ರಾಷ್ಟ್ರೀಯ

ಮಹಾಮೈತ್ರಿಗಳ ಅಂತ್ಯ; ಬಿಜೆಪಿ-ಶಿವಸೇನೆಯ 25 ವರ್ಷಗಳ ಸುದೀರ್ಘ ಮೈತ್ರಿಗೆ ಕೊನೆ; ಏಕಾಂಗಿ ಸ್ಪರ್ಧೆಗೆ ಬಿಜೆಪಿ ನಿರ್ಧಾರ

Pinterest LinkedIn Tumblr

Uddhav_Thackeray_Narendra_Modi

ಮುಂಬರುವ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಶಿವಸೇನೆಯ ಜೊತೆ ಸೀಟು ಹಂಚಿಕೆಯಲ್ಲಿ ಒಮ್ಮತ ಮೂಡದ ಹಿನ್ನೆಲೆಯಲ್ಲಿ ಬಿಜೆಪಿ ಏಕಾಂಗಿಯಾಗಿ ಸ್ಪರ್ಧಿಸುವುದಾಗಿ ಘೋಷಿಸಿದೆ. ಮಹಾರಾಷ್ಟ್ರದ ಬಿಜೆಪಿ ನಾಯಕ ಏಕನಾಥ ಖಂಡ್ಸೆ ಶಿವಸೇನೆ ಜೊತೆ ತನ್ನ ಪಕ್ಷದ ಮೈತ್ರಿ ಮುರಿದುಬಿದ್ದಿರುವುದನ್ನು ಪ್ರಕಟಿಸಿದರು. ‘‘ನಾವು ಮೈತ್ರಿಕೂಟವು ಅಬಾಧಿತವಾಗಿರಲು ಬಹಳಷ್ಟು ಪ್ರಯತ್ನ ಪಟ್ಟಿದ್ದೆವು’’ ಎಂದವರು ತಿಳಿಸಿದರು.

ಏತನ್ಮಧ್ಯೆ ಮಹಾರಾಷ್ಟ್ರ ಬಿಜೆಪಿ ಅಧ್ಯಕ್ಷ ದೇವೇಂದ್ರ ಫಡ್ನವೀಸ್ ಕೂಡಾ ಶಿವಸೇನೆ ಜೊತೆಗಿನ ಮೈತ್ರಿಯು ಕೊನೆಗೊಂಡಿರುವುದನ್ನು ದೃಢೀಕರಿಸಿದ್ದಾರೆ. ಶಿವಸೇನೆ ಜೊತೆ ಸಂಬಂಧವನ್ನು ಕಡಿದುಕೊಳ್ಳುವ ನಿರ್ಧಾರವು ಅತ್ಯಂತ ನೋವಿನದ್ದಾಗಿದೆ ಎಂದು ಅವರು ತಿಳಿಸಿದ್ದಾರೆ. ಆದರೆ ಕೇಂದ್ರದ ಎನ್‌ಡಿಎ ಸರಕಾರದಲ್ಲಿ ಉಭಯ ಪಕ್ಷಗಳ ಮೈತ್ರಿಯ ಗತಿಯೇನಾದೀತೆಂಬ ಬಗ್ಗೆ ಬಿಜೆಪಿ ಹಾಗೂ ಶಿವಸೇನೆಯ ನಾಯಕರ್ಯಾರೂ ಪ್ರತಿಕ್ರಿಯೆ ನೀಡಿಲ್ಲ. ಪ್ರಧಾನಿ ನರೇಂದ್ರ ಮೋದಿ ಅಮೆರಿಕ ಪ್ರವಾಸಕ್ಕಾಗಿ ಹೊಸದಿಲ್ಲಿಯಿಂದ ನಿರ್ಗಮಿಸಿದ ಬೆನ್ನಲ್ಲೇ ಉಭಯ ಪಕ್ಷಗಳ ಮೈತ್ರಿಯು ಮುರಿದುಬಿದ್ದಿದೆ. ಶಿವಸೇನೆಯು ತಾನು 151 ಕ್ಷೇತ್ರಗಳಲ್ಲಿ ಸ್ಪರ್ಧಿಸಲು ನಿರ್ಧರಿಸಿದ್ದು, ಬಿಜೆಪಿಗೆ ಕೇವಲ 119 ಸ್ಥಾನಗಳನ್ನು ಬಿಟ್ಟುಕೊಡುವುದಾಗಿ ತಿಳಿಸಿತ್ತು. ಮೈತ್ರಿಕೂಟದ ಇತರ ಸಣ್ಣ ಪುಟ್ಟ ಪಕ್ಷಗಳಿಗೆ 10 ಸ್ಥಾನಗಳನ್ನು ನೀಡಲು ನಿರ್ಧರಿಸಿತ್ತು. ಆದರೆ ಬಿಜೆಪಿ ತನಗೆ ಕನಿಷ್ಠ 135 ಕ್ಷೇತ್ರಗಳನ್ನು ನೀಡಬೇಕೆಂದು ಪಟ್ಟುಹಿಡಿದಿದ್ದ ಹಿನ್ನೆಲೆಯಲ್ಲಿ ಮೈತ್ರಿಕೂಟದಲ್ಲಿ ಬಿಕ್ಕಟ್ಟು ಕಾಣಿಸಿಕೊಂಡಿತ್ತು. ಮಹಾರಾಷ್ಟ್ರದ ವಿಧಾನಸಭಾ ಚುನಾವಣೆಗೆ ಸ್ಥಾನ ಹಂಚಿಕೆಯ ಕುರಿತು ಚರ್ಚಿಸಲು ಶಿವಸೇನೆಯ ಸಂಧಾನಕಾರರು ಕರೆದಿದ್ದ ಸಭೆಯೊಂದರಿಂದ ಬಿಜೆಪಿ ನಾಯಕರು ಹೊರ ನಡೆಯುವ ಮೂಲಕ, 25 ವರ್ಷಗಳ ಬಿಜೆಪಿ-ಶಿವಸೇನೆ ಮೈತ್ರಿ ಕೊನೆಗೊಂಡಿತು. ಮೈತ್ರಿಯನ್ನು ಕೊನೆಗೊಳಿಸಲು ಬಿಜೆಪಿ ಅವಸರಿಸುತ್ತಿದೆಯೆಂದು ಶಿವಸೇನೆ ಆರೋಪಿಸಿದೆ.

ಬಿಜೆಪಿಯ ರಾಜ್ಯಾಧ್ಯಕ್ಷ ದೇವೇಂದ್ರ ಫಡ್ನವೀಸ್ ಹಾಗೂ ವಿಧಾನಪರಿಷತ್‌ನ ಪ್ರತಿಪಕ್ಷ ನಾಯಕ ವಿನೋದ್ ತಾವ್ಡೆ, ಶಿವಸೇನೆಯ ಪ್ರಸ್ತಾಪವು ಮಿತ್ರ ಪಕ್ಷಗಳಿಗೆ ಹೇಳಿಸಿದುದಲ್ಲವೆಂದು ಸಭೆಯಿಂದ ಹೊರ ನಡೆದರು. ಇದರಿಂದ ಬಿಕ್ಕಟ್ಟನ್ನು ಶಮನಗೊಳಿಸುವ ಕೊನೆಯ ಪ್ರಯತ್ನವೂ ವಿಫಲವಾದಂತಾಗಿದೆ. ಶಿವಸೇನೆಯಿಂದ ತಮಗೆ ಅನೇಕ ಪ್ರಸ್ತಾಪಗಳು ಬಂದಿವೆ. ಆದರೆ, ಇದೆಲ್ಲವೂ, ಶಿವಸೇನೆ ಬಿಜೆಪಿಯೊಂದಿಗಾಗಲೀ ಇತರ ಮಿತ್ರಪಕ್ಷಗಳೊಂದಿಗಾಗಲಿ ಹೊಂದಿಕೊಂಡು ಹೋಗಲು ಸಿದ್ಧವಿಲ್ಲವೆಂಬುದನ್ನು ತೋರಿಸಿವೆಯೆಂದು ಬಿಜೆಪಿಯ ಮಹಾರಾಷ್ಟ್ರ ಚುನಾವಣಾ ವೀಕ್ಷಕ ಒ.ಪಿ.ಮಾಥುರ್‌ರ ನಿವಾಸದಲ್ಲಿ ನಡೆದಿದ್ದ ಸಭೆಯಿಂದ ಹೊರಬಂದ ಬಳಿಕ ಫಡ್ನವೀಸ್‌ಪತ್ರಕರ್ತರಿಗೆ ತಿಳಿಸಿದರು.

ಈ ವಿಷಯ ಇನ್ನೀಗ ಬಿಜೆಪಿಯ ಕೋರ್‌ಕಮಿಟಿಯಲ್ಲಿ ಚರ್ಚೆಯಾಗಲಿದೆಯೆಂದು ಅವರು ಹೇಳಿದರು.

ಫಡ್ನವೀಸ್ ಹಾಗೂ ತಾವ್ಡೆ ಸಭಾತ್ಯಾಗ ಮಾಡಿದ ಕೆಲವೇ ಕ್ಷಣಗಳಲ್ಲಿ, ಪಕ್ಷಾಧ್ಯಕ್ಷ ಉದ್ಧವ ಠಾಕ್ರೆ ಸಂಧಾನಕ್ಕಾಗಿ ಕಳುಹಿಸಿದ್ದ ರಾಜ್ಯಸಭಾ ಸದಸ್ಯ ಅನಿಲ್ ದೇಸಾಯಿ ಹಾಗೂ ಹಿರಿಯ ಶಿವಸೇನಾ ನಾಯಕ ದಿವಾಕರ ರಾವತೆ, ಬಿಜೆಪಿ ಸಂಬಂಧ ಕೊನೆಗೊಳಿಸುವ ಆತುರದಲ್ಲಿದೆಯೆಂದು ದೂರಿದರು. ತಾವು ಉದ್ಧವ್ ಕಳುಹಿಸಿರುವ ಅಂತಿಮ ಪ್ರಸ್ತಾಪದ ಕುರಿತು ಚರ್ಚೆಗಾಗಿ ಬಂದಿದ್ದೆವು. ಕೇವಲ ಕೆಲವೇ ಸ್ಥಾನಗಳ ಬಗ್ಗೆ ಭಿನ್ನಾಭಿಪ್ರಾಯವಿದೆ. ಆದರೆ, ಅವರು ತಮಗೆ ಸೂಚನೆ ನೀಡಬೇಕೆಂಬುದನ್ನು ಲಕ್ಷಿಸದೆ ಸಭೆಯಿಂದ ಹೊರ ನಡೆದರೆಂದು ರಾವತೆ ಆರೋಪಿಸಿದರು.

288 ಸದಸ್ಯಬಲದ ವಿಧಾನಸಭೆಯ 151 ಸ್ಥಾನಗಳಲ್ಲಿ ಶಿವಸೇನೆ ಹಾಗೂ 127 ಸ್ಥಾನಗಳಲ್ಲಿ ಬಿಜೆಪಿ ಸ್ಪರ್ಧಿಸಿ ಉಳಿದ 10 ಕ್ಷೇತ್ರಗಳನ್ನು ಮಿತ್ರ ಪಕ್ಷಗಳಿಗೆ ಬಿಟ್ಟುಕೊಡುವುದು ಪ್ರಸ್ತಾಪಗಳಲ್ಲಿ ಒಂದಾಗಿತ್ತು. ಅಲ್ಲದೆ, ಸಣ್ಣ ಭಾಗಿದಾರ ಪಕ್ಷಗಳ ಮೂವರು ಅಭ್ಯರ್ಥಿಗಳು ಶಿವಸೇನೆಯ ಟಿಕೆಟ್‌ನಲ್ಲಿ ಸ್ಪರ್ಧಿಸುವುದು ಹಾಗೂ ಬಿಜೆಪಿ ಒಬ್ಬ ಅಭ್ಯರ್ಥಿಗೆ ತನ್ನ ಕೋಟಾದಲ್ಲಿ ಸೀಟು ಕೊಡಬೇಕೆಂದೂ ಅದರಲ್ಲಿ ಸೇರಿತ್ತೆಂದು ವರದಿಗಳು ತಿಳಿಸಿವೆ.

ಬಿಜೆಪಿ ನಾಯಕ ರಾಜೀವ ಪ್ರತಾಪ್ ರೂಡಿ ಮೈತ್ರಿ ಕೊನೆಗೊಳಿಸುವ ಮಾತನ್ನಾಡು ತ್ತಿದ್ದಾರೆಂದು ತಮಗೆ ಮಾಧ್ಯಮಗಳ ಮೂಲಕ ತಿಳಿದುಬಂದಿದೆ. ಅದು ಅವರ ನಿಲುವಾಗಿದ್ದರೆ ತಾವೂ ಉದ್ಧವ್‌ಜೀಯವರ ಮುಖಾಂತರ ಅವರಿಗೆ ಸೂಕ್ತ ಉತ್ತರ ನೀಡುತ್ತೇವೆಂದು ಕೋಪೋದ್ರಿಕ್ತರಾಗಿದ್ದ ರಾವತೆ ಹೇಳಿದರು.

Write A Comment