ಅಂತರಾಷ್ಟ್ರೀಯ

ಭಾರತಕ್ಕೆ ಶಾಂತಿ ನೊಬೆಲ್; ಪ್ರಶಸ್ತಿ ಹಂಚಿಕೊಂಡ ಕೈಲಾಸ್ ಸತ್ಯಾರ್ಥಿ-ಮಲಾಲಾ: ಮಕ್ಕಳ ಶಿಕ್ಷಣ ಕಾರ್ಯಕರ್ತರಿಗೆ ಸಿಕ್ಕಿದ ಗೌರವ

Pinterest LinkedIn Tumblr

mala

ಓಸ್ಲೊ, ಅ.10: ಭಾರತೀಯ ಉಪಖಂಡದಲ್ಲಿ ಮಕ್ಕಳ ಶಿಕ್ಷಣದ ಹಕ್ಕು ಕ್ಷೇತ್ರದಲ್ಲಿ ಅವಿರತವಾಗಿ ದುಡಿಯುತ್ತಿರುವ ಭಾರತದ ಎನ್‌ಜಿಒ ಕಾರ್ಯಕರ್ತ ಕೈಲಾಸ್ ಸತ್ಯಾರ್ಥಿ ಮತ್ತು ಪಾಕಿಸ್ತಾನದ ಶಾಲಾ ಬಾಲಕಿ ಮಲಾಲಾ ಯೂಸುಫ್‌ಝಾಯಿ 2014ರ ನೊಬೆಲ್ ಶಾಂತಿ ಪುರಸ್ಕಾರಕ್ಕೆ ಪಾತ್ರರಾಗಿದ್ದಾರೆ.

ನೊಬೆಲ್ ಪ್ರಶಸ್ತಿಯ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಭಾರತ-ಪಾಕಿಸ್ತಾನ ಹಾಗೂ ಹಿಂದೂ-ಮುಸ್ಲಿಂ ಜೋಡಿಯೊಂದು ಪ್ರಶಸ್ತಿಯನ್ನು ಹಂಚಿಕೊಂಡಿದೆ.

60ರ ಪ್ರಾಯದ ಸತ್ಯಾರ್ಥಿ ಭಾರತದಲ್ಲಿ ‘ಬಚಪನ್ ಬಚಾವೊ ಆಂದೋಲನ್’ ಎಂಬ ಸರಕಾರೇತರ ಸಂಘಟನೆಯೊಂದನ್ನು ನಡೆಸುತ್ತಿದ್ದಾರೆ. ಬಲವಂತದ ದುಡಿಮೆ ಮತ್ತು ಕಳ್ಳಸಾಗಣೆಯಿಂದ ಮಕ್ಕಳನ್ನು ರಕ್ಷಿಸುವ ಕೆಲಸದಲ್ಲಿ ಅವರು ತನ್ನನ್ನು ತೊಡಗಿಸಿಕೊಂಡಿದ್ದಾರೆ.

17ರ ಪ್ರಾಯದ ಪಾಕಿಸ್ತಾನದ ಶಾಲಾ ಬಾಲಕಿ ಮಲಾಲಾ ಯೂಸುಫ್‌ಝಾಯಿಯ ಮೇಲೆ ತಾಲಿಬಾನ್ ಉಗ್ರಗಾಮಿಗಳು ಗುಂಡಿನ ದಾಳಿ ನಡೆಸಿದ ನಂತರ ಆಕೆ ಬೆಳಕಿಗೆ ಬಂದಿದ್ದಳು. ಹೆಣ್ಣು ಮಕ್ಕಳ ಶಿಕ್ಷಣವನ್ನು ಮಲಾಲಾ ಪ್ರತಿಪಾದಿಸುತ್ತಿದ್ದಳು. ಇದಕ್ಕಾಗಿ ಆಕೆ ಪ್ರಾಣಘಾತಕ ಗುಂಡಿನ ದಾಳಿಗೆ ಒಳಗಾಗಿ ಪ್ರಾಣಾಪಾಯದಿಂದ ಪಾರಾಗಿದ್ದಳು.

ಈ ವರ್ಷದ ನೊಬೆಲ್ ಶಾಂತಿ ಪುರಸ್ಕಾರಕ್ಕಾಗಿ ಈ ಇಬ್ಬರು ಶಿಕ್ಷಣ ಕಾರ್ಯಕರ್ತರನ್ನು ನಾರ್ವೆಯ ನೊಬೆಲ್ ಶಾಂತಿ ಪ್ರಶಸ್ತಿ ಸಮಿತಿಯು ಆಯ್ಕೆ ಮಾಡಿದೆ.

‘ಮಕ್ಕಳು ಮತ್ತು ಯುವಜನತೆಯ ಹತ್ತಿಕ್ಕುವಿಕೆಯ ವಿರುದ್ಧದ ಹೋರಾಟಕ್ಕಾಗಿ ಹಾಗೂ ಎಲ್ಲ ಮಕ್ಕಳ ಶಿಕ್ಷಣದ ಹಕ್ಕುಗಳಿಗಾಗಿ ಹೋರಾಡುತ್ತಿರುವ ಕೈಲಾಸ್ ಸತ್ಯಾರ್ಥಿ ಮತ್ತು ಮಲಾಲಾ ಯೂಸುಫ್‌ಝಾಯಿಗೆ 2014ರ ನೊಬೆಲ್ ಶಾಂತಿ ಪುರಸ್ಕಾರ ನೀಡಲು ನಾರ್ವೆಯ ನೊಬೆಲ್ ಸಮಿತಿ ನಿರ್ಧರಿಸಿದೆ’ ಎಂದು ಪ್ರಶಸ್ತಿ ಆಯ್ಕೆ ಸಮಿತಿ ತಿಳಿಸಿದೆ.ಸತ್ಯಾರ್ಥಿ ಮಹಾತ್ಮಾ ಗಾಂಧೀಜಿಯವರ ಸಂಪ್ರದಾಯವನ್ನು ಮುಂದುವರಿಸುತ್ತ ಹಲವು ಬಗೆಯ ಶಾಂತಿಯುತ ಪ್ರತಿಭಟನೆಗಳನ್ನು ಕೈಗೊಂಡಿದ್ದಾರೆ. ‘ಹಣಕಾಸಿನ ಲಾಭಕ್ಕಾಗಿ ಮಕ್ಕಳ ಶೋಷಣೆಯನ್ನು ತಡೆಯುವ ದಿಸೆಯಲ್ಲಿ ಕೆಲಸ ಮಾಡುತ್ತಿದ್ದಾರೆ’ ಎಂದು ನೊಬೆಲ್ ಸಮಿತಿ ಹೇಳಿದೆ.

ತೀವ್ರವಾದದ ವಿರುದ್ಧ ಮತ್ತು ಶಿಕ್ಷಣಕ್ಕಾಗಿ ಸಮಾನ ಹೋರಾಟದಲ್ಲಿ ಭಾರತ ಮತು ಪಾಕಿಸ್ತಾನಿ ಹಾಗೂ ಹಿಂದೂ ಮತ್ತು ಮುಸ್ಲಿಂ ಕೈಜೋಡಿಸಿರುವುದರಲ್ಲಿ ಬಹಳ ಪ್ರಾಮುಖ್ಯವಾದ ಅಂಶವೊಂದು ಅಡಗಿದೆ ಎಂದು ತಾವು ಭಾವಿಸಿದ್ದೇವೆಂದು ನೊಬೆಲ್ ಸಮಿತಿ ತಿಳಿಸಿದೆ.

ಮಲಾಲಾ ಹೆಸರು ಕಳೆದ ವರ್ಷವೂ ನೊಬೆಲ್ ಶಾಂತಿ ಪುರಸ್ಕಾರಕ್ಕೆ ನಾಮಕರಣಗೊಂಡಿತ್ತು. ತಾಲಿಬಾನ್ ಗುಂಡಿನ ದಾಳಿಯ ನಂತರವೂ ಆಕೆ ಅಭೂತಪೂರ್ವ ಧೈರ್ಯ ತೋರಿಸಿದ್ದಾಳೆ. ಪಾಕಿಸ್ತಾನದಂತಹ ದೇಶದಲ್ಲಿ ಮಕ್ಕಳ ಹಕ್ಕುಗಳು ಮತ್ತು ಹೆಣ್ಣುಮಕ್ಕಳ ಶಿಕ್ಷಣಕ್ಕಾಗಿ ಆಂದೋಲನ ಮುಂದುವರಿಸಿಕೊಂಡು ಹೋಗುವ ದೃಢನಿರ್ಧಾರವನ್ನು ಆಕೆ ವ್ಯಕ್ತಪಡಿಸಿದ್ದಾಳೆ ಎಂದು ನೊಬೆಲ್ ಸಮಿತಿ ಹೇಳಿದೆ.

ಮಲಾಲಾ ಯೂಸುಫ್‌ಝಾಯಿ ಅತ್ಯಂತ ಕಿರಿಯ ವಯಸ್ಸಿನ ನೊಬೆಲ್ ಪ್ರಶಸ್ತಿ ಪುರಸ್ಕೃತೆಯಾಗಿದ್ದಾಳೆ. ಸತ್ಯಾರ್ಥಿ ಅವರು ದಿವಂಗತ ಮದರ್ ಥೆರೇಸಾ ನಂತರ ನೊಬೆಲ್ ಶಾಂತಿ ಪ್ರಶಸ್ತಿ ಪಡೆಯುತ್ತಿರುವ ಎರಡನೆ ಭಾರತೀಯ ಪ್ರಜೆ ಎನಿಸಿಕೊಂಡಿದ್ದಾರೆ. ಜಾಗತಿಕ ಶಾಂತಿ ಮತ್ತು ಇನ್ನಿತರ ಕ್ಷೇತ್ರಗಳಲ್ಲಿ ಕೆಲಸ ಮಾಡಿ ನೊಬೆಲ್ ಶಾಂತಿ ಪುರಸ್ಕಾರ ಪಡೆದಿರುವ ಅಂತಾರಾಷ್ಟ್ರೀಯ ಖ್ಯಾತನಾಮರ ಸಾಲಿಗೆ ಇವರಿಬ್ಬರು ಈಗ ಸೇರ್ಪಡೆಯಾಗಿದ್ದಾರೆ.

ಪಾಕಿಸ್ತಾನದಲ್ಲಿ ತಾಲಿಬಾನ್ ಉಗ್ರಗಾಮಿಗಳಿಂದ ಗುಂಡಿನ ದಾಳಿಗೆ ಒಳಗಾಗಿದ್ದ ಮಲಾಲಾಳನ್ನು ಹೆಚ್ಚಿನ ಚಿಕಿತ್ಸೆಗಾಗಿ ಬರ್ಮಿಂಗ್‌ಹ್ಯಾಂನ ಕ್ವೀನ್ ಎಲಿಜಬೆತ್ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಪ್ರಾಣಾಪಾಯದಿಂದ ಪಾರಾದ ನಂತರ ಬ್ರಿಟನ್‌ನಲ್ಲಿ ಶಿಕ್ಷಣ ಮುಂದುವರಿಸಿರುವ ಆಕೆ, ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿ ಹೋರಾಟ ನಡೆಸಿದ್ದಾಳೆ.

ಮಲಾಲಾ ಕಳೆದ ವರ್ಷ ವಿಶ್ವಸಂಸ್ಥೆಯಲ್ಲಿ ಉಪನ್ಯಾಸ ನೀಡಿದ್ದಳು. ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮಾರನ್ನು ಭೇಟಿ ಮಾಡಿದ್ದಳು. ‘ಟೈಮ್’ ನಿಯತಕಾಲಿಕವು ಹೆಸರಿಸಿರುವ ಜಾಗತಿಕ ನೂರು ಪ್ರಭಾವಿ ವ್ಯಕ್ತಿಗಳ ಪಟ್ಟಿಯಲ್ಲಿ ಆಕೆಯ ಹೆಸರು ಕೂಡ ಇತ್ತು. ಕಳೆದ ವರ್ಷ ‘ಐ ಆ್ಯಮ್ ಮಲಾಲಾ’ ಎಂಬ ಹೆಸರಿನ ನೆನಹು ಕೃತಿ ಪ್ರಕಟಿಸಿದ್ದಳು.

ಕಿರಿಯ ವಯಸ್ಸಿನವಳಾದರೂ ಮಲಾಲಾ ಹೆಣ್ಣು ಮಕ್ಕಳ ಶಿಕ್ಷಣದ ಕ್ಷೇತ್ರದಲ್ಲಿ ಈಗಾಗಲೇ ಸಾಕಷ್ಟು ಹೋರಾಟ ನಡೆಸಿದ್ದಾಳೆ. ತಮ್ಮ ನಡುವಿನ ಪರಿಸ್ಥಿತಿಗಳ ಸುಧಾರಣೆಗೆ ಮಕ್ಕಳು ಮತ್ತು ಯುವ ಜನರು ಕೂಡ ಕೊಡುಗೆ ನೀಡಬಹುದು ಎಂಬುದಕ್ಕೆ ಆಕೆ ಉದಾಹರಣೆಯಾಗಿದ್ದಾಳೆ ಎಂದು ನೊಬೆಲ್ ಸಮಿತಿಯ ಹೇಳಿಕೆ ತಿಳಿಸಿದೆ.

ಅತ್ಯಂತ ಅಪಾಯಕಾರಿ ಪರಿಸ್ಥಿತಿಗಳಲ್ಲಿ ಆಕೆ ತನ್ನ ಕೆಲಸಗಳನ್ನು ಮಾಡಿದ್ದಾಳೆ. ತನ್ನ ವೀರೋಚಿತ ಹೋರಾಟದ ಮೂಲಕ ಹೆಣ್ಣು ಮಕ್ಕಳ ಶಿಕ್ಷಣ ಕ್ಷೇತ್ರದಲ್ಲಿ ಪ್ರಮುಖ ವಕ್ತಾರೆ ಎನಿಸಿಕೊಂಡಿದ್ದಾಳೆ ಎಂದು ಅದು ಹೇಳಿದೆ. ಈ ವರ್ಷದ ನೊಬೆಲ್ ಶಾಂತಿ ಪ್ರಶಸ್ತಿಗೆ ಪೋಪ್ ಫ್ರಾನ್ಸಿಸ್ ಮತ್ತು ಕಾಂಗೊ ದೇಶದ ಸ್ತ್ರೀರೋಗ ತಜ್ಞ ಡೆನಿಸ್ ಮುಕ್ವೇಜ್ ಸೇರಿದಂತೆ 278 ಹೆಸರುಗಳು ನಾಮಕರಣಗೊಂಡಿದ್ದವು. ಉಳಿದವರ ಹೆಸರುಗಳನ್ನು ಸಮಿತಿ ಬಹಿರಂಗಪಡಿಸಿಲ್ಲ.

1993ರಲ್ಲಿ ದಕ್ಷಿಣಆಫ್ರಿಕದ ವರ್ಣಬೇಧ ಸರಕಾರದಲ್ಲಿ ಅಧ್ಯಕ್ಷರಾಗಿದ್ದ ಎಫ್.ಡಬ್ಲು ಡಿ ಕ್ಲರ್ಕ್ ಮತ್ತು ವರ್ಣಬೇಧ ವಿರೋಧಿ ಹೋರಾಟಗಾರ ನೆಲ್ಸನ್ ಮಂಡೇಲಾ ಜಂಟಿಯಾಗಿ ನೊಬೆಲ್ ಶಾಂತಿ ಪ್ರಶಸ್ತಿ ಪುರಸ್ಕೃತರಾಗಿದ್ದರು. ಅದರ ನಂತರದ ವರ್ಷದಲ್ಲಿ ಇಸ್ರೇಲ್‌ನ ನಾಯಕರಾದ ಶಿಮೋನ್ ಪೆರೆಸ್ ಮತ್ತು ಯಟ್ಝ್‌ಹಾಕ್ ರಾಬಿನ್ ಹಾಗೂ ಫೆಲೆಸ್ತೀನ್ ನಾಯಕ ಯಾಸೀರ್ ಅರಾಫತ್ ನೊಬೆಲ್ ಶಾಂತಿ ಪ್ರಶಸ್ತಿ ಹಂಚಿಕೊಂಡಿದ್ದರು. 1997ರಲ್ಲಿ ಉತ್ತರ ಐರ್ಲೆಂಡ್‌ನ ಜಾನ್ ಹ್ಯೂಮ್ ಮತ್ತು ಬ್ರಿಟನ್‌ನ ಡೇವಿಡ್ ಟ್ರಿಂಬಲ್ ಪ್ರಶಸ್ತಿ ಪಡೆದಿದ್ದರು.

ಜೀತದಾಳು ಮಕ್ಕಳಿಗೆ ದೊರೆತ ಗೌರವ: ಸತ್ಯಾರ್ಥಿ
ಹೊಸದಿಲ್ಲಿ, ಅ.10: ಜೀತದಾಳುಗಳಾಗಿ ದುಡಿಯುತ್ತಿರುವ ಎಳೆಯ ಮಕ್ಕಳಿಗೆ ನೊಬೆಲ್ ಶಾಂತಿ ಪ್ರಶಸ್ತಿಯನ್ನು ಸಮರ್ಪಿಸುತ್ತೇನೆ ಎಂದು ಭಾರತದ ಮಕ್ಕಳ ಹಕ್ಕುಗಳ ಹೋರಾಟಗಾರ ಕೈಲಾಸ್ ಸತ್ಯಾರ್ಥಿ ಹೇಳಿದ್ದಾರೆ.

ಈಗಲೂ ಗುಲಾಮರಾಗಿ, ಜೀತದಾಳುಗಳಾಗಿ ದುಡಿಯುತ್ತಿರುವ ಮತ್ತು ಕಳ್ಳಸಾಗಣೆಗೆ ಗುರಿಯಾಗುತ್ತಿರುವ ಎಲ್ಲ ಮಕ್ಕಳಿಗೆ ದೊರೆತ ಗೌರವವಿದು ಎಂದು ಶುಕ್ರವಾರ ಖಾಸಗಿ ಟಿವಿವಾಹಿನಿಗೆ ನೀಡಿದ ಸಂದರ್ಶನದಲ್ಲಿ ಅವರು ತಿಳಿಸಿದರು.
ಸತ್ಯಾರ್ಥಿ (60), ‘ಬಚಪನ್ ಬಚಾವೊ ಆಂದೋಲನ್’ ಸಂಘಟನೆಯ ಸ್ಥಾಪಕರು. 1980ರಲ್ಲಿ ಆರಂಭಗೊಂಡ ಈ ಸಂಘಟನೆಯ ಮೂಲಕ 80 ಸಾವಿರಕ್ಕೂ ಹೆಚ್ಚು ಮಕ್ಕಳನ್ನು ರಕ್ಷಣೆ ಮಾಡಲಾಗಿದೆ.

‘‘ನನ್ನ ಎಲ್ಲ ಭಾರತೀಯ ಬಂಧುಗಳಿಗೆ ದೊರೆತ ಗೌರವವಿದು. ಕಳೆದ 30 ವರ್ಷಗಳಿಂದ ನನ್ನ ಹೋರಾಟಕ್ಕೆ ಬೆಂಬಲ ನೀಡುತ್ತ ಬಂದಿರುವ ಎಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತೇನೆ’’ ಎಂದು ಸತ್ಯಾರ್ಥಿ ಹೇಳಿದ್ದಾರೆ.

‘‘ಭಾರತದಲ್ಲಿ ಪ್ರಜಾಸತ್ತೆಯನ್ನು ಜೀವಂತವಾಗಿ ಉಳಿಸಿಕೊಳ್ಳಲು ಹೋರಾಡುತ್ತಿರುವ ಎಲ್ಲ ಭಾರತೀಯರಿಗೂ ಇದರ ಪಾಲು ಸಲ್ಲಬೇಕು. ಇಂತಹ ನೆಲದಲ್ಲಿ ನನ್ನ ಹೋರಾಟವನ್ನು ಮುಂದುವರಿಸುವುದು ಸಾಧ್ಯವಾಗಿದೆ’’ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಸತ್ಯಾರ್ಥಿ ಯಾರು?
ಕೈಲಾಸ್ ಸತ್ಯಾರ್ಥಿ, ಭಾರತೀಯ ಮಕ್ಕಳ ಹಕ್ಕುಗಳ ಹೋರಾಟಗಾರರು. ಮೂರು ದಶಕಗಳ ಹಿಂದೆ ಎಲೆಕ್ಟ್ರಿಕಲ್ ಎಂಜಿನಿಯರ್ ಹುದ್ದೆಯನ್ನು ತೊರೆದು ‘ಬಚಪನ್ ಬಚಾವೊ ಆಂದೋಲನ್’ ಸಂಘಟನೆ ಆರಂಭಿಸಿದರು. ಇದು ಭಾರತದಲ್ಲಿ ಮಕ್ಕಳ ಕಳ್ಳಸಾಗಣೆ ಮತ್ತು ಬಾಲ ಕಾರ್ಮಿಕ ಪದ್ಧತಿಯನ್ನು ಅಂತ್ಯಗೊಳಿಸಲು ಹೋರಾಡುತ್ತಿರುವ ಪ್ರಮುಖ ಸರಕಾರೇತರ ಸಂಸ್ಥೆಯಾಗಿದೆ. ತನ್ನ ವ್ಯವಸ್ಥಿತ ಸ್ವಯಂಸೇವಕರ ಜಾಲದ ಮೂಲಕ ಸಂಸ್ಥೆ ಮಾಹಿತಿಯನ್ನು ಪಡೆದುಕೊಂಡು ಎಳೆಯ ಮಕ್ಕಳ ರಕ್ಷಣೆ ಮಾಡುತ್ತದೆ. ‘‘ನಾನು ಮಕ್ಕಳ ಸ್ನೇಹಿತ. ಇದು ನನ್ನ ತತ್ವ. ಯಾರು ಕೂಡ ಮಕ್ಕಳನ್ನು ಕರುಣಾಜನಕ ವಸ್ತುಗಳು ಇಲ್ಲವೆ ಧರ್ಮಭಿಕ್ಷೆಯಾಗಿ ಕಾಣುವ ಅಗತ್ಯವಿಲ್ಲ. ಅದು ಹಳೆಯ ಕಾಲದ ಮಾತಾಯಿತು. ಜನರು ಮಕ್ಕಳ ವರ್ತನೆಯನ್ನು ಮೂರ್ಖತನಕ್ಕೆ ಹೋಲಿಸುವುದುಂಟು. ನಮ್ಮ ಈ ಮಾನಸಿಕ ಸ್ಥಿತಿ ಬದಲಾಗಬೇಕು’’ ಎಂದು ನಾಲ್ಕು ತಿಂಗಳ ಹಿಂದೆ ಸಂದರ್ಶನವೊಂದರಲ್ಲಿ ಅವರು ಹೇಳಿಕೊಂಡಿದ್ದರು.

Write A Comment