ಕರ್ನಾಟಕ

ಮಳೆಯ ಆರ್ಭಟಕ್ಕೆ ನಲುಗಿದ ಬೆಂಗಳೂರು

Pinterest LinkedIn Tumblr

Uttarakhand havy rain013

ಬೆಂಗಳೂರು, ಸೆ.25: ನಗರದ ವಿವಿಧೆಡೆ ಗುರುವಾರ ಸಂಜೆ ಸುರಿದ ಗುಡುಗು ಸಹಿತ ಧಾರಾಕಾರ ಮಳೆಯಿಂದ ತಗ್ಗುಪ್ರದೇಶಗಳಿಗೆ ನೀರು ನುಗ್ಗಿ, ಮರಗಳು ಧರೆಗುರುಳಿ ಜನ ಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ.ಪ್ರಕಾಶ್‌ನಗರದಲ್ಲಿ ಮೂರು ಮಂದಿ ಜಲಾ ಸಮಾಧಿಯಾಗಿರುವ ಬಗ್ಗೆ ಗುಮಾನಿಯಿದ್ದು, ನಿಖರ ಮಾಹಿತಿ ನೀಡಬೇಕಾದವರು ನಾಪತ್ತೆಯಾಗಿದ್ದಾರೆ.

ಸುಮಾರು 200 ಕ್ಕೂ ಹೆಚ್ಚು ಮನೆ ನೀರಿನಲ್ಲಿ ಮುಳುಗಿವೆ, ದೊಡ್ಡನೆಕ್ಕುಂದಿ ಎಂಬ ಗ್ರಾಮ ಜಲಾ ವೃತಗೊಂಡಿದೆ ಎಂಬ ವರದಿಗಳು ಬರುತ್ತಲೇ ಇವೆ. ಜಯನಗರ 4ನೆ ಬ್ಲಾಕ್‌ನ ಅಂಚೆ ಕಚೇರಿ ಎದುರು, ಕುಮಾರಸ್ವಾಮಿ ಲೇಔಟ್‌ನ ಬಲಮುರಿ ಗಣೇಶ ದೇವಸ್ಥಾನ, ಇಸ್ರೋ ಲೇಔಟ್ ಹಾಗೂ ಬನ್ನೇರುಘಟ್ಟದ ಎಂ.ಎಸ್.ನಗರ ಸೇರಿದಂತೆ ನಗರದ ಸರಿಸುಮಾರು ಎಲ್ಲಾ ಕಡೆ ಮಳೆಯ ತೀವ್ರತೆಗೆ ಮರಗಳು ಧರೆಗುರುಳಿದವು.

ಕುಮಾರಸ್ವಾಮಿ ಲೇಔಟ್, ಮಾರೇನಹಳ್ಳಿ, ದೊಡ್ಡ ಕಲ್ಲಸಂದ್ರ, ಕೆ.ಪಿ.ಅಗ್ರಹಾರ, ವೈಯಾಲಿಕಾವಲ್, ಚಾಮರಾಜಪೇಟೆಯ ಉಮಾ ಚಿತ್ರಮಂದಿರ, ಮಾರತ್ತಹಳ್ಳಿಯ ದೊಡ್ಡನೆಕ್ಕುಂದಿ ಗ್ರಾಮದಲ್ಲಿನ ತಗ್ಗು ಪ್ರದೇಶಗಳಲ್ಲಿನ ಮನೆಗಳಿಗೆ ನೀರು ನುಗ್ಗಿ ಜನ ಕಂಗಾಲಾಗಿದ್ದಾರೆ. ಶಾಮಣ್ಣ ಗಾರ್ಡನ್‌ನ 200ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿ ಜನರ ಬದುಕು ಬೀದಿಗೆ ಬಿದ್ದಿದೆ. ಯಶವಂತಪುರ, ಎಂ.ಜಿ.ರಸ್ತೆ, ಹೆಬ್ಬಾಳ, ಆರ್.ಟಿ.ನಗರ, ಕೆ.ಆರ್.ಪುರ, ಸುಬ್ಬಣ್ಣ ಗಾರ್ಡನ್, ಚಾಮರಾಜಪೇಟೆ, ಎಲೆಕ್ಟ್ರಾನಿಕ್ ಸಿಟಿ, ಸಿಲ್ಕ್ ಬೋರ್ಡ್, ಕೆ.ಜಿ.ರಸ್ತೆ, ಶಾಂತಿನಗರ, ಕೋರಮಂಗಲ, ಶಿವಾಜಿನಗರ, ಫ್ರೇಜರ್‌ಟೌನ್, ಅಲಸೂರು, ಬಾಪೂಜಿನಗರ, ನಾಯಂಡಹಳ್ಳಿ ಸೇರಿದಂತೆ ಸುತ್ತಮುತ್ತಲ ಪ್ರದೇಶಗಳಲ್ಲಿನ ಪ್ರಮುಖ ರಸ್ತೆಗಳೆಲ್ಲ ಜಲಾವೃತಗೊಂಡ ಪರಿಣಾಮ ಸಂಚಾರ ವ್ಯವಸ್ಥೆ ಹದಗೆಟ್ಟು, ವಾಹನ ಸವಾರರು ಪರದಾಡುವಂತಾಯಿತು.

ಬಾಪೂಜಿನಗರದಲ್ಲಿನ ಗಾಳಿ ಆಂಜನೇಯ ಸ್ವಾಮಿ ದೇವಾಲಯಕ್ಕೆ ಪಕ್ಕದಲ್ಲಿ ಹರಿಯುತ್ತಿದ್ದ ರಾಜಾಕಾಲುವೆಯ ನೀರು ನುಗ್ಗಿ ಸಂಪೂರ್ಣ ಜಲಾವೃತಗೊಂಡಿತು. ಶೇಷಾದ್ರಿಪುರಂ ರೈಲ್ವೆ ಅಂಡರ್‌ಪಾಸ್ ಬಳಿ ಬಿಎಂಟಿಸಿಯ ಎರಡು ಬಸ್‌ಗಳು ಮುಳುಗಿದವು. ಕೂಡಲೇ ಕಾರ್ಯಪ್ರವೃತ್ತರಾದ ಅಗ್ನಿಶಾಮಕ ದಳದ ಸಿಬ್ಬಂದಿ ಎರಡು ಬಸ್‌ಗಳಲ್ಲಿ ಇದ್ದ ಪ್ರಯಾಣಿಕರನ್ನು ಹಗ್ಗದ ಮೂಲಕ ರಕ್ಷಿಸಿದರು. ಅವರಿಗೆ ಸ್ಥಳೀಯರು ಸಹಕಾರ ನೀಡಿದರು.

ದೂರು ಸ್ವೀಕಾರ: ಸಂಜೆ 5 ಗಂಟೆಯಿಂದ ಆರಂಭವಾದ ಮಳೆ ತಡರಾತ್ರಿಯವರೆಗೂ ಮುಂದುವರಿಯಿತು. ಪಾಲಿಕೆಯ ನಿಯಂತ್ರಣ ಕೊಠಡಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ, ಬಿಬಿಎಂಪಿ ಆಯುಕ್ತ ಲಕ್ಷ್ಮೀ ನಾರಾಯಣ ಸೇರಿದಂತೆ ಇನ್ನಿತರ ಅಧಿಕಾರಿಗಳು ಸಾರ್ವಜನಿಕರ ದೂರುಗಳನ್ನು ದಾಖಲಿಸಿಕೊಂಡು, ಅವುಗಳಿಗೆ ಪರಿಹಾರ ಒದಗಿಸುವ ಕಾರ್ಯದಲ್ಲಿ ನಿರತರಾಗಿದ್ದರು.

ದೊಡ್ಡ ನೆಕ್ಕುಂದಿ ಗ್ರಾಮ ಸಂಪೂರ್ಣ ಜಲಾವೃತಗೊಂಡು, ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರೈಲ್ವೆ ಅಂಡರ್‌ಪಾಸ್‌ನಲ್ಲಿ ಐದು ಅಡಿಗೂ ಹೆಚ್ಚಿನ ಪ್ರಮಾಣದಲ್ಲಿ ನೀರು ಶೇಖರಣೆಯಾದ ಹಿನ್ನೆಲೆಯಲ್ಲಿ ರಸ್ತೆ ಸಂಪರ್ಕ ಕಡಿತವಾಯಿತು. ಆನಂದ್‌ರಾವ್ ವೃತ್ತ, ರಿಚ್ಮಂಡ್‌ಟೌನ್‌ನಲ್ಲಿ ಕಾರುಗಳು, ದ್ವಿಚಕ್ರ ವಾಹನಗಳು ಮಳೆ ನೀರಿನಲ್ಲಿ ಮುಳುಗಡೆಯಾಗಿವೆ. ನಗರದ ರಸ್ತೆಗಳು ಜಲಾವೃತವಾಗಿರುವುದರಿಂದ ವಿದ್ಯುತ್ ವ್ಯತ್ಯಯವಾಗಿರುವುದರಿಂದ ಸಂಪೂರ್ಣವಾಗಿ ಸಂಚಾರ ಅಸ್ತವ್ಯಸ್ತವಾಗಿದೆ. ಮೂರು ದಿನ ಮಳೆ: ಇತ್ತೀಚೆಗಿನ ವರ್ಷಗಳಲ್ಲಿ ಬೆಂಗಳೂರಿನಲ್ಲಿ ಅತೀ ಹೆಚ್ಚು ಮಳೆ ಇದಾಗಿದ್ದು, ಇನ್ನು ಮೂರು ದಿನಗಳ ಕಾಲ ಭಾರೀ ಮಳೆಯಾಗುವ ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆಯ ನಿರ್ದೇಶಕ ಪುಟ್ಟಣ್ಣ ತಿಳಿಸಿದ್ದಾರೆ.

Write A Comment