ಕರ್ನಾಟಕ

ಆಕ್ರೋಶಗೊಂಡ ಗ್ರಾಮಸ್ಥರಿಂದ ಜಿಲ್ಲಾಧಿಕಾರಿ, ಶಾಸಕರಿಗೆ ಮುತ್ತಿಗೆ; ಮಗು ಅಪಹರಣ ಪ್ರಕರಣ: ಮೂವರ ಅಮಾನತು

Pinterest LinkedIn Tumblr

pvec270914STA---BKT

ಬಾಗಲಕೋಟೆ: ಇಲ್ಲಿನ ಜಿಲ್ಲಾ ಆಸ್ಪತ್ರೆ­ಯಲ್ಲಿ ನಡೆದ ಮಗು ಅಪಹರಣ ಪ್ರಕರ­ಣಕ್ಕೆ ಸಂಬಂಧಿ­ಸಿದಂತೆ ಕರ್ತವ್ಯ ಲೋಪ ಎಸಗಿದ ಆರೋಪದ ಮೇಲೆ ಆಸ್ಪತ್ರೆಯ ಮೂವರು ಸಿಬ್ಬಂದಿಯನ್ನು ಶುಕ್ರವಾರ ಅಮಾನತುಗೊಳಿಸಲಾಗಿದೆ.

ಮುಧೋಳ ತಾಲ್ಲೂಕಿನ ಯಡಹಳ್ಳಿ ಗ್ರಾಮದ ಮಹಾದೇವಿ ಸುರೇಶ ಗೊಡ­ಚಣ್ಣವರ ಅವರ ಗಂಡುಮಗು ಅಪ­ಹರಣ ಸಂದರ್ಭ ಆಸ್ಪತ್ರೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಸ್ಟಾಫ್‌ ನರ್ಸ್‌ ಸಂಗಮ್ಮ ಔರಸಂಗ್, ಸಹಾಯಕಿ ಎ.ಕೆ. ಶಾಹೀದಾ ಮತ್ತು ಪ್ರಯೋಗಾ ಲಯದ ಸಿಬ್ಬಂದಿ ಆರ್.ಪಿ. ಕದಂ ಅವರನ್ನು ಜಿಲ್ಲಾಧಿಕಾರಿ ಪಿ.ಎ. ಮೇಘಣ್ಣ­ವರ ಶುಕ್ರವಾರ ಅಮಾನತು ಗೊಳಿಸಿದ್ದಾರೆ.

ಪಾಲಕರಿಂದ ಮುತ್ತಿಗೆ: ಅಪಹರಣ ದಿಂದ ಆಕ್ರೋಶಗೊಂಡ ಮಗುವಿನ ಪಾಲ­ಕರು ಮತ್ತು ಗ್ರಾಮಸ್ಥರು ಮೇಘಣ್ಣವರ ಹಾಗೂ ಶಾಸಕ ಎಚ್.ವೈ. ಮೇಟಿ ಅವರಿಗೆ ಆಸ್ಪತ್ರೆ ಆವರಣದಲ್ಲಿ ಮುತ್ತಿಗೆ ಹಾಕಿದರು. ‘ಮಗುವನ್ನು ತಕ್ಷಣ ಹುಡುಕಿ ಕೊಟ್ಟು, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಿ’ ಎಂದು ಪಾಲಕರು ಮತ್ತು ಗ್ರಾಮಸ್ಥರು ಒತ್ತಾಯಿಸಿದರು.

‘ಮಗು ಅಪಹರಣ ಪೂರ್ವ­ಯೋಜಿತವಾಗಿದೆ. ಜಿಲ್ಲಾ ಆಸ್ಪತ್ರೆ ಕಸಾಯಿಖಾನೆ ಯಂತಾಗಿದ್ದು, ಇಲ್ಲಿ ಬಡವರ ಜೀವಕ್ಕೆ ಬೆಲೆ ಇಲ್ಲದಂತಾಗಿದೆ’ ಎಂದು ರೈತ ಮುಖಂಡ ಮುತ್ತಪ್ಪ ಕೋಮಾರ ಆರೋಪಿಸಿದರು. ‘ಇನ್ನೆರಡು ದಿನದಲ್ಲಿ ಮಗು ಪತ್ತೆ­ಯಾಗದಿದ್ದರೆ ಆಸ್ಪತ್ರೆಯ ಎದುರು ಅನಿರ್ದಿಷ್ಟಾವಧಿ ಧರಣಿ ಆರಂಭಿಸ­ಲಾಗುವುದು’ ಎಂದು ಎಚ್ಚರಿಸಿದರು.

ಸಿಸಿಟಿವಿ ಅಳವಡಿಕೆ: ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಮೇಘಣ್ಣ­ನವರ್ ಅವರು ಆಸ್ಪತ್ರೆಯಲ್ಲಿ ಶೀಘ್ರವೇ ಸಿಸಿಟಿವಿ ಅಳವಡಿಸುವಂತೆ ಜಿಲ್ಲಾ ಶಸ್ತ್ರ ಚಿಕಿತ್ಸಕರಿಗೆ ಸೂಚಿಸಿದರು.

ಅಪಹೃತ ಮಗು ಪತ್ತೆ
ಬಾಗಲಕೋಟೆ: ಇಲ್ಲಿನ ಜಿಲ್ಲಾ ಆಸ್ಪತ್ರೆಯಲ್ಲಿ ಗುರುವಾರ ಅಪಹರಣ­ಕ್ಕೀಡಾಗಿದ್ದ ಮಗು ಶುಕ್ರವಾರ ತಾಲ್ಲೂಕಿನ ಬೆಣ್ಣೂರು ಗ್ರಾಮದಲ್ಲಿ ಪತ್ತೆಯಾಗಿದೆ. ಬೆಣ್ಣೂರಿನ ಗಾಯತ್ರಿ ಯಲ್ಲಪ್ಪ ಎಂಬ ಮಹಿಳೆ ಮಗುವನ್ನು ಅಪಹರಿಸಿ, ತನ್ನ ತವರೂರಾದ ವಿಜಾಪುರ ಜಿಲ್ಲೆಯ ಬಸವನಬಾಗೇವಾಡಿಗೆ ಸಾಗಿಸಿದ್ದಳು.

ಮಗುವನ್ನು ಸಾಕಲು ಕಷ್ಟವಾಗಿದ್ದರಿಂದ ಮರಳಿ ಗಂಡನ ಮನೆಯಾದ ಬೆಣ್ಣೂರಿಗೆ ಮಗುವನ್ನು ತಂದಿದ್ದಾಳೆ. ಆಗ ಸಂಶಯಗೊಂಡ ಗಂಡನ ಮನೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಬಾಗಲಕೋಟೆ ಪೊಲೀಸರು ಬೆಣ್ಣೂರಿಗೆ ಹೋಗಿ ಮಗುವನ್ನು ವಶಕ್ಕೆ ಪಡೆದು ಕೊಂಡು ಆರೋಪಿಯನ್ನು ಬಂಧಿಸಿದ್ದಾರೆ. ಮಗುವನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸುವುದಾಗಿ ಇಲ್ಲಿಯ ಡಿವೈ.ಎಸ್ಪಿ ವಿಠಲ ಜಗಲಿ ತಿಳಿಸಿದ್ದಾರೆ.

Write A Comment