ಅಂತರಾಷ್ಟ್ರೀಯ

ಅಮೆರಿಕ ನ್ಯಾಯಾಲಯದಿಂದ ಪ್ರಧಾನಿ ಮೋದಿಗೆ ಸಮನ್ಸ್; ಬೆಂಬಿಡದ 2002ರ ಗುಜರಾತ್ ಹತ್ಯಾಕಾಂಡ

Pinterest LinkedIn Tumblr

Modi-100

ವಾಶಿಂಗ್ಟನ್, ಸೆ.26: ಪ್ರಧಾನಿ ನರೇಂದ್ರ ಮೋದಿ ಅಮೆರಿಕಕ್ಕೆ ಭೇಟಿ ನೀಡುವ ಮುನ್ನಾ ದಿನದಂದು, 2002ರ ಗುಜರಾತ್ ಗಲಭೆಯಲ್ಲಿ ರಾಜ್ಯದ ಮುಖ್ಯಮಂತ್ರಿಯಾಗಿ ಅವರು ವಹಿಸಿದ್ದರೆನ್ನಲಾದ ಪಾತ್ರಕ್ಕಾಗಿ ಅವರ ವಿರುದ್ಧ ಮಾನವಹಕ್ಕು ಸಂಘಟನೆಯೊಂದು ನ್ಯಾಯಾಲಯದಿಂದ ಸಮನ್ಸ್ ಪಡೆದುಕೊಂಡಿದೆ.

‘‘2002ರ ಗುಜರಾತ್‌ನ ಭಯಾನಕ ಹಾಗೂ ಸಂಘಟಿತ ಹಿಂಸಾಚಾರ’’ದ ಇಬ್ಬರು ಸಂತ್ರಸ್ತರ ಜೊತೆಗೂಡಿ ನ್ಯೂಯಾರ್ಕ್‌ನ ಅಮೆರಿಕನ್ ಜಸ್ಟಿಸ್ ಸೆಂಟರ್ (ಎಜೆಸಿ) ಹೂಡಿದ ಮೊಕದ್ದಮೆಯಲ್ಲಿ ನ್ಯೂಯಾರ್ಕ್ ದಕ್ಷಿಣ ಜಿಲ್ಲೆಯ ಒಕ್ಕೂಟ ನ್ಯಾಯಾಲಯ ನರೇಂದ್ರ ಮೋದಿ ವಿರುದ್ಧ ಸಮನ್ಸ್ ಜಾರಿಗೊಳಿಸಿದೆ.

‘‘ಮೋದಿ ಮಾನವ ಕುಲದ ವಿರುದ್ಧ ಅಪರಾಧ ಎಸಗಿದ್ದಾರೆ, ನ್ಯಾಯಾಂಗಕ್ಕೆ ಹೊರತಾದ ಹತ್ಯೆಗಳಲ್ಲಿ ಪಾಲ್ಗೊಂಡಿದ್ದಾರೆ, ಸಂತ್ರಸ್ತರಿಗೆ ಚಿತ್ರಹಿಂಸೆ ನೀಡಿದ್ದಾರೆ ಹಾಗೂ ಮಾನಸಿಕ ಮತ್ತು ದೈಹಿಕ ದೌರ್ಜನ್ಯ ನಡೆಸಿದ್ದಾರೆ. ಅವರ ದೌರ್ಜನ್ಯಕ್ಕೆ ಒಳಗಾದವರಲ್ಲಿ ಹೆಚ್ಚಿನವರು ಮುಸ್ಲಿಮರು’’ ಎಂಬುದಾಗಿ ನ್ಯಾಯಾಲಯಕ್ಕೆ ಸಲ್ಲಿಸಲಾದ 28 ಪುಟಗಳ ದೂರಿನಲ್ಲಿ ಆರೋಪಿಸಲಾಗಿದೆ.

ಹಿಂಸಾಚಾರದಲ್ಲಿ ಶಾಮೀಲಾಗಿರುವುದಕ್ಕಾಗಿ ಮೋದಿಯನ್ನು ಉತ್ತರದಾಯಿಯನ್ನಾಗಿಸುವ ಗಲಭೆ ಸಂತ್ರಸ್ತರ ಪ್ರಯತ್ನದಲ್ಲಿ ತಾನು ಅವರಿಗೆ ಕಾನೂನು ನೆರವು ಮತ್ತು ಸಲಹೆ ನೀಡುತ್ತಿರುವುದಾಗಿ ಎಜೆಸಿ ಹೇಳಿದೆ.

ತಮ್ಮ ಕುಟುಂಬಗಳಲ್ಲಿ ನಡೆದ ಜೀವಹಾನಿಗಳು ಹಾಗೂ ಕುಟುಂಬಗಳು ಅನುಭವಿಸುತ್ತಿರುವ ಮಾನಸಿಕ ಕ್ಲೇಶ, ಹಿಂಸಾಚಾರವು ತಮ್ಮ ಬದುಕಿನಲ್ಲಿ ಉಂಟು ಮಾಡಿದ ಭಾವನಾತ್ಮಕ, ಆರ್ಥಿಕ ಮತ್ತು ಮಾನಸಿಕ ವಿನಾಶಕ್ಕಾಗಿ ಸಂತ್ರಸ್ತರು ಮೋದಿ ವಿರುದ್ಧ ಮೊಕದ್ದಮೆ ಹೂಡಿದ್ದಾರೆ. ‘‘ಪ್ರಧಾನಿ ಮೋದಿ ವಿರುದ್ಧ ದಾಖಲಾಗಿರುವ ಮೊಕದ್ದಮೆ ಎಲ್ಲೆಡೆಯಲ್ಲಿರುವ ಮಾನವಹಕ್ಕುಗಳ ದಮನಕರಿಗೆ ಎಚ್ಚರಿಕೆಯ ಸಂದೇಶವಾಗಿದೆ’’ ಎಂದು ಎಜೆಸಿಯ ಓರ್ವ ನಿರ್ದೇಶಕ ಜಾನ್ ಬ್ರಾಡ್ಲಿ ಹೇಳಿದ್ದಾರೆ. ‘‘ಸಮಯ ಮತ್ತು ಸ್ಥಳ ಹಾಗೂ ಅಧಿಕಾರದ ರಕ್ಷಾಕವಚ ನ್ಯಾಯದ ಹಾದಿಯಲ್ಲಿ ತಡೆಯಾಗುವುದಿಲ್ಲ’’ ಎಂದರು.

1789ರಲ್ಲಿ ಮೊದಲು ರೂಪಿಸಲಾದ ಅಮೆರಿಕದ ಫೆಡರಲ್ ಕಾನೂನು ಏಲಿಯನ್ ಟಾರ್ಟ್ ಕ್ಲೇಮ್ಸ್ ಆ್ಯಕ್ಟ್ ಅಥವಾ ಏಲಿಯನ್ ಟಾರ್ಟ್ ಸ್ಟಾಚ್ಯೂಟ್ (ಎಟಿಎಸ್) ಅನ್ವಯ ಮೋದಿ ವಿರುದ್ಧ ಮೊಕದ್ದಮೆ ಹೂಡಲಾಗಿದೆ. ಅಮೆರಿಕದಿಂದ ಹೊರಗೆ ಅಂತಾರಾಷ್ಟ್ರೀಯ ಕಾನೂನುಗಳನ್ನು ಉಲ್ಲಂಘಿಸಿ ನಡೆಸಲಾಗುವ ಕೃತ್ಯಗಳಿಗೆ ಸಂಬಂಧಿಸಿ ಅಮೆರಿಕದ ನಿವಾಸಿಗಳು ಸಲ್ಲಿಸುವ ಮೊಕದ್ದಮೆಗಳ ವಿಚಾರಣೆ ನಡೆಸಲು ಈ ಕಾನೂನು ಫೆಡರಲ್ ನ್ಯಾಯಾಲಯಗಳಿಗೆ ಕಾರ್ಯವ್ಯಾಪ್ತಿ ಒದಗಿಸುತ್ತದೆ.

ಇನ್ನೊಂದು ಮಾನವಹಕ್ಕುಗಳ ಸಂಘಟನೆ ‘ಸಿಖ್ಸ್ ಫಾರ್ ಜಸ್ಟಿಸ್’, 2002ರ ಗುಜರಾತ್ ಹತ್ಯಾಕಾಂಡದಲ್ಲಿ ಮೋದಿ ವಹಿಸಿದ್ದಾರೆನ್ನಲಾದ ಪಾತ್ರಕ್ಕಾಗಿ ಅವರ ವಿರುದ್ಧ ‘ಸಾರ್ವಜನಿಕ ವಿಚಾರಣೆ’ ನಡೆಸಲು ಉದ್ದೇಶಿಸಿದೆ. ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮರೊಂದಿಗೆ ಮೋದಿ ಶೃಂಗಸಭೆ ನಡೆಸುವ ಸಮಯದಲ್ಲಿ ಶ್ವೇತಭವನದ ಎದುರುಗಡೆಯ ಉದ್ಯಾನದಲ್ಲಿ ಅದು ವಿಚಾರಣೆ ನಡೆಸಲಿದೆ.

ಇನ್ನೊಂದು ಗುಂಪು ಅಲಯನ್ಸ್ ಫಾರ್ ಜಸ್ಟಿಸ್ ಆ್ಯಂಡ್ ಅಕೌಂಟಬಿಲಿಟಿ (ಎಜೆಎ) ಮೋದಿಗೆ ಕಪ್ಪು ಬಾವುಟ ತೋರಿಸಲು ನಿರ್ಧರಿಸಿದೆ. ಅವರು ಸೆಪ್ಟಂಬರ್ 28ರಂದು ಮ್ಯಾನಹಟನ್‌ನ ಮ್ಯಾಡಿಸನ್ ಸ್ಕ್ವೇರ್ ಗಾರ್ಡನ್‌ನಲ್ಲಿ ನಡೆಯಲಿರುವ ಭಾರತೀಯ-ಅಮೆರಿಕನ್ ಸಮುದಾಯದ ಸಾರ್ವಜನಿಕ ಸ್ವಾಗತ ಸಮಾರಂಭದಲ್ಲಿ ಭಾಗವಹಿಸಲು ತೆರಳುವಾಗ ಪ್ರತಿಭಟನೆ ನಡೆಸಲು ಅದು ಉದ್ದೇಶಿಸಿದೆ.

Write A Comment