ಕರ್ನಾಟಕ

ಡೀವಿ ದೂರವಾಣಿ ಕದ್ದಾಲಿಕೆ;ನಾವು ಆ ಕೆಲಸ ಮಾಡಲ್ಲ: ಮುಖ್ಯಮಂತ್ರಿ ಸಿದ್ದರಾಮಯ್ಯ

Pinterest LinkedIn Tumblr

siddusiddu

ಬೆಂಗಳೂರು, ಅ. 10: ಕಾರ್ತಿಕ್‌ಹಾಗೂ ಮೈತ್ರಿಯಾ ಗೌಡ ಪ್ರಕರಣದ ತನಿಖೆ ಸಂಬಂಧ ರೈಲ್ವೆ ಸಚಿವ ಡಿ.ವಿ.ಸದಾನಂದಗೌಡ ಅವರ ದೂರವಾಣಿ ಕದ್ದಾಲಿಕೆಯ ಬಗ್ಗೆ ನಾವು ಆ ಕೆಲಸ ಮಾಡಲ್ಲ ಎಂದು ಸಿಎಂ ಸಿದ್ದರಾಮಯ್ಯ ಇಂದಿಲ್ಲಿ ಸ್ಪಷ್ಟಪಡಿಸಿದ್ದಾರೆ.ಶುಕ್ರವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಸದಾನಂದಗೌಡ ಅವರ ದೂರವಾಣಿ ಕದ್ದಾಲಿಕೆಯ ಬಗ್ಗೆ ನನಗೇನೂ ಗೊತ್ತಿಲ್ಲ, ನಾವು ಆ ಕೆಲಸ ಮಾಡುವುದಿಲ್ಲ ಎಂದು ಸ್ಪಷ್ಟಣೆ ನೀಡಿದರು. ಮಾಜಿ ಸಚಿವ ಸುರೇಶ್ ಕುಮಾರ್ ಆರೋಪದಲ್ಲಿ ಯಾವುದೇ ಹುರುಳಿಲ್ಲ ಎಂದು ಹೇಳಿದರು.

ಪ್ರತಿಕ್ರಿಯೆಗೆ ನಕಾರ:
ಈ ಮಧ್ಯೆ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತ ನಾಡಿದ ರೈಲ್ವೆ ಸಚಿವ ಸದಾನಂದಗೌಡ ತಮ್ಮ ದೂರವಾಣಿ ಕದ್ದಾಲಿಕೆಯ ಬಗ್ಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದರು. ಅಲ್ಲದೆ, ದೂರವಾಣಿ ಕದ್ದಾಲಿಕೆ ಮಾಡಿದವರು ಏನಾದರು, ಅವರಿಗೆ ಎಂತಹ ಪರಿಸ್ಥಿತಿ ಬಂತು ಎಂಬುದು ಇತಿಹಾಸದಿಂದ ಗೊತ್ತಾಗುತ್ತದೆ ಎಂದು ಪರೋಕ್ಷವಾಗಿ ಟೀಕಿಸಿದರು.

ತಮ್ಮ ಪುತ್ರನ ವಿರುದ್ಧ ಮೈತ್ರಿಯಾ ಗೌಡ ಅತ್ಯಾಚಾರ ಪ್ರಕರಣ ಆರೋಪಗಳು ಕೇಳಿಬಂದಿದ್ದು, ಈ ಬಗ್ಗೆ ತಾನು ಹೆಚ್ಚಿಗೆ ಮಾತನಾಡಲು ಬಯಸುವುದಿಲ್ಲ. ತನ್ನ ದೂರವಾಣಿ ಕದ್ದಾಲಿಕೆಯ ಬಗ್ಗೆ ನನಗೆ ಮಾಹಿತಿಯಿಲ್ಲ. ಕಾನೂನು ಮೀರಿ ಕದ್ದಾಲಿಕೆ ನಡೆದಿದ್ದರೆ ಅದರ ಪರಿಣಾಮದ ಬಗ್ಗೆ ಇತಿಹಾಸ ನೋಡಿದರೆ ಗೊತ್ತಾಗುತ್ತದೆ ಎಂದರು.

ಕೇಂದ್ರ ಸಚಿವರಿಗೆ ಬಿಜೆಪಿ ದೂರು: ರೈಲ್ವೆ ಸಚಿವ ಸದಾನಂದಗೌಡ ಅವರ ದೂರವಾಣಿ ಕದ್ದಾಲಿಕೆ ಅತ್ಯಂತ ಗಂಭೀರ ಪ್ರಕರಣವಾಗಿದ್ದು, ಈ ಸಂಬಂಧ ಕೇಂದ್ರ ಟೆಲಿಕಾಮ್ ಸಚಿವರಿಗೆ ದೂರು ನೀಡಲಾಗುವುದು ಹಾಗೂ ಇದನ್ನು ಸಿಬಿಐ ತನಿಖೆಗೆ ವಹಿ ಸಬೇಕು ಎಂದು ಮಾಜಿ ಸಚಿವ ಎಸ್. ಸುರೇಶ್ ಕುಮಾರ್ ಆಗ್ರಹಿಸಿದ್ದಾರೆ.

ದೂರವಾಣಿ ಕದ್ದಾಲಿಕೆ ಪ್ರಕರಣದಲ್ಲಿ ರಾಮಕೃಷ್ಣ ಹೆಗಡೆ ಸರಕಾರ ಪತನವಾಯಿತು. ರೈಲ್ವೆ ಸಚಿವ ಸದಾನಂದಗೌಡ ಅವರ ದೂರವಾಣಿ ಕದ್ದಾಲಿಕೆಯ ಹಿಂದೆ ಸಿಎಂ ಸಿದ್ದರಾಮಯ್ಯನವರ ಸರಕಾರದ ಪರೋಕ್ಷ ಕುಮ್ಮಕ್ಕಿದೆ. ಹಾಗಾಗಿ ಪ್ರಕರಣ ಹೊಣೆಯನ್ನು ರಾಜ್ಯ ಸರಕಾರವೇ ಹೊರಬೇಕೆಂದ ಅವರು, ರಾಜ್ಯದಿಂದ ಹೆಚ್ಚಿನ ಸಂಸದರು ಆಯ್ಕೆಯಾದ ಮತ್ಸರದಿಂದ ಕಾಂಗ್ರೆಸ್ ಸರಕಾರ ಕದ್ದಾಲಿಕೆಗೆ ಮುಂದಾಗಿದೆಯೆಂದು ಅವರು ದೂರಿದರು.

Write A Comment