ಗಲ್ಫ್

ದುಬೈ: ಭಾರತೀಯ ಕಾನ್ಸುಲೇಟ್‌ನಲ್ಲಿ ‘ಮೇಕ್ ಇನ್ ಇಂಡಿಯಾ’ ಅಭಿಯಾನ

Pinterest LinkedIn Tumblr

Modi

ದುಬೈ, ಸೆ.25: ಭಾರತವನ್ನು ಉತ್ಪಾದನಾ ವಲಯವನ್ನಾಗಿ ಮಾಡುವ ಪ್ರಧಾನಿ ನರೇಂದ್ರ ಮೋದಿಯವರ ಕನಸಿನ ಯೋಜನೆ ‘ಮೇಕ್ ಇನ್ ಇಂಡಿಯಾ’(ಭಾರತದಲ್ಲಿ ಉತ್ಪಾದಿಸಿ) ಅಭಿಯಾನವನ್ನು ದುಬೈಯಲ್ಲಿರುವ ಭಾರತೀಯ ಕಾನ್ಸುಲೇಟ್‌ನಲ್ಲಿ ಗುರುವಾರ ಉದ್ಘಾಟಿಸಲಾಯಿತು.

ಈ ಯೋಜನೆಯು ಹೊಸ ತಂತ್ರಜ್ಞಾನಗಳು ಹಾಗೂ ಬಂಡವಾಳವನ್ನು ಭಾರತಕ್ಕೆ ಹರಿಸಲಿದ್ದು, ಮಿಲಿಯಾಂತರ ಉದ್ಯೋಗಗಳನ್ನು ಸೃಷ್ಟಿಸಲಿದೆ. ಭಾರತೀಯ ವಲಸಿಗ ಸಮುದಾಯದ 200ಕ್ಕೂ ಅಧಿಕ ಉದ್ಯಮಿಗಳು, ಹೂಡಿಕೆದಾರರು, ಬ್ಯಾಂಕರ್‌ಗಳು, ಮಾರುಕಟ್ಟೆ ವಿಶ್ಲೇಷಕರು, ರಾಜತಾಂತ್ರಿಕರು, ಶಿಕ್ಷಣ ತಜ್ಞರು ಹಾಗೂ ಪರಿಣಿತರು ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ಇದೇ ಮೊದಲ ಬಾರಿಗೆ ಹೊಸದಿಲ್ಲಿಯ ವಿಜ್ಞಾನ ಭವನದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಹೂಡಿಕೆದಾರರನ್ನುದ್ದೇಶಿಸಿ ಮಾಡಿದ ಭಾಷಣವನ್ನು ದುಬೈಯ ಭಾರತೀಯ ಕಾನ್ಸುಲೇಟ್ ಹಾಗೂ ಇತರ ನಿಯೋಗಗಳಲ್ಲಿ ವೆಬ್‌ಸೈಟ್‌ಗಳಲ್ಲಿ ಪ್ರಸಾರಿಸಲಾಯಿತು.

24 ತಾಸುಗಳಲ್ಲಿ 19 ರಾಷ್ಟ್ರಗಳ ಪ್ರವಾಸ ನಾರ್ವೆಯನ್ ತ್ರಯದಿಂದ ದಾಖಲೆ

ಲಂಡನ್, ಸೆ.25: ಕೇವಲ 24 ತಾಸುಗಳ ಅವಧಿಯಲ್ಲಿ 19 ರಾಷ್ಟ್ರಗಳಲ್ಲಿ ಪ್ರಯಾಣಿಸುವ ಮೂಲಕ ದಿನವೊಂದರಲ್ಲಿ ಅತ್ಯಧಿಕ ರಾಷ್ಟ್ರಗಳಲ್ಲಿ ಸಂಚರಿಸಿರುವ ಹೊಸ ದಾಖಲೆಯೊಂದನ್ನು ನಾರ್ವೆಯ ಮೂವರು ಪ್ರಜೆಗಳು ಸಾಧಿಸಿದ್ದಾರೆ.
ಗುನಾರ್ ಗಫೂರ್ಸ್‌(39), ತೇಯಾಂಗ್ ಪಾಕ್ (42) ಹಾಗೂ ಒಲಿವಿಂಡ್ ಡಿಜುಪ್‌ವಿಕ್(38) 19 ರಾಷ್ಟ್ರಗಳಲ್ಲಿ ಕೇವಲ 24 ತಾಸುಗಳ ಅವಧಿಯಲ್ಲಿ ಸಂಚರಿಸಿ 24 ತಾಸುಗಳಲ್ಲಿ 17 ರಾಷ್ಟ್ರಗಳಲ್ಲಿ ಸಂಚರಿಸಿರುವ ಹಳೆಯ ದಾಖಲೆಯನ್ನು ಮುರಿದಿದ್ದಾರೆ.

ನಾರ್ವೆಯ ಮೂವರು ಪ್ರಯಾಣಿಕರು ಶನಿವಾರ ಗ್ರೀಸ್ ಹಾಗೂ ಬಲ್ಗೇರಿಯ ಗಡಿಗಳ ನಡುವಿನ ಪ್ರದೇಶವೊಂದರಿಂದ ಪ್ರಯಾಣ ಬೆಳೆಸಿದ್ದರು ಎಂದು ‘‘ದ ಲೋಕಲ್’ ವರದಿ ಮಾಡಿದೆ.

ನಾರ್ವೆಯ ಈ ಮೂವರು ಪ್ರಜೆಗಳು ಮೆಸಡೋನಿಯ, ಕೊಸೊವೊ, ಸರ್ಬಿಯ, ಕ್ರೊವೇಶಿಯ, ಬೋಸ್ನಿಯ, ಸ್ಲೊವೇನಿಯ, ಆಸ್ಟ್ರಿಯ, ಹಂಗೆರಿ, ಸ್ಲೊವೇಕಿಯ, ಝೆಕ್ ಗಣತಂತ್ರ, ಜರ್ಮನಿ, ನೆದರ್‌ಲ್ಯಾಂಡ್ಸ್, ಬೆಲ್ಜಿಯಂ ಲಕ್ಸಂಬರ್ಗ್, ಫ್ರಾನ್ಸ್ ಹಾಗೂ ಸ್ವಿಝರ್‌ಲ್ಯಾಂಡ್ ರಾಷ್ಟ್ರಗಳಲ್ಲಿ ಸಂಚರಿಸಿ ಲೀಚೆನ್‌ಸ್ಟೈನ್‌ನಲ್ಲಿ ರವಿವಾರ ರಾತ್ರಿ ತಮ್ಮ ಪ್ರಯಾಣವನ್ನು ಕೊನೆಗೊಳಿಸಿದ್ದಾರೆ.

ಮೂವರು ಪ್ರವಾಸಿಗರ ತಂಡವು ಪ್ರಯಾಣದ ವೇಳೆ ಉಟೋಪಾಚಾರಕ್ಕೂ ನಿಂತಿರಲಿಲ್ಲ. ಸಿಹಿತಿಂಡಿಗಳು, ಸ್ಯಾಂಡ್‌ವಿಚ್‌ಗಳು, ಉಪ್ಪು ಹಾಗೂ ಶಕ್ತಿ ಪೇಯಗಳನ್ನು ತಮ್ಮ ಜೊತೆಯಲ್ಲೇ ಕೊಂಡೊಯ್ದಿದ್ದರು.

ವಿಶ್ವ ಹಸಿರು ಆರ್ಥಿಕ ಶೃಂಗಸಭೆ

ದುಬೈ, ಸೆ.25: ಮುಂದಿನ ವರ್ಷದ ಎಪ್ರಿಲ್23ರಿಂದ25ರವರೆಗೆ ನಿಗದಿಗೊಂಡಿರುವ ‘‘ವಿಶ್ವ ಹಸಿರು ಆರ್ಥಿಕ ಶೃಂಗಸಭೆ-2015’ ಆತಿಥ್ಯ ನೀಡಲಿದೆ.

ಜಾಗತಿಕ ಹಸಿರು ಅರ್ಥವ್ಯವಸ್ಥೆಗಳ ಮೂಲಕ ದುಬೈಯ ಸ್ಥಾನವನ್ನು ಬಲಪಡಿಸುವ ಅಂಶದ ಮೇಲೆ ಶೃಂಗಸಭೆಯು ಹೆಚ್ಚಿನ ಗಮನ ಹರಿಸಲಿದೆ. ತಾನು ಹಸಿರು ಆರ್ಥಿಕತೆಗೆ ಒಂದು ಉದಾಹರಣೆಯಾಗಲು ಹಾಗೂ ಸುಸ್ಥಿರ ಅಭಿವೃದ್ಧಿಯನ್ನು ಸಾಧಿಸಲು ದುಬೈ ಬಯಸಿದೆ.

ಈ ಶೃಂಗಸಭೆಯು ಹಸಿರು ಆರ್ಥಿಕತೆಯ ಅನ್ವೇಷಣೆಗೆ ಅಂತಾರಾಷ್ಟ್ರೀಯ ಮಾನ್ಯತೆಯ ವೇದಿಕೆಯೊಂದನ್ನು ಒದಗಿಸಲಿದೆ ಎಂದು ದುಬೈ ಇಲೆಕ್ಟ್ರಿಸಿಟಿ ಆ್ಯಂಡ್ ವಾಟರ್ ಅಥಾರಿಟಿ(ಡಿಇಡಬ್ಲುಎ)ಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ವ್ಯವಸ್ಥಾಪಕ ನಿರ್ದೇಶಕ ಸಈದ್ ಅಲ್ ತಾಯಿರ್ ಹೇಳಿದ್ದಾರೆ.

ನೈಜೀರಿಯ: 260ಕ್ಕೂ ಅಧಿಕ ಬೊಕೊಹರಂ ಬಂಡುಕೋರರ ಶರಣಾಗತಿ

ಅಬುಜಾ, ಸೆ.25: ಈಶಾನ್ಯ ನೈಜೀರಿಯದಲ್ಲಿ ಸುಮಾರು 260ಕ್ಕೂ ಅಧಿಕ ಮಂದಿ ಬೊಕೊಹರಂ ಬಂಡುಕೋರರು ಶರಣಾಗಿರುವುದಾಗಿ ನೈಜೀರಿಯದ ಸೇನೆ ತಿಳಿಸಿದೆ. ಬೊಕೊಹರಂನ ಮುಖಂಡನಂತೆ ತೋರಿಸಿಕೊಳ್ಳುತ್ತಿದ್ದ ಅಬೂಬಕರ್ ಶೆಕಾವೊ ಎಂಬಾತನನ್ನು ಸೇನೆ ಹತ್ಯೆಗೈದಿರುವುದಾಗಿಯೂ ಸೇನೆ ವಕ್ತಾರ ತಿಳಿಸಿದ್ದಾನೆ.

ಬೊಕೊಹರಂ ಬಂಡುಕೋರರ ಪ್ರಮುಖ ನೆಲೆಯಾಗಿರುವ ಈಶಾನ್ಯ ನೈಜೀರಿಯದ ಮೈದುಗುರಿಯಲ್ಲಿ ಇತ್ತೀಚೆಗೆ ನೈಜೀರಿಯ ಸೇನಾಪಡೆಗಳು ದಾಳಿಗಳನ್ನು ತೀವ್ರಗೊಳಿಸಿರುವಂತೆಯೇ, ಬೊಕೊಹರಂ ತೀವ್ರ ಹಿನ್ನಡೆ ಅನುಭವಿಸಿದೆ ಎನ್ನಲಾಗಿದೆ.

ಬೊಕೊಹರಂನ 135 ಮಂದಿ ಸದಸ್ಯರು ತಮ್ಮ ಶಸ್ತ್ರಾಸ್ತ್ರಗಳೊಂದಿಗೆ ಬೊರ್ನೊ ಪ್ರಾಂತದ ಬಿಯು ಎಂಬಲ್ಲಿ ಮಂಗಳವಾರ ಶರಣಾಗಿದ್ದು, ಇತರ 133 ಮಂದಿ ಈಶಾನ್ಯ ನೈಜೀರಿಯದಲ್ಲಿ ಶರಣಾಗಿದ್ದಾರೆ ಮತ್ತು ಅವರನ್ನು ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

Write A Comment