ ಸಲ್ಲಿಸಿ ಮರಾಠಿ ಶಾಲೆಗಳನ್ನು ಪ್ರಾರಂಭಿಸದಂತೆ ‘ಮಹಾ’ ಸರಕಾರಕ್ಕೆ ನಿರ್ದೇಶನ ನೀಡಲು ಕೋರಲಾಗಿತ್ತು.

ಆದರೆ, ಸುಪ್ರೀಂ ಕೋರ್ಟ್ ಪ್ರಾಥಮಿಕ ಹಾಗೂ ಮುಖ್ಯ ವಿವಾದಾಂಶಗಳನ್ನು ಒಟ್ಟಿಗೆ ವಿಚಾರಣೆಗೆ ಕೈಗೆತ್ತಿಕೊಳ್ಳಬಹುದೆಂದು ತಿಳಿಸಿ ಪ್ರಕರಣವನ್ನು ಸಾಕ್ಷಿದಾರರ ವಿಚಾರಣೆಗೆ ಹಾಕಿಕೊಂಡಿರುತ್ತದೆ. ಅಲ್ಲದೆ, ಜಮ್ಮು-ಕಾಶ್ಮೀರ ಹೈಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಾಧೀಶ ಮನಮೋಹನ್ ಸರೀನ್ ಅವರನ್ನು ನೇಮಕ ಮಾಡಿದ್ದು ಕಾಲಮಿತಿಯೊಳಗೆ ವರದಿ ಸಲ್ಲಿಸಲು ಆದೇಶಿಸಿತ್ತು.

ಇದನ್ನು ಸಾರ್ವಜನಿಕರು ನ್ಯಾಯಾಧೀಶರ ನೇತೃತ್ವದ ಸಮಿತಿ ಸ್ಥಳ ಪರಿಶೀಲನೆ ಮಾಡಲಿದೆಯೆಂದು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆಂದ ಸಿದ್ದರಾಮಯ್ಯ, ಮೇಲ್ಕಂಡ ಮಹಾ ಸರಕಾರದ ದಾವೆಯಲ್ಲಿ ರಾಜ್ಯದ ನಿಲುವನ್ನು ಬೆಂಬಲಿಸುವ 27 ಸಂಪುಟಗಳಲ್ಲಿ ಈಗಾಗಲೇ ದಾಖಲೆಗಳನ್ನು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಲಾಗಿದೆಯೆಂದರು. ಸಚಿವರಾದ ಎಚ್.ಕೆ.ಪಾಟೀಲ್, ಸತೀಶ್ ಜಾರಕಿಹೊಳಿ, ಎಸ್.ಆರ್. ಪಾಟೀಲ್, ಅಡ್ವೋಕೇಟ್ ಜನರಲ್ ಪ್ರೊ.ರವಿವರ್ಮ ಕುಮಾರ್, ಬಿ.ವಿ. ಆಚಾರ್ಯ, ನ್ಯಾ.ಕೋ.ಚನ್ನಬಸಪ್ಪ, ಪಾಟೀಲ್ ಪುಟ್ಟಪ್ಪ, ಜ್ಞಾನಪೀಠ ಪುರಸ್ಕೃತ ಡಾ. ಚಂದ್ರಶೇಖರ ಕಂಬಾರ, ಚಿದಾನಂದ ಮೂರ್ತಿ, ಪ್ರೊ.ವೆಂಕಟಸುಬ್ಬಯ್ಯ, ವಾಟಾಳ್ ನಾಗರಾಜ್, ನಾರಾಯಣಗೌಡ, ಪ್ರವೀಣ್ ಕುಮಾರ್ ಶೆಟ್ಟಿ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.

Write A Comment