ರಾಷ್ಟ್ರೀಯ

ಮೇಕ್ ಇನ್ ಇಂಡಿಯಾಗೆ ಪ್ರಧಾನಿ ಚಾಲನೆ

Pinterest LinkedIn Tumblr

Make in

ಹೊಸದಿಲ್ಲಿ, ಸೆ.25: ತನ್ನ ‘ಮೇಕ್ ಇನ್ ಇಂಡಿಯಾ’ ಅಭಿಯಾನದಲ್ಲಿ ಕೈಜೋಡಿಸುವಂತೆ ಭಾರತೀಯ ಉದ್ದಿಮೆದಾರರಿಗೆ ಕರೆ ನೀಡಿರುವ ಪ್ರಧಾನಿ ನರೇಂದ್ರ ಮೋದಿ, ಗುರುವಾರ ಈ ಮಹತ್ತ್ವಾಕಾಂಕ್ಷಿ ಅಭಿಯಾನಕ್ಕೆ ಚಾಲನೆ ನೀಡುವುದರೊಂದಿಗೆ ವಿದೇಶಗಳ ಮೇಲೆ ಕಣ್ಣಿರಿಸುವ ಬದಲು ತಮ್ಮದೇ ನೆಲದಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸಿ ಮೊದಲು ಭಾರತವನ್ನು ಅಭಿವೃದ್ಧಿಪಡಿಸುವಂತೆ ಅವರನ್ನು ಆಗ್ರಹಿಸಿದ್ದಾರೆ.

ಹೊಸದಿಲ್ಲಿಯ ವಿಜ್ಞಾನಭವನದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಮುಕೇಶ್ ಅಂಬಾನಿ, ಕುಮಾರಮಂಗಲಂ ಬಿರ್ಲಾ, ಚಂದಾ ಕೊಚ್ಚಾರ್, ಅಝಿಂ ಪ್ರೇಂಜಿ ಹಾಗೂ ಕಿರಣ್ ಮುಜುಂದಾರ್ ಶಾ ಸಹಿತ ಖ್ಯಾತನಾಮ ಭಾರತೀಯ ಉದ್ಯಮಪತಿಗಳು ಭಾಗವಹಿಸಿದ್ದರು.

ದೇಶದಲ್ಲಿ ಹೆಚ್ಚು ಉದ್ಯೋಗಾವಕಾಶ ಸೃಷ್ಟಿಸುವಂತೆ ಒತ್ತಿ ಹೇಳಿದ ಪ್ರಧಾನಿ, ಭಾರತೀಯ ಕಂಪೆನಿಗಳು ಬಹುರಾಷ್ಟ್ರೀಯ ಕಂಪೆನಿಗಳಂತೆ ಮಿಂಚುವುದನ್ನು ತಾನು ನೋಡಬಯಸುತ್ತೇನೆ. ಯಾವನೇ ಉದ್ಯಮಿ ಭಾರತವನ್ನು ತ್ಯಜಿಸುವಂತಹ ಸ್ಥಿತಿ ಉಂಟಾಗುವುದನ್ನು ತಾವು ಬಯಸುವುದಿಲ್ಲ. ತಾವು ಕಳೆದ ಕೆಲವು ತಿಂಗಳಲ್ಲಿ ಬದಲಾವಣೆಯೊಂದನ್ನು ತರಲು ಸಮರ್ಥರಾಗಿದ್ದೇವೆಂದು ತಾನು ಹೇಳಬಲ್ಲೆನೆಂದು ತಿಳಿಸಿದರು.

ಅಭಿಯಾನ ಉದ್ಘಾಟಿಸಿದ ಮೋದಿ, ಭಾರತವು ಕಾರುಗಳಿಂದ ಸಾಫ್ಟ್‌ವೇರ್‌ತನಕ, ಉಪಗ್ರಹಗಳಿಂದ ಜಲಾಂತರ್ಗಾಮಿಗಳ ತನಕ ಹಾಗೂ ಕಾಗದದಿಂದ ವಿದ್ಯುತ್ತಿನ ತನಕ ವಿವಿಧ ಮಾದರಿಯ ವಸ್ತುಗಳ ಉತ್ಪಾದನೆಯ ಜಾಗತಿಕ ಕೇಂದ್ರವಾಗಬೇಕು. ಅದಕ್ಕಾಗಿ ತನ್ನ ಸರಕಾರವು ಭೌತಿಕ ಮೂಲ ಸೌಕರ್ಯ ಸೃಷ್ಟಿ ಹಾಗೂ ಡಿಜಿಟಲ್ ಜಾಲ ಸೃಷ್ಟಿಗೆ ಆದ್ಯತೆ ನೀಡುವುದೆಂದು ಅವರು ಹೇಳಿದರು.

ತಾನು ಕೇವಲ ಉತ್ತಮ ಆಡಳಿತದ ಬಗ್ಗೆ ಮಾತ್ರ ಮಾತನಾಡುತ್ತಿಲ್ಲ. ತಾನು ಪರಿಣಾಮಕಾರಿ ಹಾಗೂ ಸುಲಭ ಆಡಳಿತದ ಕುರಿತಾಗಿಯೂ ಮಾತನಾಡುತ್ತಿದ್ದೇನೆ ಎಂದು ಪ್ರಧಾನಿ ತಿಳಿಸಿದರು.

ದೇಶೀಯ ಹಾಗೂ ಅಂತಾರಾಷ್ಟ್ರೀಯ ಸಂಸ್ಥೆಗಳಿಗೆ ಭಾರತದಲ್ಲಿ ಹೂಡಿಕೆ ಮಾಡುವಂತೆ ಕರೆ ನೀಡಿದ ಅವರು, ತನ್ನ ಸರಕಾರದ ಗಮನ ಕೇವಲ ‘ಪೂರ್ವಕ್ಕೆ ನೋಡು’ ಎಂಬುದರ ಕಡೆಗೆ ಮಾತ್ರವಲ್ಲದೆ ‘ಪಶ್ಚಿಮವನ್ನು ಜೋಡಿಸು’ ಎಂಬುದರ ಕಡೆಗೂ ಇದೆ ಎಂದರು.

ನಾವು ಹೆದ್ದಾರಿಗಳನ್ನು (ಹೈವೇ) ಬಯಸುತ್ತೇವೆ. ಅದೇ ರೀತಿ ಡಿಜಿಟಲ್ ಭಾರತಕ್ಕೆ ಮಾಹಿತಿ ಮಾರ್ಗವನ್ನೂ(ಐ-ವೇ) ಬಯಸುತ್ತೇವೆ ಎಂದ ಪ್ರಧಾನಿ, ಮೇಕ್ ಇನ್ ಇಂಡಿಯಾ ಎಂಬುದು ಒಂದು ಘೋಷಣೆಯಾಗಲಿ, ಆಹ್ವಾನವಾಗಲಿ ಅಲ್ಲವೆಂದು ಸ್ಪಷ್ಟಪಡಿಸಿದರು. ಕಂಪೆನಿಗಳು ದೇಶದ ಹೊರಗೆ ಹೋಗಲು ಇಚ್ಛಿಸುತ್ತಿದ್ದ ಕಳೆದ ಮೂರ್ನಾಲ್ಕು ವರ್ಷಗಳ ದೃಶ್ಯವನ್ನು ನೆನಪಿಸಿದ ಅವರು, ದೇಶದಲ್ಲಿ ವ್ಯವಹಾರ ನಡೆಸುವ ಪ್ರಕ್ರಿಯೆಯನ್ನು ಸರಳಗೊಳಿಸಲು ಒತ್ತು ನೀಡುವ ಮೂಲಕ ಎನ್‌ಡಿಎ ಸರಕಾರವು ಮೂರು ತಿಂಗಳಲ್ಲೇ ಈ ಪ್ರವೃತ್ತಿಯನ್ನು ಬದಲಾಯಿಸಿದೆ ಎಂದರು.

ಸರಕಾರವು ಅಭಿವೃದ್ಧಿಗೆ ಬದ್ಧವಾಗಿದೆ. ಇದೊಂದು ರಾಜಕೀಯ ಕಾರ್ಯಸೂಚಿಯಲ್ಲ. ಬದಲಾಗಿ ವಿಶ್ವಾಸದ ವಿಧಿಯಾಗಿದೆ ಎಂದ ಪ್ರಧಾನಿ, ಜಿಡಿಪಿಗೆ ಉತ್ಪಾದನೆಯ ಕೊಡುಗೆ ವೃದ್ಧಿಸುವುದಕ್ಕಾಗಿ ಖಾಸಗಿ-ಸಾರ್ವಜನಿಕ ಭಾಗಿದಾರಿಕೆ ಹಾಗೂ ಕೌಶಲಾಭಿವೃದ್ದಿ ಅಗತ್ಯವೆಂದು ಒತ್ತಿ ಹೇಳಿದರು. ಭಾರತೀಯರ ಮೇಲೆ ವಿಶ್ವಾಸವಿರಿಸುವಂತೆ ಕರೆ ನೀಡಿದ ಮೋದಿ, ನಾವು ಪ್ರತಿಯೊಬ್ಬ ಭಾರತೀಯನನ್ನು ನಂಬಬೇಕೆಂಬುದೇ ತಮ್ಮ ಸರಕಾರದ ಮಂತ್ರವಾಗಿದೆ ಎಂದರು. ಗುಜರಾತ್‌ನ ಮುಖ್ಯಮಂತ್ರಿಯಾಗಿದ್ದಾಗಿನಿಂದಲೇ ಉದ್ಯಮಿಗಳ ಪ್ರೀತಿಪಾತ್ರರಾಗಿರುವ ಮೋದಿ, ದೇಶದಲ್ಲಿ ಭಾರತೀಯ ಉದ್ಯಮಗಳ ಬೆಳವಣಿಗೆಗೆ ಹೆಚ್ಚು ಮಾರ್ಗಗಳನ್ನು ತೆರೆಯುವ ಆಶ್ವಾಸನೆ ನೀಡಿದರು.

ಜನಸಾಮಾನ್ಯರ ಮೇಲಿನ ತನ್ನ ವಿಶ್ವಾಸವನ್ನು ಪುನರುಚ್ಚರಿಸಿದ ಅವರು, ಮಂಗಳಗ್ರಹ ಯಾನದ ಯಶಸ್ಸು ಭಾರತೀಯರ ಸಾಮರ್ಥ್ಯದ ಕುರಿತು ಸಂಶಯವನ್ನು ನಿವಾರಿಸಿದೆ. ನಿನ್ನೆ ಏನು ನಡೆಯಿತೋ ಅದರ ಬಳಿಕ ಯಾವನೂ ಭಾರತೀಯರ ಸಾಮರ್ಥ್ಯವನ್ನು ಪ್ರಶ್ನಿಸಲಾರನೆಂದರು. ಏಶ್ಯಕ್ಕೆ ಬರಲು ಜಗತ್ತೇ ಸಿದ್ಧವಾಗಿದೆ. ಬೃಹತ್ ಪ್ರಜಾಪ್ರಭುತ್ವ ರಾಷ್ಟ್ರವಾಗಿ ಮಾನವ ಶಕ್ತಿ ಮತ್ತು ಭಾರೀ ಬೇಡಿಕೆಯಿರುವ ಭಾರತ ಅತ್ಯುತ್ತಮ ಸ್ಥಳದ ಕೊಡುಗೆ ನೀಡುತ್ತದೆ ಎಂದು ಪ್ರಧಾನಿ ತಿಳಿಸಿದರು.

Write A Comment