ಕರ್ನಾಟಕ

ಸೋಮವಾರ ರಾತ್ರಿ ಸುರಿದ ಧಾರಾಕಾರ ಮಳೆ; ಕಾಲುವೆಯಲ್ಲಿ ಕೊಚ್ಚಿ ಹೋದ ಬಾಲಕಿ

Pinterest LinkedIn Tumblr

bang

ಬನ್ನೇರುಘಟ್ಟ ರಸ್ತೆಯ ಬಿಳೇಕಹಳ್ಳಿಯಲ್ಲಿ ಸೋಮವಾರ ರಾತ್ರಿ ಮುಖ್ಯ ಕಾಲುವೆಯಲ್ಲಿ ಬಿದ್ದ ಬಾಲಕಿಗಾಗಿ ಅಗ್ನಿಶಾಮಕ ಸಿಬ್ಬಂದಿ ಶೋಧ ನಡೆಸಿದರು. ಗೀತಾಲಕ್ಷ್ಮಿ.

ಬೆಂಗಳೂರು: ನಗರದಲ್ಲಿ ಸೋಮವಾರ ರಾತ್ರಿ ಸುರಿದ ಧಾರಾಕಾರ ಮಳೆ­ಯಿಂದಾಗಿ ಬನ್ನೇರುಘಟ್ಟ ರಸ್ತೆಯ ಬಿಳೇಕಹಳ್ಳಿಯಲ್ಲಿ ಗೀತಾಲಕ್ಷ್ಮಿ (9) ಎಂಬ ಬಾಲಕಿ ಮುಖ್ಯ ಕಾಲುವೆಗೆ ಬಿದ್ದು ನೀರಿನಲ್ಲಿ ಕೊಚ್ಚಿ ಹೋಗಿದ್ದಾಳೆ. ಪಾಲಿಕೆಯ ಸಿಬ್ಬಂದಿ ಮುಖ್ಯಕಾಲುವೆ ದುರಸ್ತಿಗಾಗಿ ಕಾಲುವೆ ಮೇಲಿನ ಚಪ್ಪಡಿಕಲ್ಲುಗಳನ್ನು ತೆಗೆದಿದ್ದರು.

ರಾತ್ರಿ 8.30ರ ಸುಮಾರಿಗೆ ಬಾಲಕಿ ತನ್ನ ಅತ್ತೆ ಲಕ್ಷ್ಮಿ ಅವರೊಂದಿಗೆ ನಡೆದು ಹೋಗು­ತ್ತಿದ್ದಾಗ ಕಾಲು ಜಾರಿ ಕಾಲುವೆಗೆ ಬಿದ್ದಿದ್ದಾಳೆ ಎಂದು ಪಾಲಿಕೆ ಎಂಜಿನಿ­ಯರ್‌ ರವಿ ಸುದ್ದಿಗಾರರಿಗೆ ತಿಳಿಸಿದರು. ಮುಖ್ಯ ಕಾಲುವೆಯು ಬಿಳೇಕಹಳ್ಳಿಯ ರಾಜಕಾಲುವೆಗೆ ಸಂಪರ್ಕ ಹೊಂದಿದೆ. ಕಾಲುವೆಯಲ್ಲಿ ಐದು ಅಡಿಗೂ ಹೆಚ್ಚು ನೀರು ಹರಿಯುತ್ತಿದ್ದರಿಂದ ಬಾಲಕಿ ಕೊಚ್ಚಿ ಹೋಗಿದ್ದಾಳೆ.

ತಮಿಳುನಾಡು ಮೂಲದ ಗೀತಾಲಕ್ಷ್ಮಿ ವಿಜಯದಶಮಿ ಅಂಗವಾಗಿ ರಜೆ ಕಳೆ­ಯಲು ತಾತ, ಅಜ್ಜಿಯ ಜೊತೆ ನಾಲ್ಕು ದಿನಗಳ ಹಿಂದೆ ದೊರೆಸಾನಿಪಾಳ್ಯದ ಪುಟ್ಟೇನಹಳ್ಳಿ ವಾರ್ಡ್‌ನಲ್ಲಿರುವ ಅತ್ತೆ ಮನೆಗೆ ಬಂದಿದ್ದಳು. ಘಟನೆಯಿಂದಾಗಿ ಆಘಾತಗೊಂಡು ಅಸ್ವಸ್ಥರಾದ ಲಕ್ಷ್ಮಿ ಅವರಿಗೆ ಸಮೀಪದ ಫೋರ್ಟಿಸ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡ­ಲಾಯಿತು. ಅಗ್ನಿಶಾಮಕ ಸಿಬ್ಬಂದಿ, ಪೊಲೀ­ಸರು ಹಾಗೂ ಪಾಲಿಕೆ ಸಿಬ್ಬಂದಿಗಳು ಮಧ್ಯರಾತ್ರಿವರೆಗೂ ಕಾರ್ಯಾಚರಣೆ ನಡೆಸಿದರೂ ಬಾಲಕಿ ಪತ್ತೆಯಾಗಲಿಲ್ಲ.

ಘಟನಾ ಸ್ಥಳಕ್ಕೆ ಭೇಟಿ ನೀಡಿದ ಪಾಲಿಕೆ ಆಯುಕ್ತ ಎಂ.ಲಕ್ಷ್ಮೀನಾರಾಯಣ, ‘ಆಕಸ್ಮಿಕ­ವಾಗಿ ಈ ಘಟನೆ ನಡೆದಿದೆ. ಬಾಲಕಿ ಪತ್ತೆಯಾಗುವವರೆಗೂ ಕಾರ್ಯಾ­ಚರಣೆ ನಡೆಸಲಾಗುವುದು. ಅಲ್ಲದೆ ಮುಖ್ಯಕಾಲುವೆಯ ದುರಸ್ತಿ ಕಾರ್ಯವನ್ನು ಶೀಘ್ರ ಪೂರ್ಣ­ಗೊಳಿಸುವಂತೆ ಸೂಚನೆ ನೀಡ­ಲಾಗು­ವುದು’ ಎಂದು ತಿಳಿಸಿದರು. ಜೆ.ಪಿ.ನಗರ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿದೆ.

ವಾಹನದಟ್ಟಣೆ: ಧಾರಾಕಾರ ಮಳೆ­ಯಿಂದಾಗಿ ಪೀಣ್ಯ, ಇಂದಿರಾನಗರ, ಯಶವಂತಪುರ, ರಾಜಾಜಿನಗರ, ಶಾಂತಿ­ನಗರ, ಹಲಸೂರು, ಕೆಂಪೇಗೌಡ ರಸ್ತೆ, ಕಾರ್ಪೊರೇಷನ್‌ ವೃತ್ತ, ಬನ್ನೇರುಘಟ್ಟ ರಸ್ತೆ, ಶಿವಾನಂದ ವೃತ್ತದಲ್ಲಿ ರಸ್ತೆ­ಯುದ್ದಕ್ಕೂ ನೀರು ನಿಂತಿದ್ದರಿಂದ ವಾಹನ ದಟ್ಟಣೆ ಕಂಡುಬಂತು.

ತುಮಕೂರು ರಸ್ತೆಯಲ್ಲಿ ಹೆಚ್ಚಿನ ವಾಹನ ದಟ್ಟಣೆ ಉಂಟಾಗಿದ್ದರಿಂದ ವಾಹನ ಸವಾವರರು ಒಂದು ತಾಸಿಗೂ ಹೆಚ್ಚು ಕಾಲ ರಸ್ತೆಯಲ್ಲೇ ಕಾಯ­ಬೇಕಾಯಿತು. ಆನಂದರಾವ್‌ ವೃತ್ತದ ಬಳಿಯ ಕಿನೋ ಚಿತ್ರಮಂದಿರ ಬಳಿಯ ಅಂಡರ್‌­ಪಾಸ್‌ನಲ್ಲಿ ಹೆಚ್ಚಿನ ನೀರು ಸಂಗ್ರಹ­ವಾಗಿತ್ತು. ಬಿಬಿಎಂಪಿ ಸಿಬ್ಬಂದಿ ಎರಡು ಪಂಪ್‌ಗಳಿಂದ ನೀರನ್ನು ಹೊರ ಹಾಕಿದರು. ನಗರದ ಒಳಭಾಗದಲ್ಲಿ 25.8 ಮಿ.ಮೀ, ಎಚ್‌ಎಲ್‌ ವಿಮಾನ ನಿಲ್ದಾಣದಲ್ಲಿ 8.2, ಯಲಹಂಕದಲ್ಲಿ 35 ಮಿ.ಮೀ.ಮಳೆಯಾಗಿದೆ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ತಿಳಿಸಿದರು.
(ಪ್ರಜಾವಾಣಿ)

Write A Comment