ಕರ್ನಾಟಕ

ಮಗನ ಪ್ರೇಮ ವಿವಾಹ: ತಾಯಿಯ ಆತ್ಮಹತ್ಯೆ

Pinterest LinkedIn Tumblr

suicide

ಬೆಂಗಳೂರು, ಅ.6: ಮಗ ಪ್ರೇಮ ವಿವಾಹ ಮಾಡಿಕೊಂಡ ನೆಂಬ ಕ್ಷುಲ್ಲಕ ಕಾರಣಕ್ಕೆ ಮಹಿಳೆಯೊಬ್ಬರು ರಿವಲ್ವಾರ್‌ನಿಂದ ತಲೆಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಎಚ್‌ಎಎಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಆತ್ಮಹತ್ಯೆ ಮಾಡಿಕೊಂಡ ಮಹಿಳೆಯನ್ನು ಎಚ್‌ಎಎಲ್ ರಸ್ತೆಯ ಜಮೀನ್ದಾರ ವೆಂಕಟೇಶ್‌ರ ಪತ್ನಿ ಪ್ರಭಾ(51) ಎಂದು ಗುರುತಿಸಲಾಗಿದೆ. ವೆಂಕಟೇಶ್‌ಪ್ರಭಾ ದಂಪತಿಗೆ ಡಾ.ಕಿರಣ್ ಹಾಗೂ ಗೌತಮ್ ಎನ್ನುವ ಇಬ್ಬರು ಮಕ್ಕಳಿದ್ದರು. ಎಂಜಿನಿಯರ್ ಆಗಿದ್ದ ಕಿರಿಯ ಪುತ್ರ ಗೌತಮ್ ಯುವತಿಯೊಬ್ಬರನ್ನು ಪ್ರೀತಿಸಿ ಇತ್ತೀಚೆಗಷ್ಟೆ ಅನ್ಯ ಜಾತಿಯ ಯುವತಿಯನ್ನು ಮದುವೆಯಾಗಿದ್ದ, ಪ್ರೀತಿಯ ಮಗನ ಪ್ರೇಮ ವಿವಾಹದಿಂದ ತಾಯಿ ಪ್ರಭಾ ಅವರು ನೊಂದಿದ್ದರು ಎನ್ನಲಾಗಿದೆ.

ಅದೇ ನೋವಿನಲ್ಲಿ ಅವರು ರವಿವಾರ ರಾತ್ರಿ ಮನೆಯಲ್ಲಿ ಯಾರು ಇಲ್ಲದ ಸಮಯದಲ್ಲಿ ಪತಿ ರಕ್ಷಣೆಗಾಗಿ ತಂದಿಟ್ಟುಕೊಂಡಿದ್ದ ರಿವಲ್ವಾರ್‌ನಲ್ಲಿ ತಲೆಗೆ ಗುಂಡು ಹಾರಿಸಿಕೊಂಡರು. ತಕ್ಷಣ ಅವರನ್ನು ಸಮೀಪದ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ತಡರಾತ್ರಿ ಮೃತಪಟ್ಟಿದ್ದಾರೆ.
ಈ ಮೊಕದ್ದಮೆಯನ್ನು ದಾಖಲಿಸಿಕೊಂಡಿರುವ ಎಚ್‌ಎಎಲ್ ಠಾಣಾ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

Write A Comment