mith
ಅಹ್ಮದಾಬಾದ್, ಸೆ.26: ಇಲ್ಲಿನ ಮೊತೆರಾ ಕ್ರೀಡಾಂಗಣವನ್ನು ವಿಶ್ವದ ಅತಿ ದೊಡ್ಡ ಕ್ರಿಕೆಟ್ ಸ್ಟೇಡಿಯಂ ಆಗಿ ನಿರ್ಮಿಸುವ ಸಾಧ್ಯತೆಯಿದೆಯೆಂದು ಗುಜರಾತ್ ಕ್ರಿಕೆಟ್ ಅಸೋಸಿಯೇಶನ್ (ಜಿಸಿಎ)ನ ಅಧ್ಯಕ್ಷರೂ ಆಗಿರುವ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಶುಕ್ರವಾರ ಪ್ರಕಟಿಸಿದ್ದಾರೆ.
ಅಹ್ಮದಾಬಾದ್ನ ‘ಗುಜರಾತ್ ಕಾಲೇಜ್’ ನಲ್ಲಿ ಗುಜರಾತ್ ಕ್ರಿಕೆಟ್ ಅಸೋಸಿಯೇಶನ್ ನಿರ್ಮಿಸಿರುವ ಕ್ರಿಕೆಟ್ ಅಭ್ಯಾಸ ಮೈದಾನದ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದ ಅವರು, ಮೊತೆರಾವನ್ನು ವಿಶ್ವದ ಅತ್ಯುತ್ತಮ ಹಾಗೂ ಅತ್ಯಾಧುನಿಕ ಕ್ರೀಡಾಂಗಣವಾಗಿ ರೂಪಿಸಲು ನಾವು ಪ್ರಯತ್ನಿಸುತ್ತಿದ್ದೇವೆ ಎಂದರು.
ಈ ಯೋಜನೆಗೆ ಸಂಪೂರ್ಣ ಬೆಂಬಲ ನೀಡುವುದಾಗಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ)ಯು ಗುಜರಾತ್ ಕ್ರಿಕೆಟ್ ಅಸೋಸಿಯೇಶನ್ಗೆ ಭರವಸೆ ನೀಡಿದೆಯೆಂದು ಶಾ ತಿಳಿಸಿದರು. ಪ್ರಾಯಶಃ ಆಸನ ಸಾಮರ್ಥ್ಯದ ಮಟ್ಟಿಗೆ ಮೊತೆರಾದ ಸರ್ದಾರ್ ಪಟೇಲ್ ಸ್ಟೇಡಿಯಂ ವಿಶ್ವದ ಅತಿ ದೊಡ್ಡ ಕ್ರೀಡಾಂಗಣವೆನಿಸಲಿದೆಯೆಂದು ಅವರು ಹೇಳಿದರು.
ಉತ್ತಮ ಸೌಕರ್ಯಗಳು ಗುಜರಾತ್ನ ಕ್ರಿಕೆಟ್ ಆಟಗಾರರಿಂದ ಅತ್ಯುತ್ತಮವಾದುದನ್ನು ಹೊರತರಲು ನೆರವಾಗಲಿದೆಯೆಂದು ಅವರು ಹೇಳಿದರು.
‘‘ಯೋಗ್ಯ ಸೌಕರ್ಯಗಳು ದೊರೆಯದಿದ್ದರೆ ಉತ್ತಮ ಕ್ರಿಕೆಟಿಗನಾಗಲು ತುಂಬಾ ಕಷ್ಟವಿದೆ. ಇಂತಹ ಸನ್ನಿವೇಶಗಳಲ್ಲಿ ಆಟಗಾರರ ಪ್ರಮಾಣ ಅಥವಾ ಗುಣಮಟ್ಟವನ್ನು ನಿರೀಕ್ಷಿಸಲು ಸಾಧ್ಯವಿಲ್ಲ. ತಳಮಟ್ಟದಲ್ಲೇ ಉತ್ತಮ ಸೌಲಭ್ಯಗಳನ್ನು ನೀಡಿದಲ್ಲಿ, ನಮಗೆ ಗುಜರಾತ್ನಿಂದ ಉತ್ತಮ ಕ್ರಿಕೆಟಿಗರು ದೊರೆಯಲಿದ್ದಾರೆ’’ ಎಂದವರು ಹೇಳಿದರು.
ಜಿಸಿಎ ಉಪಾಧ್ಯಕ್ಷ ಹಾಗೂ ರಿಲಾಯನ್ಸ್ ಗ್ರೂಪ್ನ ಕಾರ್ಪೊರೇಟ್ ವ್ಯವಹಾರಗಳ ಅಧ್ಯಕ್ಷ ಪರಿಮಳ್ ನಾಥ್ವಾನಿ ಉಪಸ್ಥಿತರಿದ್ದರು.