ಕರ್ನಾಟಕ

ಏರ್‌ ಇಂಡಿಯಾ ವಿಮಾನ ಏಳು ಗಂಟೆ ವಿಳಂಬ

Pinterest LinkedIn Tumblr

air-india-2

ಬೆಂಗಳೂರು: ಬೆಂಗಳೂರು–ನವದೆಹಲಿ ನಡುವಿನ ಏರ್‌ ಇಂಡಿಯಾ ವಿಮಾನ (ಎಐ 505) ಶುಕ್ರವಾರ ಏಳು ಗಂಟೆ ವಿಳಂಬವಾಗಿ ಪ್ರಯಾಣ ಬೆಳೆಸಿತು. ಇದರಿಂದ ಸಂಕಷ್ಟಕ್ಕೆ ಸಿಲುಕಿದ ಪ್ರಯಾಣಿಕರು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರತಿಭಟನೆ ನಡೆಸಿದರು.

ಈ ವಿಮಾನ ಗುರುವಾರ ಬೆಳಿಗ್ಗೆ 10.30ಕ್ಕೆ ಹೊರಡಬೇಕಿತ್ತು. ತಾಂತ್ರಿಕ ಕಾರಣದಿಂದ ವಿಮಾನ ಸಂಚಾರ ವಿಳಂಬವಾಯಿತು. ಎರಡು ಗಂಟೆಗಳ ಕಾಲ ಪ್ರಯಾಣಿಕರು ತಾಳ್ಮೆಯಿಂದ ಕಾದರು. ಮಧ್ಯಾಹ್ನ ಎರಡು ಗಂಟೆಯಾದರೂ ವಿಮಾನ ಹೊರಡದೆ ಇದ್ದಾಗ ಪ್ರಯಾಣಿಕರು ಪ್ರತಿಭಟನೆ ಆರಂಭಿಸಿದರು. ‘ಏರ್‌ ಇಂಡಿಯಾ ಅಧಿಕಾರಿಗಳು ನಿರ್ಲಕ್ಷ್ಯ ತೋರುತ್ತಿದ್ದಾರೆ. ನಮಗೆ ನ್ಯಾಯ ಬೇಕು’ ಎಂದು ಘೋಷಣೆ ಕೂಗುತ್ತಾ ಪ್ರತಿಭಟನೆ ನಡೆಸಿದರು.

‘ಪದೇ ಪದೇ ಗಡುವು ವಿಸ್ತರಣೆ ಮಾಡಲಾಗುತ್ತಿದೆ. ಸಂಸ್ಥೆಯ ಅಧಿಕಾರಿಗಳಿಗೆ ಪ್ರಯಾಣಿಕರ ಬಗ್ಗೆ ಕಾಳಜಿಯೇ ಇಲ್ಲ’ ಎಂದು ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದರು. ‘ಸಂಜೆ 4.30ಕ್ಕೆ ಏರ್‌ ಇಂಡಿಯಾದ ಇನ್ನೊಂದು ವಿಮಾನ (ಎಐ 503) ದಿಲ್ಲಿಗೆ ತೆರಳಲಿದೆ. ಇದರಲ್ಲಿ ನಮ್ಮನ್ನು ಕಳುಹಿಸಬೇಕು’ ಎಂದು ಪ್ರಯಾಣಿಕರು ಪಟ್ಟು ಹಿಡಿದರು. ಕೊನೆಗೆ ಸಂಜೆ 4.45ಕ್ಕೆ ವಿಮಾನ ಹೊರಟಿತು. ವಿಳಂಬದಿಂದ ಸುಮಾರು 150 ಪ್ರಯಾಣಿಕರು ಸಂಕಷ್ಟಕ್ಕೆ ಸಿಲುಕಿದರು.

‘ವಿಮಾನ ನಿಲ್ದಾಣಕ್ಕೆ ತಲುಪಲು ಬೆಳಿಗ್ಗೆ 6.30ಕ್ಕೆ ಮನೆಯಿಂದ ಹೊರಟಿದ್ದೆ. ನಾನು 9.15ಕ್ಕೆ ವಿಮಾನ ನಿಲ್ದಾಣಕ್ಕೆ ಬಂದೆ. ದುರಸ್ತಿ ಕಾರಣ ನೀಡಿ ಸಂಚಾರ ವಿಳಂಬವಾಗಲಿದೆ ಎಂದು 10.30ರ ವೇಳೆ ಘೋಷಿಸಿದರು. ಮತ್ತಷ್ಟು ವಿಳಂಬವಾದಾಗ ಸಂಸ್ಥೆಯ ಅಧಿಕಾರಿಗಳು ಸರಿಯಾಗಿ ಸ್ಪಂದನೆ ಮಾಡಲಿಲ್ಲ. ಪರ್ಯಾಯ ವ್ಯವಸ್ಥೆಯನ್ನೂ ಮಾಡಲಿಲ್ಲ’ ಎಂದು ಚಿತ್ರವಿತರಕ ಎಸ್‌.ಎ. ಚಿನ್ನೇಗೌಡ ಆಕ್ರೋಶ ವ್ಯಕ್ತಪಡಿಸಿದರು.

‘ಸಂಸ್ಥೆಯ ಅಧಿಕಾರಿಗಳು ಪ್ರಯಾಣಿಕರ ಬಗ್ಗೆ ಕಾಳಜಿಯನ್ನೇ ವಹಿಸಲಿಲ್ಲ. ಕನಿಷ್ಠ ಕುಡಿಯುವ ನೀರಿನ ವ್ಯವಸ್ಥೆ ಮಾಡಲಿಲ್ಲ. ಇಂತಹ ಘಟನೆ ನಡೆಯುತ್ತಿರುವುದು ಇದು ಮೊದಲ ಬಾರಿ ಅಲ್ಲ. ಈ ಹಿಂದೆಯೇ ಅನೇಕ ಬಾರಿ ಇಂತಹ ಘಟನೆಗಳು ನಡೆದಿವೆ. ಆದರೂ, ಸಂಸ್ಥೆ ಎಚ್ಚರಿಕೆ ವಹಿಸಿಲ್ಲ. ನಮಗಂತೂ ದಿಕ್ಕೇ ತೋಚದಂತಾಯಿತು’ ಎಂದು ಉದ್ಯಮಿ ಗ್ರೀನ್‌ಗೌಸ್‌ ವಾಸು ಅಳಲು ತೋಡಿಕೊಂಡರು.

‘ನವದೆಹಲಿಯಲ್ಲಿ ತುರ್ತು ಸಭೆಯಲ್ಲಿ ಭಾಗವಹಿಸಬೇಕಿತ್ತು. ಬೆಳಿಗ್ಗೆ 9 ಗಂಟೆಗೆ ವಿಮಾನ ನಿಲ್ದಾಣಕ್ಕೆ ತಲುಪಿದ್ದೆ.

ತಾಂತ್ರಿಕ ಸಮಸ್ಯೆಯಿಂದ ವಿಮಾನ ಸಂಚಾರ ವಿಳಂಬವಾಗಿದೆ ಎಂದು ಆರಂಭದಲ್ಲಿ ಘೋಷಿಸಿದ್ದರು. ಪ್ರತಿ ಅರ್ಧ ಗಂಟೆಗೊಮ್ಮೆ ಸಂಚಾರದ ವೇಳಾಪಟ್ಟಿಯನ್ನು ಬದಲಿಸಿದರು. ವಿಮಾನ ಏಳು ಗಂಟೆ ವಿಳಂಬವಾಗಿ ಹೊರಟಿತು. 4–5 ಗಂಟೆ ಅವಧಿಯಲ್ಲಿ ಹೆಚ್ಚುವರಿ ವಿಮಾನ ವ್ಯವಸ್ಥೆ ಮಾಡಲು ಅವಕಾಶ ಇತ್ತು. ಆದರೆ, ಸಂಸ್ಥೆಯ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಲಿಲ್ಲ. ಪ್ರಯಾಣಿಕರ ಬಗ್ಗೆ ಕನಿಷ್ಠ ಕಾಳಜಿ ತೋರಲಿಲ್ಲ’ ಎಂದು ಪ್ರಯಾಣಿಕ ಕುಲದೀಪ್‌ ಆಕ್ರೋಶ ವ್ಯಕ್ತಪಡಿಸಿದರು.

‘ಪರ್ಯಾಯ ವ್ಯವಸ್ಥೆ’
ತಾಂತ್ರಿಕ ಕಾರಣದಿಂದ ವಿಮಾನ ವಿಳಂಬವಾಗಿದೆ. ತುರ್ತು ಪ್ರಯಾಣ ಬೆಳೆಸಬೇಕಾದವರಿಗೆ ಪರ್ಯಾಯ ವ್ಯವಸ್ಥೆ ಮಾಡಲಾಗಿದೆ. ಪ್ರಯಾಣಿಕರನ್ನು ನಿರ್ಲಕ್ಷ್ಯ ಮಾಡಲಿಲ್ಲ. ಅಧಿಕಾರಿಗಳು ಪ್ರಯಾಣಿಕರ ಸಮಸ್ಯೆಗೆ ಸ್ಪಂದಿಸಿದ್ದಾರೆ. ಆಹಾರ ಸೇರಿದಂತೆ ಅಗತ್ಯ ಸೌಲಭ್ಯಗಳನ್ನು ಒದಗಿಸಲಾಗಿದೆ. ಪ್ರಯಾಣಿಕರಿಗೆ ಯಾವುದೇ ರೀತಿಯ ಸಮಸ್ಯೆ ಆಗದಂತೆ ನೋಡಿಕೊಳ್ಳಲಾಗಿದೆ. ಲೋಪ ಸರಿಪಡಿಸಿದ ಬಳಿಕ ಮಧ್ಯಾಹ್ನ 3.55ಕ್ಕೆ ವಿಮಾನ ನವದೆಹಲಿಗೆ ತೆರಳಿದೆ.

– ಚಂದ್ರಶೇಖರ್‌, ಏರ್‌ ಇಂಡಿಯಾದ ಹಿರಿಯ ವ್ಯವಸ್ಥಾಪಕ (ಕಾರ್ಪೊರೇಟ್ ಕಮ್ಯುನಿಕೇಶನ್‌)

Write A Comment