ಕರ್ನಾಟಕ

ರೈತ ಹೋರಾಟಗಾರ ಗಣಪತಿಯಪ್ಪ ನಿಧನ

Pinterest LinkedIn Tumblr

ganapathiyappa

ಶಿವಮೊಗ್ಗ, ಸೆ.30: ಭೂ ಮಾಲ ಕರ ವಿರುದ್ಧ ಸಿಡಿದೆದ್ದು ಬಡ ರೈತರಿಗೆ ಭೂ ಒಡೆತನದ ಹಕ್ಕು ಕೊಡಿಸುವಲ್ಲಿ ಯಶಸ್ವಿಯಾದ ಇತಿಹಾಸ ಪ್ರಸಿದ್ಧ ಕಾಗೋಡು ಸತ್ಯಾಗ್ರಹದ ರೂವಾರಿ, ಹಿರಿಯ ಸ್ವಾತಂತ್ರ್ಯ ಹೋರಾಟಗಾರ, ದೇವರಾಜ್ ಅರಸು ಪ್ರಶಸ್ತಿ ಪುರಸ್ಕೃತರಾಗಿದ್ದ ಹಿರಿಜೀವ ಎಚ್.ಗಣಪತಿಯಪ್ಪ(90) ದೀರ್ಘ ಕಾಲೀನ ಅನಾರೋಗ್ಯದಿಂದ ಮಂಗಳವಾರ ಬೆಳಗ್ಗೆ ವಿಧಿವಶರಾಗಿದ್ದಾರೆ.

ಇದರಿಂದ ಸಮಾಜವಾದಿ ಹೋರಾಟದ ಮತ್ತೊಂದು ಕೊಂಡಿ ಕಳಚಿದಂತಾಗಿದೆ. ಜಿಲ್ಲೆಯ ಸಾಗರ ಪಟ್ಟಣಕ್ಕೆ ಸಮೀಪದ ವಡ್ನಾಳ ಗ್ರಾಮದ ಲ್ಲಿರುವ ಸ್ವಗೃಹದಲ್ಲಿ ಬೆಳಗ್ಗೆ ಅವರು ಇಹಲೋಕ ತ್ಯಜಿಸಿದ್ದಾರೆ. ಮೃತರು ಪತ್ನಿ, ಆರು ಪುತ್ರರು, ನಾಲ್ಕು ಪುತ್ರಿಯರು ಸೇರಿದಂತೆ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ. ಮೃತರ ಪಾರ್ಥಿವ ಶರೀರದ ಅಂತ್ಯಸಂಸ್ಕಾರ ಬುಧವಾರ ವಡ್ನಾಳ ಗ್ರಾಮದಲ್ಲಿಯೇ ನಡೆಯಲಿದೆ ಎಂದು ಕುಟುಂಬದ ಮೂಲಗಳು ಮಾಹಿತಿ ನೀಡಿವೆ. ಕಳೆದ ಕೆಲವು ವರ್ಷಗಳಿಂದ ಗಣಪತಿಯಪ್ಪರವರ ಆರೋಗ್ಯದಲ್ಲಿ ಏರುಪೇರು ಕಂಡು ಬಂದಿತ್ತು. ಉಸಿರಾಟದ ಸಮಸ್ಯೆ ಸೇರಿದಂತೆ ವಿವಿಧ ಅನಾರೋಗ್ಯ ಸಮಸ್ಯೆಯಿಂದ ಬಳಲು ತ್ತಿದ್ದರು. ಕುಟುಂಬ ಸದಸ್ಯರು ಅವರನ್ನು ಖಾಸಗಿ ಆಸ್ಪತ್ರೆಗಳಲ್ಲಿ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದರು. ಆದಾಗ್ಯೂ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿರಲಿಲ್ಲ. ವೈದ್ಯರ ಸಲಹೆಯ ಮೇರೆಗೆ ಅವರನ್ನು ಮನೆಯಲ್ಲಿಯೇ ಹಾರೈಕೆ ಮಾಡಲಾಗುತ್ತಿತ್ತು.

ಸಂತಾಪ: ವಡ್ನಾಳ ಗ್ರಾಮದ ಸ್ವಗೃಹದಲ್ಲಿಯೇ ಗಣಪತಿಯಪ್ಪರವರ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಅವರ ಸಾವಿನ ವಿಷಯ ತಿಳಿಯುತ್ತಿದ್ದಂತೆ ಗಣ್ಯರು, ಸಂಘಸಂಸ್ಥೆಗಳ ಮುಖಂಡರು ಸೇರಿದಂತೆ ನೂರಾರು ನಾಗರಿಕರು ವಡ್ನಾಳ ಗ್ರಾಮಕ್ಕೆ ದೌಡಾಯಿಸಿ, ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆಯುತ್ತಿದ್ದಾರೆ. ಗಣಪತಿಯಪ್ಪರವರ ನಿಧನಕ್ಕೆ ಗಣ್ಯರು ಹಾಗೂ ವಿವಿಧ ಸಂಘಸಂಸ್ಥೆಗಳ ಮುಖಂಡರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಅವರ ಆತ್ಮಕ್ಕೆ ಭಗವಂತ ಚಿರ ಶಾಂತಿ ಕರುಣಿಸಲಿ, ಕುಟುಂಬ ಸದಸ್ಯರಿಗೆ ಅವರ ಸಾವಿನ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸಿದ್ದಾರೆ.

ವಿಧಾನಸಭೆ ಸ್ಪೀಕರ್ ಕಾಗೋಡು ತಿಮ್ಮಪ್ಪ, ಜಿಲ್ಲಾ ಉಸ್ತುವಾರಿ ಸಚಿವ ಕಿಮ್ಮನೆ ರತ್ನಾಕರ್, ಲೋಕಸಭಾ ಸದಸ್ಯ ಬಿ.ಎಸ್.ಯಡಿಯೂರಪ್ಪ, ಸಾಹಿತಿ ನಾ. ಡಿಸೋಜ, ಹೋರಾಟಗಾರ ಕಲ್ಲೂರು ಮೇಘರಾಜ್ ಸೇರಿದಂತೆ ಜಿಲ್ಲೆಯ ವಿವಿಧ ಸಂಘಸಂಸ್ಥೆಗಳ ಮುಖಂಡರು, ಜನಪ್ರತಿನಿಧಿಗಳು ಎಚ್.ಗಣಪತಿಯಪ್ಪ ನಿಧನಕ್ಕೆ ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ. ಹೋರಾಟದ ಚಿಲುಮೆ: ಎಚ್.ಗಣಪತಿಯಪ್ಪರವರು ಹೋರಾಟಗಾರರಿಗೆ ಸ್ಪೂರ್ತಿಯ ಚಿಲುಮೆಯಾಗಿದ್ದರು. ಅನ್ಯಾಯ, ಶೋಷಣೆಯ ವಿರುದ್ಧ ಸಿಡಿದೇಳುತ್ತಿದ್ದರು. ಯಾವುದೇ ಸಂದರ್ಭದಲ್ಲಿಯೂ ತಮ್ಮ ಹೋರಾಟದಲ್ಲಿ ರಾಜಿ ಮಾಡಿಕೊಳ್ಳದ ಮೇರು ವ್ಯಕ್ತಿತ್ವ ಅವರದ್ದಾಗಿತ್ತು. ನಿಜಕ್ಕೂ ಅಪರೂಪದಲ್ಲಿನ ಅಪರೂಪದ ಹೋರಾಟಗಾರರಾಗಿದ್ದರು. ಹೋರಾಟದ ಕೊನೆಯವರೆಗೂ ಅವರು ಖಾದಿ ಕಚ್ಚೆ- ಪಂಚೆ, ಜುಬ್ಬಾ, ನೆಹರೂ ಕೋಟು, ಕಾಂಗ್ರೆಸ್ ಟೊಪ್ಪಿಗೆಯನ್ನೂ ಧರಿಸುತ್ತಿದ್ದರು. ಇದು ಅವರು ನಂಬಿಕೊಂಡು ಬಂದಿದ್ದ ಸಿದ್ಧಾಂತಕ್ಕೆ ಸಾಕ್ಷಿಯಾಗಿತ್ತು ಎಂದು ಅವರ ಒಡನಾಡಿಗಳು ಹೇಳುತ್ತಾರೆ.

‘ಎಚ್.ಗಣಪತಿಯಪ್ಪರವರು ಮೂಲತಃ ಉತ್ತರ ಕನ್ನಡ ಜಿಲ್ಲೆ ಸಿದ್ದಾಪುರದವರಾಗಿದ್ದಾರೆ. ಈ ಹಿಂದೆ ಮಾಜಿ ಮುಖ್ಯಮಂತ್ರಿ ದಿವಂಗತ ರಾಮಕೃಷ್ಣ ಹೆಗಡೆಯವರ ವಿರುದ್ಧ ಚುನಾವಣೆಗೆ ಸ್ಪರ್ಧಿಸಿದ್ದರು. ಅತ್ಯಲ್ಪಮತಗಳ ಅಂತರದಲ್ಲಿ ಅವರು ಪರಾಭವಗೊಂಡಿದ್ದರು. ಸ್ವಾತಂತ್ರ್ಯ ಹೋರಾಟಕ್ಕೆ ಧುಮುಕಿದ್ದ ಅವರು ಸಿದ್ದಾಪುರ ತೊರೆದು ಸಾಗರ ತಾಲೂಕಿನ ಹಿರೇನಲ್ಲೂರಿಗೆ ಆಗಮಿಸಿ ನೆಲೆಸಿದರು. ತದನಂತರ ಸಾಗರ ಪಟ್ಟಣಕ್ಕೆ ಸಮೀಪದ ವಡ್ನಾಳ ಗ್ರಾಮದಲ್ಲಿ ವಾಸಿಸುತ್ತಿದ್ದರು’ ಎಂದು ಪ್ರಗತಿಪರ ಹೋರಾಟಗಾರ ಕಲ್ಲೂರು ಮೇಘರಾಜ್ ತಿಳಿಸುತ್ತಾರೆ. ಮಹಾತ್ಮ ಗಾಂಧೀಜಿ ತತ್ವಾದರ್ಶ, ಹೋರಾಟದಲ್ಲಿ ನಂಬಿಕೆಯಿಟ್ಟಿದ್ದ ಗಣಪತಿಯಪ್ಪರವರು ತಮ್ಮ ಜೀವನದ ಕೊನೆಯವರೆಗೂ ಅದರಂತೆ ಮುನ್ನಡೆದರು. 1942ರಲ್ಲಿ ನಡೆದ ‘ಬ್ರಿಟಿಷರೇ ಭಾರತ ಬಿಟ್ಟು ತೊಲಗಿ’ ಚಳವಳಿಯಲ್ಲಿ ಇವರು ಭಾಗವಹಿಸಿದ್ದರು.

ಬ್ರಿಟಿಷರ ವಿರುದ್ಧ ಪ್ರತಿಭಟನೆ ನಡೆಸಿದ್ದ ಇವರು ಸರಕಾರಿ ಕೆಲಸ ಕಳೆದುಕೊಂಡಿದ್ದರು. ತದನಂತರ ಬ್ರಿಟಿಷರು ಇವರನ್ನು ಬಂಧಿಸಲು ಮುಂದಾದ ವೇಳೆ ಸಿದ್ದಾಪುರದಿಂದ ತಪ್ಪಿಸಿಕೊಂಡು, ಸಾಗರಕ್ಕೆ ಬಂದಿದ್ದರು ಎಂದು ಒಡನಾಡಿಗಳು ಹೇಳುತ್ತಾರೆ. ಸಾಗರದಲ್ಲಿ ಅವರು ಸಾಗರ ರೈತ ಸಂಘ ಹೆಸರಿನಲ್ಲಿ ಗೇಣಿ ರೈತರನ್ನು ಸಂಘಟಿಸಲು ಮುಂದಾದರು. ಭೂ ಮಾಲಕರು ಗೇಣಿ ರೈತರ ಮೇಲೆ ನಡೆಸುತ್ತಿದ್ದ ಶೋಷಣೆಗೆ ಇತಿಶ್ರೀ ಹಾಡಲು ಚಳವಳಿ ರೂಪಿಸಿದರು. ಇದು ಕಾಗೋಡು ಸತ್ಯಾಗ್ರಹ ಎಂಬ ಚಳವಳಿಗೆ ಕಾರಣವಾಯಿತು. ಈ ಚಳವಳಿಯು ರಾಷ್ಟ್ರಾದ್ಯಾಂತ ಗಮನ ಸೆಳೆಯಿತು. 70ರ ದಶಕದಲ್ಲಿ ದೇವರಾಜ ಅರಸುರವರು ಮುಖ್ಯಮಂತ್ರಿಯಾಗಿದ್ದ ವೇಳೆ, ಉಳುವವನೇ ಭೂ ಒಡೆಯ ಕಾಯ್ದೆ ಜಾರಿಗೆ ತರಲು ಪ್ರೇರಣೆಯಾಯಿತು.

ಪ್ರಥಮ ಜನಾಂದೋಲನ: ಸ್ವಾತಂತ್ರೋತ್ತರ ಕರ್ನಾಟಕದಲ್ಲಿನ ಪ್ರಥಮ ಜನಾಂದೋಲನವೆನಿಸಿಕೊಂಡ ಕಾಗೋಡು ಸತ್ಯಾಗ್ರಹದ ರೂವಾರಿ ಎಚ್.ಗಣಪತಿಯಪ್ಪ ಅವರಾಗಿದ್ದಾರೆ. ಸಾಗರ ತಾಲೂಕಿನ ಕಾಗೋಡು ಸುತ್ತಮುತ್ತಲಿನ ಗ್ರಾಮಗಳಲ್ಲಿ ನಾಗರಿಕ ಜೀವನದ ಸಂಪರ್ಕವೇ ಇಲ್ಲದೆ, ಭೂ ಮಾಲಕರ ದಬ್ಬಾಳಿಕಗೆ ನಲುಗಿ ಹೋಗಿದ್ದ, ಅತ್ಯಂತ ದೈನೇಸಿ ಜೀವನ ಸಾಗಿಸುತ್ತಿದ್ದ ಗೇಣಿ ರೈತರ ಪರವಾಗಿ ಗಣಪತಿಯಪ್ಪ ಹೋರಾಟ ಪ್ರಾರಂಭಿಸಿದರು. ಗೇಣಿ ರೈತರ ಧ್ವನಿಯಾಗಿ ನಿಂತರು. ಭೂಮಾಲಕರ ಹಂಗಿನಲ್ಲಿ ಬದುಕುತ್ತಿದ್ದ ಗೇಣಿ ರೈತರಲ್ಲಿ ಸ್ವಾಭಿಮಾನದ ಪ್ರಜ್ಞೆಯನ್ನು ಜಾಗೃತಗೊಳಿಸಿದರು. ಭೂಮಾಲಕರು ನಡೆಸುತ್ತಿದ್ದ ಶೋಷಣೆಯನ್ನು ಪ್ರಶ್ನಿಸುವಂತೆ ಮಾಡಿದರು. ಅವರನ್ನು ಸಂಘಟಿಸಿ ಹೋರಾಟದ ಕಿಚ್ಚು ಹಚ್ಚಿದರು. ಪೊಲೀಸರ ಲಾಠಿ ಏಟಿಗೆ ಹೆದರದೆ, ಭೂ ಮಾಲಕರ ಬೆದರಿಕೆಗೆ ಮಣಿಯದೆ ಹೋರಾಟ ನಡೆಸಿದರು. ತದನಂತರ ರಾಮಮನೋಹರ ಲೋಹಿಯಾ, ಶಾಂತವೇರಿ ಗೋಪಾಲಗೌಡರವರು ಗೇಣಿ ರೈತರ ಪರವಾಗಿ ಹೋರಾಟಕ್ಕೆ ಧುಮುಕಿದರು. ಸಮಾಜವಾದಿ ಹೋರಾಟಗಾರರು ಭೂಮಾಲಕರ ವಿರುದ್ಧ ಅಕ್ಷರಶಃ ಹೋರಾಟದ ಸಮರ ಸಾರಿದರು. ಇದು ಕಾಗೋಡು ಸತ್ಯಾಗ್ರಹ ಎಂಬ ಹೆಸರು ಪಡೆದುಕೊಂಡು ಕ್ರಾಂತಿಕಾರಕ ಬದಲಾವಣೆಗೆ ಕಾರಣವಾಯಿತು. ಭೂ ಮಾಲಕರ ದೌರ್ಜನ್ಯಕ್ಕೆ ಕಡಿವಾಣ ಬಿದ್ದಿತು. ಆ ಭಾಗದಲ್ಲಿ ಗೇಣಿ ಪದ್ಧತಿ ಕೊನೆಗೊಳ್ಳಲು ಮುಖ್ಯ ಕಾರಣವಾಯಿತು.

Write A Comment