ಕರ್ನಾಟಕ

ಮೂರು ಮಕ್ಕಳು ಸೇರಿ ಹನ್ನೊಂದು ಜೀತದಾಳುಗಳ ರಕ್ಷಣೆ, ಮಾಲಕನ ಬಂಧನ

Pinterest LinkedIn Tumblr

arrest

ಬೆಂಗಳೂರು, ಅ.10: ಇಟ್ಟಿಗೆ ಗೂಡಿನಲ್ಲಿ ಒಂದು ವರ್ಷದಿಂದ ಜೀತದಾಳುಗಳಾಗಿ ದುಡಿಯುತ್ತಿದ್ದ ಒಂದೇ ಕುಟುಂಬದ ಮೂರು ಮಕ್ಕಳು ಸೇರಿ ಹನ್ನೊಂದು ಜನರನ್ನು ರಕ್ಷಿಸಿ ಇಟ್ಟಿಗೆ ಮಾಲಕನನ್ನು ಬಂಧಿಸಿರುವ ಘಟನೆ ಅತ್ತಿಬೆಲೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ರಕ್ಷಿಸಲ್ಪಟ್ಟಿರುವ ಹನ್ನೊಂದು ಜನರನ್ನು ಒಡಿಶಾ ಮೂಲದ ಪರಿಶಿಷ್ಟ ಪಂಗಡದವರೆಂದು ಗುರುತಿಸಲಾಗಿದೆ. ಇವರನ್ನೆಲ್ಲ ಆನೇಕಲ್ ತಾಲೂಕಿನ ಅತ್ತಿಬೆಲೆ ವ್ಯಾಪ್ತಿಯ ಉದ್ಯಮಿಯೊಬ್ಬರು ಒಂದು ವರ್ಷದಿಂದ ಇಟ್ಟಿಗೆ ಗೂಡಿನಲ್ಲಿ ಜೀತದಾಳುಗಳಾಗಿ ದುಡಿಸಿಕೊಳ್ಳುತ್ತಿದ್ದ ಮಾಹಿತಿಯನ್ನು ಕಲೆ ಹಾಕಿದ ಮಾನವ ಕಳ್ಳ ಸಾಗಣೆ ನಿಷೇಧ ಘಟಕ ರಾಮನಗರ ಜಿಲ್ಲಾ ಪೊಲೀಸರೊಂದಿಗೆ ಕಾರ್ಯಾಚರಣೆ ನಡೆಸಿ, ಜೀತದಾಳುಗಳನ್ನು ರಕ್ಷಿಸಿ ಮಾಲಕನನ್ನು ಬಂಧಿಸಿದೆ.

ಹಬ್ಬಗಳು ಬಂದಾಗ, ಮನೆಯವರು ಹಾಗೂ ಸಂಬಂಧಿಕರು ಸಾವನ್ನಪ್ಪಿದಾಗಲೂ ಇಟ್ಟಿಗೆ ಗೂಡಿನ ಮಾಲಕ ಕೆಲಸಗಾರರನ್ನು ಊರುಗಳಿಗೆ ಕಳುಹಿಸಿಕೊಡದೆ, ದುಡಿಸಿಕೊಳ್ಳುತ್ತಿದ್ದ. ಕನಿಷ್ಠ ವೇತನಕ್ಕಿಂತ ಕಡಿಮೆ ವೇತನವನ್ನು ಕೊಡುತ್ತಿದ್ದು, ಒತ್ತಾಯಪೂರ್ವಕವಾಗಿ ಬೆಳಗ್ಗೆ 4 ಗಂಟೆಯಿಂದ ಸಂಜೆ 7 ಗಂಟೆವರೆಗೆ ಇಟ್ಟಿಗೆ ಗೂಡಿನಲ್ಲಿ ಕೆಲಸ ಮಾಡಿಸಿಕೊಳ್ಳುತ್ತಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

‘ಒಡಿಶಾದಲ್ಲಿ ವಾಸಿಸುತ್ತಿದ್ದ ನಿನ್ನ ಮೊಮ್ಮಗಳು ಕಾಯಿಲೆಯಿಂದ ತೀರಿಕೊಂಡಳು ಎಂದು ನನ್ನ ಮಗಳು ನನಗೆ ತಿಳಿಸಿದಳು. ಆಗ ನಾನು ಮಾಲಕನ ಬಳಿ ಹೋಗಿ ನನ್ನ ಮೊಮ್ಮಗಳು ತೀರಿಕೊಂಡಿ ದ್ದಾಳೆ ನಾನು ಊರಿಗೆ ಹೋಗಿ ಬರಬೇಕೆಂದು ಮನವಿ ಮಾಡಿಕೊಂಡೆ. ಆಗ ಮಾಲಕ ನನ್ನನ್ನು ಊರಿಗೆ ಕಳುಹಿಸಲಿಲ್ಲ’ ಎಂದು ಇಟ್ಟಿಗೆ ಗೂಡಿನಲ್ಲಿ ಕೆಲಸ ಮಾಡುತ್ತಿದ್ದ ಹಿರಿಯ ಮಹಿಳೆಯೊಬ್ಬರು ತನ್ನ ಅಳಲನ್ನು ತೋಡಿಕೊಂಡಿದ್ದಾರೆ. ನಾವು ಕೆಲಸ ಮಾಡುವ ಸ್ಥಳವನ್ನು ಕುಟುಂಬಸಮೇತ ಬಿಡುವಂತಿರಲಿಲ್ಲ. ನಾವು ಮಾರುಕಟ್ಟೆಗೆ ಅಥವಾ ಆಸ್ಪತ್ರೆಗೆ ಹೋದಾಗಲೂ, ನಮ್ಮನ್ನು ಕಾಯುವುದಕ್ಕಾಗಿ ಮಾಲಕನು ತನ್ನ ಜನರನ್ನು ನಮ್ಮ ಹಿಂದೆ ಕಳುಹಿಸುತ್ತಿದ್ದನು ಎಂದು ಮತ್ತೊಬ್ಬ ಮಹಿಳೆ ತನ್ನ ಕಷ್ಟವನ್ನು ತೋಡಿಕೊಂಡಿದ್ದಾರೆ. ಇತ್ತೀಚೆಗೆ ಬೆಂಗಳೂರು ನಗರದ ವಿವಿಧ ಕಡೆಗಳಲ್ಲಿ ನಡೆದಂತಹ ಹಲವಾರು ಪ್ರಕರಣಗಳಲ್ಲಿ ಇದೂ ಒಂದಾಗಿದ್ದು, ಮಾನವ ಕಳ್ಳ ಸಾಗಣೆ ನಿಷೇಧ ಘಟಕ, ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆಯು ಉತ್ತಮ ಕೆಲಸ ಮಾಡಿದೆ ಎಂದು ಸಿಸ್ಟಮ್ ರಿಫಾರ್ಮ್‌ನ ವ್ಯವಸ್ಥಾಪಕಿ ಎಸ್ತೆರ್ ಡಾನಿಯೆಲ್ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ರಕ್ಷಿಸಲಾಗಿರುವ ಎಲ್ಲ ಜೀತ ಕಾರ್ಮಿಕರನ್ನು ಒಡಿಶಾದಲ್ಲಿರುವ ತಮ್ಮ ಸ್ವಂತ ಊರುಗಳಿಗೆ ಕಳುಹಿಸಲಾಗುವುದು ಮತ್ತು ಐಜೆಎಮ್‌ನ ಎರಡು ವರ್ಷಗಳ ಪುರ್ನವಸತಿ ಕಾರ್ಯಕ್ರಮದಲ್ಲಿ ಅವರನ್ನು ಸೇರಿಸಲಾಗುವುದು ಎಂದು ಡಾನಿಯೆಲ್ ಹೇಳಿದ್ದಾರೆ.

Write A Comment