ಕರ್ನಾಟಕ

ಭಾರಿ ಮಳೆಗೆ ಏಳು ಸಾವು

Pinterest LinkedIn Tumblr

rain

ಬೆಂಗಳೂರು: ರಾಜ್ಯದ ವಿವಿಧೆಡೆ ಮತ್ತೆ ಭಾರಿ ಮಳೆಯಾಗಿದೆ. ಭಾನುವಾರ ಸಂಜೆ­­ಯಿಂದೀಚೆಗೆ ಮಳೆ ಅನಾಹುತ­ಗಳಲ್ಲಿ ಮೂವರು ಮಹಿಳೆಯರು ಸೇರಿ ಏಳು ಜನ ಮೃತಪಟ್ಟಿದ್ದಾರೆ.

ಯುವಕ ಸಾವು, ಮನೆ, ಬೈಕ್ ಭಸ್ಮ: ತುಮಕೂರು ಜಿಲ್ಲೆ ಚಿಕ್ಕನಾಯ­ಕನಹಳ್ಳಿ ತಾಲ್ಲೂಕಿನ ಕೆಂಕೆರೆ ಸಮೀಪದ ಪುರದಮಠ ಗೇಟ್ ಬಳಿ ಸೋಮವಾರ ಬೆಳಗಿನ ಜಾವ ಮಳೆ ವೇಳೆ ಸಿಡಿಲಿನಿಂದ ಮನೆಗೆ ಬೆಂಕಿ ಹೊತ್ತಿಕೊಂಡು ಯುವಕ ಸಾವನ್ನಪ್ಪಿದ್ದು, ಮತ್ತೊಬ್ಬರು ಗಾಯಗೊಂಡ ಘಟನೆ ನಡೆದಿದೆ.

ನರಸಿಂಹಯ್ಯ (21) ಮೃತ ವ್ಯಕ್ತಿ. ಇವರು ತಿಮ್ಮನಹಳ್ಳಿ ಕಣಿವೆ ಕ್ರಾಸ್ ವಾಸಿಯಾಗಿದ್ದು, ಪುರದಮಠ ಗೇಟ್ ಬಳಿಯ ರಾಜಣ್ಣ ಅವರ ಮನೆಯಲ್ಲಿ ಟಿಪ್ಪರ್ ಲಾರಿ ಚಾಲಕರಾಗಿದ್ದರು. ಮನೆಯ ಮುಂಭಾಗದ ಕೋಣೆಗೆ ಸಿಡಿಲು ಬಡಿದಿದೆ. ಮನೆಯಲ್ಲಿ ನಿಲ್ಲಿಸಿದ್ದ ಬೈಕ್ ಬೆಂಕಿ ಹೊತ್ತಿ ಉರಿಯ­ಲಾರಂಭಿ­ಸಿದೆ. ಅಲ್ಲಿಯೇ ಮಲಗಿದ್ದ ನರಸಿಂಹಯ್ಯ ನೀರು ತಂದು ಬೈಕ್ ನಂದಿಸಲು ಹೋದ ವೇಳೆ ಬೆಂಕಿಗೆ ಆಹುತಿಯಾಗಿದ್ದಾರೆ.

ಇವರ ರಕ್ಷಣೆಗೆ ಧಾವಿಸಿದ ರಾಜಣ್ಣ ಬೆಂಕಿ ತಗುಲಿ ಗಾಯಗೊಂಡು ತುಮ­ಕೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯು­ತ್ತಿದ್ದಾರೆ. ಮನೆಯ ಹಿಂಬಾಗಿಲಿಂದ ಹೊರ ಹೋಗಿದ್ದರಿಂದ ರಾಜಣ್ಣ ಅವರ ಪತ್ನಿ, ಇಬ್ಬರು ಮಕ್ಕಳು ಪ್ರಾಣಾಪಾ­ಯದಿಂದ ಪಾರಾಗಿದ್ದಾರೆ.
ತುಮಕೂರು ಜಿಲ್ಲೆಯ ಶಿರಾ ತಾಲ್ಲೂಕಿನಲ್ಲಿ ಸೋವಾರ ರಾತ್ರಿ ಸಿಡಿಲು ಬಡಿದು ಮಹಿಳೆಯೊಬ್ಬರು ಮೃತಪಟ್ಟು, ನಾಲ್ವರು ಗಾಯಗೊಂಡಿದ್ದಾರೆ.

ಇಬ್ಬರು ಮಹಿಳೆಯರ ಸಾವು: ಕೂಲಿ ಅರಸಿ ಬಂದ ಇಬ್ಬರು ಮಹಿಳೆಯರು ಹಳ್ಳದ ನೀರಿನಲ್ಲಿ ಕೊಚ್ಚಿಹೋದ ಘಟನೆ ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರ ಪಟ್ಟಣ ಸಮೀಪದ ಗಿರಿಯಾಪುರ ಗ್ರಾಮ­ದಲ್ಲಿ ಭಾನುವಾರ ಸಂಜೆ ಸಂಭವಿಸಿದೆ. ಚಿಕ್ಕಮಗಳೂರು ಜಿಲ್ಲೆಯ ಯಗಟಿ ಗ್ರಾಮದ ಗೌರಮ್ಮ (40), ಶಾರದಮ್ಮ (50) ಮೃತ ದುರ್ದೈವಿ­ಗಳು. ಕೂಲಿ ಕೆಲಸ ಅರಸಿ ಬಂದ ಹಲ­ವರು ಗಿರಿಯಾ­ಪುರ ಗ್ರಾಮದ ಹಳ್ಳ ದಾಟು­ವಾಗ ಈ ದುರಂತ ಸಂಭವಿಸಿದೆ.

ಘಟನೆಯು ಭಾನುವಾರ ರಾತ್ರಿಯೇ ಗೊತ್ತಾಯಿತಾ­ದರೂ, ಅವ­ರ­ನ್ನು ಹುಡು­ಕುವ ಪ್ರಯತ್ನಕ್ಕೆ ಮಳೆ ಅಡ್ಡಿ ಆಗಿತ್ತು. ಸೋಮವಾರ ಕಡೂರಿನ ಅಗ್ನಿಶಾ­ಮಕ ದಳ, ಪಟ್ಟಣ ಪೊಲೀಸ್‌ ಸಿಬ್ಬಂದಿ, ಠಾಣಾಧಿಕಾರಿ ಲಿಂಗ­ರಾಜು, ಜಂಟಿ­ಯಾಗಿ ನಡೆಸಿದ ಕಾರ್ಯಾ­ಚರಣೆ­ಯಲ್ಲಿ ಎರಡೂ ಶವಗಳು ಸಿಕ್ಕಿವೆ.

ಸಿಡಿಲಿಗೆ ಬಾಲಕಿ ಬಲಿ: ದಾವಣಗೆರೆ, ಚಿತ್ರದುರ್ಗ ಹಾಗೂ ಶಿವಮೊಗ್ಗ ಜಿಲ್ಲೆ­ಗಳ ವ್ಯಾಪ್ತಿಯಲ್ಲಿ ಮಧ್ಯಾಹ್ನ ಗುಡುಗು–ಸಿಡಿಲು ಸಹಿತ ಬಿರು­ಸಿನ ಮಳೆ­ಯಾಗಿದೆ. ಸಿಡಿಲಿಗೆ ಮೊಳ­ಕಾಲ್ಮರು ತಾಲ್ಲೂಕಿನ ನಾಗ­ಸಮುದ್ರ­ದಲ್ಲಿ ಬಾಲಕಿಯೊಬ್ಬಳು ಮೃತಪಟ್ಟಿ­ದ್ದರೆ, ದಾವಣಗೆರೆಯ ಹರಪನಹಳ್ಳಿ ತಾಲ್ಲೂಕಿನಲ್ಲಿ ಇಬ್ಬರಿಗೆ ತೀವ್ರ ಗಾಯ­ವಾದ ಘಟನೆಗಳು ನಡೆದಿವೆ. ಇದೇ ತಾಲ್ಲೂಕಿನಲ್ಲಿ ಸಿಡಿಲಿಗೆ ಮೂರು ಎತ್ತು, ಚಿತ್ರದುರ್ಗದ ಸಣ್ಣಕಿಟ್ಟದಹಳ್ಳಿ ಗೊಲ್ಲರ­ಹಟ್ಟಿ­­ಯಲ್ಲಿ ಒಂದು ಎತ್ತು ಮೃತ­ಪಟ್ಟಿವೆ. ಮೃತ ಬಾಲಕಿಯನ್ನು ನಾಗ­ಸಮು­ದ್ರದ ಮಾರಣ್ಣ ಅವರ ಮಗಳು ಮಹಾಂ­ತಮ್ಮ (12) ಎಂದು ಗುರು­ತಿ­ಸ­ಲಾಗಿದೆ. ಹೊಲದಿಂದ ಮನೆಗೆ ವಾಪಸ್ ಹೋಗುವಾಗ ಕೆರೆ ಅಂಗಳ ಬಳಿ ಈ ಘಟನೆ ನಡೆದಿದೆ.

ದಾವಣಗೆರೆ ಜಿಲ್ಲೆಯ ಹರಪನಹಳ್ಳಿ ತಾಲ್ಲೂಕಿನ ತೌಡೂರಿನಲ್ಲಿ ವಿದ್ಯುತ್‌ ತಂತಿ ಬದಲಾವಣೆ ಸಂದರ್ಭದಲ್ಲಿ ಸಿಡಿಲು ಬಡಿದು ತಂತಿಗಳಲ್ಲಿ ವಿದ್ಯುತ್‌ ಪ್ರವಹಿಸಿದ್ದರಿಂದ ಅಜ್ಜಪ್ಪ, ಭೀಮಪ್ಪ ಎಂಬುವವರು ತೀವ್ರವಾಗಿ ಗಾಯ­ಗೊಂಡಿ­ದ್ದಾರೆ. ಅವರಿಬ್ಬರನ್ನು ಹೆಚ್ಚಿನ ಚಿಕಿ­ತ್ಸೆಗೆ ದಾವಣಗೆರೆಯ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಚಿತ್ರ­ದುರ್ಗ ಜಿಲ್ಲೆಯ ಹೊಸದುರ್ಗ ತಾಲ್ಲೂ­ಕಿನ ಸಣ್ಣ­ಟ್ಟದ­ಹಳ್ಳಿ ಗೊಲ್ಲರ­ಹಟ್ಟಿ­­ಯಲ್ಲಿ ಎತ್ತು ಸಿಡಿಲಿಗೆ ಬಲಿ­ಯಾಗಿದೆ.

ಶಿವಮೊಗ್ಗದಲ್ಲೂ ಉತ್ತಮ ಮಳೆ: ಶಿವಮೊಗ್ಗ ನಗರದಲ್ಲೂ ಗುಡುಗು– ಸಿಡಿಲು ಸಹಿತ ಮಳೆಯಾಗಿದ್ದು, ವಿನೋಬ­­ನಗರದ 100 ಅಡಿ ರಸ್ತೆ ಬಳಿ ಮರವೊಂದು ಧರೆಗೆ ಉರುಳಿದೆ. ಶಿಕಾರಿ­ಪುರ, ತೀರ್ಥಹಳ್ಳಿ, ಹೊಸ­ನಗರ, ಸಾಗರ ತಾಲ್ಲೂಕು­ಗಳಲ್ಲಿಯೂ ಗುಡುಗು ಸಿಡಿಲು ಸಹಿತ ಮಳೆ ಸುರಿದಿದೆ.

ಕುಶಾಲನಗರದಲ್ಲಿ: ಕೊಡಗು ಜಿಲ್ಲೆಯ ಕುಶಾಲನಗರ ಪಟ್ಟಣ ಮತ್ತು ಸುತ್ತ­ಮುತ್ತಲಿನ ಪ್ರದೇಶಗಳಲ್ಲಿ ವಾರ­ದಿಂದ ಬಿಡುವು ನೀಡಿದ್ದ ಮಳೆ ಸೋಮವಾರ ಒಂದೂ­ವರೆ ಗಂಟೆಗೂ ಹೆಚ್ಚು ಕಾಲ ಸುರಿಯಿತು. ಇದರಿಂದ ಪಟ್ಟಣದ ಕೆಲ ಬಡಾವಣೆಗಳ ಹಲವು ಮನೆಗಳಿಗೆ, ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣಕ್ಕೆ ನೀರು ನುಗ್ಗಿ ಜನಜೀವನ ಅಸ್ತವ್ಯಸ್ತ­ವಾಯಿತು.

ಬೆಳಿಗ್ಗೆ 11.45ರಿಂದ ಮಧ್ಯಾಹ್ನ 1.20ರ ತನಕ ರಭಸವಾಗಿ ಮಳೆ ಸುರಿ­ಯಿತು. ಕುಶಾಲನಗರದ ಬಸ್‌ ನಿಲ್ದಾಣಕ್ಕೆ ನೀರು ನುಗ್ಗಿದ್ದರಿಂದ ಪ್ರಯಾ­ಣಿಕರಿಗೆ ನಿಲ್ಲಲು ಜಾಗವಿಲ್ಲದೆ ಪರ­ದಾಡುವಂತಹ ಸ್ಥಿತಿ ನಿರ್ಮಾಣ­ವಾಯಿತು. ಮಳೆಯ ಜತೆ ಗಾಳಿಯೂ ಬೀಸಿದ್ದ­ರಿಂದ ಕೂಡ್ಲೂರಿನಲ್ಲಿ ಕೆಲವು ಮನೆಗಳ ಛಾವಣಿಗಳ ಶೀಟುಗಳು ಹಾರಿ ಹೋಗಿ ನಷ್ಟ ಉಂಟಾಗಿದೆ.

ಹಾಸನದಲ್ಲಿ ಮಳೆ: ಹಾಸನ ಜಿಲ್ಲೆಯ ಹಲವೆಡೆ ಸೋಮವಾರ ಮಳೆಯಾ­ಗಿದೆ. ಹಾಸನ ನಗರದಲ್ಲಿ ಮಧ್ಯಾಹ್ನ 2.15ರ ಸುಮಾರಿಗೆ ಆರಂಭವಾಗಿ ಅರ್ಧ ಗಂಟೆ ಕಾಲ ಭಾರಿ ಮಳೆ ಸುರಿದಿದೆ. ಹಾಸನ ಮಾತ್ರವಲ್ಲದೆ ಚನ್ನರಾಯ­ಪಟ್ಟಣ, ಬೇಲೂರು, ಆಲೂರು, ಅರಸೀಕೆರೆ ತಾಲ್ಲೂಕು­ಗಳಲ್ಲೂ ಮಳೆ­ಯಾಗಿದೆ. ಆಲೂರಿನಲ್ಲಿ ಸಂಜೆ ಗುಡುಗು ಸಿಡಿಲು ಸಹಿತ ಮಳೆಯಾ­ಗಿದ್ದು, ಮಡ­ಬಲು ಗ್ರಾಮದಲ್ಲಿ ಸಿಡಿಲು ಬಡಿದು ಶಿವೇಗೌಡ ಅವರಿಗೆ ಸೇರಿದ ಸುಮಾರು ₨ 30ಸಾವಿರ ಮೌಲ್ಯದ ಒಂದು ಎತ್ತು ಅಸು ನೀಗಿದೆ.

ಗಾಯಾಳು ಸಾವು: ಭಾನುವಾರ ಸಂಜೆ ಗಾಳಿಮಳೆ ವೇಳೆ ಧಾರವಾಡ ಜಿಲ್ಲೆಯ ನವಲ­ಗುಂದ ಬಸ್‌ ನಿಲ್ದಾಣದ ಮೇಲ್ಚಾ­ವಣಿಯ ತಗಡು ಗಾಳಿಗೆ ಹಾರಿ ಬಂದು ಬಡಿದು ಗಾಯ­ಗೊಂ­ಡಿದ್ದ ನವಲ­ಗುಂದದ ನಿಂಗನ­ಗೌಡ ಬೆಳವಟಗಿ (55) ಹುಬ್ಬಳ್ಳಿಯ ಕಿಮ್ಸ್‌ ಆಸ್ಪತ್ರೆ­ಯಲ್ಲಿ ಕೊನೆಯುಸಿ­ರೆಳೆದಿದ್ದಾರೆ.

ವಿವಿಧೆಡೆ ಮಳೆ: ಉತ್ತರ ಕನ್ನಡ, ಬೆಳ­ಗಾವಿ, ಗದಗ ಮತ್ತು ಧಾರವಾಡ ಜಿಲ್ಲೆ­ಗಳಲ್ಲಿ ಸೋಮವಾರ ಮಳೆಯಾ­ಗಿದೆ. ಉತ್ತರ ಕನ್ನಡ ಜಿಲ್ಲೆಯ ಮುಂಡ­ಗೋಡ ತಾಲ್ಲೂ­ಕಿನ ಆಲಳ್ಳಿ ಮತ್ತು ಮುಡಸಾಲಿ ಗ್ರಾಮದಲ್ಲಿ ಆಲಿಕಲ್ಲು ಮಳೆ­ಯಾಗಿ ಬಾಳೆ ಬೆಳೆ ನೆಲಕಚ್ಚಿದ್ದು, ಅಪಾರ ಹಾನಿಯಾಗಿದೆ.

ಪಾರಾದ ಬಾಲಕರು: ಗದಗ ಜಿಲ್ಲೆಯ ಲಕ್ಷ್ಮೇಶ್ವರ ಪಟ್ಟಣದಲ್ಲಿ ಸೋಮವಾರ ಮಳೆಯಾಗಿದ್ದು, ಸಮೀಪದ ಸೂರಣಗಿ ಗ್ರಾಮದ ಸಣ್ಣ ಹಳ್ಳಕ್ಕೆ ಪ್ರವಾಹ ಬಂದಿದ್ದರಿಂದ, ನೀರಿನ ಸೆಳ­ವಿಗೆ ಸಿಕ್ಕು ತೇಲಿ ಹೋಗುತ್ತಿದ್ದ ಇಬ್ಬರು ಬಾಲಕರನ್ನು ಗ್ರಾಮಸ್ಥರು ರಕ್ಷಿಸಿದ್ದಾರೆ.
ಸಿಡಿಲಿಗೆ ಯುವಕ ಬಲಿ: ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲ್ಲೂಕಿನ ಯರ್ರಮ್ಮನಹಳ್ಳಿಯಲ್ಲಿ ಸೋಮವಾರ ಸಂಜೆ ಸಿಡಿಲು ಬಡಿದು ಕೆ.ಬಸವರಾಜ (೩೦) ಮೃತಪಟ್ಟಿದ್ದಾರೆ. ಹೊಲ­ದಲ್ಲಿ ನೀರು ಹಾಯಿಸಲು ಹೋಗಿದ್ದಾಗ ದುರಂತ ಸಂಭವಿಸಿದೆ.

Write A Comment