ಕರ್ನಾಟಕ

ಮೋರಿಯಲ್ಲಿ ಕೊಚ್ಚಿ ಹೋಗಿದ್ದ ಬಾಲಕಿಯ ಮೃತದೇಹ ಪತ್ತೆ

Pinterest LinkedIn Tumblr

bang

ಕುಟುಂಬಕ್ಕೆ 3 ಲಕ್ಷ ರೂ. ಪರಿಹಾರ ಬೆಂಗಳೂರು, ಅ. 8: ಸೋಮವಾರ ಸುರಿದ ಭಾರೀ ಮಳೆ ಸಂದರ್ಭದಲ್ಲಿ ಇಲ್ಲಿನ ಬನ್ನೇರುಘಟ್ಟ ರಸ್ತೆಯಲ್ಲಿನ ಬಿಳೇಕಳ್ಳಿ ಬಳಿ ಚರಂಡಿಯಲ್ಲಿ ಕೊಚ್ಚಿಹೋಗಿದ್ದ ಎಂಟು ವರ್ಷದ ಬಾಲಕಿ ಗೀತಾಲಕ್ಷ್ಮಿ ಮೃತದೇಹ ಬುಧವಾರ ಪತ್ತೆಯಾಗಿದ್ದು, ಬಾಲಕಿಯ ಕುಟುಂಬಕ್ಕೆ ಬಿಬಿಎಂಪಿ 3 ಲಕ್ಷ ರೂ.ಪರಿಹಾರ ಪ್ರಕಟಿಸಿದೆ.ಅ.6ರಂದು ಸಂಜೆ 7:30ರ ಸುಮಾರಿಗೆ ಬಾಲಕಿ ಗೀತಾ ಲಕ್ಷ್ಮಿ ಅತ್ತೆಯೊಂದಿಗೆ ಮನೆಯಿಂದ ಹೊರಗೆ ಹೋಗಿ ಹಿಂದಿರುಗುತ್ತಿದ್ದ ಸಂದರ್ಭದಲ್ಲಿ ಆಯತಪ್ಪಿ ಮೋರಿಗೆ ಬಿದ್ದು ಮಳೆಯ ನೀರಿನಲ್ಲಿ ಕೊಚ್ಚಿ ಹೋಗಿದ್ದಳು.

ಆ ಹಿನ್ನೆಲೆಯಲ್ಲಿ ಬಾಲಕಿ ಪತ್ತೆಗೆ ಬನ್ನೇರುಘಟ್ಟ ವ್ಯಾಪ್ತಿಯ ರಾಜಕಾಲುವೆಯಲ್ಲಿ ಪಾಲಿಕೆ ಸಿಬ್ಬಂದಿ, ವಿಪತ್ತು ನಿರ್ವಹಣಾ ದಳ, ನಾಗರಿಕ ರಕ್ಷಣಾ ದಳ, ಅಗ್ನಿಶಾಮಕ ದಳದ ಸಿಬ್ಬಂದಿ ಶೋಧ ನಡೆಸಿದರೂ ಪ್ರಯೋಜವಾಗಿರಲಿಲ್ಲ. ಆದರೆ, ಇಂದು ಮಡಿವಾಳ ಕೆರೆಯಲ್ಲಿ ಹುಡುಕಾಟ ನಡೆಸಿದಾಗ ಗೀತಾಲಕ್ಷ್ಮಿ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ.

ಮೃತದೇಹವನ್ನು ನಗರದ ಕಿಮ್ಸ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬದ ವಾರಸುದಾರರಿಗೆ ಹಸ್ತಾಂತರಿಸಲಾಗಿದೆ. ಆಸ್ಪತ್ರೆ ಆವರಣದಲ್ಲಿ ಬಾಲಕಿಯ ಕುಟುಂಬ ಸದಸ್ಯರ ರೋದನ ಮುಗಿಲು ಮುಟ್ಟಿತ್ತು. ಈ ಮಧ್ಯೆ ಬಾಲಕಿಯ ಕಳೇಬರವನ್ನು ತಮಿಳುನಾಡಿಗೆ ಕೊಂಡೊಯ್ಯಲು ಪಾಲಿಕೆಯಿಂದಲೇ ಆ್ಯಂಬುಲೆನ್ಸ್ ವ್ಯವಸ್ಥೆ ಕಲ್ಪಿಸಲಾಗಿತ್ತು.

ಮೇಯರ್ ಭೇಟಿ: ಶೋಧ ಕಾರ್ಯ ನಡೆಯುತ್ತಿರುವ ಮಡಿವಾಳ ಕೆರೆಗೆ ಬಿಬಿಎಂಪಿ ಮೇಯರ್ ಶಾಂತಕುಮಾರಿ ಭೇಟಿ ನೀಡಿ ಪರಿಶೀಲಿಸಿದರು. ಈ ವೇಳೆ ಮಾತನಾಡಿದ ಅವರು, ನಮಗೆ ಜನ ಮುಖ್ಯ, ಅಧಿಕಾರಿಗಳಲ್ಲ. ಯಾರೇ ಬೇಜವಾಬ್ದಾರಿ ಅಧಿಕಾರಿಗಳಿದ್ದರೂ ಅಂತಹವರನ್ನು ಉಳಿಸಿಕೊಳ್ಳುವುದಿಲ್ಲ. ಬೇಜವಾಬ್ದಾರಿ ಅಧಿಕಾರಿಗಳನ್ನು ಅಮಾನತು ಮಾಡಲಾಗುವುದು ಎಂಬ ಎಚ್ಚರಿಕೆ ನೀಡಿದರು. ಶೀಘ್ರದಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಭೇಟಿ ಮಾಡಿ ಪಾಲಿಕೆಯಲ್ಲಿರುವ ಶೇ.10ರಷ್ಟು ಬೇಜವಾಬ್ದಾರಿ ಅಧಿಕಾರಿಗಳನ್ನು ಕಡಿತ ಮಾಡುವಂತೆ ಕೋರಲಾಗುವುದು ಎಂದ ಅವರು, ಸತತ ಎರಡು ದಿನಗಳಿಂದ ಬಾಲಕಿ ಗೀತಾಲಕ್ಷ್ಮಿ ಪತ್ತೆ ಕಾರ್ಯಾಚರಣೆ ಕೈಗೊಂಡಿದ್ದು, ಮೃತ ದೇಹ ಪತ್ತೆಯಾಗಿದೆ ಎಂದರು.

ಗುತ್ತಿಗೆದಾರರು ಪಾಲಿಕೆ ಕಾಮಗಾರಿಯನ್ನು ಕೈಗೊಳ್ಳುವ ಸಂದರ್ಭದಲ್ಲಿ ಎಇಗಳು ಸ್ಥಳದಲ್ಲೇ ಇರಬೇಕು. ಚರಂಡಿ ಕಾಮಗಾರಿ, ಸ್ಲ್ಯಾಬ್ ತೆಗೆಯುವುದು ಮತ್ತಿತರ ಕೆಲಸ ಮಾಡಿಸುವುದೇ ಆದರೆ, ಕೆಲಸ ಪೂರ್ಣಗೊಳಿಸಿ ಮುಚ್ಚಳ ಮುಚ್ಚ ಬೇಕೆಂದು ಅವರು ಸೂಚಿಸಿದರು.

ಅಧಿಕಾರಿಗಳ ವಿರುದ್ಧ ಕ್ರಮ: ಬಾಲಕಿಯ ಕುಟುಂಬಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ ಸೂಚನೆಯಂತೆ ಈಗಾಗಲೇ ಮೇಯರ್ ಶಾಂತಕುಮಾರಿ ಅವರು 3 ಲಕ್ಷ ರೂ.ಪರಿಹಾರ ಘೋಷಿಸಿದ್ದಾರೆ. ಬಾಲಕಿ ಮೋರಿಯಲ್ಲಿ ಕೊಚ್ಚಿಹೋದ ಪ್ರಕರಣ ಸಂಬಂಧ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಜರಗಿಸಲಾಗುವುದು ಎಂದು ಪಾಲಿಕೆ ಆಯುಕ್ತ ಲಕ್ಷ್ಮೀನಾರಾಯಣ್ ತಿಳಿಸಿದರು.

Write A Comment