ಕರ್ನಾಟಕ

ನಾಡಹಬ್ಬ ಮೈಸೂರು ದಸರಾ ಉದ್ಘಾಟನೆ;ಗೋಲ್ಡನ್ ಚಾರಿಯೇಟ್‌ನಲ್ಲಿ ಸಿಎಂ, ಕಾರ್ನಾಡ್ ಪ್ರಯಾಣ; ಸಚಿವ ಮಹದೇವಪ್ರಸಾದ್

Pinterest LinkedIn Tumblr

dasara

ಬೆಂಗಳೂರು, ಸೆ.23: ‘ನಾಡಹಬ್ಬ’ ಮೈಸೂರು ದಸರಾ ಉತ್ಸವದ ಉದ್ಘಾಟನೆಗೆ ಇದೇ ಮೊದಲ ಬಾರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉದ್ಘಾಟಕರಾದ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ.ಗಿರೀಶ್ ಕಾರ್ನಾಡ್ ಪ್ರವಾಸೋದ್ಯ ಇಲಾಖೆಯ ಗೋಲ್ಡನ್ ಚಾರಿಯೇಟ್ ವಿಶೇಷ ರೈಲಿನಲ್ಲಿ ಮೈಸೂರಿಗೆ ತೆರಳಲಿದ್ದಾರೆ ಎಂದು ಸಹಕಾರ ಸಚಿವ ಎಚ್.ಎಸ್.ಮಹದೇವಪ್ರಸಾದ್ ತಿಳಿಸಿದ್ದಾರೆ.

ಮಂಗಳವಾರ ನಗರದ ಕೆಪಿಸಿಸಿ ಕಚೇರಿಯಲ್ಲಿ ಪಕ್ಷದ ಕಾರ್ಯಕರ್ತರ ಅಹವಾಲುಗಳನ್ನು ಸ್ವೀಕರಿಸಿದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಸೆ.24ರಂದು ಸಂಜೆ 4:30ಕ್ಕೆ ಬೆಂಗಳೂರು ಕೇಂದ್ರ ರೈಲ್ವೆ ನಿಲ್ದಾಣದಿಂದ ಮುಖ್ಯಮಂತ್ರಿ, ಗಿರೀಶ್‌ಕಾರ್ನಾಡ್, ಸಚಿವ ಸಂಪುಟದ ಸಹದ್ಯೋಗಿಗಳು ಗೋಲ್ಡನ್ ಚಾರಿಯೇಟ್ ರೈಲಿನಲ್ಲಿ ತೆರಳಲಿದ್ದಾರೆ ಎಂದರು.

ಚಾಮರಾಜನಗರ ಜಿಲ್ಲೆಯಲ್ಲೂ ಮೈಸೂರು ಮಾದರಿಯಲ್ಲಿ ಮಿನಿ ದಸರಾ ಮಹೋತ್ಸವವನ್ನು ಸೆ.25ರಿಂದ ಅ.1ರವರೆಗೆ ನಡೆಸಲಾಗುತ್ತದೆ. ಸೆ.30ರಂದು ಜಿಲ್ಲಾಧಿಕಾರಿ ಕಚೇರಿಯಿಂದ ಪ್ರಮುಖ ರಸ್ತೆಗಳಲ್ಲಿ ಚಾಮುಂಡೇಶ್ವರಿ ಪ್ರತಿಮೆಯ ಮೆರವಣಿಗೆ ನಡೆಯಲಿದೆ. ಈಗಾಗಲೇ ಇದಕ್ಕಾಗಿ ಒಂದು ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ ಎಂದು ಮಹದೇವಪ್ರಸಾದ್ ಹೇಳಿದರು.

ಸರಕಾರಿ ಸ್ವಾಮ್ಯದ ಸಕ್ಕರೆ ಕಾರ್ಖಾನೆಗಳ ಬಲ ವರ್ಧನೆಗೆ ಕ್ರಮ ಕೈಗೊಳ್ಳಲಾಗುತ್ತಿದ್ದು, ಮಂಡ್ಯ ಸಹಕಾರಿ ಸಕ್ಕರೆ ಕಾರ್ಖಾನೆಯಲ್ಲಿ ಮುಂದಿನ ಸಾಲಿ ನಿಂದ 3-4 ಲಕ್ಷ ಟನ್ ಕಬ್ಬು ಅರೆಯುವಂತೆ ಸಿದ್ಧತೆ ಮಾಡಲಾಗಿದೆ. ದಸರಾ ಉತ್ಸವ ಮುಗಿದ ನಂತರ ಕಬ್ಬು ಬೆಳೆಗಾರರು, ಸಕ್ಕರೆ ಕಾರ್ಖಾನೆಗಳ ಪ್ರತಿನಿಧಿಗಳು, ಕೃಷಿ ಸಚಿವರೊಂದಿಗೆ ಸಭೆ ನಡೆಸಿ, ಮುಂದಿನ ಸಾಲಿನಲ್ಲಿ ಕಬ್ಬಿಗೆ ನೀಡಬೇಕಾದ ದರದ ಬಗ್ಗೆ ಚರ್ಚೆ ನಡೆಸಲಾಗುವುದು ಎಂದು ಅವರು ತಿಳಿಸಿದರು.

ಕೆಪಿಸಿಸಿಯಲ್ಲಿ ಸಹಕಾರಿ ವಿಭಾಗ: ಕೆಪಿಸಿಸಿಯಲ್ಲಿ ರುವ ವಕೀಲರು, ರೈತರು, ಕಾರ್ಮಿಕರ ವಿಭಾಗದ ಮಾದರಿಯಲ್ಲಿ ಸಹಕಾರಿ ವಿಭಾಗವನ್ನು ಆರಂಭಿಸುವ ಕುರಿತು ಚಿಂತನೆ ನಡೆದಿದೆ. ಈ ಸಂಬಂಧ ಶೀಘ್ರದಲ್ಲೇ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್‌ರೊಂದಿಗೆ ಚರ್ಚೆ ನಡೆಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಮಹದೇವಪ್ರಸಾದ್ ಹೇಳಿದರು.

Write A Comment