ಕರ್ನಾಟಕ

ರಾಘವೇಶ್ವರಶ್ರೀ ವಿರುದ್ಧ ಅತ್ಯಾಚಾರ ಆರೋಪ;ಗುರುವಾರಕ್ಕೆ ವಾದ ಮುಂದೂಡಿಕೆ

Pinterest LinkedIn Tumblr

Karnataka High Court

ಬೆಂಗಳೂರು, ಸೆ. 23: ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಶ್ರೀಗಳ ವಿರುದ್ಧ ದಾಖಲಾಗಿದ್ದ ಅತ್ಯಾಚಾರದ ಆರೋಪದ ಪ್ರಕರಣವನ್ನು ರದ್ದುಮಾಡುವಂತೆ ಕೋರಿ ಸಲ್ಲಿಸಿಲಾಗಿದ್ದ ಅರ್ಜಿಯ ಸಂಬಂಧ ಅರ್ಜಿದಾರರ ಪರ ವಕೀಲರ ವಾದವನ್ನು ಆಲಿಸಿರುವ ಹೈಕೋರ್ಟ್ ಸರಕಾರದ ವಾದವನ್ನು ಗುರುವಾರಕ್ಕೆ ಮುಂದೂಡಿದೆ.

ತನ್ನ ವಿರುದ್ಧ ದಾಖಲಾಗಿರುವ ಅತ್ಯಾಚಾರ ಆರೋಪದ ಪ್ರಕರಣ ರದ್ದು ಮಾಡುವಂತೆ ಕೋರಿ ಶ್ರೀಗಳು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೆ.ಎನ್.ಫಣೀಂದ್ರ ಅವರಿದ್ದ ನ್ಯಾಯಪೀಠ ವಿಚಾರಣೆ ಮುಂದೂ ಡಿದ್ದು, ಸ್ವಾಮೀಜಿಗಳನ್ನು ಬಂಧಿಸಬಾರದು ಹಾಗೂ ವಿಚಾರಣೆಗೊಳಪಡಿಸಬಾರದು ಎಂದು ನೀಡಿದ್ದ ಮಧ್ಯಾ ಂತರ ಆದೇಶ ಮುಂದುವರಿಯುವುದಾಗಿ ತಿಳಿಸಿದೆ.

ಸ್ವಾಮೀಜಿಯವರ ಪರ ವಾದ ಮಂಡಿಸಿದ ಹಿರಿಯ ವಕೀಲ ಬಿ.ವಿ.ಆಚಾರ್ಯ, ರಾಮಚಂದ್ರಾಪುರ ಮಠಕ್ಕಿರುವ ಹೆಸರನ್ನು ಕೆಡಿಸುವ ಉದ್ದೇಶವಿದೆ. ಆದಕಾರಣ ಈ ರೀತಿಯ ಆರೋಪಗಳನ್ನು ಮಾಡಲಾಗುತ್ತಿದೆ. ಶ್ರೀಗಳಿಂದ ಅತ್ಯಾಚಾರಕ್ಕೊಳಗಾಗಿದ್ದೇನೆ ಎಂದು ಆರೋಪಿಸುತ್ತಿರುವ ಪ್ರೇಮ ಲತಾ ಶಾಸ್ತ್ರಿ ಶಿಕ್ಷಣ ಪಡೆದವರಾಗಿದ್ದು, ಇಬ್ಬರು ಹೆಣ್ಣು ಮಕ್ಕಳನ್ನು ಹೊಂದಿದ್ದಾರೆ. ರಾಮಕಥಾ ಹೇಳುವ ಹೆಸರಿನಲ್ಲಿ ವಿದೇಶಗಳಿಗೆಲ್ಲ ಪ್ರವಾಸ ಮಾಡಿದ್ದಾರೆ. ಕಳೆದ ನಾಲ್ಕು ವರ್ಷಗಳಿಂದ ಅತ್ಯಾಚಾರ ನಡೆಯುತ್ತಿದೆ ಎಂದು ಆರೋಪಿಸುತ್ತಿರುವ ಅವರು, ಈಗ ದೂರು ದಾಖಲಿಸಿದ್ದಾರೆ. ಈ ಆರೋಪದ ಹಿಂದೆ ಮಠಕ್ಕೆ ಕೆಟ್ಟ ಹೆಸರು ತರುವ ಹುನ್ನಾರವಿದೆ.

ಶ್ರೀಗಳು ಎಲ್ಲಿಯೂ ಒಂಟಿಯಾಗಿ ಓಡಾಡಿದವರಲ್ಲ. ಪ್ರತಿ ಸಂದರ್ಭದಲ್ಲಿಯೂ ಅವರ ಬಳಿ ಭಕ್ತರು ಇದ್ದೇ ಇರುತ್ತಿದ್ದರು. ಅಲ್ಲದೆ, ಪ್ರಸಕ್ತದ ದಿನಗಳಲ್ಲಿ ಸುಪ್ರೀಂ ಕೋರ್ಟ್ ನ್ಯಾಯಾಧೀಶರ ಮೇಲೆಯೂ ಅತ್ಯಾಚಾರ ಆರೋಪಗಳು ಬರುತ್ತಿವೆ. ಹೀಗಿರುವಾಗ ಶ್ರೀಗಳ ವಿರುದ್ಧ ದಾಖಲಾಗಿರುವ ಪ್ರಕರಣ ಸತ್ಯಕ್ಕೆ ದೂರವಾದುದಾಗಿದ್ದು, ಪ್ರಕರಣ ರದ್ದು ಮಾಡಬೇಕು ಎಂದು ನ್ಯಾಯಪೀಠಕ್ಕೆ ಮನವಿ ಮಾಡಿದರು.

ಪ್ರಕರಣದ ಹಿನ್ನೆಲೆ: ರಾಮಚಂದ್ರಾಪುರ ಮಠದಲ್ಲಿ ರಾಮಕಥಾ ಸಂದರ್ಭದಲ್ಲಿ ಪ್ರೇಮಲತಾ ಹಾಗೂ ಆಕೆಯ ಪತಿ ದಿವಾಕರಶಾಸ್ತ್ರಿ ಎಂಬವರು ಹಾಡುಗಳನ್ನು ಹಾಡುತ್ತಿದರು. ಈ ಮಧ್ಯೆ ಅವರನ್ನು ಹೊರತುಪಡಿಸಿ ಇತರರನ್ನು ಹಾಡುಗಳನ್ನು ಹಾಡುವುದಕ್ಕೆ ಆಹ್ವಾನ ನೀಡಿದ ಸಂದರ್ಭದಲ್ಲಿ ಅವರಿಗೆ ಕೊಲೆ ಬೆದರಿಕೆ ಹಾಕಲಾಗುತ್ತಿದೆ ಎಂದು ಹೊನ್ನಾವರ ಪೊಲೀಸ್ ಠಾಣೆಯಲ್ಲಿ ದೂರು ಮಠದ ಕಡೆಯಿಂದ ದಾಖಲಾಗಿದ್ದು, ಬಂಧಿಸಲಾಗಿತ್ತು.

ಈ ನಡುವೆ ಪ್ರೇಮಲತಾ ಪುತ್ರಿ ಅಂಶುಮತಿ ಶಾಸ್ತ್ರಿ ಎಂಬವರು ಬೆಂಗಳೂರಿನ ಶ್ರೀನಗರ ಪೊಲೀಸ್ ಠಾಣೆಯಲ್ಲಿ ತನ್ನ ತಾಯಿಗೆ ರಾಘವೇಶ್ವರ ಸ್ವಾಮೀಜಿ ಹಲವು ವರ್ಷಗಳಿಂದ ಲೈಂಗಿಕ ಕಿರುಕುಳ ನೀಡುತ್ತಿದ್ದರು ಎಂದು ಆರೋಪಿಸಿ ದೂರು ದಾಖಲಿಸಿದ್ದರು. ದೂರಿನನ್ವಯ ಎಫ್‌ಐಆರ್ ದಾಖಲಾಗಿತ್ತು. ಇದನ್ನು ರದ್ದುಗೊಳಿಸುವಂತೆ ಸ್ವಾಮೀಜಿ ಹೈಕೋರ್ಟ್ ಮೆಟ್ಟಿಲೇರಿದ್ದರು.

Write A Comment