ಮನೋರಂಜನೆ

ಸೋಲಿನ ಆಘಾತದಿಂದ ಪುಟಿದೇಳಲಿದೆ ಟೀಮ್ ಇಂಡಿಯಾ! ಇಂದು 2ನೆ ಏಕದಿನ ಪಂದ್ಯ: ವಿಂಡೀಸ್‌ಗೆ ಗೆಲುವಿನ ಅಭಿಯಾನ ಮುಂದುವರಿಸುವ ಚಿತ್ತ

Pinterest LinkedIn Tumblr

virat-kohli_

ಹೊಸದಿಲ್ಲಿ, ಅ.10: ಕೊಚ್ಚಿಯಲ್ಲಿ ನಡೆದ ಪ್ರವಾಸಿ ವೆಸ್ಟ್‌ಇಂಡೀಸ್ ವಿರುದ್ಧದ ಮೊದಲ ಏಕದಿನ ಅಂತಾರಾಷ್ಟ್ರೀಯ ಪಂದ್ಯದಲ್ಲಿ 124 ರನ್‌ಗಳ ಸೋಲು ಅನುಭವಿಸಿದ ಟೀಮ್ ಇಂಡಿಯಾ ಸೋಲಿನ ಆಘಾತದಿಂದ ಇನ್ನೂ ಹೊರಬಂದಿಲ್ಲ. ಶನಿವಾರ ಇಲ್ಲಿನ ಫಿರೋಝ್ ಷಾ ಕೋಟ್ಲಾ ಸ್ಟೇಡಿಯಂನಲ್ಲಿ ನಡೆಯಲಿರುವ ಎರಡನೆ ಏಕದಿನ ಪಂದ್ಯದಲ್ಲಿ ಭಾರತಕ್ಕೆ ಮತ್ತೆ ವಿಂಡೀಸ್‌ನ ಸವಾಲು ಎದುರಾಗಿದೆ.

ಟೀಮ್ ಇಂಡಿಯಾ ವಿರುದ್ಧ ಭರ್ಜರಿ ಗೆಲುವಿನೊಂದಿಗೆ ಟೂರ್ನಿಯಲ್ಲಿ ಶುಭಾರಂಭ ಮಾಡಿದ ವಿಂಡೀಸ್ ಗೆಲುವಿನ ಅಭಿಯಾನ ಮುಂದುವರಿಸುವ ಯೋಜನೆಯಲ್ಲಿದೆ. ತವರಲ್ಲಿ ಹುಲಿಯಂತೆ ಘರ್ಜಿಸುವ ಟೀಮ್ ಇಂಡಿಯಾ ವಿಂಡೀಸ್‌ನ ವಿರುದ್ಧ ಕೈಸುಟ್ಟುಕೊಂಡಿರುವ ಹಿನ್ನೆಲೆಯಲ್ಲಿ ಇದೀಗ ಒತ್ತಡಕ್ಕೆ ಸಿಲುಕಿದೆ.

ಆರಂಭಿಕ ದಾಂಡಿಗ ಶಿಖರ್ ಧವನ್ ಹೊರತುಪಡಿಸಿದರೆ ತಂಡದ ಇತರ ಯಾರಿಗೂ ಕನಿಷ್ಠ 35 ರನ್‌ಗಳನ್ನು ದಾಖಲಿಸಲು ಸಾಧ್ಯವಾಗಲಿಲ್ಲ. ವಿಂಡೀಸ್‌ನ ಸ್ಪಿನ್ ಮತ್ತು ವೇಗದ ಬೌಲಿಂಗ್‌ನ ಮುಂದೆ ರನ್ ಗಳಿಸಲು ಭಾರತದ ದಾಂಡಿಗರು ಪರದಾಡಿದರು. ವಿಂಡೀಸ್‌ನ ಆಟಗಾರರು ಒಟ್ಟು 10 ಸಿಕ್ಸರ್ ಸಿಡಿಸಿದ್ದರು. ಅಜೇಯ ಶತಕ ಗಳಿಸಿದ್ದ ಮರ್ಲಾನ್ ಸ್ಯಾಮುಯೆಲ್ಸ್ 116 ಎಸೆತಗಳಲ್ಲಿ 11 ಬೌಂಡರಿ ಮತ್ತು 4 ಸಿಕ್ಸರ್‌ಗಳನ್ನು ಒಳಗೊಂಡ 126 ರನ್ ಸಿಡಿಸಿದ್ದರು. ಅಪೂರ್ವ ಫಾರ್ಮ್‌ನಲ್ಲಿರುವ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ದಿನೇಶ್ ರಾಮ್ದೀನ್ 61 ರನ್(59ಎ, 5ಬೌ, 2ಸಿ) ಗಳಿಸಿದ್ದರು. ರಾಮ್ದೀನ್ ಇದಕ್ಕೂ ಮೊದಲು ನಡೆದ ನಾಲ್ಕು ಏಕದಿನ ಪಂದ್ಯಗಳಲ್ಲಿ ಕ್ರಮವಾಗಿ 169, 34, 74 ಮತ್ತು 128 ರನ್ ಕಲೆ ಹಾಕಿದ್ದರು. ಮೊದಲ ಏಕದಿನ ಪಂದ್ಯದಲ್ಲಿ ಭಾರತದ ಪರ ರವೀಂದ್ರ ಜಡೇಜ ಮತ್ತು ಮುಹಮ್ಮದ್ ಶಮಿ ತಲಾ 1 ಸಿಕ್ಸರ್ ಬಾರಿಸಿದ್ದು ಹೊರತುಪಡಿಸಿದರೆ ಇತರ ಯಾರಿಂದಲೂ ಸಿಕ್ಸರ್ ಬರಲಿಲ್ಲ. ಶಿಖರ್ ಧವನ್ 92 ಎಸೆತಗಳಲ್ಲಿ 9 ಬೌಂಡರಿಗಳ ಸಹಾಯದಿಂದ 68 ರನ್ ದಾಖಲಿಸಿದ್ದರು. ಸುರೇಶ್ ರೈನಾ (0), ವಿರಾಟ್ ಕೊಹ್ಲಿ(2) ಮತ್ತು ನಾಯಕ ಧೋನಿ(8) ಬೇಗನೆ ಔಟಾಗಿರುವುದು ತಂಡದ ಸೋಲಿಗೆ ಕಾರಣವಾಯಿತು. ಟೀಮ್ ಇಂಡಿಯಾದ ಬೌಲಿಂಗ್ ವಿಭಾಗ ಸೊರಗಿತ್ತು. ಭುವನೇಶ್ವರ ಕುಮಾರ್‌ಗೆ ವಿಕೆಟ್ ಸಿಗದಿದ್ದರೂ ಹೆಚ್ಚು ರನ್ ಬಿಟ್ಟುಕೊಡಲಿಲ್ಲ. 10 ಓವರ್‌ಗಳಲ್ಲಿ 3.80 ಸರಾಸರಿಯಂತೆ 38 ರನ್ ಬಿಟ್ಟುಕೊಟ್ಟಿದ್ದರು. ಮುಹಮ್ಮದ್ ಶಮಿ 4 ವಿಕೆಟ್ ಎಗರಿಸಿದ್ದರೂ ಅವರ 9 ಓವರ್‌ಗಳಲ್ಲಿ 7.33 ಸರಾಸರಿಯಂತೆ ವಿಂಡೀಸ್‌ನ ದಾಂಡಿಗರು 66 ರನ್ ಕಬಳಿಸಿದ್ದರು.

ಯುವ ವೇಗಿ ಮೋಹಿತ್ ಶರ್ಮ 9 ಓವರ್‌ಗಳಲ್ಲಿ 61 ರನ್ ನೀಡಿದ್ದರು. ಅವರಿಗೆ ವಿಕೆಟ್ ಸಿಗಲಿಲ್ಲ. ಗಾಯಾಳುವಾಗಿರುವ ಮೋಹಿತ್ ಶರ್ಮ ಶನಿವಾರದ ಪಂದ್ಯಕ್ಕೆ ತಂಡದ ಸೇವೆಗೆ ಲಭ್ಯರಿಲ್ಲ. ಈ ಕಾರಣದಿಂದಾಗಿ ವೇಗಿ ಇಶಾಂತ್ ಶರ್ಮ ತಂಡಕ್ಕೆ ಸೇರ್ಪಡೆಗೊಳ್ಳಲಿದ್ದಾರೆ. ಆದರೆ ನಾಯಕ ಎಂಎಸ್ ಧೋನಿ ಹೆಚ್ಚುವರಿ ಸ್ಪಿನ್ನರ್ ನೆರವನ್ನು ಬಯಸಿದರೆ ಸ್ಪಿನ್ನರ್ ಕುಲದೀಪ್ ಯಾದವ್‌ಗೆ ಚೊಚ್ಚಲ ಏಕದಿನ ಪಂದ್ಯದಲ್ಲಿ ಅವಕಾಶ ಪಡೆಯಬಹುದು. ವಿಂಡೀಸ್ ತಂಡ ತನ್ನ ಕ್ರಿಕೆಟ್ ಮಂಡಳಿಯೊಂದಿಗೆ ಮುನಿಸಿಕೊಂಡಿದ್ದರೂ, ಪಂದ್ಯದಲ್ಲಿ ಚೆನ್ನಾಗಿ ಆಡಿ ಮಂಡಳಿಯ ಗಮನ ಸೆಳೆಯುವ ವಿಶ್ವಾಸದಲ್ಲಿದೆ.

ಭಾರತ: ಮಹೇಂದ್ರ ಸಿಂಗ್ ಧೋನಿ(ನಾಯಕ), ಶಿಖರ್ ಧವನ್, ಅಜಿಂಕ್ಯ ರಹಾನೆ, ವಿರಾಟ್ ಕೊಹ್ಲಿ, ಸುರೇಶ್ ರೈನಾ, ಅಂಬಟಿ ರಾಯುಡು, ರವೀಂದ್ರ ಜಡೇಜ, ಅಮಿತ್ ಮಿಶ್ರಾ, ಭುವನೇಶ್ವರ ಕುಮಾರ್, ಮುಹಮ್ಮದ್ ಶಮಿ, ಇಶಾಂತ್ ಶರ್ಮ, ಉಮೇಶ್ ಯಾದವ್, ಮುರಳಿ ವಿಜಯ್, ಕುಲದೀಪ್ ಯಾದವ್.

ವೆಸ್ಟ್‌ಇಂಡೀಸ್: ಡ್ವೇಯ್ನ್ ಬ್ರಾವೋ (ನಾಯಕ/ವಿಕೆಟ್ ಕೀಪರ್), ಡರೆನ್ ಬ್ರಾವೋ, ಜಾಸನ್ ಹೋಲ್ಡರ್, ಲಿಯೊನ್ ಜಾನ್ಸನ್, ಕೀರನ್ ಪೊಲಾರ್ಡ್, ದಿನೇಶ್ ರಾಮ್ದೀನ್ (ವಿಕೆಟ್ ಕೀಪರ್), ರವಿ ರಾಂಪಾಲ್, ಕೆಮಾರ್ ರೋಚ್, ಆ್ಯಂಡ್ರೆ ರಸ್ಸೆಲ್, ಡರೆನ್ ಸಮ್ಮಿ, ಮರ್ಲಾನ್ ಸ್ಯಾಮುಯೆಲ್ಸ್, ಲೆಂಡ್ಲ್ ಸಿಮೊನ್ಸ್, ಡ್ವೇಯ್ನ್ ಸ್ಮಿತ್, ಜೆರೊಮ್ ಟೇಲರ್.
ಪಂದ್ಯದ ಸಮಯ
ಮಧ್ಯಾಹ್ನ 2:30ಕ್ಕೆ ಆರಂಭ.

Write A Comment