ಕರ್ನಾಟಕ

ತುಮಕೂರಿಗೆ ನರೇಂದ್ರ ಮೋದಿ; ದೇಶದ ಮೊದಲ ಫುಡ್‌ಪಾರ್ಕ್ ಉದ್ಘಾಟನೆಗೆ ವೇದಿಕೆ ಸಜ್ಜು

Pinterest LinkedIn Tumblr

modi____________

ತುಮಕೂರು, ಸೆ. 23: ಪ್ರಧಾನಿ ನರೇಂದ್ರ ಮೋದಿ ತುಮಕೂರಿಗೆ ಆಗಮಿಸುವ ಹಿನ್ನೆಲೆಯಲ್ಲಿ ಅವರನ್ನು ಸ್ವಾಗತಿಸಲು ತುಮಕೂರು ಸಜ್ಜುಗೊಂಡಿದೆ.ವಸಂತನರಸಾಪುರದ ಕೈಗಾರಿಕಾ ಪ್ರದೇಶದಲ್ಲಿ 110 ಎಕರೆ ವಿಸ್ತೀರ್ಣದಲ್ಲಿ 100 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಿರುವ ಫುಡ್‌ಪಾರ್ಕ್ ಉದ್ಘಾಟನೆಗೆ ದೇಶದ ಪ್ರಧಾನಿ ನರೇಂದ್ರಮೋದಿ, ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಆಗಮಿಸುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳಲ್ಲಿ ಹುಮ್ಮಸ್ಸು ಹೆಚ್ಚುತ್ತಿದ್ದು, ಎರಡೂ ಪಕ್ಷದವರು ತಮ್ಮ ಕಾರ್ಯಕರ್ತರನ್ನು ಹೆಚ್ಚಿನ ಸಂಖ್ಯೆಯಲ್ಲಿ ಈ ಕಾರ್ಯಕ್ರಮದಲ್ಲಿ ಸೇರಿಸಬೇಕೆಂದು ಸಿದ್ಧತೆ ನಡೆಸಿದ್ದಾರೆ.

ಜಿಲ್ಲೆಯೂ ಸೇರಿದಂತೆ ಸುತ್ತಮುತ್ತಲ ಭಾಗಗಳ 25 ಸಾವಿರ ಕಾರ್ಯಕರ್ತರು, ರೈತರು, ಅಭಿಮಾನಿಗಳನ್ನು ಸೇರಿಸಲು ಸಿದ್ಧತೆ ನಡೆಸಿದ್ದಾರೆ. ಇದರ ಜೊತೆಗೆ ಕಾಂಗ್ರೆಸ್ ಕೂಡ ರಾಜ್ಯದ ಮುಖ್ಯಮಂತ್ರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುತ್ತಿರುವ ಹಿನ್ನೆಲೆಯಲ್ಲಿ ತಮ್ಮ ಕಾರ್ಯಕರ್ತರನ್ನು ಹೆಚ್ಚಿನ ಸಂಖ್ಯೆಯಲ್ಲಿ ಕರೆತರಲು ಸಿದ್ಧತೆ ನಡೆಸಿದೆ.

ಪ್ರಧಾನಿ ನರೇಂದ್ರಮೋದಿಯವರು ತುಮಕೂರು ಸಮೀಪದ ವಸಂತನರಸಾಪುರದಲ್ಲಿ ನಿರ್ಮಾಣವಾಗಿರುವ ಫುಡ್‌ಪಾರ್ಕ್ ಉದ್ಘಾಟನೆಗೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ-4ರಲ್ಲಿ ನರೇಂದ್ರ ಮೋದಿ ಹಾಗೂ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಸ್ವಾಗತಿಸುವ ಕಮಾನುಗಳು, ಫ್ಲೆಕ್ ್ಸ ಗಳು ರಾರಾಜಿಸುತ್ತಿರುವುದು ಒಂದೆಡೆಯಾದರೆ, ವಸಂತನರಸಾಪುರ ಕೈಗಾರಿಕಾ ಪ್ರದೇಶದಲ್ಲಿರುವ ಫುಡ್‌ಪಾರ್ಕ್ ಸುತ್ತಮುತ್ತ ಪ್ರಧಾನಿಗೆ ಸ್ವಾಗತ ಕೋರಲು ಸಿಂಗಾರಗೊಂಡಿದೆ.

ಬೃಹತ್ ವೇದಿಕೆ ಸಿದ್ಧಗೊಂಡಿದ್ದು, ಸುಮಾರು 25 ಸಾವಿರಕ್ಕೂ ಹೆಚ್ಚು ಜನ ಕುಳಿತು ಕಾರ್ಯಕ್ರಮ ವೀಕ್ಷಿಸಲು ಸಿದ್ಧತೆ ನಡೆದಿದೆ. ಇದೇ ವೇಳೆ ಸಿದ್ದಗಂಗಾ ಕ್ಷೇತ್ರದ ಹಿರಿಯ ಶ್ರೀಗಳಾದ ಡಾ.ಶ್ರೀ ಶಿವಕುಮಾರಸ್ವಾಮೀಜಿಯನ್ನು ಭೇಟಿ ಮಾಡಲಿರುವ ಮೋದಿ, ಅವರ ಆಶೀರ್ವಾದ ಪಡೆದು ಕೆಲಹೊತ್ತು ಮಠದಲ್ಲೇ ಸ್ವಾಮೀಜಿಗಳ ಜೊತೆ ಮಾತುಕತೆ ನಡೆಸಲಿದ್ದಾರೆ.

ಈ ಸಂದರ್ಭದಲ್ಲಿ ಸಂಸದ ಎಸ್.ಪಿ.ಮುದ್ದಹನುಮೇಗೌಡ, ಶಾಸಕ ಕೆ.ಎನ್.ರಾಜಣ್ಣ, ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಷಿ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಕೇಂದ್ರ ಸಚಿವ ಸದಾನಂದಗೌಡ, ಆರ್.ಅಶೋಕ್ ಸೇರಿದಂತೆ ಹಲವಾರು ಬಿಜೆಪಿ ಮುಖಂಡರು ಪಾಲ್ಗೊಳ್ಳಲಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಬೆಂಗಳೂರಿನಿಂದ ಬೆಳಗ್ಗೆ 9:50ಕ್ಕೆ ತುಮಕೂರು ವಿಶ್ವವಿದ್ಯಾನಿಲಯ ಆವರಣದಲ್ಲಿರುವ ಹೆಲಿಪ್ಯಾಡ್‌ಗೆ ಬಂದು ಇಳಿಯಲಿದ್ದಾರೆ. ಅಲ್ಲಿಂದ ಕಾರಿನಲ್ಲಿ ರಾಷ್ಟ್ರೀಯ ಹೆದ್ದಾರಿ-4ರ ಮೂಲಕ ಸಿದ್ದಗಂಗಾ ಮಠಕ್ಕೆ ತೆರಳಲಿದ್ದಾರೆ. 10:50ಕ್ಕೆ ಮಠದಿಂದ ಮತ್ತೆ ವಿಶ್ವವಿದ್ಯಾನಿಲಯದ ಹೆಲಿಪ್ಯಾಡ್‌ಗೆ ಬಂದು 11 ಗಂಟೆಗೆ ವಸಂತನರಸಾಪುರ ಕೈಗಾರಿಕಾ ಪ್ರದೇಶದ ಫುಡ್‌ಪಾರ್ಕ್‌ನಲ್ಲಿ ನಿರ್ಮಾಣ ಮಾಡಿರುವ ಹೆಲಿಪ್ಯಾಡ್‌ನಲ್ಲಿ ಬಂದು ಇಳಿಯಲಿದ್ದಾರೆ. ಅಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಹಲವಾರು ಮುಖಂಡರು ಮೋದಿಯವರನ್ನು ಸ್ವಾಗತಿಸಲಿದ್ದಾರೆ.

ಪೂರ್ವಾಹ್ನ 11 ಗಂಟೆಗೆ ಮೋದಿ ಫುಡ್‌ಪಾರ್ಕ್ ಉದ್ಘಾಟಿಸಲಿದ್ದಾರೆ. ಮಧ್ಯಾಹ್ನ 12:30ರವರೆಗೆ ಸಮಾರಂಭದಲ್ಲಿ ಭಾಗವಹಿಸಿ ಅನಂತರ ಬೆಂಗಳೂರಿಗೆ ಹೆಲಿಕಾಪ್ಟರ್ ಮೂಲಕ ತೆರಳಲಿದ್ದಾರೆ.

ಭಾರತದ ಮೊದಲ ಮೆಗಾ ಫುಡ್‌ಪಾರ್ಕ್ ಉದ್ಘಾಟನೆಗೆ ಆಗಮಿಸುತ್ತಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ಕಾರ್ಯಕ್ರಮದಲ್ಲಿ ಬಿಗಿ ಪೊಲೀಸ್ ಭದ್ರತೆ ಏರ್ಪಡಿಸಲಾಗಿದೆ.

ತುಮಕೂರು ವಿವಿಯಿಂದ ಸಿದ್ದಗಂಗಾ ಮಠಕ್ಕೆ ತೆರಳುವ ಬಿ.ಎಚ್.ರಸ್ತೆಯ ಎರಡೂ ಬದಿಗಳಲ್ಲಿ ಬ್ಯಾರಿಕೇಡ್ ನಿರ್ಮಿಸಿ ಸಂಚಾರ ಮುಕ್ತಗೊಳಿಸಲಾಗಿದೆ. ಬೆಳಗ್ಗೆ 8ರಿಂದ ಸಂಜೆ 4ರವರೆಗೆ ಈ ರಸ್ತೆಯಲ್ಲಿ ವಾಹನ ನಿಷೇಧಿಸಲಾಗಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಕ್ರಮ ಕೈಗೊಳ್ಳಲಾಗಿದೆ. ಬಾಂಬ್ ನಿಗ್ರಹದಳ ಸೇರಿದಂತೆ ಕೇಂದ್ರದಿಂದ ಹಲವು ಭದ್ರತಾ ತಂಡಗಳು ಈಗಾಗಲೇ ನಗರದಲ್ಲಿ ಬೀಡುಬಿಟ್ಟಿದ್ದು, ಭದ್ರತೆಯ ಉಸ್ತುವಾರಿ ನೋಡುತ್ತಿದ್ದಾರೆ.

ಈ ಭದ್ರತೆಯಲ್ಲಿ 5 ಎಸ್ಪಿ, 13 ಡಿವೈಎಸ್ಪಿ, 50 ಸರ್ಕಲ್ ಇನ್ಸ್‌ಪೆಕ್ಟರ್, 112 ಪೊಲೀಸ್ ಸಬ್ ಇನ್ಸ್‌ಪೆಕ್ಟರ್, 60 ಎಎಸ್‌ಐಗಳು, 1200 ಪೊಲೀಸ್ ಸಿಬ್ಬಂದಿ, 4 ಕೆಎಸ್ಸಾರ್ಪಿ, 9 ಜಿಲ್ಲಾ ಸಶಸ್ತ್ರ ಮೀಸಲು ಪಡೆಗಳೂ ಸೇರಿದಂತೆ 1500 ಪೊಲೀಸ್ ಸಿಬ್ಬಂದಿಯನ್ನು ಬಂದೋಬಸ್ತ್‌ಗೆ ನಿಯೋಜನೆ ಮಾಡಲಾಗಿದೆ.

Write A Comment