ಕರ್ನಾಟಕ

ವಿಬ್ಗಯಾರ್ ಶಾಲಾ ಬಾಲಕಿಯ ಅತ್ಯಾಚಾರ ಪ್ರಕರಣ;ಮಕ್ಕಳ ಸುರಕ್ಷತೆಯಲ್ಲಿ ರಾಜಿ ಇಲ್ಲ: ಎಂ.ಎನ್.ರೆಡ್ಡಿ

Pinterest LinkedIn Tumblr

reddi

ನೂತನ ಸಮಿತಿ ರಚನೆ, ವಾರದೊಳಗೆ ವರದಿ

ಬೆಂಗಳೂರು, ಸೆ.25: ಮ್ಕಕಳ ಸುರಕ್ಷತೆ ಬಗ್ಗೆ ಯಾವುದೇ ರಾಜಿ ಇಲ್ಲ. ಪೊಲೀಸ್ ಇಲಾಖೆ ರೂಪಿಸಿರುವ ಮಾರ್ಗಸೂಚಿ ಪಾಲನೆಗೆ ಸಮಿತಿ ರಚಿಸಿದ್ದು, ಒಂದು ವಾರದೊಳಗೆ ಸಮಿತಿ ನೀಡಲಿರುವ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ನಗರ ಪೊಲೀಸ್ ಆಯುಕ್ತ ಎಂ.ಎನ್.ರೆಡ್ಡಿ ಇಂದಿಲ್ಲಿ ಹೇಳಿದರು. ಖಾಸಗಿ ಶಾಲೆಗಳ ಆಡಳಿತ ಮಂಡಳಿ ಮುಖಂಡರು ಹಾಗೂ ಪೊಲೀಸ್ ಇಲಾಖೆಯೊಂದಿಗೆ ನಡೆದ ಸಭೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪೊಲೀಸ್ ಇಲಾಖೆ ರೂಪಿಸಿದ್ದ ಮಾರ್ಗಸೂಚಿ ವಿರುದ್ಧ ಖಾಸಗಿ ಶಾಲೆಯವರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ನ್ಯಾಯಾಲಯ ಇಬ್ಬರೂ ಚರ್ಚಿಸಿ ನಿರ್ಧಾರ ಕೈಗೊಳ್ಳಲು ಸೂಚನೆ ನೀಡಿತ್ತು. ಅದರಂತೆ ಆಡಳಿತ ಮಂಡಳಿ ಮತ್ತು ಪೊಲೀಸ್ ಇಲಾಖೆ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು. ಶಾಲಾ ವಾಹನಗಳಿಗೆ ಜಿಪಿಎಸ್ ಅಳವಡಿಕೆ, ಸಿಸಿಟಿವಿ ಅಳವಡಿಕೆ, ಮಹಿಳಾ ಭದ್ರತಾ ಸಿಬ್ಬಂದಿ ನೇಮಕ ಮಾಡಿಕೊಳ್ಳುವಂತೆ ಮಾರ್ಗಸೂಚಿ ರೂಪಿಸಲಾಗಿತ್ತು.

ಇಂದು ನಡೆದ ಸಭೆಯಲ್ಲಿ ಕೆಲ ಶಾಲಾ ಸಿಬ್ಬಂದಿಗಳು ಆರ್ಥಿಕ ಹೊರೆಯಾಗುತ್ತದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ನೂತನ ಸಮಿತಿ ರಚಿಸಲಾಗಿದೆ. ಬಿಬಿಎಂಪಿ ಶಿಕ್ಷಣ ಇಲಾಖೆ ಜಂಟಿ ನಿರ್ದೇಶಕರು, ಡಿಸಿಪಿ, ಆರ್‌ಟಿಒ ಅಧಿಕಾರಿಗಳ ನೇತೃತ್ವದಲ್ಲಿ ಸಮಿತಿ ರಚಿಸಿದ್ದು, ಒಂದು ವಾರದೊಳಗೆ ವರದಿ ನೀಡುವಂತೆ ಸಮಿತಿಗೆ ಸೂಚನೆ ನೀಡಲಾಗಿದೆ. ಸಮಿತಿ ವರದಿ ಬಂದ ನಂತರ ಕೋರ್ಟ್‌ಗೆ ಸಲ್ಲಿಸಲಾಗುವುದು. ಕೋರ್ಟ್ ನಿರ್ದೇಶನದಂತೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ ಎಂ.ಎನ್.ರೆಡ್ಡಿಯವರು ಮಕ್ಕಳ ಸುರಕ್ಷತೆಯಲ್ಲಿ ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ಪುನರುಚ್ಚರಿಸಿದರು.

ಖಾಸಗಿ ಶಿಕ್ಷಣ ಸಂಸ್ಥೆಗಳ ಮುಖಂಡ ರಾದ ರವಿಕುಮಾರ್, ಶಶಿಕುಮಾರ್, ಮುನಿರಾಜು, ಖಾಸಗಿ ಶಾಲೆಗಳ ಜಂಟಿ ಕ್ರಿಯಾಸಮಿತಿ ಅಧ್ಯಕ್ಷ ಎಲ್.ಆರ್.ಶಿವರಾಮೇಗೌಡ ಮುಂತಾದವರು ಪಾಲ್ಗೊಂಡು ಸಭೆಯಲ್ಲಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.

ಸಭೆಯಲ್ಲಿ ಪಾಲ್ಗೊಂಡಿದ್ದ ಖಾಸಗಿ ಆಡಳಿತ ಮಂಡಳಿಗಳ ಮುಖ್ಯಸ್ಥ ಶಿವರಾಮೇಗೌಡ ಅವರು, ಮಕ್ಕಳ ಸುರಕ್ಷತೆ ದೃಷ್ಟಿಯಿಂದ ನಾವು ಎಲ್ಲಾ ಮಾರ್ಗಸೂಚಿಗಳನ್ನು ಜಾರಿಗೊಳಿಸಲು ಸಿದ್ಧರಿದ್ದೇವೆ. ಆದರೆ ಆರ್ಥಿಕವಾಗಿ ಸಬಲವಾಗಿರುವ ಕೆಲವು ಶಿಕ್ಷಣ ಸಂಸ್ಥೆಗಳು ಜಿಪಿಎಸ್ ಮತ್ತು ಸಿಸಿ ಕ್ಯಾಮೆರಾ ಹಾಗೂ ಮಹಿಳಾ ಭದ್ರತಾ ಸಿಬ್ಬಂದಿಯನ್ನು ಅಳವಡಿಸಿಕೊಳ್ಳುತ್ತಾರೆ. ಆರ್ಥಿಕವಾಗಿ ಸಬಲರಲ್ಲದ ಶಿಕ್ಷಣ ಸಂಸ್ಥೆಗಳು ಇದನ್ನು ಅಳವಡಿಸಿಕೊಳ್ಳಲು ತೊಂದರೆಯಾಗುತ್ತದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು. ಮಾರ್ಗಸೂಚಿ-1ರಲ್ಲಿರುವ ಜಿಪಿಎಸ್ ಅಳವಡಿಸಿಕೊಳ್ಳುವುದು ಮತ್ತು ಮಾರ್ಗಸೂಚಿ-9ರಲ್ಲಿರುವಂತೆ ಮಹಿಳಾ ಭದ್ರತಾ ಸಿಬ್ಬಂದಿ ಮತ್ತು ಶಾಲಾ ವಾಹನಗಳಿಗೆ ಮಹಿಳಾ ಕಂಡಕ್ಟರ್‌ಗಳನ್ನು ಅಳವಡಿಸುವ ಸಂಬಂಧ ಆಕ್ಷೇಪ ವ್ಯಕ್ತಪಡಿಸಿದರು. ಸಭೆಯಲ್ಲಿ ಹೆಚ್ಚುವರಿ ಪೊಲೀಸ್ ಆಯುಕ್ತ ಅಲೋಕ್ ಕುಮಾರ್, ಡಿಸಿಪಿಗಳು, ಡಿಡಿಪಿಐಗಳು ಮತ್ತು ಬಿಬಿಎಂಪಿ ಅಧಿಕಾರಿಗಳು ಹಾಜರಿದ್ದರು.

Write A Comment